ADVERTISEMENT

ಕೇಳು ರಾಧೆ... ಇಂದಿನ ಪ್ರೇಮದ ಪರಿಯ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 23:30 IST
Last Updated 15 ಆಗಸ್ಟ್ 2025, 23:30 IST
<div class="paragraphs"><p>ಪ್ರೇಮದ ಪರಿಯ...</p></div>

ಪ್ರೇಮದ ಪರಿಯ...

   

ರಾಧಾ–ಕೃಷ್ಣ ಅಮರಪ್ರೇಮದ ಸಂಕೇತ. ಆದರೆ ಅನುಗಾಲವೂ ಜೀವಜೀವದ ನಂಟನ್ನು ಬೆಸೆಯುತ್ತಲೇ ಬಂದಿರುವ ಪ್ರೀತಿಯೂ ಕಾಲನ ಮಹಿಮೆಗೆ ಸಿಲುಕಿದೆಯೇ? ಮೋಹನ ಮುರಳಿಗೆ ಮನಸೋತು ತನ್ನನ್ನೇ ಸಮರ್ಪಿಸಿಕೊಂಡ ಅಂದಿನ ರಾಧೆಗೂ ಸಂಗಾತಿಯ ಸಂಪ್ರೀತಿಯ ಒಡಲಲ್ಲೂ ತನ್ನ ಅಸ್ಮಿತೆಗಾಗಿ ಹಂಬಲಿಸುವ ಇಂದಿನ ರಾಧೆಗೂ ಒಲಿದದ್ದು ಪ್ರೇಮವೇ ಹೌದಾದರೂ ಅದರ ವ್ಯಾಖ್ಯೆ ಮಾತ್ರ ಬದಲಾದಂತೆ ಕಾಣುತ್ತಿರುವುದೇಕೆ?  

ಪ್ರೀತಿ– ಪ್ರೇಮದ ಬಗ್ಗೆ ಬಂದಿರುವ ಕತೆ, ಕವಿತೆ, ಲೇಖನಗಳಿಗೆ ಲೆಕ್ಕವಿಲ್ಲ. ಆದರೆ ನಾನು ನನ್ನ ಕಾಲದ, ನಾನು ನಂಬುವ ಪ್ರೀತಿಯ ಬಗ್ಗೆ ಅಷ್ಟೇ ಪ್ರೀತಿಯಿಂದ ಪ್ರತಿಪಾದಿಸಬಲ್ಲೆ.

ADVERTISEMENT

ಸಾತಂತ್ರ್ಯ ಮತ್ತು ಸ್ವಾವಲಂಬನೆಗೆ ಹೆಚ್ಚು ಒತ್ತುಕೊಡುವ ಈಗಿನ ನವಪೀಳಿಗೆಯಲ್ಲಿ ‘ನಾನು ಸ್ವತಂತ್ರವಾಗಿ ಬದುಕಬಲ್ಲೆ; ಹೀಗಿರುವಾಗ, ಲವ್, ರಿಲೇಷನ್‌ಷಿಪ್, ಕಮಿಟ್‌ಮೆಂಟ್‌, ಖರ್ಚು, ನೋವು ಇವೆಲ್ಲವುಗಳ ಹಂಗೇಕೆ’ ಅನ್ನುವ ಮನೋಭಾವ ಹೆಚ್ಚಾಗುತ್ತಿದೆ. ಇದೆಲ್ಲದರ ಹೊರತಾಗಿ ನಿಜವಾಗಿಯೂ ನಾವು ಪ್ರೀತಿಸಿದಾಗ, ನಮ್ಮ ವ್ಯಕ್ತಿತ್ವವನ್ನು ನಾವು ಅರಿತುಕೊಳ್ಳಬಲ್ಲೆವು. ಅದೇ ರೀತಿ, ನಿಜವಾಗಿಯೂ ನಾವು ಪ್ರೀತಿಸಲ್ಪಟ್ಟಾಗ, ನಮ್ಮ ಸಾಮರ್ಥ್ಯದ ಅರಿವು ನಮಗಾಗುತ್ತದೆ.

ಪ್ರೀತಿಯು ಒಂದು ಯೂನಿವರ್ಸಲ್ ಭಾವನೆ. ಅದರ ಅಭಿವ್ಯಕ್ತಿ ಮತ್ತು ತಿಳಿವಳಿಕೆಯು ಕಾಲಕಾಲಕ್ಕೆ ಗಮನಾರ್ಹವಾಗಿ ವಿಕಸನಗೊಂಡಿವೆ. ಜಗತ್ತು ಎಷ್ಟೇ ಮುಂದುವರಿದರೂ ನಮ್ಮ ರಾಧಾ– ಕೃಷ್ಣರ ಪ್ರೇಮಕಥೆಯು ಪ್ರೇಮಕ್ಕೆ ಎಂದೆಂದಿಗೂ ಒಂದು ಉಪಮೆಯಾಗಿ ನಿಲ್ಲುತ್ತದೆ. ಏಕೆಂದರೆ, ಅವರ ಪ್ರೀತಿಯು ದೈವಿಕ ಒಗ್ಗೂಡುವಿಕೆಯ ಕಥೆ. ಅದು, ದೈಹಿಕ ಗಡಿಗಳನ್ನು ಮತ್ತು ಸಾಮಾಜಿಕ ಸಂಕೋಲೆಗಳನ್ನು ಮೀರಿದ ಆಧ್ಯಾತ್ಮಿಕ ಬಂಧ. ಅವರ ಪ್ರೀತಿಯು ಮೆಟಿರಿಯಲಿಸ್ಟಿಕ್‌ ಅಥವಾ ವೈಯಕ್ತಿಕ ಲಾಭವನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಸೃಷ್ಟಿಯಾದದ್ದೂ ಅಲ್ಲ. ಅದು ನಿಸ್ವಾರ್ಥವಾದ ಭಕ್ತಿ, ಸಂಪೂರ್ಣವಾದ ಸಮರ್ಪಣೆ. ಪರಸ್ಪರರ ಸಂತೋಷ ಮತ್ತು ಆಧ್ಯಾತ್ಮಿಕ ಬೆಳವಣಿಗೆಯೆಡೆಗೆ ಇದ್ದ ಅಚಲವಾದ ಬದ್ಧತೆಯೇ ಅಲ್ಲಿ ಪ್ರೇಮಕ್ಕೆ ಬುನಾದಿಯಾಗಿದೆ.

ಕೃಷ್ಣನ ಮೇಲಿನ ರಾಧೆಯ ಪ್ರೀತಿಯು ‘ಭಕ್ತಿ’ಯ ಸಂಕೇತವೂ ಹೌದು. ಅವಳು ಅವನನ್ನು ಒಬ್ಬ ದೈವಿಕ ವ್ಯಕ್ತಿಯಾಗಿ ಪ್ರೀತಿಸಿದಳು ಮತ್ತು ಆ ಪ್ರೀತಿಯು ಆಧ್ಯಾತ್ಮಿಕ ಜ್ಞಾನೋದಯವನ್ನು ಪಡೆಯುವ ಸಾಧನವಾಗಿತ್ತು. ಕೃಷ್ಣನೂ ರಾಧೆಯನ್ನು ಅಷ್ಟೇ ತೀವ್ರತೆಯಿಂದ ಪ್ರೀತಿಸಿದ. ಅವಳೊಂದಿಗಿನ ಅವನ ಪ್ರೇಮವು ಆತ್ಮಗಳ ಮಿಲನವನ್ನು ಸಂಕೇತಿಸುತ್ತದೆ. ಅವರ ವಿಭಜನೆ ಕೂಡ ವಿಫಲ ಸಂಬಂಧದ ಸಂಕೇತವಾಗಲಿಲ್ಲ, ಅಚಲ ನಂಬಿಕೆಯ ಪರೀಕ್ಷೆಯಾಗಿದೆ ಮತ್ತು ಅವರ ನಡುವಿನ ಗಹನವಾದ ಆಧ್ಯಾತ್ಮಿಕ ಸಂಪರ್ಕಕ್ಕೆ ಒಂದು ಸಾಕ್ಷಿಯಾಗಿದೆ. ಇದು ಪ್ರೀತಿಯ ವಿಚಾರದಲ್ಲಿ ಇಂದಿನ ಆಧುನಿಕ ಸಂಬಂಧಗಳಿಗೆ ಆಳವಾದ ದೃಷ್ಟಿಕೋನವೊಂದನ್ನು ಒದಗಿಸುತ್ತದೆ.

ಇಂದಿನ ಕಾಲಘಟ್ಟದಲ್ಲಿ ಪ್ರೀತಿಯನ್ನು ಸಾಮಾನ್ಯವಾಗಿ ಒಂದು ವ್ಯಾವಹಾರಿಕ ಸಂಬಂಧವೆಂದು ಚಿತ್ರಿಸಲಾಗುತ್ತಿದೆ. ಇದು ಪರಸ್ಪರ ಪ್ರಯೋಜನಗಳು, ದೈಹಿಕ ಆಕರ್ಷಣೆ ಮತ್ತು ಒಬ್ಬ ಸಂಗಾತಿಯು ಹೊಂದಿರಬೇಕಾದ ಸದ್ಗುಣಗಳ ಚೆಕ್‌ಲಿಸ್ಟನ್ನು ಆಧರಿಸಿರುತ್ತದೆ. ಹೀಗಾಗಿ, ‘ಆತ್ಮಸಂಗಾತಿ’ ಎಂಬ ಪರಿಕಲ್ಪನೆಯು ನಮ್ಮನ್ನು ಪೂರ್ಣಗೊಳಿಸಬಲ್ಲ, ನಮ್ಮ ಜೀವನದ ಕೊರತೆಗಳನ್ನು ನೀಗಿಸಬಲ್ಲ ಒಬ್ಬ ವ್ಯಕ್ತಿಗಾಗಿ ನಾವು ನಡೆಸುವ ಹುಡುಕಾಟವಾಗುತ್ತಿದೆ. ಈ ರೀತಿಯ ಸಂಬಂಧಗಳಲ್ಲಿ ‘ಇದು ನನ್ನ ಹಕ್ಕು’ ಅನ್ನುವ ಭಾವನೆ ಬಂದಾಗ ಅಥವಾ ಸವಾಲುಗಳು ಎದುರಾದ ಸಂದರ್ಭಗಳಲ್ಲಿ ಇದು ತಾಳ್ಮೆಯ ಕೊರತೆಗೆ ಕಾರಣವಾಗಬಹುದು. ಸಾಮಾಜಿಕ ಮಾಧ್ಯಮಗಳು ತಮ್ಮ ಹೈಲೈಟ್ ರೀಲ್ಸ್‌ಗಳೊಂದಿಗೆ, ಪ್ರೀತಿಯ ಈ ವಹಿವಾಟಿನ ದೃಷ್ಟಿಕೋನವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಇಲ್ಲಿ ಸಂಬಂಧಗಳನ್ನು ಅವುಗಳ ಆಂತರಿಕ ಶಕ್ತಿ ಮತ್ತು ಆಧ್ಯಾತ್ಮಿಕ ಆಳಕ್ಕಿಂತ ಹೆಚ್ಚಾಗಿ ಅವುಗಳ ಬಾಹ್ಯನೋಟ ಮತ್ತು ಸಾರ್ವಜನಿಕ ಪ್ರೀತಿಯ ಪ್ರದರ್ಶನದಿಂದ ನಿರ್ಣಯಿಸಲಾಗುತ್ತದೆ.

ನಿಜವಾದ ಪ್ರೀತಿಯು ಪರಿಪೂರ್ಣ ಸಂಗಾತಿಯನ್ನು ಕಂಡುಹಿಡಿಯುವುದಲ್ಲ; ಆದರೆ ಅಪೂರ್ಣ ವ್ಯಕ್ತಿಯನ್ನು ಸಂಪೂರ್ಣವಾಗಿ ಪ್ರೀತಿಸುವುದು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ನಾವಿಂದು ನಮ್ಮ ಸಂಗಾತಿಯ ದೌರ್ಬಲ್ಯಗಳನ್ನು ಸ್ವೀಕರಿಸುವುದನ್ನು, ತಪ್ಪುಗಳನ್ನು ಕ್ಷಮಿಸುವುದನ್ನು ರೂಢಿಸಿಕೊಳ್ಳುವುದು ಮುಖ್ಯ.

ಸಕಾರಾತ್ಮಕವಾಗಿ ನೋಡುವುದಾದರೆ, ರಾಧಾ– ಕೃಷ್ಣರ ಪ್ರೇಮವು ದೈವಿಕ ಆದರ್ಶದ ಮಾದರಿಯಂತೆ ಕಂಡುಬಂದರೆ, ಆಧುನಿಕ ಪ್ರೇಮಕ್ಕೆ ತನ್ನದೇ ಆದ ವಿಶಿಷ್ಟ ಸೌಂದರ್ಯ ಮತ್ತು ಶಕ್ತಿ ಇದೆ. ವೈಯಕ್ತಿಕ ಮಹತ್ವಾಕಾಂಕ್ಷೆ ಮತ್ತು ಆತ್ಮಶೋಧನೆಗೆ ಪ್ರಾಮುಖ್ಯ ನೀಡುವ ಇಂದಿನ ಜಗತ್ತಿನಲ್ಲಿ, ಸಂಗಾತಿಗಳು ಒಟ್ಟಾಗಿ ನಡೆಯಲು ತಮ್ಮದೇ ಆದ ವೈಯಕ್ತಿಕ ಹೆಜ್ಜೆ ಗುರುತನ್ನು ಕಾಯ್ದುಕೊಳ್ಳುವುದಷ್ಟೇ ಅಲ್ಲ, ಪರಸ್ಪರ ಬೆಂಬಲಿಸುವುದನ್ನೂ ಆದ್ಯತೆ ಆಗಿಸಿಕೊಳ್ಳುತ್ತಾರೆ. ಈ ಕಾಲದ ರಾಧೆಗೆ ತನ್ನದೇ ಆದ ಗುರಿ, ಮಹತ್ವಾಕಾಂಕ್ಷೆಗಳಿವೆ. ಆಕೆ ಹೊರಜಗತ್ತಿನಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಲು, ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಬಯಸುತ್ತಾಳೆ. ಅದಕ್ಕೆ ಸಹಕಾರ ಕೊಡುವ ಕೃಷ್ಣನನ್ನು ಮಾತ್ರ ಅವಳು ಪ್ರೇಮಿಸಲು ಸಾಧ್ಯ.

ಪ್ರೀತಿ ಮತ್ತು ಸ್ವಂತಿಕೆಯ ನಡುವಿನ ಸಮತೋಲನವು ಇಂದಿನ ಪ್ರೇಮದಲ್ಲಿ ಒಂದು ನಿರ್ಣಾಯಕವಾದ ಅಂಶವಾಗಿದೆ. ಇಲ್ಲಿ ಪ್ರೀತಿಯು ಒಟ್ಟಾಗಿ ಬೆಳೆಯುವುದರ ಜೊತೆಗೆ, ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ಜಾಗವನ್ನು, ತನ್ನದೇ ಆದ ಆಸಕ್ತಿಗಳನ್ನು ಮತ್ತು ವೈಯಕ್ತಿಕ ಬೆಳವಣಿಗೆಯ ಸಮಯವನ್ನು ಹೊಂದಿರುವುದು ಅವಶ್ಯಕ. ಆದರೆ ಈ ‘ಸ್ಪೇಸ್’ ನೀಡಿದ ಮಾತ್ರಕ್ಕೆ ಪ್ರೀತಿಯಲ್ಲಿ ಕೊರತೆಯಾಗಿದೆ ಎಂದರ್ಥವಲ್ಲ, ಬದಲಾಗಿ ವ್ಯಕ್ತಿತ್ವಕ್ಕೆ ಪರಸ್ಪರ ಗೌರವ ಕೊಡುವುದನ್ನು ಇದು ತೋರಿಸುತ್ತದೆ. ಇಂತಹ ಭಾವನೆಯು ಆರೋಗ್ಯಕರ ಸಂಬಂಧಕ್ಕೆ ಆಮ್ಲಜನಕವಿದ್ದಂತೆ. ಅದು ಪ್ರೀತಿಯೆಂಬ ಹೂ ಬಿಡಲು ಮತ್ತು ದೀರ್ಘಕಾಲ ಉಳಿಯಲು ಸಹಾಯ ಮಾಡುತ್ತದೆ. ಇಂತಹ ಪ್ರೀತಿಯು ಒಡೆತನದ ಭಾವನೆಯನ್ನು ಧಿಕ್ಕರಿಸಿ ಸಂಪೂರ್ಣವಾದ ನಂಬಿಕೆಯನ್ನು ಆಧರಿಸಿರುತ್ತದೆ.

ಪ್ರೇಮವು ಪ್ರತಿದಿನವೂ ಮಾಡುವ ಒಂದು ಪ್ರಜ್ಞಾಪೂರ್ವಕ ಆಯ್ಕೆ. ಅದು ಒಟ್ಟಾಗಿ ಜೀವನವನ್ನು ಕಟ್ಟಿಕೊಳ್ಳುವುದು, ಒಂದು ಟೀಮ್ ಆಗಿ ಸವಾಲುಗಳನ್ನು ಎದುರಿಸುವುದು ಮತ್ತು ಒಬ್ಬರ ಯಶಸ್ಸನ್ನು ಇನ್ನೊಬ್ಬರು ಸಂಭ್ರಮಿಸುವುದು. ಇಂದಿನ ಕಪಲ್‌ಗಳು ತಮ್ಮ ಸಂಬಂಧವನ್ನು ಒಂದು ಸಹಭಾಗಿತ್ವವೆಂದು ಪರಿಗಣಿಸುತ್ತಾರೆ, ಅಲ್ಲಿ ಇಬ್ಬರೂ ಭಾವನಾತ್ಮಕವಾಗಿ, ಆರ್ಥಿಕವಾಗಿ ಅಥವಾ ದೈನಂದಿನ ಜೀವನದಲ್ಲಿ ಸಮಾನವಾಗಿ ಕೊಡುಗೆ ನೀಡುತ್ತಾರೆ. ಆಧುನಿಕ ಪ್ರೇಮದ ಈ ಆದರ್ಶವು ರಾಧಾ ಮತ್ತು ಕೃಷ್ಣರ ನಿಸ್ವಾರ್ಥ ಭಕ್ತಿಗಿಂತ ಭಿನ್ನವಾಗಿದ್ದರೂ ಅಷ್ಟೇ ಸುಂದರವಾಗಿದೆ. ಇದು ಮಾನವ ಸಂಬಂಧದ ಶಕ್ತಿಗೆ ಸಾಕ್ಷಿಯಾಗಿದೆ. ಇಲ್ಲಿ ಇಬ್ಬರು ವ್ಯಕ್ತಿಗಳು ಒಬ್ಬರನ್ನೊಬ್ಬರು ಪೂರ್ಣಗೊಳಿಸುವ ಬದಲಿಗೆ ಒಬ್ಬರ ಜೀವನವನ್ನು ಇನ್ನೊಬ್ಬರು ಸಮೃದ್ಧಗೊಳಿಸಲು ಒಗ್ಗೂಡುತ್ತಾರೆ. ಸಮಾನತೆ, ಸಂವಹನ ಮತ್ತು ಒಟ್ಟಾಗಿ ಭವಿಷ್ಯವನ್ನು ಕಟ್ಟುವ ಸಂತೋಷದಲ್ಲಿ ಈ ಪ್ರೇಮವು ತನ್ನ ಶಕ್ತಿಯನ್ನು ಕಂಡುಕೊಳ್ಳುತ್ತದೆ. ಹಾಗಾಗಿಯೇ ಪ್ರೇಮವು ಸರ್ವವ್ಯಾಪಿ ಮಾತ್ರವಲ್ಲ ಸಾರ್ವಕಾಲಿಕವಾದ ಸತ್ಯವೂ ಆಗಿದೆ. 

ನಿಜವಾದ ಪ್ರೀತಿಯು ಪರಿಪೂರ್ಣ ಸಂಗಾತಿಯನ್ನು ಕಂಡುಹಿಡಿಯುವುದಲ್ಲ; ಬದಲಿಗೆ ಅಪೂರ್ಣ ವ್ಯಕ್ತಿಯನ್ನು ಸಂಪೂರ್ಣವಾಗಿ ಪ್ರೀತಿಸುವುದು

ಲೇಖಕಿ ರಂಜನಿ ರಾಘವನ್ ನಟಿ ಹಾಗೂ ಚಿತ್ರ ನಿರ್ದೇಶಕಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.