ADVERTISEMENT

ಸಾಂಸ್ಕೃತಿ ನಗರಿ ಮೈಸೂರು: ಹೆಮ್ಮೆಯ ಪ್ರತೀಕ ಕ್ಲಾಕ್ ಟವರ್

ಶಾಂತರಾಜು ಮೈಸೂರು.
Published 8 ಜೂನ್ 2019, 7:31 IST
Last Updated 8 ಜೂನ್ 2019, 7:31 IST
ಕ್ಲಾಕ್ ಟವರ್‌
ಕ್ಲಾಕ್ ಟವರ್‌   

ತುಂಬಾ ಎತ್ತರಕ್ಕೆ ಬೆಳೆದವನಾದರೂ ಕೊಂಚವೂ ಅಹಂ ಹೊಂದದ ಸವ್ಯಸಾಚಿ, ಒಂದು ಕಾಲದಲ್ಲಿ ಮೈಸೂರಿನ ಪ್ರಜೆಗಳ ಸಮಯದ ಜೊತೆಗಾರ, ಮೈಸೂರು ಮಹಾರಾಜರ ನೆಚ್ಚಿನ ಗೋಪುರ, ಈಗ ಮೈಸೂರು ನಗರದ ಪಾರಂಪಾರಿಕ ಕಟ್ಟಡದ ಸದಸ್ಯ ಈ ಗಡಿಯಾರ ಗೋಪುರ.

ಮೈಸೂರಿನ ಹೃದಯ ಭಾಗದಲ್ಲಿ ತಲೆ ಎತ್ತಿ ನಿಂತಿರುವ ಮೈಸೂರಿನ ಹೆಮ್ಮೆಯ ಗರಿ ‘ಕ್ಲಾಕ್ ಟವರ್’ ಅರ್ಥಾತ್ ಜನಸಾಮಾನ್ಯರ ನೆಚ್ಚಿನ ‘ದೊಡ್ಡ ಗಡಿಯಾರ’. ಸುಮಾರು ಒಂಬತ್ತು ದಶಕಗಳ ಇತಿಹಾಸ ಹೊಂದಿರುವ ಗಡಿಯಾರ ಗೋಪುರವು ಮೈಸೂರಿನ ಹೆಮ್ಮೆಯ ಅರಸ ನಾಲ್ವಡಿ ಕೃಷ್ಣರಾಜ ಒಡೆಯರಿಂದ ನಿರ್ಮಿಸಲ್ಪಟ್ಟಿತು. ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂಬ ತತ್ವಕ್ಕೆ ಬದ್ಧರಾಗಿದ್ದ ನಾಲ್ವಡಿಯವರು, ಲಂಡನ್ ಪ್ರವಾಸದಲ್ಲಿದ್ದಾಗ ಅಲ್ಲಿದ್ದ ’ಬಿಗ್ ಬೆನ್’ ಗಡಿಯಾರ ಗೋಪುರಕ್ಕೆ ಮನಸೋತರು. ಅದರ ಪ್ರೇರಣೆಯಿಂದ ಮೈಸೂರಿನಲ್ಲಿ ತಮ್ಮ ಆಡಳಿತದ ರಜತ ಮಹೋತ್ಸವದ ನೆನಪಿಗಾಗಿ ತಮ್ಮ ಪ್ರಜೆಗಳ ಒತ್ತಾಸೆಯಂತೆ ಈ ಗಡಿಯಾರವನ್ನು ನಿರ್ಮಿಸುತ್ತಾರೆ. 1927ರಲ್ಲಿ ಅರಮನೆಯ ಬಲರಾಮ ದ್ವಾರದ ಬಳಿಯ ಅಶೋಕ ರಸ್ತೆಯಲ್ಲಿ ನಿರ್ಮಾಣಗೊಂಡಿದೆ. ಸುಮಾರು 75 ಅಡಿ ಎತ್ತರದ ಈ ಗೋಪುರವು ಇಂಡೋ ಸಾರ್ಸೆನಿಕ್ ಶೈಲಿಯಲ್ಲಿದ್ದು, ರಾಜಸ್ಥಾನಿ ಗುಮ್ಮಟವನ್ನೊಂದಿದೆ. 5 ಅಡಿ ವ್ಯಾಸದ ನಾಲ್ಕು ದಿಕ್ಕಿನಲ್ಲೂ ಗಡಿಯಾರ ಮತ್ತು ಕಮಾನುಗಳುಳ್ಳ, ಕಿಟಕಿಗಳನ್ನು ಹೊಂದಿದ್ದು, ಆಂಗ್ಲ ಚರ್ಚ್ ಹಾಗೂ ಇಂಡೋ ಸಾರ್ಸೆನಿಕ್ ವಾಸ್ತುಶಿಲ್ಪದ ವಿನ್ಯಾಸವನ್ನು ಹೋಲುತ್ತದೆ. ಹಿಂದೆ ಗಡಿಯಾರವು ಪ್ರತಿ ಗಂಟೆಗೊಮ್ಮೆ ಬಾರಿಸುತ್ತಿತ್ತು. ಭವಿಷ್ಯದಲ್ಲಿ ಗಡಿಯಾರದ ಅತಿ ಶಬ್ದದಿಂದ ಗೋಪುರ ಬಿರುಕು ಬಿಡುವ ಸಂಭವದಿಂದ ಅಲಾರಂ ಶಬ್ದವನ್ನು ದಶಕಗಳಿಂದ ನಿಲ್ಲಿಸಲಾಯಿತು.

ಪ್ರಸ್ತುತ ಗಡಿಯಾರ ಗೋಪುರವು ಮೈಸೂರು ಪಾರಂಪರಿಕ ಕಟ್ಟಡಗಳ ಪಟ್ಟಿಗೆ ಸೇರಿದ್ದು, ಪ್ರತಿವರ್ಷ ಮೈಸೂರು ದಸರಾ ಅವಧಿಯಲ್ಲಿ ಈ ಗೋಪುರದ ಮೇಲೆ ಲೇಸರ್ ಶೋವನ್ನು ಆಯೋಜಿಸಲಾಗುತ್ತದೆ. ಕೆಲವು ದಿನಗಳ ಹಿಂದೆ ಗಡಿಯಾರ ತನ್ನ ಶಬ್ಧವನ್ನು ನಿಲ್ಲಿಸಿ ಸ್ತಬ್ಧವಾಗಿತ್ತು. ಆ ವೇಳೆ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ರಿಪೇರಿ ಮಾಡಿಸಿ ಮರುಜೀವ ನೀಡಿದ್ದರು. ಈ ನಡುವೆ ಗೋಪುರದ ಗುಮ್ಮಟದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ನೋಡುಗರು ಗಲಿಬಿಲಿ ಪಡುವಂತಾಗಿದೆ

ADVERTISEMENT

ಹಳೇ ಮೈಸೂರು ಭಾಗದ ಜನಜನಿತ ಸ್ಥಳವಾದ ದೊಡ್ಡ ಗಡಿಯಾರ ಸುಂದರವಾದ ಪಾರಂಪರಿಕ ಕಟ್ಟಡ. ಹಳ್ಳಿಗರು ಈಗಲೂ ಆ ಸ್ಥಳವನ್ನು ದೊಡ್ಡ ಗಡಿಯಾರದ ವೃತ್ತ ಎಂತಲೇ ಕರೆಯುತ್ತಾರೆ. ಶತಕಗಳ ಹಳೆಯದಾದ ಕಟ್ಟಡ ಮಳೆ ಬಂದರೂ, ಬಿಸಿಲಾದರೂ ತನ್ನ ಮೈಕೊಡವಿ ನಿಂತಿದೆ. ಜನಸಾಮಾನ್ಯರ ನೆಚ್ಚಿನ ಈ ಗಡಿಯಾರ ಗೋಪುರವು ಮೈಸೂರಿನ ರಾಜ ಮಹಾರಾಜರ ಆಳ್ವಿಕೆಗೆ ಸಾಕ್ಷಿ ಪ್ರಜ್ಞೆಯಾಗಿ ನಿಂತಿದ್ದ, ಮೈಸೂರ ಹಿರಿಮೆ- ಗರಿಮೆಯನ್ನು ಎತ್ತಿ ಹಿಡಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.