ADVERTISEMENT

ಬಿಡಲಾಗದು ಹಚ್ಚಿಕೊಂಡ ಸಮುದ್ರವನ್ನು

ರೇಣುಕಾ ರಮಾನಂದ
Published 21 ಜುಲೈ 2018, 19:30 IST
Last Updated 21 ಜುಲೈ 2018, 19:30 IST
ಚಿತ್ರ: ಗೋವಿಂದರಾಜ್‌ ಜವಳಿ
ಚಿತ್ರ: ಗೋವಿಂದರಾಜ್‌ ಜವಳಿ   

ಕಳೆದೆಂಟು ದಿನದಿಂದ ಚೂರೂ ಹೊಳುವಾಗದೇ ಧೋ ಎಂದು ಸುರಿಯುತ್ತಿದೆ ಮಳೆ...ಎಷ್ಟು ಹೊಯ್ದರೂ ಇನ್ನೂ ಬೇಕು ಎನ್ನುತ್ತ ಬಿದ್ದ ಮಳೆಯನ್ನೆಲ್ಲ ತೊರೆ ಕಾಲುವೆ ನದಿ ಹಳ್ಳಗಳ ಮೂಲಕ ತನ್ನೆಡೆಗೆ ಎಳೆದುಕೊಂಡು ಬಾಚಿಬಾಚಿ ತಬ್ಬಿಕೊಳ್ಳುತ್ತಿದ್ದಾನೆ ಅರಬ್ಬೀರಾಯ. ಬರುತ್ತೀಯಾ ಜೊತೆಗೆ? ಕೇಳುತ್ತಿವೆ ಜುಳುಜುಳು ಹರಿದು ಮುಂದೋಡುತ್ತಿರುವ ಕಿರುತೊರೆಗಳು. ತೇಲಿಬಿಟ್ಟ ಕಾಗದದ ದೋಣಿಯ ಓಟದಗುಂಟ ಒದ್ದೆಮುದ್ದೆಯಾಗುತ್ತ ಅದೋ ಅಲ್ಲಿಯವರೆಗಾದರೂ ಹಿಂಬಾಲಿಸಿ ಹೋಗುತ್ತಿದ್ದ ಅಂದಿನ ಆ ದಿನಗಳ ನೆನಪು ತೀವ್ರವಾಗತೊಡಗಿ ಹಿಡಿದ ಕಾಲುಗಳ ಕೊಂಚ ಸಡಿಲಿಸಿ ಯಾರೂ ಕಾಣದ ಹೊತ್ತಿನಲ್ಲಿ ಬಾಲ್ಕನಿಯ ಎರಚಲು ಹನಿಗೆ ಮೈಯೊಡ್ಡಿ ನಿಂತು ನನಗಿಷ್ಟು ಸಾಕು ಎಂದು ಸುಳ್ಳೇ ಸಮಾಧಾನಗೊಳ್ಳುತ್ತಿದ್ದೇನೆ. ಒಳಗಿಟ್ಟುಕೊಂಡ ಬಯಕೆಯ ಸಮುದ್ರವನ್ನು ಹೀಗೆ ಕಟ್ಟಿ ಮೊರೆಯದ ಹಾಗೆ ಬಚ್ಚಿಟ್ಟು ಉಡಾಫೆ ಮಾಡುವುದು ನಿನಗೆ ಒಳ್ಳೆಯದಲ್ಲ ಎಂದುಸುರಿ ಗಾಳಿರಾಯ ಕಿಟಕಿ ಬಾಗಿಲುಗಳ ಧಡ್‌ಗುಟ್ಟಿಸಿ ದಾದಾಗಿರಿ ಮಾಡುತ್ತಿದ್ದಾನೆ.

‘ಈ ಜಡಿಮಳೆಗಾಳಿಯಲ್ಲಿ ನಿನಗೆ ಸಮುದ್ರದ ಹುಚ್ಚು ಹಿಡಿದದ್ದು ಸಾಧಾರಣ ಬಯಕೆ ಅಂತ ಮಾಡಿದ್ದೀ ಏನು? ಹಾರಿಸಿಕೊಂಡು ಹೋದರೆ ಅಯ್ಯೋ ಎನ್ನಲು ಕೂಡ ಒಂದು ನರಪಿಳ್ಳೆಯೂ ಇರದ ಅಬ್ಬರದ ಸಮುದ್ರ ತೀರ ಅದು... ಇರು... ಇನ್ನೆರಡು ದಿನಕ್ಕೆ ಮಳೆ ಕಡಿಮೆಯಾಗಿ ಅರೆಬಿಸಿಲು ಬಂದದ್ದೇ ಹೌದಾದರೆ ಖಂಡಿತ ಹೋಗುವಾ’ ಮನೆಯೊಳಗೆ ಓಡಾಡುವ ಈ ಸೊಲ್ಲಿಗೆ ಸುಳ್ಳೇ ಹೆದರಿಕೊಳ್ಳುವುದನ್ನು ಬಿಟ್ಟು ಬೇರೆ ಏನನ್ನಾದರೂ ಮಾಡಲೇಬೇಕಿದೆ ತುರ್ತಾಗಿ. ಬಿಟ್ಟರೆ ಸಿಗಲಿಕ್ಕಿಲ್ಲ ಇಂತಹ ಭರ್ಜರಿ ಗಾಳಿ ಮಳೆ. ಜಡಿಮಳೆಯಲ್ಲಿ ಅನತಿದೂರದಲ್ಲಿ ಸಮುದ್ರದಂಡೆಗೆ ಎದೆಕೊಟ್ಟು ನಿಂತು ಅಲೆಯ ಮೇಲೆ ತೇಲಿಬಂದು ರಾಚುವ ಸಣ್ಣ ಸೋನೆಯನ್ನೆರಚಿಸಿಕೊಳ್ಳುವ ಒದ್ದೆಮುದ್ದೆ ಸುಖಕ್ಕೂ ಕೇಳಿಕೊಂಡು ಬಂದಿರಬೇಕು. ಹಾಗಾಗಿ ಆಗಷ್ಟೆ ಬರಬೇಕಾದ ಬಿಸಿಲು, ಕಡಿಮೆಯಾಗಬೇಕಾದ ಹನಿ, ನಿಲ್ಲಬೇಕಾದ ಗಾಳಿ... ಇವೆಲ್ಲ ಕುಂಟು ಕಾರಣಕ್ಕಾಗಿ ಕಾದಿರುವ ಎಲ್ಲರನ್ನೂ ಈಗಿಂದೀಗಲೇ ಅವರು ಕಾಣದ ಸೊಂಪಾದ ಕಡಲ ದಂಡೆಗೆ ಎಳೆದೊಯ್ದು ಕುಣಿದು ಕುಪ್ಪಳಿಸುವಂತೆ ಮಾಡಿಬಿಡಬೇಕು. ಈಗಿಂದೀಗಲೇ ಹೊರಟುಬಿಡಬೇಕು.

ನಿಂತ ಮೆಟ್ಟಿನಾಚೆ ಬರೀ ಅರ್ಧ ಮೈಲಿ ದೂರದಲ್ಲಿದೆ ಕಡಲರಾಜನ ಸಾಮೀಪ್ಯ. ಹಿಂದೆಲ್ಲ ಎಷ್ಟೊಂದು ಬಾರಿ ಅಜ್ಜಿಯೊಟ್ಟಿಗೆ ಮಳೆಗಾಲದ ಭೋರ್ಗರೆವ ಸಮುದ್ರ ಕಿನಾರೆಯ ಮಗುಚಿ ಹಾಕಿಲ್ಲ ನಾನು? ಹಾರಿ ಕುಣಿದು ಧುಮ್ಮಿಕ್ಕಿ ಒದ್ದೆರೇವೆಯಲ್ಲಿ ಗುಮ್ಮಿಸುತ್ತ ಮಂಡಿಯೂರಿ ಬಿದ್ದು ಕೇಕೇ ಹಾಕಿ ನಕ್ಕಿಲ್ಲ. ಒಮ್ಮೆ ಎಡಕ್ಕೂ ಇನ್ನೊಮ್ಮೆ ಬಲಕ್ಕೂ ಪುಟಪುಟನೆ ಓಡಾಡುವ ಪುಟ್ಟ ಏಡಿಮರಿಗಳ ಬಿಲಗಳು ಈ ಮಳೆಯಲ್ಯಾಕೆ ಕಾಣುತ್ತಿಲ್ಲ ಅಂತ ಹತ್ತೂ ದಿಕ್ಕಿಗೆ ನೀರುಕ್ಕುವ ಮರಳು ಮೊಗೆಮೊಗೆದು ನೋಡಿಲ್ಲ. ಜೋರುಗಾಳಿ ಮಳೆಗೆದುರಾಗಿ ಬುಟ್ಟಿಯೋ ಗೋಣಿಚೀಲವನ್ನೋ ಹಿಡಿದು ನೆರೆಕರೆಯ ಹೆಂಗಸರ ಜೊತೆ ಓಡುತ್ತಿದ್ದಳಲ್ಲ ಅಜ್ಜಿ ಸಮುದ್ರಬೇಲೆಯಡೆಗೆ...ಬೊಬ್ಬಿರಿವ ಶರಧಿರಾಯ ಅಲೆಗುಂಟ ತೇಲಿಸಿ ದಂಡೆಗೆಸೆವ ಒಣಕಟ್ಟಿಗೆಯ ತುಂಡುಗಳ ಬಾಚಿಬಾಚಿ ತುಂಬಿಕೊಳ್ಳಲು..ನನ್ನ ಮನೆಯ ಒಲೆಯ ಬೆಚ್ಚಗಿಡುವ ಬೆಂಕಿಗಾಗಿ ಕಾದಿರುವ ಯಾವ ಕಾಡಿನ ಯಾವ ಬೆಟ್ಟದ ಒಣಮರದ ತುಂಡಿದು.. ಎಷ್ಟು ದೂರದಿಂದ ತೇಲಿಬಂದಿರಬಹುದು ಎಂಬೆಲ್ಲ ಪ್ರಶ್ನಾವಳಿ ಸರಮಾಲೆ ಕಟ್ಟಿ ಅದೇ ಸಮುದ್ರರಾಜನೆಡೆಗೆ ಎಸೆದು ಉತ್ತರದ ಹಂಗಿಲ್ಲದೇ ಉಸುಕಿನ ಹಕ್ಕಿಗೂಡು ಮಾಡುತ್ತ..ಬಿದ್ದಮಳೆಗದು ನಿಧಾನ ಕೊಚ್ಚುವುದನ್ನು ನೋಡಲಾಗದೇ ಹತ್ತಾರು ಕೆಸುವಿನೆಲೆ ತಂದು ಹೊದೆಸಿಲ್ಲ...

ADVERTISEMENT

ಈಗಲೂ ಅವನೇ..ಅದೇ ಹಚ್ಚಿಕೊಂಡ ಸಮುದ್ರವೇ...ಚೂರು ಫರಕ್ ಎಂದರೆ ಈಗೆರಡು ತಿಂಗಳಿಂದ ಬಣ್ಣದ ಪತಾಕೆ ಹೊತ್ತ ನೂರಾರು ಮೀನಿನ ಲಾಂಚುಗಳ ಸದ್ದಿಲ್ಲ,ಅವುಗಳ ಒಡಲೊಳಗಿಂದ ಮೊಗೆಮೊಗೆದು ಮೀನು ತುಂಬಿಸಿಕೊಳ್ಳುವ ಬುಟ್ಟಿಗಳ ಸುದ್ದಿಯಿಲ್ಲ..ಕತ್ತಲಾವರಿಸಿದರೂ ದಂಡೆಗುಂಟ ಆಡುತ್ತಲೇ ಇರುವ ಪುಟ್ಟ ಪಾದಗಳ ಗುರುತಿಲ್ಲ.. ದಂಡಿದಂಡಿ ಕರಿಕಪ್ಪು ಬೆತ್ತಲೆ ಮೋಡಗಳ ಅಡ್ಡಹಾಕಿಕೊಂಡ ಹಚ್ಚನೆ ಹಸಿರು ಗಿರಿಕಂದರಗಳ ಮಡಿಲಡಿಗೆ ಕಾಳಿ,ಗಂಗಾವಳಿ,ಅಘನಾಶಿನಿಯರ ಉಮ್ಮಳಿಕೆಯ ಪ್ರೀತಿ ಸೊಗಡನ್ನುಂಡು ಉಕ್ಕುಕ್ಕಿ ಉಲ್ಬಣಗೊಂಡು ಮೊರೆಯುತ್ತ ಮಹಾಮೇರು ಕಲ್ಲುಬಂಡೆಗಳಿಗೆ ಬೃಹತ್ ಅಲೆಗಳನ್ನು ತೋಕಿ ತೋಕಿ ಬೇರೆಯದೇ ಆದ ರೂಪದಲ್ಲಿ ಹಾಲ್ನೊರೆಯ ಹಬ್ಬಮಾಡುತ್ತಿದ್ದಾನೆ ಈಗವ..ಸಿಡಿವ ಹನಿಗಳ ಹೊತ್ತು ಕುಣಿವ ಅಲೆಗಳ ಕಟ್ಟಿಕೊಂಡು ಜಡಿಮಳೆಯೊಂದಿಗೆ ಪೈಪೋಟಿಗಿಳಿದು ಕೇಕೇ ಹಾಕಿ ಸಂತೃಪ್ತ ಭಾವದಲ್ಲಿ ದಂಡೆ ಮೀರಿ ತೊನೆಯುತ್ತಿದ್ದಾನೆ. ಉಸುಕಿನ ದಾರಿಗುಂಟ ಹಚ್ಚಿಕೊಂಡವರ ಹೆಜ್ಜೆ ಸದ್ದು ಕೇಳಿಬರುತ್ತದೆಯೇನೋ ಎಂಬಂತೆ ಕಿವಿನಿಮಿರಿಸಿ ಕಾದಿದ್ದಾನೆ..ಧುತ್ತನೆ ಎದುರಾಗಿ ಬೆಚ್ಚಿಬೀಳಿಸಿ ನಗುವ ನಗಿಸುವ ಹುನ್ನಾರದಲ್ಲಿದ್ದಾನೆ..ಯಾವ ಛತ್ರಿಯೂ ತಡೆಯದ ರೇನ್‌ಕೋಟಿನೊಳಗೂ ಹೊಕ್ಕು ಕಿಲಕಿಲಗುಡಿಸುವ ಎರಚಲ ಹನಿಗಳನ್ನಿಟ್ಟುಕೊಂಡು ನಿಮಗಾಗಿ ಕಾಯುತ್ತಿದ್ದಾನೆ.ಖಂಡಿತ ಈ ಸುರಿವ ಮಳೆಯಲ್ಲೊಮ್ಮೆ ನೀವು ಹಚ್ಚಿಕೊಂಡ ಸಮುದ್ರಕ್ಕೆ ಭೇಟಿಕೊಡುತ್ತೀರಲ್ಲ...?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.