ADVERTISEMENT

'ಪ್ರಜಾವಾಣಿ’ ವರ್ಷದ ಸಾಧಕ: ಮಕ್ಕಳಲ್ಲಿ ಸೃಜನಶೀಲತೆ ಅರಳಿಸುವ ಕಲಾಧರ್

​ಪ್ರಜಾವಾಣಿ ವಾರ್ತೆ
Published 1 ಜನವರಿ 2022, 6:36 IST
Last Updated 1 ಜನವರಿ 2022, 6:36 IST
ಕಲಾಧರ್
ಕಲಾಧರ್   

ಎಸ್‌.ಕಲಾಧರ್‌ ಅವರು ವೃತ್ತಿಯಿಂದ ಶಿಕ್ಷಕರು. ಸದ್ಯ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ತಾತಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಲ್ಲಿ ಸೃಜನಶೀಲ ವ್ಯಕ್ತಿತ್ವವನ್ನು ರೂಪಿಸುವಲ್ಲಿ ನಿರತರಾಗಿದ್ದಾರೆ.

ಕನ್ನಮಂಗಲ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾಗ ಮಕ್ಕಳಿಂದ ಚಿತ್ರ, ಕಥೆ, ಕವನ ಬರೆಸಿ ಅವರ ಜೀವನಾನುಭವಗಳನ್ನು ಕ್ರೋಡೀಕರಿಸಿದ್ದು ಅವರ ಹಿರಿಮೆ. ಎಂಟು ವರ್ಷದಿಂದ ಈ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ‘ಶಾಮಂತಿ’ ಸರಣಿಯಲ್ಲಿ ಪ್ರಕಟವಾಗಿರುವ8 ಪುಸ್ತಕಗಳೇ ನಿದರ್ಶನ.

ಅಂಗನವಾಡಿ ಮಕ್ಕಳು ಕನ್ನಡ ಮತ್ತು ಇಂಗ್ಲಿಷ್‌ ಕಲಿಕೆಗೆ ಅನುಕೂಲವಾಗುವಂತೆ ಜಿಲ್ಲಾಡಳಿತ ‘ಚಿನ್ನಾರಿ ಚಾಂಪ್ಸ್’ ಪುಸ್ತಕ ರೂಪಿಸಿತ್ತು. ಈ ಪುಸ್ತಕವನ್ನು ರೂಪಿಸುವ ಹೊಣೆಗಾರಿಕೆ ಹೊತ್ತಿದ್ದು ಕಲಾಧರ್ ಅವರೇ. ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ADVERTISEMENT

ಕಲಾಧರ್ ತಾವು ಕೆಲಸ ಮಾಡಿದ ಸ್ಥಳಗಳಲ್ಲೆಲ್ಲ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ‘ಅತ್ಯುತ್ತಮ ಶಿಕ್ಷಕ’ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪಾಠದ ನಡುವೆಯೇ ಮಕ್ಕಳಿಗೆ ಮಾತನಾಡಲು ಅವಕಾಶ ನೀಡುತ್ತಾರೆ. ಆ ಪಾಠಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಅನುಭವವನ್ನು ಆ ಕ್ಷಣದಲ್ಲಿಯೇ ಹೆಕ್ಕಿ ತೆಗೆಯುವ ಕಲೆ ಅವರಿಗೆ ಸಿದ್ಧಿಸಿದೆ.

ಶಾಲೆಯನ್ನು ಕಟ್ಟುವ ಮತ್ತು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಬೆಳೆಸಲು ಅವರು ಸಮುದಾಯದ ಸಹಕಾರವನ್ನೂ ಪಡೆಯುತ್ತಾರೆ. ‘ಮಕ್ಕಳಲ್ಲಿರುವ ಸೃಜನಶೀಲತೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಇದು ಅವರ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ
ಯಾಗುತ್ತದೆ. ಪೋಷಕರು ಕೂಡಾ ಇದರ ಜವಾಬ್ದಾರಿ ಹೊರಬೇಕು’ ಎನ್ನುವುದು ಅವರ ಸಲಹೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.