ADVERTISEMENT

ಹೊಸ ವರ್ಷಕ್ಕೆ ಹೊಸ ಕ್ಯಾಲೆಂಡರ್‌: ನೂರು ಕಳೆದರೂ ಹಳತಾಗದ ದಿನದರ್ಶಿಕೆ

ಇ.ಎಸ್.ಸುಧೀಂದ್ರ ಪ್ರಸಾದ್
Published 27 ಡಿಸೆಂಬರ್ 2025, 13:26 IST
Last Updated 27 ಡಿಸೆಂಬರ್ 2025, 13:26 IST
   

ಬೆಂಗಳೂರು: ವರ್ಷ ಆರಂಭವಾಗುತ್ತಿದ್ದಂತೆ ಮನೆ ಸೇರುವ ಹೊಸ ವಸ್ತುಗಳಲ್ಲಿ ಪ್ರಥಮ ಸ್ಥಾನದಲ್ಲಿ ನಿಲ್ಲುವುದೇ ಕ್ಯಾಲೆಂಡರ್‌. ಗೋಡೆ ಮೇಲೆ ನೇತಾಡುವ, ಮೇಜಿನ ಮೇಲೆ ಕೂರುವ ಅಥವಾ ಪಾಕೆಟ್‌ನಲ್ಲಿಟ್ಟುಕೊಳ್ಳುವ ಕ್ಯಾಲೆಂಡರ್‌ಗಳ ಖರೀದಿ ಭರಾಟೆಯೂ ವರ್ಷಾಂತ್ಯದಲ್ಲಿ ಹೆಚ್ಚಾಗಿದೆ. ಸ್ವಾತಂತ್ರ್ಯ ಪೂರ್ವದಿಂದ ಇಂದಿಗೂ ಕ್ಯಾಲೆಂಡರ್‌ ಮುದ್ರಿಸಿಕೊಂಡು ಬರುತ್ತಿರುವ ಬೆಂಗಳೂರು ಮುದ್ರಣಾಲಯ ಕ್ಯಾಲೆಂಡರ್‌ ಈಗ 100 ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿದೆ.

ರಜಾ ದಿನಗಳು, ಅಮಾವಾಸ್ಯೆ, ಹುಣ್ಣಿಮೆ, ರಥೋತ್ಸವ, ತಿಥಿ, ರಾಶಿ, ಮಳೆ ನಕ್ಷತ್ರದ ಜತೆಗೆ, ರಾಹುಕಾಲ, ಗುಳಿಕ ಕಾಲ ಹಾಗೂ ಯಮಗಂಡ ಕಾಲಗಳನ್ನು ನೋಡಲು ಇಂದಿಗೂ ಬಹಳಷ್ಟು ಜನ ನೆಚ್ಚಿಕೊಂಡಿರುವುದು ಕ್ಯಾಲೆಂಡರ್‌ಗಳನ್ನೇ. ಇದಕ್ಕಾಗಿಯೇ ಮನೆಯಲ್ಲಿ ನಿಶ್ಚಿತ ಗೋಡೆ, ಅದಕ್ಕೊಂದು ಮೊಳೆ ಇದ್ದೇ ಇರುತ್ತದೆ.

ಕ್ಯಾಲೆಂಡರ್‌ಗಳಲ್ಲಿ ಪ್ರಮುಖವಾಗಿ ಬೆಂಗಳೂರು ಮುದ್ರಣಾಲಯ, ವಿಶ್ವಾಸಾರ್ಹ ದಿನಪತ್ರಿಕೆಯಾದ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್‌ ದಿನಪತ್ರಿಕೆಗಳೂ ಕೆಲ ದಶಕಗಳಿಂದ ಕ್ಯಾಲೆಂಡರ್‌ಗಳನ್ನು ಪ್ರತಿ ವರ್ಷ ಮುದ್ರಿಸುತ್ತಿದ್ದು, ಇವೂ ಜನರ ಬಹು ಅಪೇಕ್ಷಿತ ಕ್ಯಾಲೆಂಡರ್‌ಗಳಾಗಿವೆ. ಇವುಗಳೊಂದಿಗೆ ಪಂಚಾಂಗವುಳ್ಳ ಶಾಬಾಧಿಮಠ, ಹೊಂಬಾಳಿ, ಕೊಲ್ಹಾಪುರ ಮಹಾಲಕ್ಷ್ಮಿ ಕ್ಯಾಲೆಂಡರ್‌ಗಳೂ ಇವೆ. ಕೆಲ ಬ್ಯಾಂಕ್ ಹಾಗೂ ಸಂಸ್ಥೆಗಳೂ ಕ್ಯಾಲೆಂಡರ್‌ಗಳನ್ನು ಮುದ್ರಿಸಿ ತಮ್ಮ ಗ್ರಾಹಕರಿಗೆ ಹೊಸ ವರ್ಷದ ಉಡುಗೊರೆಯಾಗಿ ನೀಡುವುದೂ ವಾಡಿಕೆಯಾಗಿದೆ. 

ADVERTISEMENT

ಪ್ರಜಾವಾಣಿ ಕ್ಯಾಲೆಂಡರ್

ಕಪ್ಪು ಮತ್ತು ಬಿಳಿ ಬಣ್ಣದ ‘ಬೆಂಗಳೂರು ಮುದ್ರಣಾಲಯ’ ಎಂದು ನಮೂದಿಸಿರುವ ಕ್ಯಾಲೆಂಡರ್‌ಗೆ ಶತಮಾನದ ಇತಿಹಾಸವಿದೆ. ಕೆಂಪು, ಕಪ್ಪು ಮತ್ತು ಬಿಳಿ ಬಣ್ಣ ಇದರ ಟ್ರೇಡ್‌ಮಾರ್ಕ್‌. ಹೊಸ ವರ್ಷ ಆರಂಭಕ್ಕೂ ಎರಡು ತಿಂಗಳ ಮೊದಲಿನಿಂದಲೇ ಬಹಳಷ್ಟು ಅಂಗಡಿಗಳನ್ನು ತರಹೇವಾರಿ ಕ್ಯಾಲೆಂಡರ್‌ಗಳು ಅಲಂಕರಿಸಿರುವುದು ಸಾಮಾನ್ಯ. ಇದರ ಇತಿಹಾಸವೇ ರೋಚಕ.

ಮೈಸೂರು ಸಂಸ್ಥಾನದ ಅಂದಿನ ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮಗನ ವಿವಾಹದ ಆಮಂತ್ರಣ ಪತ್ರಿಕೆಯನ್ನು ಲಂಡನ್‌ನಲ್ಲಿ ಮುದ್ರಿಸಲಾಗಿತ್ತು. ಇದಕ್ಕೆ ತಗುಲಿದ ವೆಚ್ಚದಲ್ಲಿ ಮುದ್ರಣಾಲಯವನ್ನೇ ತೆರೆಯಬಹುದಿತ್ತು ಎಂದು ಸರ್ ಎಂ.ವಿಶ್ವೇಶ್ವರಯ್ಯ ಅವರು ಉದ್ಘರಿಸಿದ್ದರಂತೆ. ಇದಕ್ಕಾಗಿಯೇ ಸರ್‌ ಕೆ.ಪಿ. ಪುಟ್ಟಣ್ಣ ಚೆಟ್ಟಿ ಅವರನ್ನೂ ಒಳಗೊಂಡ 18 ಗಣ್ಯ ವ್ಯಕ್ತಿಗಳ ವ್ಯವಸ್ಥಾಪಕ ಸಮಿತಿಯೂ ರಚನೆಯಾಯಿತು. ಅಲ್ಲಿ ಮೂಡಿದ ಒಮ್ಮತದ ಫಲವಾಗಿಯೇ 1916ರ ಆಗಸ್ಟ್‌ 5ರಂದು ಸರ್ಕಾರಕ್ಕೆ ಸಂಬಂಧಿತ ದಾಖಲೆಗಳ ಮುದ್ರಣಕ್ಕೆ ‘ದಿ ಬೆಂಗಳೂರು ಪ್ರಿಂಟಿಂಗ್‌ ಅಂಡ್‌ ಪಬ್ಲಿಷಿಂಗ್‌ ಕಂಪನಿ’ ಆರಂಭವಾಯಿತು. ಇದೇ ಮುದ್ರಣಾಲಯವು 1921ರಲ್ಲಿ ಕ್ಯಾಲೆಂಡರ್‌ಗಳ ಮುದ್ರಣಕ್ಕೂ ಚಾಲನೆ ದೊರೆಯಿತು. ಆರಂಭದಲ್ಲಿ ಇಂಗ್ಲಿಷ್ ಕ್ಯಾಲೆಂಡರ್‌ಗಳನ್ನು ಮುದ್ರಿಸುತ್ತಿದ್ದ ಬೆಂಗಳೂರು ಮುದ್ರಣಾಲಯವು, 1936ರಲ್ಲಿ ಕನ್ನಡದ ಕ್ಯಾಲೆಂಡರ್‌ಗಳನ್ನೂ ಮುದ್ರಿಸಲಾಯಿತು.

ಕಾಲಕ್ರಮೇಣ ಬೆಂಗಳೂರು ಮುದ್ರಣಾಲಯದ ಕ್ಯಾಲೆಂಡರ್‌ಗಳಲ್ಲಿ ಸರ್ಕಾರಿ ರಜಾದಿನಗಳು ಮತ್ತು ಸ್ಥಳೀಯ ಹಬ್ಬಗಳಿಗೆ ಸಂಬಂಧಿಸಿದ ಮಾಹಿತಿಯನ್ನು ದಾಖಲಿಸಿತು ಮತ್ತು ಅಧಿಕೃತ ಮೂಲವೆಂದು ಗುರುತಿಸಲಾಯಿತು. ವಿಶಿಷ್ಟ ವಿನ್ಯಾಸದ ಬೆಂಗಳೂರು ಮುದ್ರಣಾಲಯದ ಕ್ಯಾಲೆಂಡರ್ ಇಂದಿಗೂ ಅದೇ ವಿನ್ಯಾಸವನ್ನು ಉಳಿಸಿಕೊಂಡಿದೆ.

ಆರಂಭದಲ್ಲಿ ಕ್ಯಾಲೆಂಡರ್‌ನ ನಾಲ್ಕೂ ಮೂಲೆಗಳಲ್ಲಿ ಮಹಾರಾಜರ ಭಾವಚಿತ್ರಗಳನ್ನು ಮುದ್ರಿಸಲಾಗಿತ್ತು. ಸ್ವಾತಂತ್ರ್ಯಾ ನಂತರದಲ್ಲಿ ಗಾಂಧೀಜಿ ಒಳಗೊಂಡಂತೆ ರಾಷ್ಟ್ರೀಯ ನಾಯಕರ ಚಿತ್ರಗಳು ಮುದ್ರಿಸಲಾಯಿತು. ಗೋಡೆ ಕ್ಯಾಲೆಂಡರ್‌, ಜಂಬೊ ಮತ್ತು  ಟೇಬಲ್‌ ಟಾಪ್‌ ಒಳಗೊಂಡಂತೆ ವಾರ್ಷಿಕ 18 ಲಕ್ಷದಷ್ಟು ಕ್ಯಾಲೆಂಡರ್‌ ಅನ್ನು ಇದು ಮುದ್ರಿಸುತ್ತದೆ.

1990ರ ನಂತರದಲ್ಲಿ ಮಲ್ಲಿಗೆ ಪಂಚಾಂಗ, ಡೈರಿಗಳನ್ನೂ ಹೊರತಂದಿದೆ. ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್‌ ಡೆಸ್ಕ್‌ಟಾಪ್‌ಗಳಿಗಾಗಿಯೇ ಇ–ಕ್ಯಾಲೆಂಡರ್‌ ಅನ್ನೂ ಹೊರತಂದಿದೆ. ಇದನ್ನು ಗೂಗಲ್ ಕ್ಯಾಲೆಂಡರ್‌ ಜತೆ ಸಿಂಕ್‌ ಮಾಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.