ADVERTISEMENT

ಬಾಗಲಕೋಟೆಯ ಸಾಹಿತ್ಯಾಸಕ್ತರ ಓದಿನ ಗೀಳಿನಿಂದ ಹುಟ್ಟಿಕೊಂಡ 'ಓದು ಗೆಳೆಯರ ಬಳಗ'

ರಾಜಕುಮಾರ ಕುಲಕರ್ಣಿ
Published 10 ಜನವರಿ 2026, 19:30 IST
Last Updated 10 ಜನವರಿ 2026, 19:30 IST
<div class="paragraphs"><p>ಹೀಗಿದೆ ನೋಡಿ ನಮ್ಮ ಬಳಗ</p></div>

ಹೀಗಿದೆ ನೋಡಿ ನಮ್ಮ ಬಳಗ

   
ಜಿಲ್ಲೆಯ ಸಾಹಿತ್ಯಾಸಕ್ತರರು ಓದಿನ ಗೀಳಿನಿಂದ ಹುಟ್ಟು ಹಾಕಿದ ಬಳಗವಿದು. ಆರು ಜನ ಯುವಕರಿಂದ ಪ್ರಾರಂಭಗೊಂಡ ಈ ಬಳಗ ಕಳೆದ ಎರಡು ವರ್ಷಗಳಲ್ಲಿ ಸಾಹಿತ್ಯದ ವಿವಿಧ ಪ್ರಕಾರಗಳ ಕುರಿತು ಓದು, ಚರ್ಚೆ ಮತ್ತು ಸಂವಾದಗಳನ್ನು ನಡೆಸಿದೆ...

ಇತ್ತೀಚೆಗೆ ಬಾಗಲಕೋಟೆ ನಗರದಲ್ಲಿ ‘ಓದು ಗೆಳೆಯರ ಬಳಗ’ ಎನ್ನುವ ಸಾಹಿತ್ಯಾಸಕ್ತರ ಗುಂಪು ವಿಕ್ರಮ ವಿಸಾಜಿ ಅವರ ರಸಗಂಗಾಧರ, ರಕ್ತವಿಲಾಪ ಮತ್ತು ಕಲ್ಯಾಣಪುರ ಈ ಮೂರು ನಾಟಕಗಳ ಸಾಹಿತ್ಯ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿತ್ತು. ಔಪಚಾರಿಕತೆಯ ಯಾವ ಗೌಜುಗದ್ದಲವಿಲ್ಲದೆ ತುಂಬ ಸರಳವಾಗಿ ನಡೆದ ಕಾರ್ಯಕ್ರಮ ಅದಾಗಿತ್ತು. ಸಭಿಕರ ಸಂಖ್ಯೆ ಸಣ್ಣದಾಗಿದ್ದರೂ ಅವರೆಲ್ಲ ಸಾಹಿತ್ಯದಲ್ಲಿ ಆಸಕ್ತಿ ಉಳ್ಳವರಾಗಿದ್ದರು. ನಗರದ ಉದ್ಯಾನವನದ ಮಂಟಪದಲ್ಲಿ ವೃತ್ತಾಕಾರದಲ್ಲಿ ನೆಲದ ಮೇಲೆ ಕುಳಿತು ಮೂರು ನಾಟಕಗಳ ಕುರಿತು ಮಾತುಕತೆ ಆಪ್ತ ಹರಟೆಯ ಭಾವದಲ್ಲಿ ಜರುಗಿತು. ವಿಕ್ರಮ ವಿಸಾಜಿ ಅವರು ಇಂಥ ಕಾರ್ಯಕ್ರಮಗಳು ತಮಗೂ ಇಷ್ಟವೆಂದು ಸಂತಸಪಟ್ಟರು. ಹಾರ, ಶಾಲುಗಳ ಆಡಂಬರವಿಲ್ಲದೆ ಪುಸ್ತಕವನ್ನು ಅತಿಥಿಗಳಿಗೆ ನೀಡಿ ಸನ್ಮಾನಿಸಲಾಯಿತು. ಬಳಗದ ಸದಸ್ಯರು ಮನೆಯಲ್ಲಿ ಸಿದ್ದಪಡಿಸಿಕೊಂಡು ತಂದಿದ್ದ ಉಪಾಹಾರ ಮತ್ತು ಚಹಾ ಸೇವನೆಯ ನಂತರ ಬರವಣಿಗೆಯ ಒಂದಿಷ್ಟು ಹೊಸ ಹೊಳಹುಗಳೊಂದಿಗೆ ಸಾಹಿತ್ಯಾಸಕ್ತರು ನಿರ್ಗಮಿಸಿದರು.

ಯುವ ಕಥೆಗಾರ ಅನೀಲ್ ಗುನ್ನಾಪೂರ ಅವರ ಮುಂದಾಳತ್ವದಲ್ಲಿ ಆರು ಜನ ಯುವಕರು ಕಟ್ಟಿಕೊಂಡ ಈ ‘ಓದು ಗೆಳೆಯರ ಬಳಗ’ ಕಳೆದ ಎರಡು ವರ್ಷಗಳಲ್ಲಿ ಸುಮಾರು ಹತ್ತು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಕಥೆ, ಕಾದಂಬರಿ, ಕವಿತೆ, ನಾಟಕ ಮತ್ತು ಪ್ರಬಂಧ... ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳ ಕುರಿತು ಓದು, ಚರ್ಚೆ ಮತ್ತು ಸಂವಾದಗಳು ಏರ್ಪಟ್ಟಿವೆ. ಎಸ್.ಗಂಗಾಧರಯ್ಯ, ಆರಡಿ ಮಲ್ಲಯ್ಯ, ಲಕ್ಷ್ಮಣ ಬದಾಮಿ, ಕಪಿಲ ಹುಮನಾಬಾದೆ, ಅನೀಲ್ ಗುನ್ನಾಪೂರ, ಮಲ್ಲಿಕಾರ್ಜುನ ಶೆಲ್ಲಿಕೇರಿ, ರಾಜಕುಮಾರ ಕುಲಕರ್ಣಿ ಇತ್ಯಾದಿ ಲೇಖಕರ ಕೃತಿಗಳು ಈ ಬಳಗ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಚರ್ಚೆ ಮತ್ತು ಸಂವಾದಕ್ಕೆ ಒಳಪಟ್ಟಿವೆ. ಕನ್ನಡ ರಾಜ್ಯೋತ್ಸವದ ದಿನದಂದು ಆಯೋಜಿಸಿದ ಕಾರ್ಯಕ್ರಮ ಕನ್ನಡ ಪದ್ಯಗಳ ವಾಚನಕ್ಕೆ ಮೀಸಲಾಗಿತ್ತು. ಯುವ ಮತ್ತು ಹಿರಿಯ ಕವಿಗಳ ಕವನಗಳನ್ನು ಭಾವಪೂರ್ಣವಾಗಿ ವಾಚಿಸಲಾಯಿತು.

ADVERTISEMENT

ಬಳಗದ ಎಲ್ಲ ಸದಸ್ಯರು ಯುವಕರಾಗಿದ್ದು ಜೊತೆಗೆ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವವರು. ಬಳಗದ ಕಾರ್ಯಕ್ರಮಕ್ಕೆಂದೇ ಯುವಕರಿಂದ ನಿವೃತ್ತರವರೆಗೆ ವಿವಿಧ ವಯೋಮಾನದ ಸಾಹಿತ್ಯಾಸಕ್ತರ ಒಂದು ಗುಂಪು ರೂಪುಗೊಂಡಿದೆ. ಈ ಗುಂಪಿನಲ್ಲಿ ವ್ಯಾಪಾರಸ್ಥರು ಮತ್ತು ಗೃಹಿಣಿಯರೂ ಸೇರಿರುವುದು ವಿಶೇಷ. ಎಲ್ಲರೂ ಆಸಕ್ತಿಯಿಂದ ಚರ್ಚೆಯಲ್ಲಿ ಭಾಗಿಗಳಾಗಿ ಬೇರೆಯವರ ಮಾತುಗಳನ್ನು ಮುತುವರ್ಜಿಯಿಂದ ಆಲಿಸುತ್ತಾರೆ. ಸಾಹಿತ್ಯದ ಕುರಿತಾದ ಸಂದೇಹಗಳನ್ನು ಯಾವ ಹಿಂಜರಿಕೆಯೂ ಇಲ್ಲದೆ ಕೇಳಿ ಪರಿಹರಿಸಿಕೊಳ್ಳುತ್ತಾರೆ. ಉದ್ಯಾನವನಕ್ಕೆ ಆಗಮಿಸುವ ಸಾರ್ವಜನಿಕರು ಸಹ ಕುತೂಹಲದಿಂದ ಕಾರ್ಯಕ್ರಮದಲ್ಲಿ ಭಾಗಿಗಳಾಗುತ್ತಾರೆ.

ಮೇಲ್ನೋಟಕ್ಕೆ ಇಂಥ ಪ್ರಯತ್ನಗಳು ಸಣ್ಣ ಸಂಗತಿಗಳೆಂದು ಅನಿಸಬಹುದು. ನಿಜವಾದ ಅರ್ಥದಲ್ಲಿ ಇವುಗಳು ದೊಡ್ಡ ಪಲ್ಲಟಕ್ಕೆ ಕಾರಣವಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಈ ರೀತಿಯ ಸಾಹಿತ್ಯದ ಕಾರ್ಯಕ್ರಮಗಳು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಏರ್ಪಾಡಾಗುತ್ತಿವೆ. ಸಮಾನಮನಸ್ಕರು ಒಂದೆಡೆ ಸೇರಿ ತಾವು ಓದಿದ ಉತ್ತಮ ಪುಸ್ತಕಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಪುಸ್ತಕ ಓದಿನ ವಾತಾವರಣವನ್ನು ಎಲ್ಲೆಡೆಯೂ ಪಸರಿಸುವ ದಿಸೆಯಲ್ಲಿ ಅನೇಕ ತರುಣ ಬರಹಗಾರರು ಮತ್ತು ಪ್ರಕಾಶಕರು ಗುಂಪುಗಳನ್ನು ರಚಿಸಿಕೊಂಡು ಸಾಹಿತ್ಯ ಸೇವೆಯಲ್ಲಿ ಸಕ್ರಿಯರಾಗಿರುವರು. ಬಾ ಗುರು ಬುಕ್ ತಗೋ, ಹಲೋ ಕತೆಗಾರ, ಹಲೋ ಕತೆಗಾರ್ತಿ, ಕವಿಗಳಿಗೆ ಕ್ಲಾಸು, ಮಾಸದ ಮಂಥನ, ಕೇಳು ಮನಸೇ, ಅರಳಿಕಟ್ಟೆ ಇತ್ಯಾದಿ ಸಾಹಿತ್ಯಿಕ ಕಾರ್ಯಕ್ರಮಗಳ ಮೂಲಕ ಪುಸ್ತಕ ಓದು, ಚಿಂತನ, ಸಂವಾದ ನಡೆಯುತ್ತಿವೆ. ಪುಸ್ತಕಗಳ ಓದಿನ ರಸಾನುಭವವನ್ನು ಎಲ್ಲೆಡೆ ಪಸರಿಸುವುದೊಂದೇ ಈ ಎಲ್ಲ ಕಾರ್ಯಕ್ರಮಗಳ ಉದ್ದೇಶವಾಗಿದೆ. ಯುವ ಬರಹಗಾರರು ಮತ್ತು ಪ್ರಕಾಶಕರು ಯಾವ ಅಹಂ ಇಲ್ಲದೆ ಉದ್ಯಾನವನದಲ್ಲೋ, ರಸ್ತೆಯ ಮೇಲೋ, ಉಪಾಹಾರ ಗೃಹದಲ್ಲೋ ಓದುಗರನ್ನು ಸಂಪರ್ಕಿಸಿ ಮಾತಿಗಿಳಿಯುವ ವಿನೂತನ ಕಾರ್ಯಕ್ರಮಗಳು ಓದುಗರಿಗೂ ತುಂಬ ಆಪ್ತವೆನಿಸುತ್ತಿವೆ.

ಸಾಹಿತ್ಯ ಸಂವಾದದಲ್ಲಿ ಬಳಗದ ಸದಸ್ಯರು

ಕೆಲವು ದೃಷ್ಟಾಂತಗಳು...

ಸಾಹಿತ್ಯಾಸಕ್ತರ ಗುಂಪುಗಳು ರಚನೆಯಾಗಿ ಆ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಅದ್ವಿತೀಯವಾದದ್ದನ್ನು ಸಾಧಿಸಿದ್ದಕ್ಕೆ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹಲವು ದೃಷ್ಟಾಂತಗಳಿವೆ. ಬಿ.ಎಂ.ಶ್ರೀ ಅವರ ನೇತೃತ್ವದ ‘ತಳಿರು ತಂಡ’, ಪಂಜೆಮಂಗೇಶರಾಯರ ‘ಮಿತ್ರ ಮಂಡಳಿ’ ಬೇಂದ್ರೆ ಅವರ ನಾಯಕತ್ವದ ‘ಗೆಳೆಯರ ಬಳಗ’, ಮಧುರಚೆನ್ನರು ಕಟ್ಟಿದ ‘ಹಲಸಂಗಿ ಗೆಳೆಯರು’ ಕೆಲವು ಶ್ರೇಷ್ಠ ಉದಾಹರಣೆಗಳಾಗಿವೆ. ಬೇಂದ್ರೆಯವರ ‘ಗೆಳೆಯರ ಗುಂಪು’ ಕುರಿತು ‘ಗೆಳೆಯರ ಗುಂಪಿನ ಗೆಳೆಯರೆಲ್ಲರೂ ಕನಸುಗಾರರು. ಯಾವುದೇ ನಿಯಮ, ನಿರ್ಬಂಧಗಳಿಲ್ಲದ ಗೆಳೆತನದ ವಾತಾವರಣದಲ್ಲಿ ಸಮಾನ ಮನಸ್ಕರಾಗಿ ನವ ಕರ್ನಾಟಕದ ಪುನರುಜ್ಜೀವನಕ್ಕೆ ಉತ್ತರ ಕರ್ನಾಟಕದ ಪರವಾಗಿ ತಮ್ಮ ವೈಶಿಷ್ಟ್ಯಪೂರ್ಣ ಕೊಡುಗೆಯನ್ನು ಈ ಗೆಳೆಯರು ನೀಡಿದರು’ ಎಂದು ‘ಇದು ಬರಿ ಬೆಳಗಲ್ಲೊ ಅಣ್ಣಾ’ ಕೃತಿಯಲ್ಲಿ ಉಲ್ಲೇಖಿಸಲಾಗಿದೆ. ಹಲಸಂಗಿ ಗೆಳೆಯರ ಗುಂಪಿನ ಸಾಧನೆ ಕೂಡ ಸಾಹಿತ್ಯ ಚರಿತ್ರೆಯಲ್ಲಿ ಮಹತ್ವಪೂರ್ಣ ಪ್ರಯತ್ನವಾಗಿ ದಾಖಲಾಗಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಒಂದು ಅಜ್ಞಾತ ಹಳ್ಳಿಯಾದ ಹಲಸಂಗಿಗೆ ಜಾನಪದ ಕ್ಷೇತ್ರದ ಯಾತ್ರಾಸ್ಥಳ ಎನ್ನುವ ಹಿರಿಮೆ ತಂದುಕೊಟ್ಟ ಶ್ರೇಯಸ್ಸು ಹಲಸಂಗಿ ಗೆಳೆಯರಿಗೆ ಸಲ್ಲುತ್ತದೆ.

ಕನ್ನಡ ಪುಸ್ತಕಗಳನ್ನು ಓದುವ ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ ಎನ್ನುವುದು ಪ್ರಕಾಶಕರ ಮತ್ತು ಪುಸ್ತಕ ವ್ಯಾಪಾರಿಗಳ ಆರೋಪವಾಗಿದೆ. ಈ ಆರೋಪದಲ್ಲೂ ಹುರುಳಿರುವುದರಿಂದ ಅದನ್ನು ಸಾರಾಸಗಟಾಗಿ ತಳ್ಳಿಹಾಕುವಂತಿಲ್ಲ. ಸದ್ಯದ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಯುವಜನಾಂಗ ಸಕ್ರಿಯವಾಗಿದೆ. ವಾಟ್ಸ್ಆ್ಯಪ್, ಫೇಸ್‌ಬುಕ್, ಎಕ್ಸ್, ಇನ್‌ಸ್ಟಾಗ್ರಾಮ್‌ಗಳ ಬಳಕೆ ವ್ಯಾಪಕವಾಗುತ್ತಿದೆ. ಈ ಸಾಮಾಜಿಕ ಮಾಧ್ಯಮದ ಆಕರ್ಷಣೆಗೆ ಹದಿಹರೆಯದವರು ಮಾತ್ರವಲ್ಲ, ಮಧ್ಯವಯಸ್ಕರು ಮತ್ತು ವೃದ್ಧರು ಕೂಡ ಒಳಗಾಗುತ್ತಿರುವರು. ಪುಸ್ತಕಗಳ ಓದಿನಿಂದ ದೂರಾಗುತ್ತಿರುವವರನ್ನು ಮತ್ತೆ ಪುಸ್ತಕಗಳತ್ತ ಕರೆತರುವ ಕೆಲಸವನ್ನು ‘ಓದು ಗೆಳೆಯರ ಬಳಗ’ದಂತಹ ಗುಂಪುಗಳು ಮಾಡುತ್ತಿವೆ. ಸಣ್ಣ ಗುಂಪುಗಳನ್ನು ರಚಿಸಿಕೊಂಡು ಸಾಹಿತ್ಯಾಸಕ್ತಿಯ ಸಮಾನಮನಸ್ಕರು ಮಾಡುತ್ತಿರುವ ಪ್ರಯತ್ನಗಳು ಭರವಸೆಯ ಆಶಾಕಿರಣದಂತೆ ಗೋಚರಿಸುತ್ತಿವೆ. ಇಂಥ ಸಣ್ಣ ಪ್ರಯತ್ನಗಳೇ ಭವಿಷ್ಯದಲ್ಲಿ ಬಹು ದೊಡ್ಡ ಪಲ್ಲಟಕ್ಕೆ ಕಾರಣವಾಗುವ ದಿನಗಳು ದೂರವಿಲ್ಲ. ನಮ್ಮ ಪೂರ್ವಸೂರಿಗಳು ಇದನ್ನು ಸಾಧ್ಯವಾಗಿಸಿದ ಉದಾಹರಣೆ ಕನ್ನಡ ಸಾಹಿತ್ಯ ಚರಿತ್ರೆಯಲ್ಲೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.