ADVERTISEMENT

Wood Art: ಎಂಜಿನಿಯರ್‌ ಪ್ರತೀಕ್‌ಗೆ ಒಲಿದ ಕಾಷ್ಠಕಲೆ

ಗಣೇಶ ಚಂದನಶಿವ
Published 16 ಮಾರ್ಚ್ 2025, 0:11 IST
Last Updated 16 ಮಾರ್ಚ್ 2025, 0:11 IST
<div class="paragraphs"><p>ಪ್ರತೀಕ್‌ ತಯಾರಿಸಿರುವ ಮರದ ಮೂರ್ತಿಗಳು </p></div>

ಪ್ರತೀಕ್‌ ತಯಾರಿಸಿರುವ ಮರದ ಮೂರ್ತಿಗಳು

   

  ಚಿತ್ರಗಳು: ಫಕ್ರುದ್ದೀನ್‌ ಎಚ್‌.

‘ಮರದಲ್ಲಿ ಮೂರ್ತಿ ಕೆತ್ತುವುದಕ್ಕೆ ಕೌಶಲ ಅಷ್ಟೇ ಸಾಲದು; ಶ್ರದ್ಧೆ–ಭಕ್ತಿಯೂ ಬೇಕು’ ಎನ್ನುತ್ತ ಮಾತಿಗಿಳಿದರು ಪ್ರತೀಕ್‌ ಗುಡಿಗಾರ್. ಕೋಟಿ ಚೆನ್ನಯರ ಆರು ಅಡಿ ಎತ್ತರದ ಮರದ ಮೂರ್ತಿಯನ್ನು ಅವರು ಕೆತ್ತುತ್ತಿದ್ದರು. ತಮ್ಮ ಸಹಾಯಕ ಚಂದ್ರಯ್ಯ ಆಚಾರ್‌ ಜೊತೆಗೂಡಿ ಅವರು ಮಾಡುತ್ತಿದ್ದ ಈ ಕಲಾತ್ಮಕ ಕೆತ್ತನೆಯ ಶಬ್ದವೂ ಲಯಬದ್ಧವಾಗಿ ಹೊರಹೊಮ್ಮುತ್ತಿತ್ತು.

ADVERTISEMENT

ಉಡುಪಿ ಜಿಲ್ಲೆ ಕೋಟೇಶ್ವರ ಬಳಿಯ ಅಂಕದಕಟ್ಟೆಯ ಪ್ರತೀಕ್‌ ಎಂಜಿನಿಯರಿಂಗ್‌ ಪದವೀಧರ. ಕೋವಿಡ್‌ ಸಂದರ್ಭದಲ್ಲಿ ತಂದೆಯ (ಪ್ರದೀಪ್‌ ಗುಡಿಗಾರ್‌) ಅಕಾಲಿಕ ನಿಧನದ ನಂತರ, ಕುಲಕಸುಬು ಮುಂದುವರಿಸಿದ್ದಾರೆ.

ತುಳುನಾಡಿನಲ್ಲಿ ದೈವಾರಾಧನೆಗೆ ಹೆಚ್ಚಿನ ಮಹತ್ವವಿದೆ. ದೇವಸ್ಥಾನ, ದೈವಸ್ಥಾನ, ಗರಡಿಗಳೂ ಹೆಚ್ಚಿನ ಸಂಖ್ಯೆಯಲ್ಲಿವೆ. ಗರಡಿಗಳಲ್ಲಿ ಪಂಜುರ್ಲಿ, ಕೋಟಿ ಚೆನ್ನಯ, ಯಕ್ಷಿ, ತಾಂಬೂಲ ಯಕ್ಷಿ, ವೀರಭದ್ರ, ಚಿಕ್ಕು ಮತ್ತು ಪರಿವಾರ ದೈವಗಳ ಮರದ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಕೆಲ ಮನೆತನದವರಿಗೆ ಅವರ ಮನೆತನದ್ದೇ ದೈವಗಳಿದ್ದು, ಅವರೂ ಇಂತಹ ಮರದ ಮೂರ್ತಿಗಳನ್ನು ಮಾಡಿಸು
ತ್ತಾರೆ. ದೈವಸ್ಥಾನದಲ್ಲಿ 1ರಿಂದ 100 ವಿಗ್ರಹಗಳೂ ಇರುತ್ತವೆ. ಪ್ರತಿ ವರ್ಷದ ಉತ್ಸವಕ್ಕೂ ಮುನ್ನ ಈ ಮೂರ್ತಿಗಳಿಗೆ ಬಣ್ಣ ಹಚ್ಚಿ ಅಂದಗೊಳಿಸಲಾಗುತ್ತದೆ. ಮೂರ್ತಿ ಮುಕ್ಕಾಗಿದ್ದರೆ ಹೊಸದಾಗಿ ಮಾಡಿಸುತ್ತಾರೆ. ಹೀಗಾಗಿ ಮೂರ್ತಿ ತಯಾರಕರಿಗೆ ಸದಾ ಬೇಡಿಕೆ.

ತಾವು ತಯಾರಿಸಿದ ಮೂರ್ತಿಯೊಂದಿಗೆ ಪ್ರತೀಕ್‌ ಗುಡಿಗಾರ್‌  ಪ್ರಜಾವಾಣಿ

ಸಾಮಾನ್ಯವಾಗಿ ಈ ಭಾಗದಲ್ಲಿ ಹೆಚ್ಚಿಗೆ ಸಿಗುವ ಹಲಸು ಮತ್ತು ಹೆಬ್ಬಲಸು ಮರ ಬಳಸಲಾಗುತ್ತದೆ. ಚಂದನ, ರಕ್ತ ಚಂದನದ ಮರದಲ್ಲಿಯೂ ಮೂರ್ತಿ ಮಾಡಿಸುವವರು ಇದ್ದಾರೆ. ಮೂರ್ತಿ ಮಾಡಿಸುವವರೇ ಮರ ನಿರ್ಧರಿಸಿ ಅವರೇ ಮರವನ್ನು ತಂದು ಕೊಡುತ್ತಾರೆ. ಮರಗಳ ಮೂರ್ತಿಗಳ ಬಾಳಿಕೆ ಕನಿಷ್ಠ 20–25 ವರ್ಷ. ಉಡುಪಿ ಜಿಲ್ಲೆಯ ಮಾರಣಕಟ್ಟೆಯಲ್ಲಿ ಹಲಸಿನ ಮರದಲ್ಲಿ ಮಾಡಿರುವ ಒಂದು ಮೂರ್ತಿ 650 ವರ್ಷಗಳಿಂದಲೂ ಇದೆ ಎನ್ನುತ್ತಾರೆ ಪ್ರತೀಕ್‌.

ಸಾಮಾನ್ಯವಾಗಿ ಪರಿವಾರ ಮೂರ್ತಿಗಳು ಮತ್ತು ಪರಿಚಾರಕ ಮೂರ್ತಿಗಳು 3ರಿಂದ5 ಅಡಿ ಎತ್ತರ ಇರುತ್ತವೆ. ಇಡೀ ಮೂರ್ತಿಯನ್ನು ಒಂದೇ ಮರದ ತುಂಡಿನಲ್ಲಿ ಕೆತ್ತಲಾಗುತ್ತದೆ. ಕೈಗಳು ಮತ್ತು ನಾಲಿಗೆಯನ್ನು ಮಾತ್ರ ಬೇರೆ ಮರದ ತುಂಡಿನಲ್ಲಿ ಕೆತ್ತಿ ಜೋಡಿಸಲಾಗುತ್ತದೆ. ಎಲ್ಲಿಯೂ ಮೊಳೆ ಬಳಸುವುದಿಲ್ಲ. ಹಿಂದೆ ಈ ಮೂರ್ತಿಗಳಿಗೆ ನೈಸರ್ಗಿಕ ಬಣ್ಣ ಬಳಿಯಲಾಗುತ್ತಿತ್ತು. ಈಗ ಆಯಿಲ್‌ ಪೇಂಟ್‌ ಬಳಸುತ್ತೇವೆ ಎನ್ನುತ್ತಾರೆ ಇವರು.

‘2021ರಿಂದ ನಾನು ಮೂರ್ತಿ ಕೆತ್ತನೆಯಲ್ಲಿ ತೊಡಗಿದ್ದೇನೆ. ಈವರೆಗೆ 48 ಕ್ಷೇತ್ರಗಳಿಗೆ 75ಕ್ಕೂ ಹೆಚ್ಚು ಮರದ ಮೂರ್ತಿಗಳನ್ನು ಕೆತ್ತಿ ಕೊಟ್ಟಿದ್ದೇನೆ. ನಾವು ಪ್ರತಿ ವರ್ಷ ದೇವಾಲಯಗಳು ಮತ್ತು ದೈವಸ್ಥಾನಗಳಲ್ಲಿ ಮರದ ಪ್ರತಿಮೆಗಳನ್ನು ಸ್ವಚ್ಛಗೊಳಿಸಿ ಬಣ್ಣ ಬಳಿಯುತ್ತೇವೆ. ವಾರ್ಷಿಕ ಉತ್ಸವಗಳಿಂದಾಗಿ ವಿಗ್ರಹಗಳಿಗೆ ಬೇಡಿಕೆ ಹೆಚ್ಚಾಗುವುದರಿಂದ ನಮಗೆ ಸಾಮಾನ್ಯವಾಗಿ ಜನವರಿಯಿಂದ ಮೇ ವರೆಗೆ ಬಹಳಷ್ಟು ಕೆಲಸ ಇರುತ್ತದೆ. ಒಂದು ಹೊಸ ವಿಗ್ರಹ ತಯಾರಿಸಲು 10ರಿಂದ 15 ದಿನ ಬೇಕಾಗುತ್ತದೆ’ ಎನ್ನುತ್ತಾರೆ ಪ್ರತೀಕ್‌. 

ಇದು ಕರಕುಶಲ ಕೆಲಸ. ಹೀಗಾಗಿ ತಾಳ್ಮೆ ಅಗತ್ಯ ಎನ್ನುತ್ತಾರೆ ಪ್ರತೀಕ್‌ ಅವರ ಸಹಾಯಕ ಚಂದ್ರಯ್ಯ ಆಚಾರ್‌. 

ಕಟ್ಟಿಗೆಯ ಮೂರ್ತಿಗಳನ್ನು ಸ್ವಚ್ಛಗೊಳಿಸುತ್ತಿರುವ ಪ್ರತೀಕ್‌ ಗುಡಿಗಾರ್‌  ಪ್ರಜಾವಾಣಿ

ಮೂರ್ತಿ ಕೆತ್ತನೆ ಆರಂಭಿಸುವುದರಿಂದ ಹಿಡಿದು ಅದನ್ನು ಹಸ್ತಾಂತರಿಸುವವರೆಗೂ ಧಾರ್ಮಿಕ ಆಚರಣೆಗಳನ್ನು ಪಾಲಿಸಬೇಕು. ಮೂರ್ತಿ ಕೆತ್ತನೆಗೂ ಮೊದಲು ಮುಹೂರ್ತ ಮಾಡುತ್ತೇವೆ. ಪೂಜೆ ಮಾಡಿ ಕೆಲಸ ಆರಂಭಿಸುತ್ತೇವೆ. ಕೆತ್ತನೆ ಕೆಲಸ ಪೂರ್ಣಗೊಂಡ ನಂತರ ಬಣ್ಣ ಬಳಿಯುತ್ತೇವೆ. ಆದರೆ, ಕಣ್ಣಿಗೆ ಕಪ್ಪು ಬಣ್ಣ ಬಳಿಯುವುದನ್ನು ಮಾತ್ರ ಬಿಟ್ಟಿರುತ್ತೇವೆ. ತಯಾರಾದ ಮೂರ್ತಿಗೆ ಬಟ್ಟೆ ಸುತ್ತಿ ದೈವಸ್ಥಾನಕ್ಕೆ ಕೊಂಡೊಯ್ಯಲಾಗುತ್ತದೆ. ಅಲ್ಲಿ ಮೂರ್ತಿಯನ್ನು ‘ಬಿಟ್ಟುಕೊಡುವ’ ಸಂಪ್ರದಾಯ ನಡೆಯುತ್ತದೆ. ಚಿನ್ನದ ಸೂಜಿಯಿಂದ ಮೂರ್ತಿಯ ಕಣ್ಣಿನ ಭಾಗದಲ್ಲಿ ಕಪ್ಪು ಬಣ್ಣ ಬಳಿಯುತ್ತೇವೆ. ಇದನ್ನು ಮೂರ್ತಿಗೆ ದೃಷ್ಟಿ ಕೊಡುವ ಕೆಲಸ ಎಂದು ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ಆ ಮೂರ್ತಿಯ ಎದುರು ಅಂದರೆ ನೇರ ದೃಷ್ಟಿ ಬೀಳುವಂತೆ ನಿಲ್ಲುವುದಿಲ್ಲ. ನಾವು ಪಕ್ಕದಲ್ಲಿ ನಿಂತು ದೃಷ್ಟಿ ಕೊಡುತ್ತೇವೆ. ಆ ನಂತರ ಅರ್ಚಕರು ಪೂಜೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಕೆಲವೊಂದು ಸಂಪ್ರದಾಯ ಇದ್ದು, ನಮಗೆ ಕಾಣಿಕೆ ನೀಡಿ ಅವರು ಮೂರ್ತಿ ಸ್ವೀಕರಿಸುತ್ತಾರೆ ಎನ್ನುತ್ತಾರೆ ಈ ಕಾಷ್ಠಶಿಲ್ಪಿ ಎಂಜಿನಿಯರ್‌.

‘ನಮ್ಮದು ಮೂರು ತಲೆಮಾರಿನಿಂದ ಬಂದ ಕಸುಬು. ನಾನು ಇದನ್ನು ಮುಂದುವರಿಸದಿದ್ದರೆ ನಮ್ಮ ತಂದೆಯ ಕಾಲಕ್ಕೇ ಇದು ಕೊನೆಗೊಳ್ಳುತ್ತಿತ್ತು. ದೇವರ ಮೂರ್ತಿಗಳನ್ನು ತಯಾರಿಸುವ ಈ ದೈವೀ ಕಾರ್ಯದಲ್ಲಿ ಹಣ, ಕೀರ್ತಿಯ ಜೊತೆ ಆತ್ಮತೃಪ್ತಿಯೂ ಸಿಗುತ್ತದೆ. ಆಧುನಿಕತೆ–ಮಹಾನಗರಗಳ ಸೆಳೆತಕ್ಕೊಳಗಾಗಿ ಕುಲಕಸುಬಿನಿಂದ ವಿಮುಖರಾಗುತ್ತಿರುವವರೇ ಹೆಚ್ಚು. ನಮ್ಮ ಪರಿಣತಿಯನ್ನು ನಮ್ಮ ಕುಲಕಸುಬಿನಲ್ಲಿ ತೋರಿಸಿದರೆ ಅದರಲ್ಲಿಯೇ ಎಲ್ಲವೂ ಸಿಗುತ್ತದೆ. ಅದಕ್ಕೆ ನಾನೇ ಉದಾಹರಣೆ’ ಎಂಬುದು ಪ್ರತೀಕ್‌ ಅವರ ಹೆಮ್ಮೆಯ ಮಾತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.