ADVERTISEMENT

ಚೆನ್ನವೀರ ಕಣವಿಯಿಂದ ಕವಿವಿಗೆ ಶಾಶ್ವತ ಕೊಡುಗೆ

ಪ್ರಜಾವಾಣಿ ವಿಶೇಷ
Published 16 ಫೆಬ್ರುವರಿ 2022, 6:18 IST
Last Updated 16 ಫೆಬ್ರುವರಿ 2022, 6:18 IST
ಡಾ. ಚೆನ್ನವೀರ ಕಣವಿ ಅವರ ಹಸ್ತಪ್ರತಿ
ಡಾ. ಚೆನ್ನವೀರ ಕಣವಿ ಅವರ ಹಸ್ತಪ್ರತಿ   

ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಂಗದ ನಿರ್ದೇಶಕರಾಗಿ ಅನನ್ಯ ಸೇವೆ ಸಲ್ಲಿಸಿದ ಡಾ. ಚೆನ್ನವೀರ ಕಣವಿ ಅವರು ವಿಶ್ವವಿದ್ಯಾಲಯಕ್ಕೆ ಗೀತೆಯೊಂದನ್ನು ರಚಿಸುವ ಮೂಲಕ ಶಾಶ್ವತ ಕೊಡುಗೆ ನೀಡಿದ್ದಾರೆ. ತಮ್ಮ ಸುಮಧುರ ನೆನಪುಗಳನ್ನು ‘ಪ್ರಜಾವಾಣಿ’ ದೀಪಾವಳಿ ವಿಶೇಷಾಂಕಕ್ಕೆ ದಾಖಲಿಸುವ ಸಂದರ್ಭದಲ್ಲಿ 2021ರ ಮೇ ತಿಂಗಳಲ್ಲಿ ತಮ್ಮದೇ ಹಸ್ತಾಕ್ಷರಲ್ಲಿ ಒಂದಷ್ಟು ನೆನಪುಗಳನ್ನು ಅವರು ದಾಖಲಿಸಿದರು. ಅವು ಬದುಕಿಗಿಂತಲೂ ಹೆಚ್ಚಾಗಿ ಅವರ ಬರಹದ ಮೇಲೆಯೇ ಅವರ ಮಧುರ ನೆನಪುಗಳಿದ್ದವು.

ಒಂದು ದಿನ ಕಣವಿ ಅವರನ್ನು ಕರೆಯಿಸಿಕೊಂಡ ಡಾ. ಡಿ.ಸಿ.ಪಾವಟೆ, ಕರ್ನಾಟಕದ ಸಾಹಿತ್ಯ, ಸಂಸ್ಕೃತಿ, ಇಲ್ಲಿನ ಪ್ರಕೃತಿ ಸೌಂದರ್ಯ... ಸೇರಿದಂತೆ ಒಟ್ಟು ಸಂಸ್ಕೃತಿಯ ಸಾರ ಎನ್ನಬಹುದಾದ ಒಂದು ಕವಿತೆ ನಿಮ್ಮಿಂದ ರಚನೆಯಾಗಬೇಕು. ಅದನ್ನು ಘಟಕೋತ್ಸವ ಗೀತೆಯನ್ನಾಗಿ ಮಾಡಬೇಕು ಎಂದುಕೊಂಡಿದ್ದೇನೆ‘ ಎಂದು ದೊಡ್ಡ ಹೊಣೆಯನ್ನೇ ಇವರ ಹೆಗಲಿಗೆ ಹೊರಿಸಿದರಂತೆ.

‘ಅಂಥದ್ದೊಂದು ಪದ್ಯ ಬರೆಯಬೇಕು ಎಂದು ನನಗೂ ಅನಿಸಿತ್ತು. ಅವರು ಹೇಳಿದ ಒಂದು ವಾರದ ಮೇಲೆ ನಾನು ‘ವಿಶ್ವಭಾರತಿಗೆ ಕನ್ನಡದಾರತಿ‘ ಎಂಬ ಶೀರ್ಷಿಕೆಯ ವಿಶ್ವವಿನೂತನ ವಿದ್ಯಾಚೇತನ ಸರ್ವಹೃದಯ ಸಂಸ್ಕಾರಿ... ಪದ್ಯವನ್ನು ಬರೆದು ಅವರಿಗೆ ತೋರಿಸಿದೆ. ಡಾ. ಪಾವಟೆ ಅವರು ಆ ಪದ್ಯವನ್ನು ನನ್ನಿಂದಿ ಓದಿಸಿಕೊಂಡು, ತಕ್ಷಣ ಕರ್ನಾಟಕ ಕಾಲೇಜು ಗಾಯನ ವಿಭಾಗದ ಮುಖ್ಯಸ್ಥೆ ಶಾರದಾ ಹಾನಗಲ್ ಅವರಿಗೆ ಫೋನಾಯಿಸಿದರು. ‘ಈ ಕವಿತೆಗೆ ರಾಗ ಸಂಯೋಜಿನೆ ಮಾಡಿ, ನಿಮ್ಮ ವಿಭಾಗದ ಗಾಯನ ವಿದ್ಯಾರ್ಥಿಗಳಿಂದ ಇದನ್ನು ಇದೇ ಘಟಿಕೋತ್ಸವದಲ್ಲಿ ಹಾಡಿಸಬೇಕು‘ ಎಂದು ಹೇಳಿದರು. ಅಂದಿನಿಂದ ಇದು ಘಟಿಕೋತ್ಸವ ಗೀತೆಯಾಗಿ ಇಂದಿಗೂ ಹಾಡುತ್ತಿದ್ದಾರೆ‘ ಎಂದು ನೆನಪಿಸಿಕೊಂಡಿದ್ದರು.

‘ಇದೇ ಹೊತ್ತಿನಲ್ಲಿ ಇನ್ನೊಂದು ಸಂಗತಿಯನ್ನು ಹೇಳಬೇಕು. 1966ರಲ್ಲಿ ಕುವೆಂಪು ಅವರಿಗೆ ಗೌರವ ಡಾಕ್ಟರೇಟ್ ಕೊಟ್ಟಾಗ ಆಗಲೂ ಈ ಪದ್ಯವನ್ನು ಹಾಡಿಸಲಾಯಿತು. ಕಾರ್ಯಕ್ರಮ ನಂತರ ನಾನು ಮತ್ತು ಪ್ರೊ. ಮಾಳವಾಡರು ಕುವೆಂಪು ಅವರನ್ನು ಭೇಟಿಯಾಗಲು ಹೋದೆವು, ಆಗ ನನ್ನನ್ನು ಹತ್ತಿರ ಕರೆದ ಕುವೆಂಪು ಅವರು, ‘ಆ ಕವಿತೆ ಕೇಳಿ ನನಗೆ ರೋಮಾಂಚನವಾಯಿತು‘ ಅಂದರು. ’ಇದಕ್ಕಿಂತ ಹೆಚ್ಚಿಸಿ ಪ್ರಶಸ್ತಿ ಯಾವುದಿದೆ?‘ ಎಂದು ಮೊಗವರಳಿಸಿ ಸಂಭ್ರಮಿಸಿದ್ದರು ಕಣವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.