ADVERTISEMENT

ತುಳುನಾಡಿನ ಹುಲಿವೇಷ: ನವರಾತ್ರಿಗೆ ಮೆರುಗು ನೀಡುವ ಭಯ ಭಕ್ತಿಯ ಕಲೆ

ರಂಜಿತ್ ಪುಣ್ಚಪ್ಪಾಡಿ
Published 8 ನವೆಂಬರ್ 2025, 23:35 IST
Last Updated 8 ನವೆಂಬರ್ 2025, 23:35 IST
<div class="paragraphs"><p>‘ಪಿಲಿ&nbsp;ಪರ್ಬ’ದಲ್ಲಿ ಭಾಗವಹಿಸಿದ ಮಂಜೇಶ್ವರದ ಶಿವಶಕ್ತಿ ಟೈಗರ್ಸ್ ತಂಡ&nbsp; &nbsp; </p></div>

‘ಪಿಲಿ ಪರ್ಬ’ದಲ್ಲಿ ಭಾಗವಹಿಸಿದ ಮಂಜೇಶ್ವರದ ಶಿವಶಕ್ತಿ ಟೈಗರ್ಸ್ ತಂಡ   

   

ಚಿತ್ರ : ಫಕ್ರುದ್ದೀನ‌್ ಎಚ್

ದೂರಕ್ಕೆ ಕೇಳಿಸುತ್ತಿದ್ದ ತಾಸೆ, ಡೋಲು ವಾದನದ ಅಬ್ಬರ ದಾರಿ ಸಮೀಪಿಸುತ್ತಿದ್ದಂತೆ ಜೋರಾಗಿ ಕೇಳುತ್ತಾ ಬಂತು. ಆವರಣದ ಸುತ್ತ ನೂರಾರು ಜನರು ನೆರೆದಿದ್ದರು. ಸಿಂಗರಿಸಿದ್ದ ವೇದಿಕೆಯಲ್ಲಿ ಹನುಮಂತ, ದೇವಿಯ ಭಾವಚಿತ್ರಗಳು, ಅದರ ಎದುರು ಹುಲಿ ಮುಖವಾಡಗಳು, ಝಂಡೆ ಮುಂತಾದ ಹುಲಿವೇಷದ ಪರಿಕರಗಳಿಗೆ ಗುರಿಕಾರ ಆರತಿ ಬೆಳಗುತ್ತಿದ್ದರು. ಒಬ್ಬರ ನಂತರ ಒಬ್ಬರಂತೆ ಮಕ್ಕಳು, ಯುವಕರು, ಮಧ್ಯವಯಸ್ಕರು ಬಂದು ಕೆಳಗಿರಿಸಿದ್ದ ಲೋಬಾನಕ್ಕೆ (ಊದು) ಮುಖ ಒಡ್ಡಿ ದೇವರಿಗೆ ನಮಿಸುತ್ತಿದ್ದರು. ನಮಿಸಿದ ಬಳಿಕ ಆವೇಶದಿಂದ ಕುಣಿಯುತ್ತಿದ್ದ ಅವರನ್ನು ನೆರೆದಿದ್ದವರು ಉತ್ತೇಜಿಸುತ್ತಾ ಸಂಭ್ರಮಿಸುತ್ತಿದ್ದರು. ಇಂತಹ ಕಂಪನ ಸೃಷ್ಟಿಸಿದ್ದ ಸನ್ನಿವೇಶದಲ್ಲಿ ನೆರೆದವರೂ ಬೆರೆಯಲು ರಾತ್ರಿಯನ್ನು ಲೆಕ್ಕಿಸದೆ ಕಾದಿದ್ದರು.

ADVERTISEMENT

ಇದು ತುಳುನಾಡಿನ ಮಾರ್ನೆಮಿ ಆಚರಣೆಯಲ್ಲಿ ಪ್ರಾಮುಖ್ಯತೆ ಪಡೆದಿರುವ ‘ಪಿಲಿ ಏಸ’ (ಹುಲಿ ವೇಷ)ದ ‘ಊದು ಪೂಜೆ’ ಮತ್ತು ‘ರಂಗ್‌’ ಸಮಾರಂಭದ ಚಿತ್ರಣ. ಹುಲಿ ವೇಷಧಾರಿಗಳು ವೇಷ ಹಾಕುವ ಅಥವಾ ಬಣ್ಣ ಹಚ್ಚಿಕೊಳ್ಳುವ ಸಮಾರಂಭವೂ ಹೌದು.

ಅಂದು ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ರಂಗ್ ಆರಂಭವಾಯಿತು. ಎರಡು ಗಂಟೆಗೂ ಹೆಚ್ಚು ಹುಲಿವೇಷಧಾರಿಗಳು ಭರ್ಜರಿಯಾಗಿ ಪೌಲ ಹಾಕಿದರು. ಹನ್ನೊಂದು ಗಂಟೆ ಬಳಿಕ ಬಣ್ಣದ ಸಮಯ. ಕೇವಲ ಚಡ್ಡಿ ಧರಿಸಿದ್ದ ವೇಷಧಾರಿಗಳು ಎರಡೂ ಕೈಗಳಲ್ಲಿ ಉದ್ದನೆಯ ಕೋಲುಗಳನ್ನು ಊರಿ ನಿಂತರು. ಕಲಾವಿದರು ಮೊದಲಿಗೆ ಬಿಳಿ, ಬಳಿಕ ಕೇಸರಿ, ಹಳದಿ, ಕಪ್ಪು ಬಣ್ಣ ಬಳಿದರು. ಬೆಳಿಗ್ಗೆ ಆರರ ಹೊತ್ತಿಗೆ ನೋಡ ನೋಡುತ್ತಿದ್ದಂತೆಯೇ ಐವತ್ತು ಹುಲಿಗಳು ಸಿದ್ಧವಾಗಿದ್ದವು! ಆ ಹುಲಿ ಗುಂಪಿನಲ್ಲಿ ಅಪ್ಪೆ ಪಿಲಿ ಅಥವಾ ಮಂಡೆ ಪಿಲಿ (ತಾಯಿ ಹುಲಿ), ಕಿನ್ನಿ ಪಿಲಿ (ಮರಿ), ಕಪ್ಪು ಪಿಲಿ, ಚಿಟ್ಟೆ ಪಿಲಿ ಅಥವಾ ಬಲಿಪೆ (ಚಿರತೆ, ಚೀತಾ) ಇದ್ದವು.

ಬೆಳಿಗ್ಗೆ ಎಂಟರ ಸುಮಾರಿಗೆ ಸಿದ್ಧವಾಗಿ ನಿಂತಿದ್ದ ಬಸ್‌, ಲಾರಿ, ಓಪನ್ ಜೀಪ್‌ಗಳನ್ನು ಏರಿದ ಹುಲಿಗಳು ದೈವಸ್ಥಾನ ಮತ್ತು ದೇವಿ ದೇವಸ್ಥಾನಕ್ಕೆ ಸವಾರಿ ಹೊರಟವು. ಅಲ್ಲಿ ಭಕ್ತಿಯಿಂದ ನಮಿಸಿ ದೈವ–ದೇವರ ಎದುರು ಆವೇಶಭರಿತವಾಗಿ ಕುಣಿದವು. ಅಲ್ಲಿಂದ ಮುಂದೆ ಮೆರವಣಿಗೆಯಲ್ಲಿ ಮನೆಮನೆಗೆ ತೆರಳಿದವು. ಟ್ರಂಪೆಟ್‌ನ ಇಂಪಿನೊಂದಿಗೆ ತಾಸೆ ಡೋಲುಗಳ ಅಬ್ಬರಕ್ಕೆ ‌ಭರ್ಜರಿಯಾಗಿ ಹೆಜ್ಜೆ ಹಾಕುತ್ತಾ, ಪಲ್ಟಿ ಹೊಡೆಯುತ್ತಾ, ಮನೆಯವರು ನೀಡಿದ ₹50, ₹100, ₹200, ₹500ರ ನೋಟುಗಳನ್ನು ಹಿಮ್ಮುಖವಾಗಿ ಬಾಗಿ ಬಾಯಿಂದ ಎತ್ತುತ್ತಾ ಸಾಹಸವನ್ನು ಪ್ರದರ್ಶಿಸುತ್ತಾ ನೆರೆದವರನ್ನು ರೋಮಾಂಚನಗೊಳಿಸಿದವು. ಟ್ರಂಪೆಟ್‌, ತಾಸೆ, ಡೋಲು ವಾದನ ಮತ್ತು ವೇಷಧಾರಿಗಳ ನರ್ತನಕ್ಕೆ ಮರುಳಾಗಿ ನೆರೆದಿದ್ದ ಕೆಲ ಯುವಕ–ಯುವತಿಯರು, ಮಕ್ಕಳು, ವಯಸ್ಕರೂ ಅವರೊಂದಿಗೆ ಹೆಜ್ಜೆ ಹಾಕಿದರು.

ಹುಲಿಗಳು ಬೆಳಿಗ್ಗೆಯಿಂದ ಸಂಜೆಯವರೆಗೆ ಮನೆಮನೆಗಳಿಗೆ ತೆರಳಿ ಕುಣಿದವು. ಕೆಲವು ಮನೆಯವರು ತಾವೇ ಕರೆಸಿ ಕುಣಿಸಿದರು. ನೋಟಿನ ಮಾಲೆಯನ್ನೇ ಕೊರಳಿಗೆ ಹಾಕಿ ಸಂಭ್ರಮಿಸಿದರು. ರಾತ್ರಿ ಏಳು ಗಂಟೆಯವರೆಗೆ ಹುಲಿಗಳ ಕುಣಿತ ಅಷ್ಟೇ ಲವಲವಿಕೆಯಿಂದ ಸಾಗಿತ್ತು. ಬಳಿಕ ಮಂಗಳಾದೇವಿ ದೇವಸ್ಥಾನಕ್ಕೆ ತೆರಳಿ ಮಂಗಳಾದೇವಿಯ ಮುಂದೆ ಆವೇಶದಿಂದ ಕುಣಿದು ಸೇವೆ ಅಥವಾ ಹರಕೆ ಸಲ್ಲಿಸಿದವು. ಅಲ್ಲಿಗೆ ಇನ್ನೆರಡು ಹುಲಿ ತಂಡಗಳು ಬಂದಿದ್ದವು.

ವಿವಿಧ ರೀತಿಯ ವೇಷಗಳು‌ ಕಣ್ಣಿಗೆ ಹಬ್ಬ ನೀಡುವಂತಿದ್ದವು. ನವರಾತ್ರಿಯ ಅಷ್ಟೂ ದಿನವೂ ವೇಷ ಹಾಕಲಾಗುತ್ತದೆ. ಸೇವೆ, ಭಕ್ತಿರೂಪದಲ್ಲಿ, ಹರಕೆ ತೀರಿಸಲು ವೇಷ ಹಾಕಲಾಗುತ್ತದೆ. ಭಕ್ತಿಯಿಂದ ಅಥವಾ ಸಂಕಷ್ಟ ಎದುರಾದಾಗ ‘ಕಷ್ಟ ನಿವಾರಣೆಯಾದರೆ ವೇಷ ಹಾಕುತ್ತೇನೆ’ ಎಂದು ಹರಕೆ ಹೇಳುವ ಜನರು, ಅವರ ಬೇಡಿಕೆ ಈಡೇರಿದರೆ ವೇಷ ಹಾಕಿ ಹರಕೆ ಸಲ್ಲಿಸುತ್ತಾರೆ. ಕಾಯಿಲೆ ಪೀಡಿತರು, ಅಸಹಾಯಕರು, ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಮಾಡಲು ವೇಷ ಹಾಕುವವರೂ ಇದ್ದಾರೆ. ಗಳಿಸಿದ ಹಣವನ್ನು ಅವರಿಗೆ ನೀಡಿ ಮಾನವೀಯತೆ ಮೆರೆಯುತ್ತಾರೆ. ಶಾರ್ದೂಲ, ಕರಡಿ, ಹುಲಿವೇಷ, ಜೋಕರ್‌, ಬೇಡರು, ಅಲ್ಲದೆ ಸಮಕಾಲೀನ ವೇಷಗಳನ್ನು ಹಾಕುತ್ತಾರೆ. ಈ ಪೈಕಿ ಹುಲಿವೇಷದ್ದೇ ಸಿಂಹಪಾಲು.

ಭಯ–ಭಕ್ತಿ ಪ್ರಧಾನವಾದ ಹುಲಿವೇಷ ಸಂಪ್ರದಾಯಬದ್ಧ ಆಚರಣೆ. ವೇಷಧಾರಿಗಳು ಮಾಂಸಾಹಾರ, ಮದ್ಯಪಾನ ಬಿಟ್ಟು ಕಟ್ಟುನಿಟ್ಟಿನ ವ್ರತಾಚರಣೆ ಕೈಗೊಳ್ಳುತ್ತಾರೆ.

‘ಹಿಂದೆಲ್ಲಾ ನೈಸರ್ಗಿಕ ಬಣ್ಣಗಳನ್ನು ಬಳಸಿ ವೇಷ ಹಾಕಲಾಗುತ್ತಿತ್ತು. ಬಿಳಿ ಬಣ್ಣಕ್ಕಾಗಿ ಬೆಳ್ತಿಗೆ ಅಕ್ಕಿಯನ್ನು ನುಣ್ಣಗೆ ಅರೆದು ಬಳಸುತ್ತಿದ್ದರು. ಅರಿಸಿನದಿಂದ ಹಳದಿ ಬಣ್ಣ, ಕಪ್ಪು ಬಣ್ಣ, ಹಸಿರಿಗಾಗಿ ಕೆಲವು ಸೊಪ್ಪುಗಳನ್ನು ಬಳಸುತ್ತಿದ್ದರು. ಕಾಲ ಬದಲಾದಂತೆ ಬಳಸುವ ಬಣ್ಣವೂ ಬದಲಾಯಿತು. ಇಂದು ಅಕ್ರಿಲಿಕ್‌ ಪೇಂಟ್, ವಾಟರ್‌ ಪೇಂಟ್‌ ಬಳಸುತ್ತಾರೆ. ಬಣ್ಣಗಳಿಂದ ಹುಲಿಯ ಪಡಿಯಚ್ಚು ಮೂಡಿಸುವುದು ಸಂಪ್ರದಾಯ. ಆದರೆ ಕಾಲ ಬದಲಾದಂತೆ ಜನರ ಅಭಿರುಚಿಯೂ ಬದಲಾಗುತ್ತದೆ. ಈಗ ವಿವಿಧ ಬಣ್ಣಗಳು, ವಿವಿಧ ವಿನ್ಯಾಸಗಳನ್ನು ಹೊಂದಿರುವ ಫ್ಯಾಷನ್‌ ಹುಲಿಗಳೂ ಕಾಣಸಿಗುತ್ತವೆ’ ಎಂದು ತುಳು ಜಾನಪದ ವಿದ್ವಾಂಸ ಕೆ.ಕೆ.ಪೇಜಾವರ ಹೇಳುತ್ತಾರೆ.

‘ಹುಲಿವೇಷ ಹಾಕುವುದು ಸಾಮಾನ್ಯ ಸಂಗತಿಯಲ್ಲ. ರಾತ್ರಿ ರಂಗ್‌ ಶುರುವಾದ ಬಳಿಕ ಬೆಳಿಗ್ಗಿನವರೆಗೆ ಬಣ್ಣ ಹಾಕಲಾಗುತ್ತದೆ. ಮೈಮೇಲಿನ ರೋಮ ತೆಗೆಯಬೇಕಾಗುತ್ತದೆ. ರಾತ್ರಿ ನಿದ್ದೆಗೆಟ್ಟು ಬಣ್ಣ ಹಾಕಿಸಿಕೊಂಡು ಮರುದಿನ ಬೆಳಿಗ್ಗೆಯಿಂದ ರಾತ್ರಿವರೆಗೂ ಮನೆ ಮನೆಗೆ ತೆರಳಿ ಕುಣಿಯಬೇಕಾಗುತ್ತದೆ. ಪುಟ್ಟ ಪುಟ್ಟ ಮಕ್ಕಳೂ ವೇಷ ಹಾಕುತ್ತಾರೆ. ಬಣ್ಣ ಹಾಕುವಾಗ ನಾವು ಹೇಳಿದಂತೆ ಕೇಳುತ್ತಾರೆ. ಆ ಒಂದು ದಿನ ತಂದೆ ತಾಯಿ ಮನೆಯನ್ನೇ ಮರೆಯುತ್ತಾರೆ. ಇಡೀ ರಾತ್ರಿ ನಿದ್ದೆಗೆಟ್ಟರೂ ಮರುದಿನ ಉತ್ಸಾಹದಿಂದಲೇ ಕುಣಿಯತ್ತಾರೆ’ ಎನ್ನುತ್ತಾರೆ ಕಲಾವಿದ ಗಿರೀಶ್‌ ಸವಣೂರು.

ನೂರಕ್ಕೂ ಹೆಚ್ಚು ತಂಡಗಳು

ಸಾಂಪ್ರದಾಯಿಕವಾಗಿ ಹುಲಿವೇಷ ಹಾಕುವ ಹಲವಾರು ತಂಡಗಳಿವೆ. ಸುಮಾರು ನೂರಕ್ಕಿಂತಲೂ ಹೆಚ್ಚು ವರ್ಷಗಳಿಂದಲೂ ನಡೆಸಿಕೊಂಡು ಬರುತ್ತಿರುವ ತಂಡಗಳಿವೆ. ಒಂದೊಂದು ತಂಡದಲ್ಲಿ ಮೂವತ್ತರಿಂದ ಎಂಬತ್ತು ಕಲಾವಿದರು ಇರುತ್ತಾರೆ. ಕಲಾವಿದನೊಬ್ಬ ಕಡಿಮೆ ಎಂದರೂ ದಿನಕ್ಕೆ ₹1 ಸಾವಿರದಿಂದ ₹5 ಸಾವಿರದವರೆಗೆ ಸಂಭಾವನೆ ಪಡೆಯುತ್ತಾನೆ. ‘ಸೆಲೆಬ್ರಿಟಿ’ ಹುಲಿವೇಷಧಾರಿಗಳೂ ಇದ್ದಾರೆ. ಲಕ್ಷಗಟ್ಟಲೆ ಖರ್ಚು ತಗಲುವ ಹುಲಿವೇಷ ತಂಡ ನಡೆಸುವುದು ಬಲು ದುಬಾರಿ. ಆದ್ದರಿಂದಲೇ ಹುಲಿವೇಷ ತಂಡ ನಡೆಸುವುದು ಕಂಬಳ ಕೋಣ ಸಾಕಿದಂತೆಯೇ ಪ್ರತಿಷ್ಠೆಯ ವಿಷಯ. ಕೇಸರಿ ಫ್ರೆಂಡ್ಸ್ ಸರ್ಕಲ್ ಬಜಿಲಕೇರಿ, ಬರ್ಕೆ ಫ್ರೆಂಡ್ಸ್, ಪೊಳಲಿಯ ಪುರಲ್ದಪ್ಪೆನ ಮೋಕೆದ ಬೊಳ್ಳಿಲು, ಗೋರಕ್ಷನಾಥ ಟೈಗರ್ಸ್, ಕಾಡುಬೆಟ್ಟು ಅಶೋಕ್‌ರಾಜ್ ಬಳಗ, ಮುಳಿಹಿತ್ಲು ಫ್ರೆಂಡ್ಸ್ ಸರ್ಕಲ್ ಮುಂತಾದ ಕೆಲವು ಪ್ರಸಿದ್ಧ ಹುಲಿವೇಷ ತಂಡಗಳಿವೆ.

ಬೆರಳೆಣಿಕೆಯಷ್ಟಿದ್ದ ಹುಲಿವೇಷ ತಂಡಗಳ ಸಂಖ್ಯೆ ಈಗ ನೂರರ ಗಡಿ ದಾಟಿದೆ! ಚೌತಿ, ದೊಡ್ಡ ಮಟ್ಟದ ಕಾರ್ಯಕ್ರಮಗಳ ಸಂದರ್ಭದಲ್ಲಿ ಮುಂಬೈ, ಬೆಂಗಳೂರು ಸೇರಿದಂತೆ ಇತರ ನಗರಗಳಿಂದ ತಂಡಗಳಿಗೆ ಬೇಡಿಕೆ ಬರುತ್ತದೆ. ದಸರಾ ಅಲ್ಲದೆ ಕೃಷ್ಣ ಜನ್ಮಾಷ್ಟಮಿ, ಚೌತಿ, ದೇವಸ್ಥಾನಗಳ ಜಾತ್ರೆ, ಶೋಭಾಯಾತ್ರೆಗಳಲ್ಲೂ ಹುಲಿವೇಷ ಕಾಣಸಿಗುತ್ತದೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ವ್ಯಾಪ್ತಿಯಲ್ಲೇ ಓಡಾಡಿಕೊಂಡಿದ್ದ ತಂಡಗಳೀಗ ರಾಜ್ಯ, ದೇಶದ ಗಡಿಯನ್ನು ದಾಟಿ ವಿವಿಧೆಡೆ ಪ್ರದರ್ಶನ ನೀಡುತ್ತಿವೆ. ಅಲ್ಲದೇ ವಿಮಾನವೇರಿ ವಿದೇಶಗಳನ್ನು ತಲುಪಿ, ಅಲ್ಲೂ ಕುಣಿದು ಮನಸೂರೆಗೊಳ್ಳುತ್ತಿವೆ.

ಮಂಗಳೂರಿನ ‘ಟೈಗರ್ ಬಾಯ್ಸ್’ ತಂಡ ತಾಸೆಗೆ ಹೆಜ್ಜೆ ಹಾಕಿದಾಗ...  

ಭರ್ಜರಿ ಸ್ಪರ್ಧೆ!

ಸಾಂಪ್ರದಾಯಿಕ ಹುಲಿ ಕುಣಿತವಲ್ಲದೆ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಮಂಗಳೂರಿನಲ್ಲಿ ಹತ್ತು ವರ್ಷಗಳಿಂದ ನಡೆಯುತ್ತಿರುವ ‘ಪಿಲಿನಲಿಕೆ’, ‘ಪಿಲಿಪರ್ಬ’, ‘ಪುತ್ತೂರ್ದ ಪಿಲಿಗೊಬ್ಬು’ ಮುಂತಾದವು ಇದಕ್ಕೆ ಉದಾಹರಣೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ತಂಡಗಳ ಸಂಖ್ಯೆ ವರ್ಷದಿಂದ ವರ್ಷ ಹೆಚ್ಚುತ್ತಿದೆ. ಬಹುಮಾನದ ಮೊತ್ತವೂ ಭರ್ಜರಿಯಾಗಿದೆ. ಈ ವರ್ಷ ಕ್ರಮವಾಗಿ ₹10 ಲಕ್ಷದವರೆಗೂ ಪ್ರಥಮ ಬಹುಮಾನ, ₹50 ಸಾವಿರದಂತೆ ವಿವಿಧ ವೈಯಕ್ತಿಕ ಬಹುಮಾನಗಳನ್ನು ನೀಡಲಾಯಿತು.

ತಾಸೆಯ ಪೆಟ್ಟಿಗೆ ಸರಿಯಾಗಿ ಹಾಕುವ ಹೆಜ್ಜೆ, ಒಂಟಿ, ಇಬ್ಬರು, ಮೂವರು, ನಾಲ್ವರು, ಐವರು ಪೌಲ ಹಾಕುವುದು, ತಾಯಿ ಹುಲಿ ಮರಿಗಳನ್ನು ಮುದ್ದಿಸುವುದು, ಹುಲಿಗಳು ಕುಳಿತುಕೊಳ್ಳುವ ಶೈಲಿ, ಮೈಗೆ ಹಚ್ಚಿಕೊಳ್ಳುವ ಬಣ್ಣ, ಹಣವನ್ನು ಬಾಯಿಯಿಂದ ಎತ್ತುವುದು, 38 ಕೆ.ಜಿ.ಯ ಅಕ್ಕಿ ಮುಡಿಯನ್ನು ಹಲ್ಲಿನಲ್ಲಿ ಕಚ್ಚಿ ಎತ್ತಿ ಹಿಂದಕ್ಕೆ ಎಸೆಯುವುದು, ಪಲ್ಟಿ ಹೊಡೆದು ತಲೆಯಿಂದ ತೆಂಗಿನಕಾಯಿ ಒಡೆಯುವುದು ಸೇರಿದಂತೆ ಹಲವು ಕಸರತ್ತುಗಳು ಸ್ಪರ್ಧೆಯಲ್ಲಿ ನಿರ್ಣಾಯಕ. ಸಂಪ್ರದಾಯ ಪಾಲಿಸುವ ತಂಡಗಳು ಹೆಚ್ಚು ಅಂಕಗಳನ್ನು ಪಡೆಯುತ್ತವೆ.

‘1995ರಲ್ಲಿ ಮಂಗಳೂರಿನ ಜೆಪ್ಪುವಿನಲ್ಲಿ ಮೊದಲಿಗೆ ಹುಲಿವೇಷ ಸ್ಪರ್ಧೆ ಆಯೋಜಿಸಲಾಯಿತು. ಅದು ಮೂರು ವರ್ಷ ನಡೆಯಿತು. ಆ ವೇಳೆ ತಂಡಗಳ ನಡುವೆ, ಆಯೋಜಕರ ನಡುವೆ ಹೊಡೆದಾಟಗಳು ನಡೆದವು. ಆನಂತರ ಸ್ಪರ್ಧೆ ಆಯೋಜನೆಯೇ ನಿಂತು ಹೋಯಿತು. 2015ರಲ್ಲಿ ಮಂಗಳೂರಿನ ಯುವ ಉದ್ಯಮಿ ಮಿಥುನ್‌ ರೈ ‘ಪಿಲಿನಲಿಕೆ’ ಸ್ಪರ್ಧೆ ಆಯೋಜಿಸುವ ಮೂಲಕ ಈ ಕಲೆಯ ಮೆರುಗನ್ನು ಮತ್ತೆ ಹೆಚ್ಚಿಸಿದರು. ಅಂದಿನಿಂದ ಅಲ್ಲಲ್ಲಿ ಸ್ಪರ್ಧೆಗಳು ಆಯೋಜನೆಯಾಗುತ್ತಿವೆ’ ಎಂದು ಕೆ.ಕೆ.ಪೇಜಾವರ ಅಭಿಮಾನದಿಂದ ಹೇಳುತ್ತಾರೆ.

ಐದಾರು ಸಾವಿರ ಮಂದಿ ಕುಳಿತು ವೀಕ್ಷಿಸಲು ಗ್ಯಾಲರಿ ವ್ಯವಸ್ಥೆ, ಊಟ–ತಿಂಡಿ, ಡಿಜಿಟಲ್‌ ಪರದೆಗಳು, ಥರ್ಡ್‌ ಅಂಪೈರ್‌ ವ್ಯವಸ್ಥೆ, ಚಿತ್ರ ನಟ–ನಟಿಯರು, ಭಾರತೀಯ ತಂಡದ ಕ್ರಿಕೆಟ್‌ ಆಟಗಾರರು, ರಾಜಕಾರಣಿಗಳು, ಗಣ್ಯರ ಪಾಲ್ಗೊಳ್ಳುವಿಕೆ ಸ್ಪರ್ಧೆಗಳ ರಂಗು ಹೆಚ್ಚಿಸಿದೆ.

ಹುಲಿವೇಷಕ್ಕೆ ಸಿದ್ಧತೆ ಹೀಗಿರುತ್ತದೆ ನೋಡಿ... 

ಅನ್ಯಧರ್ಮೀಯರು ಹುಲಿವೇಷ ಹಾಕುತ್ತಾರೆ. ಧಾರ್ಮಿಕ ಆಚರಣೆ ಅಲ್ಲದಿದ್ದರೂ, ಮನರಂಜನೆಗಾಗಿ, ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅಥವಾ ಹಣ ಸಂಪಾದನೆಗಾಗಿ ಈ ಯುವಕರು ವೇಷ ಹಾಕುತ್ತಾರೆ.

ಜನಪದ ಕಲೆಯೊಂದು ಸಂಪ್ರದಾಯ, ತುಳುವರ ಅಭಿಮಾನ ಮತ್ತು ಸ್ಪರ್ಧೆಯಿಂದಾಗಿ ಹೊಸ ವೇಷದೊಂದಿಗೆ ಉಳಿದು, ಬೆಳೆಯುತ್ತಿರುವುದು ಸಂತೋಷವೇ. ಈ ಕೆಲಸವನ್ನು ಯುವಜನಾಂಗ ಚೆನ್ನಾಗಿಯೇ ಮಾಡುತ್ತಿದೆ. ತುಳುನಾಡಿನಲ್ಲಿ ತಾಸೆ, ಡೋಲು, ಟ್ರಂಪೆಟ್‌ನ ನಿನಾದ, ಹುಲಿ ವೇಷ, ಹುಲಿ ಕುಣಿತ, ಪೌಲ, ಲೋಬಾನ ಪರಿಮಳ ಪಸರಿಸುತ್ತಲೇ ಇದೆ. ಇದು ನಮ್ಮ ನಾಡಿನ ಜನಪದ, ಸಾಂಸ್ಕೃತಿಕ ಹೆಮ್ಮೆ.

ಅಮ್ಮಾ ನಾನೂ ಹಿಂಗೆ ಕುಣಿಲಾ...
ನಮ್ಮ ಕುಟುಂಬದ ಪರಂಪರೆಯಿಂದಲೂ ಹುಲಿವೇಷದೊಂದಿಗೆ ಅವಿನಾಭಾವ ಸಂಬಂಧವಿದೆ. ನನ್ನ ಅಜ್ಜ ಅಪ್ಪ ಹುಲಿವೇಷ ಹಾಕುತ್ತಿದ್ದರು. ನಾನು ಒಂದು ವರ್ಷದ ಮಗುವಿದ್ದಾಗಲೇ ಹುಲಿವೇಷ ಹಾಕಿದ್ದೇನೆ. ಅಂದಿನಿಂದ ಪ್ರತಿ ವರ್ಷ ವೇಷ ಹಾಕಿ ದೇವಿಗೆ ಸೇವೆ
ಸಲ್ಲಿಸುತ್ತಿದ್ದೇನೆ
 ಸಂದೀಪ್‌ ಕಾವೂರು ಹುಲಿ ವೇಷಧಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.