ADVERTISEMENT

ನನ್ನಪ್ಪ ಶಿಸ್ತಿನ ಸಿಪಾಯಿ

ಪ್ರಜಾವಾಣಿ ವಿಶೇಷ
Published 15 ಜೂನ್ 2019, 13:34 IST
Last Updated 15 ಜೂನ್ 2019, 13:34 IST
ಬಳವಂತರಾವ್ ಸತ್ತೂರ
ಬಳವಂತರಾವ್ ಸತ್ತೂರ   

ನನ್ನಪ್ಪ(ಬಳವಂತರಾವ್ ಸತ್ತೂರ) ಶಿಸ್ತಿನ ಸಿಪಾಯಿ ಆಗಿದ್ದ. ಸಮಯ ಪಾಲನೆ ವಿಷಯದಲ್ಲಿ ಆತ ಯಾರೊಂದಿಗೂ ರಾಜೀ ಆಗುತ್ತಿರಲಿಲ್ಲ. ಹಾಗೆಯೇ, ಹಣದ ಮೌಲ್ಯವನ್ನು ಸಹ ಅಷ್ಟೇ ಚೆನ್ನಾಗಿ ತಿಳಿದಿದ್ದ, ಮಕ್ಕಳಿಗೂ ತಿಳಿಸಿಕೊಟ್ಟಿದ್ದ.ನಾನಾಗ ಕಿಮ್ಸ್‌ನಲ್ಲಿ ವೈದ್ಯಕೀಯ ಶಿಕ್ಷಣ(ಎಂಡಿ) ಓದುತ್ತಿದ್ದೆ. ಹುಬ್ಬಳ್ಳಿಯ ಪರಿಮಳ ಎಂಬಾಕೆಯೊಂದಿಗೆ ಆಗಷ್ಟೇ ವಿವಾಹವಾಗಿತ್ತು. ಹಾಸ್ಟೆಲ್‌ನಲ್ಲಿಯೇ ವಾಸವಾಗಿದ್ದೆ, ಹೆಂಡತಿ ಮನೆಯಿಂದ ಊಟ ಬರುತ್ತಿತ್ತು. ಒಂದು ಭಾನುವಾರ ಹೆಂಡತಿ ಜತೆ ಧಾರವಾಡದಲ್ಲಿರುವ ನಮ್ಮ ಮನೆಗೆ ಹೋಗಿದ್ದೆ. ಬಸ್‌ ಚಾರ್ಜ್‌ಗೆ ಸಾಕಾಗುವಷ್ಟು ಮಾತ್ರ ಹಣ ಇತ್ತು. ಮದುವೆಯಾದ ಹೊಸದರಲ್ಲಿಹೆಂಡತಿ ಜತೆ ಹೊರಗೆ ಹೋಗಬೇಕೆಂದು ಅಪ್ಪನಲ್ಲಿ ಹಣ ಕೇಳಿದೆ. ಕಿಸೆಯಲ್ಲಿದೆ, ತೆಗೆದುಕೊಂಡು ಹೋಗು ಎಂದರು.

ಮನೆಯಲ್ಲಿನ ಗಿಣಿ ಗೂಟಕ್ಕೆ ತೂಗಿ ಹಾಕಿದ್ದ ಅಂಗಿಯಲ್ಲಿ 10 ರೂಪಾಯಿಯ ಐದು ನೋಟುಗಳು ಇದ್ದವು. ಅದರಲ್ಲಿ ಒಂದು ನೋಟು ತೆಗೆದುಕೊಂಡು ಹೆಂಡತಿ ಜತೆ ಚಾ ಕುಡಿದು ಬಂದಿದ್ದೆ. ಅದರ ನಂತರ ಒಂದೇ ಒಂದು ಬಾರಿಯೂ ಅಪ್ಪನಲ್ಲಿ ನಾ ಹಣ ಕೇಳಲಿಲ್ಲ. ಅಪ್ಪನ ಕಿಸೆಯಲ್ಲಿದ್ದ ₹10ರ ಐದು ನೋಟುಗಳು ನನಗೆ ಹಣದ ಮೌಲ್ಯ ತಿಳಿಸಿಕೊಟ್ಟಿದ್ದವು. ಅಲ್ಲದೆ, ಬೀದಿಯಲ್ಲಿ ವ್ಯಾಪಾರ ಮಾಡುವವರ ಬಳಿ ನನ್ನಪ್ಪ ಎಂದೂ ಚೌಕಾಶಿ ಮಾಡುತ್ತಿರಲಿಲ್ಲ. ಹೇಳಿದಷ್ಟು ಹಣ ಕೊಟ್ಟು ತರಕಾರಿ, ಸೊಪ್ಪು ಖರೀದಿಸುತ್ತಿದ್ದರು. ಅವರ ನಿಜವಾದ ಬದುಕು ಏನೆಂದು ಅಪ್ಪ ತಿಳಿಸಿಕೊಟ್ಟಿದ್ದ.

ಅಪ್ಪ ಪ್ರತಿದಿನ ಬೆಳಿಗ್ಗೆ 6ಕ್ಕೆ ವಾಯು ವಿಹಾರಕ್ಕೆ ಹೋಗುತ್ತಿದ್ದರು. ಆ ಸಮಯ ಏನಾದರೂ ತಪ್ಪಿತೆಂದರೆ ಅವತ್ತು ವಾಯುವಿಹಾರ ಮಾಡುತ್ತಿರಲಿಲ್ಲ. ಅಂದರೆ, ಅವರು ಸಮಯಕ್ಕೆ ಅಷ್ಟೊಂದು ಬೆಲೆ ನೀಡುತ್ತಿದ್ದರು. ತಲೆ ಮೇಲೊಂದು ಟೋಪಿ ಹಾಗೂ ಕೋಟು ಸದಾ ಧರಿಸುತ್ತಿದ್ದರು. ಶಿಸ್ತಿಗೆ ಇನ್ನೊಂದು ಹೆಸರೇ ನಮ್ಮಪ್ಪ ಆಗಿದ್ದರು. ಇಂಗ್ಲೆಂಡ್‌ನಲ್ಲಿ ನಾನು ಮೆಡಿಕಲ್‌ನಲ್ಲಿ ಎಂಆರ್‌ಸಿಪಿ ಮಾಡುತ್ತಿದ್ದೆ. ಅನಾರೋಗ್ಯದಿಂದ ಬಳಲುತ್ತಿದ್ದ 91 ವರ್ಷದ ಅಪ್ಪ ತೀರಿಕೊಂಡಿದ್ದರು. ಅಪ್ಪನ ಕೊನೆ ಘಳಿಗೆಯಲ್ಲಿ ಹಾಗೂ ಅಂತ್ಯ ಸಂಸ್ಕಾರದ ವೇಳೆ ನನಗೆ ಇರಲಾಗಿಲ್ಲ ಎನ್ನುವ ನೋವು ಸದಾ ಕಾಡುತ್ತಿದೆ.

ADVERTISEMENT

-ಡಾ. ಜಿ.ಬಿ. ಸತ್ತೂರ, ಹೃದಯ ರೋಗ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.