ADVERTISEMENT

Mysore Dasara: ಇರುಳ ಬೆಳಕಿನ ದಸರೆ

ಕೆ.ನರಸಿಂಹ ಮೂರ್ತಿ
Published 20 ಸೆಪ್ಟೆಂಬರ್ 2025, 23:30 IST
Last Updated 20 ಸೆಪ್ಟೆಂಬರ್ 2025, 23:30 IST
<div class="paragraphs"><p>ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ಮೈಸೂರು ಅರಮನೆ ದೀಪಾಲಂಕಾರದಿಂದ ಕಂಗೊಳಿಸಿದ ಪರಿ </p></div>

ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ಮೈಸೂರು ಅರಮನೆ ದೀಪಾಲಂಕಾರದಿಂದ ಕಂಗೊಳಿಸಿದ ಪರಿ

   

ಚಿತ್ರಗಳು: ಅನೂಪ್ ರಾಘ.ಟಿ.

ಮೈಸೂರು ದಸರಾದಲ್ಲಿ ಯಾವುದು ಬಹು ದೊಡ್ಡ ಹೈಲೈಟ್? 

‘ಅಷ್ಟೂ ಗೊತ್ತಿಲ್ಲವೇ, ಜಂಬೂಸವಾರಿ’ ಎನ್ನುತ್ತೀರಿ. ನಿಮ್ಮ ಮಾತೇನೋ ಸರಿ. ಆದರೆ ಅದು ಉತ್ಸವದ ಕೊನೇ ಘಟ್ಟ. ಅದಾದ ಮೇಲೆ, ಸಂಜೆ ಬನ್ನಿಮಂಟಪ ಮೈದಾನದಲ್ಲಿ ನಡೆಯುವ ಸಾಹಸಮಯ ಟಾರ್ಚ್‌ ಲೈಟ್‌ ಪರೇಡ್‌ ಮರೆಯೋದುಂಟೆ? ಇವೆರಡನ್ನೂ ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ದೇಶ–ವಿದೇಶಗಳಿಂದ ಧಾವಿಸಿ ಬರುತ್ತಾರೆ. ನಿಮ್ಮದೂ ಅದೇ ತವಕ. 

ADVERTISEMENT

ಇರಲಿ, ಇದೇ ಪ್ರಶ್ನೆಯನ್ನು ಜೆನ್‌ ಝೀ ತಲೆಮಾರಿನ ಯುವಕ–ಯುವತಿಯರ ಬಳಿ ಕೇಳಿದರೆ, ‘ದಸರಾ ಲೈಟಿಂಗ್ಸ್‌’ ಇನ್ನೇನು?’ ಎನ್ನುತ್ತಾರೆ. ‘ಲೈಟಿಂಗ್ಸ್‌ನಲ್ಲಿ ಹೊಳೆಯುವ ರಸ್ತೆಗಳಲ್ಲಿ ಜೋರಾಗಿ ‘ಹ್ಹೋ’ ಎಂದು ಕೂಗುತ್ತಾ ಬೈಕ್‌ಗಳಲ್ಲಿ ತೂರಿ ಹೋಗುವ ಖುಷಿ ಇಲ್ಲಲ್ಲದೇ ಇನ್ನೆಲ್ಲಾದರೂ ಸಿಗುತ್ತಾ’ ಎನ್ನುತ್ತಾರೆ. ಹಾಗೆ ಹೇಳುವಾಗ ಅವರ ಕಣ್ಣುಗಳಲ್ಲಿ ಹೊಸ ಮಿಂಚು ಹೊಳೆಯುತ್ತದೆ.  

ಭೂಮಿಯೂ ಒಂದು ಆಕಾಶವೆಂಬಂತೆ, ಆಕಾಶಕ್ಕೇ ಇರುಳ ಇಂದ್ರವೈಭವದ ಬೆಳಕಿನ ತೋರಣಗಳೆಂಬಂತೆ ಉತ್ಸವದುದ್ದಕ್ಕೂ ರಾತ್ರಿ ವೇಳೆ ಅತ್ಯದ್ಭುತ ರಮ್ಯಲೋಕವನ್ನು ಸೃಷ್ಟಿಸಿ ಜನರನ್ನು ಸೆಳೆಯುವ, ಮೈಮರೆಸುವ, ಖುಷಿಪಡಿಸುವ ವಿಶೇಷವೇ ಅದು. ಚರಿತ್ರೆಯ ಸಾಕ್ಷಿಗಳಾದ ಪಾರಂಪರಿಕ ಕಟ್ಟಡಗಳು, ನಗರದ ಅಭಿವೃದ್ಧಿಯ ದ್ಯೋತಕವೆಂಬಂತೆ ಹರಡಿರುವ ನೂರಾರು ಕಿಲೋಮೀಟರ್‌ ಉದ್ದದ ರಸ್ತೆಗಳು, ನೂರಾರು ವೃತ್ತಗಳ ದೀಪಾಲಂಕಾರ, ಅಲ್ಲಲ್ಲಿ ಬೆಳಕಿನ ಕಮಾನುಗಳು, ಕಂಬಗಳು, 
ಪ್ರತಿಕೃತಿಗಳಿಂದಲೂ ಝಗಮಗಿಸುತ್ತದೆ ಮೈಸೂರು ನಗರ.

ಇತ್ತೀಚಿನ ವರ್ಷಗಳಲ್ಲಿ, ಸಾವಿರಾರು ಡ್ರೋನ್‌ಗಳನ್ನು ಬಳಸಿ ಆಗಸದಲ್ಲಿ ಹೊಮ್ಮಿಸುವ ಬೆಳಕಿನ ಚಿತ್ತಾರಗಳು ಉತ್ಸವದ ಸಂಭ್ರಮಕ್ಕೆ ಬಹುರಂಗಿನ ಭಾಷ್ಯ ಬರೆಯುತ್ತವೆ. ಈ ಬಾರಿ ಮೂರು ಸಾವಿರ ಡ್ರೋನ್‌ಗಳನ್ನು ಬಳಸುತ್ತಾರೆ. ಎಷ್ಟು ನೋಡಿದರೂ ತಣಿಯದ ಬೆಳಕಿನ ಚಿತ್ತಾರದಲ್ಲಿ ಜನ ಮಿಕ್ಕೆಲ್ಲವನ್ನೂ ಮರೆಯುತ್ತಾರೆ. ಕನಸಿನಲ್ಲೂ, ಮನಸಿನಲ್ಲೂ ಬೆಳಕಿನ ಚಿತ್ತಾರ ಚಿಗುರುತ್ತಲೇ ಇರುತ್ತದೆ. ಇದು ಇರುಳ ಬೆಳಕಿನ ದಸರೆಯ ಸೊಗಸು. 

ಪುಟಾಣಿಗಳು, ಅಣ್ಣ–ತಂಗಿಯರು, ಸ್ನೇಹಿತರು, ಸಹಪಾಠಿಗಳು, ಪ್ರೇಮಿಗಳು, ನವದಂಪತಿಗಳು, ಮಕ್ಕಳೊಂದಿಗರು ತನ್ಮಯರಾಗಿ ತೆಗೆದುಕೊಳ್ಳುವ ಬಗೆಬಗೆಯ ಸೆಲ್ಫಿಗಳು, ರೀಲ್ಸ್‌ ಮಾಡುವ ಉಮೇದು.. ಎಲ್ಲವೂ ಎಲ್ಲೆಡೆ ಮೇಳೈಸುತ್ತವೆ. ತೂಗುಬಿಟ್ಟ ಸಾಲುದೀಪಗಳಡಿ ಮಿಂಚು ಹುಳುಗಳಂತೆ ಕಣ್ಣು ಕೋರೈಸುವ ಸಣ್ಣ ಸಣ್ಣ ನೂರಾರು ಬಲ್ಬ್‌ಗಳು ಸೃಷ್ಟಿಸುವ ಚಿತ್ತಾರದ ಬಳಿಗೆ ನಡೆದು ಬಂದು, ಮೆಲ್ಲಗೆ ಮುಖ ತಂದು, ಕ್ಯಾಮೆರಾಗೆ ಫೋಸು ಕೊಟ್ಟು ತರೇವಾರಿ ನಗು ಹೊಮ್ಮಿಸುವ ಖುಷಿಗೆ ಬೇರೆ ಸಾಟಿಯುಂಟೇ? ಫೋಟೊ, ವಿಡಿಯೊ ಸರಿಯಾಗಿ ಬರಲಿಲ್ಲವೇ. ಮತ್ತೊಂದು ಶಾಟ್‌ಗೆ ಸಿದ್ಧತೆ ಶುರು. ಇದೇ ದಸರೆಯ ಹೈಲೈಟ್. ಇದು ಮಿಸ್‌ ಆದರೆ ಇನ್ನೊಂದು ವರ್ಷ ಕಾಯಬೇಕಷ್ಟೇ.

ಇಲ್ಲಿ ವಿಶೇಷ ಎನ್ನಿಸುವುದೇ ಲೈಟಿಂಗ್ಸ್‌. ಏಕೆ ಗೊತ್ತೇ?

ಇವೆಲ್ಲದ್ದರ ಕಡೆಗೆ ಈ ದೀಪಾಲಂಕಾರವೇ ನಮ್ಮನ್ನು ಕರೆದೊಯ್ಯುತ್ತದೆ. ಹೆಜ್ಜೆ ಇಟ್ಟಲ್ಲೆಲ್ಲ, ನೋಟ ಹರಿದಲ್ಲೆಲ್ಲಾ ಬೆಳಕೋ ಬೆಳಕು. ದೀಪಾಲಂಕಾರ ನೋಡುವುದೋ, ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದೋ ಎಂಬ ಗೊಂದಲವೂ ಮರೆಯಾಗಿ, ಒಂದರೊಳಗೊಂದು ಬೆರೆತು ಹೋಗುತ್ತವೆ.

ಹೀಗೆ, ದಸರೆಯು ಹಗಲಿನಲ್ಲಿ ಒಂದು ರೀತಿ, ಇರುಳಿನಲ್ಲಿ ಇನ್ನೊಂದು ರೀತಿ ರೂಪಾಂತರಗೊಳ್ಳುತ್ತದೆ! ದಸರೆಯಷ್ಟೇ ಅಲ್ಲ, ಇಡೀ ಮೈಸೂರು ನಗರವೇ ಬಣ್ಣದ ಚಿಟ್ಟೆಯಂತೆ ಬದಲಾಯಿಸಿಕೊಳ್ಳುತ್ತದೆ. ಹೀಗಾಗಿಯೇ ಮೈಸೂರಿಗೆ ಎರಡು ದಸರಾ. ಒಂದು ಹಗಲಿನದ್ದು, ಇನ್ನೊಂದು ಇರುಳಿನದ್ದು. ಹಗಲಿನಲ್ಲಿ ಸಾಮಾನ್ಯವೆಂಬಂತೆ ಕಾಣುವ ಮೈಸೂರು ನಗರ ಇರುಳಿನಲ್ಲಿ ಇಂದ್ರಲೋಕವೇ. 

ದಸರೆಯನ್ನು ಸಂಜೆ ಬಳಿಕ ಅಸಾಮಾನ್ಯವೆನ್ನಿಸುವಂತೆ ಮಾಡುವುದೇ ಈ ಲೈಟಿಂಗ್ಸ್‌. ಬೆಳಕಿನ ಹಾದಿಯೆನ್ನಿ, ಬೆಳಕಿನ ಲೋಕವೆನ್ನಿ, ಬೆಳಕಿನ ಬೆರಗೆನ್ನಿ. ಬೆರಗಿನ ಬೆಳಕೆನ್ನಿ, ನೀವು ಯಾವ ಹೆಸರಿಟ್ಟರೂ ಸೈ. ಆದರೆ, ನಿಮ್ಮೊಳಗೂ ಬೆಳಕು ವಿಜೃಂಭಿಸುವುದೂ ನಿಮ್ಮ ಅನುಭವಕ್ಕೆ ಬರುತ್ತದೆ.

ರಸ್ತೆ, ವೃತ್ತಗಳಲ್ಲಿರುವ ಮರಗಳ ಮೈಗೆ ವಿದ್ಯುತ್‌ ದೀಪದ ಬಳ್ಳಿಗಳನ್ನು ಸುತ್ತುವ ಪದ್ಧತಿ ಕೆಲವು ವರ್ಷಗಳ ಹಿಂದೆ ಶುರುವಾಯಿತು. ಅದಕ್ಕೂ ಮುನ್ನ ರೆಂಬೆ–ಕೊಂಬೆಗಳಿಗಷ್ಟೇ ಈ ಬಳ್ಳಿಗಳನ್ನು ತೂಗುಬಿಟ್ಟು ಅಲಂಕರಿಸಲಾಗುತ್ತಿತ್ತು. ಜೊತೆಗೆ ಬಣ್ಣ ಬಣ್ಣದ ಸ್ಪಾಟ್‌ಲೈಟ್‌ಗಳನ್ನಿಟ್ಟು ಬೆಳಗಿಸಲಾಗುತ್ತಿತ್ತು. ‘ಈ ಬಗೆಯ ಅಲಂಕಾರಗಳಿಂದ ಮರಗಳೂ ಸೇರಿದಂತೆ ಅಲ್ಲಿರುವ ಹಾಗೂ ಸುತ್ತಮುತ್ತಲಿನ ಜೀವಸಂಕುಲಕ್ಕೆ ತೊಂದರೆಯಾಗುತ್ತದೆ’ ಎಂಬ ಪರಿಸರ ಪ್ರಿಯರ ಹಸಿರು ಕಾಳಜಿ ಮುಂದುವರಿದಿದೆ.

ಒಂದು ಕಾಲಕ್ಕೆ ದಸರೆಯ ದೀಪಾಲಂಕಾರವೆಂದರೆ ಅದು ಅಂಬಾವಿಲಾಸ ಅರಮನೆ ಕೇಂದ್ರಿತವಾಗಿತ್ತು. ಜಂಬೂಸವಾರಿ ಸಾಗುವ ಸಯ್ಯಾಜಿರಾವ್ ರಸ್ತೆಗಷ್ಟೇ ಸೀಮಿತವಾಗಿತ್ತು. ರಸ್ತೆ, ವೃತ್ತಗಳನ್ನು ದೀಪಗಳಿಂದ ಸಿಂಗರಿಸುವ ಪದ್ಧತಿ ಇರಲಿಲ್ಲ. ಜನ ದೀಪಾಲಂಕಾರ ನೋಡಲು ಅಲ್ಲಿಗೇ ಬರುತ್ತಿದ್ದರು ಎಂದು ಹಿರಿಯರು ನೆನಪಿಸಿಕೊಳ್ಳುತ್ತಾರೆ. ಈಗಲೂ ಅರಮನೆಯ ದೀಪಾಲಂಕಾರದ ವೈಭವವೇ ಒಟ್ಟಾರೆ ದೀಪಾಲಂಕಾರದ ಕೇಂದ್ರಾಕರ್ಷಣೆಯಾಗಿ ಉಳಿದಿದೆ. ಅದರ ವಿನ್ಯಾಸವೇ ಹಾಗೆ. ಹಗಲಿನಲ್ಲೂ ಆಕರ್ಷಕ. ಇರುಳಿನಲ್ಲೂ ಆಕರ್ಷಕ. ಈಗ ಎಲ್ಲ ಕಡೆ ದೀಪಾಲಂಕಾರಗಳನ್ನು ನೋಡಿಕೊಂಡು ಕೊನೆಗೆ ಜನ ಅರಮನೆಯತ್ತ ಬರುತ್ತಾರೆ. ಅದುವರೆಗೆ ನೋಡಿದ್ದೆಲ್ಲವನ್ನೂ ಅರಮನೆ ಮರೆಯುವಂತೆ ಮಾಡುತ್ತದೆ!

ನಿಮಗೆ ಗೊತ್ತಿರಲಿ, ಈ ಅರಮನೆಯು ಜಗಮಗಿಸುವಂತೆ ಮಾಡಲು ಒಂದು ಲಕ್ಷ ಇನ್‌ಕ್ಯಾಂಡಿಸೆಂಟ್‌ ವಿದ್ಯುತ್‌ ಬಲ್ಬ್‌ಗಳಿವೆ. ಅವುಗಳನ್ನು ದೆಹಲಿಯಿಂದ ತರಿಸಲಾಗಿದೆ. ಈ ಬಾರಿ 18 ಸಾವಿರ ಹೊಸ ಬಲ್ಬ್‌ಗಳನ್ನು ಅಳವಡಿಸಲಾಗಿದೆ. ತಿರುಪಿನ ಬುರುಡೆಯ ಬಲ್ಬ್‌ಗಳನ್ನು ಅರಮನೆಗೆಂದೇ ವಿಶೇಷವಾಗಿ ತಯಾರಿಸಲಾಗುತ್ತದೆ. ಈ ಮೊದಲು ಅರಮನೆಗೆ 20 ವ್ಯಾಟ್‌ನ ಬಲ್ಬ್‌ಗಳನ್ನು ಹಾಕಲಾಗಿತ್ತು. ಅವು ಮೈಸೂರು ಲ್ಯಾಂಪ್ಸ್‌ ಕಾರ್ಖಾನೆಯ ಬಲ್ಬ್‌ಗಳು. ಅದು ಮುಚ್ಚಿ ದಶಕವಾಗಿದೆ. ಈಗ ಕಣ್ಣು ಕೋರೈಸುವುದನ್ನು ಕಡಿಮೆ ಮಾಡಲು, ಅರಮನೆಯ ವಾಸ್ತುಶಿಲ್ಪ ಸರಿಯಾಗಿ ಗೋಚರಿಸಲು 15 ವ್ಯಾಟ್‌ಗೆ ಇಳಿಸಲಾಗಿದೆ. ಇದೆಲ್ಲ ಸೇರಿ ಅರಮನೆಯ ಮುಖ್ಯ ಕಟ್ಟಡ, ಒಳಾಂಗಣವಲ್ಲದೇ ಬಲರಾಮ, ವರಾಹ, ಜಯಮಾರ್ತಾಂಡ ದ್ವಾರಗಳು, ಆವರಣದ ಎಲ್ಲ ದೇಗುಲಗಳು, ಕೋಟೆ ನವರಾತ್ರಿಯಲ್ಲಿ ಜಗಮಗಿಸಲಿದೆ.

ಇಡೀ ನಗರದ ದೀಪಾಲಂಕಾರಕ್ಕಾಗಿ ಸೆಸ್ಕ್‌ನಿಂದ ನಿಯೋಜಿತರಾದ ನೂರೈವತ್ತು ಗುತ್ತಿಗೆದಾರರು ಹಾಗೂ ಅವರ ಸಾವಿರಾರು ಉದ್ಯೋಗಿಗಳು ಹಗಲಿರುಳು ದುಡಿದಿದ್ದಾರೆ. ದೀಪಾಲಂಕಾರಕ್ಕೆ 300 ಕೆ.ವಿಯ, ಎರಡೂವರೆ ಲಕ್ಷಕ್ಕೂ ಹೆಚ್ಚು ಯುನಿಟ್ ವಿದ್ಯುತ್ ಬಳಕೆಯಾಗಲಿದೆ. ಈ ಬಾರಿ ದಸರೆಗೆ ಬಂದರೆ ಇದನ್ನೆಲ್ಲ ಒಮ್ಮೆ ನೆನಪಿಸಿಕೊಳ್ಳಿ.

ಬೆಳಕೆಂಬುದು ಜ್ಞಾನ, ಸಂಭ್ರಮ, ಎಚ್ಚರದ ಸಂಕೇತ. ಬೆಳಕೆಂದರೆ ವಿಜ್ಞಾನವೋ, ತತ್ವಜ್ಞಾನವೋ ಎಂಬುದು ಕೊನೆ ಇರದ ಚರ್ಚೆ. ದಸರೆ ಎಂದರೆ ಇವೆಲ್ಲವೂ ಸೇರಿಕೊಂಡ ಹೊಸ ಬೆಳಕಷ್ಟೇ. ‘ದೀಪವು ನಿನ್ನದೆ ಗಾಳಿಯು ನಿನ್ನದೆ ಆರದಿರಲಿ ಬೆಳಕು’ ಎಂಬುದು ಕವಿ ಮಾತು. ಇದೊಂದು ಪ್ರಾರ್ಥನೆಯೂ ಹೌದು. ದಸರೆಯೂ ನವರಾತ್ರಿಗಳಲ್ಲಿ ಶಕ್ತಿದೇವಿಯರಿಗೆ ಆಸ್ತಿಕರು ಸಲ್ಲಿಸುವ ಸುದೀರ್ಘ ಪೂಜೆ–ಪ್ರಾರ್ಥನೆಯೇ. ಏಕಾಂತದ ಮೌನ ಪ್ರಾರ್ಥನೆಯು ಲೋಕಾಂತದಲ್ಲಿ ಸಂಭ್ರಮವಾಗಿ, ಸಡಗರವಾಗಿ ಮಾರ್ಪಾಡುವುದು ಸಹಜ. ಅದಕ್ಕೇ ನಾವು ಗರ್ಭಗುಡಿಯಲ್ಲಿ ಮಂದ ಬೆಳಕಿನಲ್ಲಿ ಹೊಳೆಯುವ ಮೂರ್ತಿಯ ಮುಂದೆ ಮೌನವಾಗಿ ಪ್ರಾರ್ಥಿಸುತ್ತೇವೆ. ಉತ್ಸವದಲ್ಲಿ ಮೌನ ನೂಕಿ ವಿಜೃಂಭಿಸುತ್ತೇವೆ. ಅದು ಸಾಮೂಹಿಕ ಪ್ರಾರ್ಥನೆ. ಅಲ್ಲಿ ಗದ್ದಲ, ಕೇಕೆ, ಸಂಭ್ರಮ, ಕುಣಿತ ಎಲ್ಲವೂ ಇರುತ್ತದೆ. ದಸರೆ ಲೈಟಿಂಗ್ಸ್‌ ಇವೆಲ್ಲಕ್ಕೂ ಟಾನಿಕ್‌ನಂತೆ.

ಈ ಬಾರಿ ಈ ಸಂಭ್ರಮಕ್ಕೆ ಮಹಾತ್ಮಾ ಗಾಂಧೀಜಿಯ ಸಾಥ್‌ ಕೂಡ ಸಿಗಲಿದೆ. ಅವರ ಜನ್ಮದಿನವಾದ ಅಕ್ಟೋಬರ್‌ 2ರಂದೇ ವಿಜಯ ದಶಮಿ ಬಂದಿರುವುದರಿಂದ, ಗಾಂಧೀಜಿಯ ವೈವಿಧ್ಯಮಯ ಕಟೌಟ್‌ಗಳೂ ದೀಪಾಲಂಕಾರದಲ್ಲಿ ಕಂಗೊಳಿಸಲಿವೆ.

ದಸರೆಯಲ್ಲಿ ದೀಪಾಲಂಕಾರವೆಂಬುದು ಅರಮನೆಗಷ್ಟೇ ಸೀಮಿತವಾಗಿದ್ದ ಕಾಲ ಹೋಗಿ ದಶಕಗಳಾದವು. ದಸರೆಯು ನಾಡಹಬ್ಬವಾದ ಬಳಿಕ ದೀಪವೆಂಬುದು ಒಂದು ಸಂಕೇತವಾಗಷ್ಟೇ ಉಳಿದಿದೆ. ಅದು ದೊರೆ ಮನೆಯ ಸಂಭ್ರಮದ ಜೊತೆಗೆ ನಾಡ ಜನತೆಯ ಸಂಭ್ರಮವೂ ಹೌದು. ನಾಡು ವಿಸ್ತರಣೆಯಾದಂತೆ ಸಂಭ್ರಮವೂ ವಿಸ್ತರಣೆಯಾಗಲೇಬೇಕು. ದಸರಾ ಲೈಟಿಂಗ್ಸ್‌ ಈ ಬಾರಿ ನಗರದ ಆಚೆ–ಈಚೆಗೆ 136 ಕಿಲೋಮೀಟರ್‌ ಉದ್ದಕ್ಕೂ ಹರಡಿಕೊಂಡು, 118 ವೃತ್ತಗಳಲ್ಲಿ ಜಗಮಗಿಸಲಿದೆ ಎಂಬುದನ್ನು ಒಮ್ಮೆ ಕಲ್ಪಿಸಿಕೊಳ್ಳಿ. ಮೈಸೂರು ನಗರ ಈಗ ಎಷ್ಟು ಬೆಳೆದಿದೆ ಎಂಬ ಅಂದಾಜು ಸಿಕ್ಕಿತೇ? ಅದನ್ನು ಬಿಡಿ. ದಸರೆಯನ್ನು ಕಣ್ತುಂಬಿಕೊಳ್ಳಲು ನವರಾತ್ರಿಯೇ ಬೆಸ್ಟ್‌ ಎಂಬುದನ್ನು ಮರೆಯದಿರಿ. 

ದಸರೆಯೂ ಚಾಮುಂಡಿಬೆಟ್ಟವೂ..

ಅಂಬಾ ವಿಲಾಸ ಅರಮನೆ ಒಂದೆಡೆ ಇದ್ದರೆ, ಇಡೀ ನಗರವೇ ಇನ್ನೊಂದು ತೆರೆದ ಅರಮನೆ ಎಂಬಂತೆ ಹೊಳೆಯುತ್ತದೆ. ಆದರೆ ಅದನ್ನು ಕಣ್ತುಂಬಿಕೊಳ್ಳುವ ಅವಕಾಶ ಎಲ್ಲಿ ಸಿಗುತ್ತದೆ ನಿಮಗೆ ಗೊತ್ತೇ? ನಿಮ್ಮ ಊಹೆ ನಿಜ, ಚಾಮುಂಡಿಬೆಟ್ಟದಲ್ಲಿ. 

ಬೆಟ್ಟದ ವೀಕ್ಷಣಾ ಗೋಪುರದಲ್ಲಿ, ಬೆಟ್ಟವೇರುವ ದಾರಿಯ ಕಲ್ಲು ಕಟ್ಟೆಗೆ ಒರಗಿ ‌ನಿಂತು ನಗರವನ್ನು ಕಣ್ತುಂಬಿ
ಕೊಳ್ಳಲೆಂದೇ ಸಾವಿರಾರು ಮಂದಿ ಸಂಜೆಯಿಂದಲೇ ಸಾಲುಗಟ್ಟುತ್ತಾರೆ. ದಸರೆ ವೇಳೆಯಲ್ಲಿ ಬೆಟ್ಟದ ರಸ್ತೆಯಲ್ಲಿ ಸಾಗುವುದೇ ಒಂದು ವಿಶೇಷ, ರೋಮಾಂಚಕ ಅನುಭವ. ಬೆಟ್ಟದ ಮೇಲಿಂದ ನಗರವನ್ನು ನೋಡುವುದು ಇನ್ನೊಂದು ಕಿನ್ನರಲೋಕಕ್ಕೆ ಎದುರಾದಂತೆ. 

ಭೂಮಿಯೂ ಆಕಾಶ ಎಂಬ ಮಾತಿಗೆ ಅನ್ವರ್ಥವಾಗಿ, ನಗರವನ್ನು ಆವರಿಸಿದ ದೀಪಗಳು ನಕ್ಷತ್ರಲೋಕವನ್ನು ಸೃಷ್ಟಿಸಿರುತ್ತವೆ. ನೋಡುವಷ್ಟೂ ಸೊಗಸು. ದಣಿಯದು ಮನಸು. ಎಷ್ಟು ದೂರ? ಅದು ನಿಮ್ಮ ಸಾಮರ್ಥ್ಯಕ್ಕೆ ಬಿಟ್ಟಿದ್ದು.

ಬೆಟ್ಟಕ್ಕೆ ಹೋಗಲಾಗದವರು ಅಂಬಾರಿ ಡಬ್ಬಲ್‌ ಡೆಕ್ಕರ್‌ ಬಸ್‌ನಲ್ಲಿ, ಟಾಂಗಾಗಳಲ್ಲಿ ಕುಳಿತು ನಗರದ ದೀ‍ಪಾಲಂಕಾರವನ್ನು ಕಣ್ತುಂಬಿಕೊಳ್ಳುವ ಅವಕಾಶವೂ ಇದೆ. ದರ ಮಾತ್ರ ದುಬಾರಿ.

ನಾಡಹಬ್ಬ ದಸರಾ ಮಹೋತ್ಸವ ಪ್ರಯುಕ್ತ ದಸರಾ ದೀಪಾಲಂಕಾರದಲ್ಲಿ ಕಂಡ ಮೈಸೂರಿನ ಕೆ ಆರ್ ವೃತ್ತ
ದೀಪಾಲಂಕಾರದಲ್ಲಿ ಜಗಮಗಿಸಿದ ಮೈಸೂರಿನ ಆಲ್ಬರ್ಟ್ ವಿಕ್ಟರ್ ರಸ್ತೆ  
ದೀಪಾಲಂಕಾರದ ಬೆಳಕಿನಲ್ಲಿಯೇ ದಸರಾ ಆನೆಗಳ ತಾಲೀಮು
ಚಾಮರಾಜ ಜೋಡಿ ರಸ್ತೆಯಲ್ಲಿ ವಿದ್ಯುತ್‌ ದೀಪಾಲಂಕಾರ
ಮೈಸೂರು ನಗರವು ಶುಕ್ರವಾರ ಸಂಜೆ ಚಾಮುಂಡಿ ಬೆಟ್ಟದಿಂದ ಕ್ಯಾಮೆರಾ ಕಣ್ಣಿಗೆ ಸೆರೆಯಾದದ್ದು ಹೀಗೆ.

ದಸರೆ ಅಂದ್ರೆ ವೈವಿಧ್ಯ...

ದಸರೆ ಪ್ರತಿ ವರ್ಷವೂ ವೈವಿಧ್ಯದ ಆಗರ. ಮನೆ–ಗುಡಿಯಲ್ಲಿ ನವರಾತ್ರಿಯುದ್ದಕ್ಕೂ ದೇವಿಯರನ್ನು ಪೂಜಿಸುವ ವ್ರತನಿಷ್ಠ ಭಕ್ತಿ, ಅಂಕೆ ತಪ್ಪದ ಧಾರ್ಮಿಕತೆ, ಅದನ್ನು ಅನುಸರಿಸಿ ಬರುವ ಮಿಕ್ಕೆಲ್ಲವೂ ಉತ್ಸವವನ್ನು ವೈವಿಧ್ಯಮಯಗೊಳಿಸುತ್ತವೆ. 

ಕುಸ್ತಿ ಪಂದ್ಯಾವಳಿಗಳ ರೋಚಕತೆ, ಉತ್ಸಾಹ ಇಮ್ಮಡಿಸುವ ಕ್ರೀಡಾಕೂಟಗಳು, ಕವಿಗೋಷ್ಠಿಗಳು ಉಣಬಡಿಸುವ ‘ಕಾವ್ಯ ರಸದೌತಣ’, ಯುವಜನರ ಕಿಚ್ಚೆಬ್ಬಿಸುವ ಯುವ ಸಂಭ್ರಮದ ಡಾನ್ಸ್‌ಗಳು, ‘ಲೋಕವೆಲ್ಲಾ ನಾದಮಯ’ ಎನ್ನಿಸುವ ಅರಮನೆಯ ಸಂಗೀತ ಕಛೇರಿಗಳು, ಆಕರ್ಷಕ ಹೂಲೋಕ, ರುಚಿ ಅಭಿರುಚಿಗಳ ಸಂಗಮವಾದ ಆಹಾರ ಮೇಳ, ಪುಸ್ತಕ ಮೇಳ, ಚರಿತ್ರೆಯನ್ನು ನೆನಪಿಸುವ ಪಾರಂಪರಿಕ ನಡಿಗೆ, ಟಾಂಗಾ ಸವಾರಿ,  ಸ್ಪರ್ಧೆಗಳಲ್ಲಿ ಮಿಂಚುವ ಚಿಣ್ಣರು, ಉತ್ಸವಕ್ಕೆಂದೇ ರೂಪುಗೊಳ್ಳುವ ಕಲಾಕೃತಿಗಳ ಲೋಕ, ಶ್ರೇಷ್ಟ ಸಿನಿಮಾಗಳ ಪ್ರದರ್ಶನ, ಇದರೊಂದಿಗೆ ಯೋಗ ದಸರೆ, ರೈತರ ದಸರೆ, ಮಹಿಳಾ ದಸರೆಯೂ ಸೇರಿಕೊಂಡಿದೆ. ಇದರ ಭಾಗವಾಗಿ ಯೋಗ ಚಾರಣವೂ, ಬೆಟ್ಟದ ಮೇಲೆ ‘ಚಾಮುಂಡಿ ನಮಸ್ಕಾರ’ವೂ ಇದೆ ಈ ಬಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.