
ಕಪ್ಪತ್ತಗುಡ್ಡದ ಸೆರಗಿನಲ್ಲಿರುವ ಪಾಪನಾಶಿ ಗ್ರಾಮ ಗದಗದಿಂದ 15 ಕಿಲೋಮೀಟರ್ ದೂರದಲ್ಲಿದೆ. ಈ ಗ್ರಾಮದ ಪೂರ್ಣಿಮಾ ಕಟಿಗ್ಗಾರ ಕದಾಂಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದಾಳೆ. ಐದು ವರ್ಷಗಳ ನಿರಂತರ ಯೋಗಾಭ್ಯಾಸದ ಕಾರಣ ಆಕೆಯ ದೇಹ ಬಿಲ್ಲಿನಂತೆ ಬಾಗುತ್ತದೆ. ಗಂಡಭೇರುಂಡಾಸನ, ವೃಶ್ಚಿಕಾಸನ, ಹನುಮಾಸನ, ಮಯೂರಾಸನದಂತಹ ಹಲವು ಬಗೆಯ ಕಠಿಣ ಆಸನಗಳನ್ನು ಸಲೀಸಾಗಿ ಮಾಡುತ್ತಾಳೆ.
ಪೂರ್ಣಿಮಾ ಒಬ್ಬಳಷ್ಟೇ ಅಲ್ಲ, ಪಾಪನಾಶಿ ಗ್ರಾಮದ ಹಲವು ಮಕ್ಕಳು ಇಂತಹ ಕಠಿಣ ಆಸನಗಳನ್ನು ಲೀಲಾಜಾಲವಾಗಿ ಮಾಡುತ್ತಾರೆ. ರಾಜ್ಯ, ರಾಷ್ಟ್ರಮಟ್ಟದ ವಿವಿಧ ಯೋಗಾಸನ ಸ್ಪರ್ಧೆಗಳಲ್ಲಿ ಭಾಗವಹಿಸಿ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ. ಐದು ಮಂದಿ ಯೋಗಪಟುಗಳು ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಉಚಿತ ಶಿಕ್ಷಣದ ಸೌಲಭ್ಯಕ್ಕೆ ಆಯ್ಕೆಯಾಗಿದ್ದಾರೆ.
ಈ ಗ್ರಾಮದ ಬಹುತೇಕ ಮನೆಗಳ ಷೋಕೇಸುಗಳಲ್ಲಿ ಪದಕಗಳು, ಪಾರಿತೋಷಕಗಳು ತುಂಬಿವೆ. ಇಲ್ಲಿಯ ಜನರ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಯೋಗಕ್ಕೆ ಸಂಬಂಧಿಸಿದ ವಿಡಿಯೊಗಳು ಹೆಚ್ಚು ಹರಿದಾಡುತ್ತವೆ. ಇಲ್ಲಿನ ಮಕ್ಕಳು ರೀಲ್ಸ್‌ಗೆ ಬದಲಾಗಿ ಯೋಗಕ್ಕೆ ಸಂಬಂಧಿಸಿದ ವಿಡಿಯೊಗಳಿಗೆ ಹೆಚ್ಚಿನ ಲೈಕ್ ಒತ್ತುತ್ತಾರೆ. ಗ್ರಾಮದ ಮಹಿಳೆಯರು ಬಿಡುವಿನ ವೇಳೆ ಶಾಲಾ ಆವರಣ, ಜಮೀನಿನ ಬದು, ರಸ್ತೆಬದಿಯಲ್ಲಿ ಯೋಗಾಭ್ಯಾಸ ಮಾಡುವ ದೃಶ್ಯ ಆಗಾಗ ಕಾಣಬಹುದು. ಇಲ್ಲಿನ ಆಯುರ್ವೇದ ಆಸ್ಪತ್ರೆಯಲ್ಲಿ ತಿಂಗಳಿಗೊಮ್ಮೆ ನಡೆಯುವ ‘ಜೀವನಶೈಲಿ’ ಕಾರ್ಯಕ್ರಮದಲ್ಲಿ ಬಿಪಿ, ಶುಗರ್ ರೋಗಿಗಳಿಗೆ ವಿಶೇಷವಾಗಿ ಯೋಗಾಭ್ಯಾಸ ನಡೆಯುತ್ತದೆ.
ಆಯುರ್ವೇದ ಮತ್ತು ಯೋಗ ಪದ್ಧತಿಯನ್ನು ಗ್ರಾಮೀಣ ಜನತೆಗೆ ತಲುಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ್ ಹಾಗೂ ರಾಷ್ಟ್ರೀಯ ಆಯುಷ್ ಅಭಿಯಾನ ಆರಂಭಿಸಿತು. ಈ ಯೋಜನೆ ಅಡಿ 2020ರಲ್ಲಿ ಪಾಪನಾಶಿಯಲ್ಲಿ ಯೋಗ ಶಿಕ್ಷಣ ಪ್ರಾರಂಭಗೊಂಡಿತು. ಇಲ್ಲಿನ ಆಯುಷ್ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಡಾ. ಅಶೋಕ ಮತ್ತಿಗಟ್ಟಿ ಯೋಗ ಸಾಧಕರೂ ಹೌದು. ಇವರ ಆಸಕ್ತಿಯ ಕಾರಣದಿಂದಲೇ ಪಾಪನಾಶಿಯೆಂಬ ಸಾಮಾನ್ಯ ಗ್ರಾಮ ಇದೀಗ ಯೋಗ ಗ್ರಾಮವಾಗಿದೆ.
ಗ್ರಾಮದ ಜನರಲ್ಲಿ ಯೋಗದ ಕುರಿತು ಜಾಗೃತಿ ಮೂಡಿಸಲು ಮತ್ತಿಗಟ್ಟಿ ಅವರ ತಂಡ ಬಹಳಷ್ಟು ಶ್ರಮವಹಿಸಿತು. ಆರಂಭದಲ್ಲಿ ಮಹಿಳೆಯರು ಮನೆಗೆಲಸ, ಹೊಲಗೆಲಸದ ಕಾರಣ ನೀಡಿದರು. ಗಂಡಸರು ದುಡಿಮೆಯ ನೆಪ ಹೇಳಿದರು. ಆದರೂ, ಅಂತಿಮವಾಗಿ ಜನರು ಬಿಡುವಿನ ಸಮಯದಲ್ಲಿ ಯೋಗ ಕಲಿಯುವ ಮನಸ್ಸು ಮಾಡುವಂತೆ ಪ್ರೇರೇಪಿಸಲಾಯಿತು.
ಹೀಗಾಗಿಯೇ 2020ರಲ್ಲಿ ಈ ಗ್ರಾಮದಲ್ಲಿ ಯೋಗ ಚಟುವಟಿಕೆ ಉತ್ತುಂಗದಲ್ಲಿತ್ತು. ಪ್ರತಿದಿನ ಬೆಳಿಗ್ಗೆ ಮೂರು, ಸಂಜೆ ಮೂರು ಬ್ಯಾಚ್‌ನಲ್ಲಿ ಯೋಗಾಭ್ಯಾಸ ನಡೆದವು. ಮಕ್ಕಳು, ಮಹಿಳೆಯರು ಯೋಗಾಭ್ಯಾಸಕ್ಕೆ ಹೆಚ್ಚಿನ ಆಸಕ್ತಿ ತೋರಿಸಿದರು. ಮಹಿಳೆಯರಿಗಾಗಿಯೇ ಪ್ರತ್ಯೇಕ ಬ್ಯಾಚ್ ನಡೆಯಿತು. ಆದರೆ, ಮಾರ್ಚ್‌ನಲ್ಲಿ ಲಾಕ್‌ಡೌನ್ ಘೋಷಣೆ ಆಯಿತು. ಆಗ ವೇಗಕ್ಕೆ ತಡೆಬಿದ್ದಿತು.
ಕೋವಿಡ್ ಭಯ ದೂರವಾದ ನಂತರ ಮಕ್ಕಳ ಯೋಗಾಭ್ಯಾಸ ಎಂದಿನಂತೆ ಆರಂಭಗೊಂಡಿತು. ಸಂಘ ಸಂಸ್ಥೆಗಳು ನಡೆಸುವ ಯೋಗ ಸ್ಪರ್ಧೆಗಳಿಗೆ ಮಕ್ಕಳನ್ನು ಕಳುಹಿಸಿಕೊಡಲು ಮತ್ತಿಗಟ್ಟಿ ಶ್ರಮಿಸಿದರು. ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಕ್ಕಳು ಬಹುಮಾನಗಳನ್ನೂ ತಂದರು. ಅವರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಊರಿನ ಯುವಕ ಮಂಡಳದಿಂದ ದೊಡ್ಡ ಕಾರ್ಯಕ್ರಮ ಏರ್ಪಡಿಸಿ ಯೋಗ
ಪಟುಗಳನ್ನು ಸನ್ಮಾನಿಸುವ ಮೂಲಕ ಅಶೋಕ ಮತ್ತಿಗಟ್ಟಿ ಅವರು ಊರಿನ ಜನರಲ್ಲಿ ಯೋಗದ ಬಗ್ಗೆ ಆಸಕ್ತಿಯನ್ನು ಮತ್ತಷ್ಟು ಬೆಳೆಸುವ ಕೆಲಸ ಮಾಡಿದರು.
ಅಕ್ಕಪಕ್ಕದೂರಿನ ಮಕ್ಕಳು ಬಿಡುವಿನ ಸಮಯವನ್ನು ಆಟಕ್ಕೆ ಮೀಸಲಿಟ್ಟರೆ, ಪಾಪನಾಶಿಯ ಚಿಣ್ಣರು ಯೋಗ ಕಲಿಕೆಗೆ ಆಸಕ್ತಿ ತೋರುತ್ತಾರೆ. ಪ್ರತಿದಿನ ಸಂಜೆ 5 ಗಂಟೆ ಆಗುತ್ತಿದ್ದಂತೆ ಪುಟಾಣಿ ಮಕ್ಕಳಿಂದ ಹಿಡಿದು ಹೈಸ್ಕೂಲು, ಕಾಲೇಜು ಓದುವ ವಿದ್ಯಾರ್ಥಿಗಳೆಲ್ಲರೂ ಒಂದೆಡೆ ಸೇರುತ್ತಾರೆ. ಒಂದು ಗಂಟೆಗೂ ಹೆಚ್ಚು ಸಮಯ ಯೋಗಾಭ್ಯಾಸ ಮಾಡುತ್ತಾರೆ. 2020ರಿಂದಲೂ ಈ ಅಭ್ಯಾಸ ತಪ್ಪದೇ ನಡೆದು ಬಂದಿದೆ. ಹಾಗಾಗಿ, ಯೋಗಾಭ್ಯಾಸ ಮಾಡುವ ಈ ಊರಿನ ಹುಡುಗರು, ಹೆಣ್ಣುಮಕ್ಕಳು ಆರೋಗ್ಯದಿಂದ ಇದ್ದಾರೆ.
ಮಹಿಳೆಯರು ಯೋಗದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದರಿಂದ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆ ಕಂಡುಬಂದಿದೆ. ಬಹಳಷ್ಟು ಮಹಿಳೆಯರ ಬೊಜ್ಜು ಕರಗಿದೆ. ತೂಕ ಇಳಿದಿದೆ. ಮಧುಮೇಹ, ರಕ್ತದೊತ್ತಡ ನಿಯಂತ್ರಣಕ್ಕೆ ಬಂದಿದೆ. ಚಿಕಿತ್ಸೆ ಜತೆಗೆ ಯೋಗದ ಅವಶ್ಯಕತೆ ಇರುವವರನ್ನು ಗುರುತಿಸಿ, ಅವರಿಗೆ ಯೋಗಾಸನ ಹೇಳಿಕೊಡಲಾಗುತ್ತದೆ.
ಯೋಗ ಶಿಕ್ಷಕಿ ಸುಧಾ ಪಾಟೀಲ ಮಕ್ಕಳಿಗೆ ಆಸನ ಮತ್ತು ಪ್ರಾಣಾಯಾಮ ಹೇಳಿಕೊಡುತ್ತಾರೆ. ಚಿಕ್ಕಮಕ್ಕಳಿಗೆ ಮಂಡೂಕಾಸನ, ಶಶಾಂಕಾಸನ, ಪ್ರಾಣಾಯಾಮ, ಮಕರಾಸನ, ವಜ್ರಾಸನ, ಪದ್ಮಾಸನದಂತಹ ಸರಳ ಆಸನಗಳನ್ನು ಹೇಳಿಕೊಡುತ್ತಾರೆ. ನಾಲ್ಕೈದು ವರ್ಷಗಳ ಮಕ್ಕಳು ಈ ಎಲ್ಲ ಆಸನಗಳ ಹೆಸರನ್ನು ನೆನಪಿನಲ್ಲಿಟ್ಟುಕೊಂಡಿರುವುದು ವಿಶೇಷ. ದೊಡ್ಡವರು ಕಠಿಣ ಆಸನಗಳಾದ ಗಂಡಭೇರುಂಡಾಸನ, ಪರಿವೃತ್ತ ಉಪವಿಷ್ಟಕೋನಾಸನ, ಮಯೂರಾಸನ, ಕೈಲಾಸಾಸನ, ಮರುಡಾಸನ, ಮಲಯಾಸನ ಸೇರಿದಂತೆ ವಿವಿಧ ಆಸನಗಳನ್ನು ಪ್ರತಿನಿತ್ಯ ಅಭ್ಯಾಸ ಮಾಡುತ್ತಾರೆ.
ಮಕ್ಕಳಿಗೆ ನೆಲಹಾಸು, ಯೋಗ ಮ್ಯಾಟ್ ಸೇರಿದಂತೆ ಎಲ್ಲ ಸವಲತ್ತುಗಳನ್ನು ಸರ್ಕಾರ ಕೊಟ್ಟಿದೆ. ದಾನಿಗಳ ನೆರವಿನಲ್ಲಿ ವೈದ್ಯರು ಯೋಗ ಕ್ರಿಯಾ ಸೆಟ್ ಕೊಡಿಸಿದ್ದಾರೆ. ‘ಪಾಪನಾಶಿ ಜನರಿಗೆ ಯೋಗ ಅಂದರೇನು ಎಂಬುದೇ ಗೊತ್ತಿರಲಿಲ್ಲ. ಇದೀಗ ನಮ್ಮೂರಿನಲ್ಲಿ ಯೋಗ ಕೇಂದ್ರ ಇರುವುದಕ್ಕೆ ಡಾ.ಅಶೋಕ ಮತ್ತಿಗಟ್ಟಿ ಅವರೇ ಕಾರಣ’ ಎನ್ನುತ್ತಾರೆ ಯೋಗಪಟು ಕವನಾ ಪಾಟೀಲ ಅವರ ತಾಯಿ ವಿಜಯಾ ಪಾಟೀಲ.
‘ಪಾಪನಾಶಿಯಂತಹ ಸಣ್ಣ ಗ್ರಾಮದ ಕೀರ್ತಿ ಅಡ್ನೂರ ಎಂಬ ಯೋಗಪಟುವಿಗೆ ಪ್ರಧಾನಿ ಮೋದಿ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು. ಇದಕ್ಕಿಂತ ದೊಡ್ಡ ಖುಷಿ ಇನ್ನೇನು ಬೇಕು. ರಾಷ್ಟ್ರಮಟ್ಟದ ಯೋಗ ಒಲಂಪಿಯಾಡ್‌ನಲ್ಲಿ ಅವಳಿಗೆ ಬಹುಮಾನ ಸಿಗಲಿಲ್ಲ. ಪರಂತು ಪರೇಡ್‌ನಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು’ ಎಂಬ ಹೆಮ್ಮೆ ವ್ಯಕ್ತಪಡಿಸುತ್ತಾರೆ ಅಶೋಕ ಮತ್ತಿಗಟ್ಟಿ.
‘ಕೋವಿಡ್ ಸಂದರ್ಭದಲ್ಲಿ ಎಲ್ಲರಿಗೂ ಆರೋಗ್ಯದ ಬಗ್ಗೆ ಕಾಳಜಿ ಇತ್ತು. ಜೀವ ಉಳಿಸಿಕೊಳ್ಳಬೇಕು ಎನ್ನುವ ಕಾರಣಕ್ಕಾದರೂ ಯೋಗ ಮಾಡುತ್ತಿದ್ದರು. ಆ ಅಭ್ಯಾಸ ಊರಿನ ಜನರಲ್ಲಿ ಇಂದಿಗೂ ಮುಂದುವರಿದುಕೊಂಡು ಬಂದಿರುವುದರಿಂದ ಪಾಪನಾಶಿ ಈಗ ಯೋಗ ಗ್ರಾಮವಾಗಿ ಗುರುತಿಸಿಕೊಳ್ಳುತ್ತಿದೆ’ ಎನ್ನುತ್ತಾರೆ ಯೋಗ ಶಿಕ್ಷಕಿ ಸುಧಾ ಪಾಟೀಲ.
ಕ್ರಿಯಾಶೀಲತೆ, ಬದ್ಧತೆ ಮತ್ತು ಸೇವಾಮನೋಭಾವ ಹೆಚ್ಚಾಗಿರುವ ಅಶೋಕ ಮತ್ತಿಗಟ್ಟಿ ಅವರಂತಹ ಅಧಿಕಾರಿಗಳ ಸಂಖ್ಯೆ ಹೆಚ್ಚಾಗುವುದು ಗ್ರಾಮ ಭಾರತದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.