ಸಂಪತ್ ಅವರು ತಮ್ಮ ತಾಯಿ ಗೀತಾ ಅವರೊಂದಿಗೆ
ಮುಟ್ಟು ಎಂಬುದು ಮನುಷ್ಯನ ಸೃಷ್ಟಿಕ್ರಿಯೆಗೆ ಪೂರಕವಾದ ಅತ್ಯಂತ ನೈಸರ್ಗಿಕ ವಿದ್ಯಮಾನ. ಆದರೆ ಅದ್ಯಾಕೋ ಈಗಲೂ ಅದರ ಬಗ್ಗೆ ಮುಕ್ತವಾಗಿ ಮಾತನಾಡಲು ಹೆಚ್ಚಿನವರಿಗೆ ಮುಜುಗರ, ಹಿಂಜರಿಕೆ. ತಾಯಿಯ ಆ ದಿನಗಳ ಸಂಕಷ್ಟಕ್ಕೆ ಮಿಡಿದ ಮಗನೊಬ್ಬನ ಅಂತರಂಗದ ಅಭಿವ್ಯಕ್ತಿ ಇಲ್ಲಿದೆ. ಹೆಣ್ಣಿನಿಂದ ಒಡಮೂಡಿದ ಪ್ರತಿಯೊಬ್ಬರಲ್ಲೂ ಇರಲೇಬೇಕಾದ ಆ ಭಾವಸೂಕ್ಷ್ಮ ಗುಣದ ಪ್ರತಿನಿಧಿಯಂತೆ ಭಾಸವಾಗುತ್ತಾರೆ ಉಪನ್ಯಾಸಕ ಸಂಪತ್ ಬೆಟ್ಟಗೆರೆ...
ನಾನು ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ನಾಗಿ ಕಾರ್ಯ ನಿರ್ವಹಿಸತೊಡಗಿದ ಆರಂಭದ ದಿನಗಳವು. ನನ್ನ ವಿದ್ಯಾರ್ಥಿಗಳಾಗಿದ್ದವರು, ನನಗಿಂತ ನಾಲ್ಕೈದು ವರ್ಷಗಳಷ್ಟೇ ಕಿರಿಯರಾಗಿದ್ದ ಹುಡುಗ– ಹುಡುಗಿಯರು. ಹೀಗಾಗಿ, ನಾನು ಅವರಿಗೆ ಮೇಷ್ಟ್ರು ಅನ್ನುವುದಕ್ಕಿಂತಲೂ ಮಿಗಿಲಾಗಿ ಸ್ನೇಹಿತನಂತಿದ್ದ ಗುರುವಾಗಿದ್ದೆ, ಅವರು ವಿದ್ಯಾರ್ಥಿಮಿತ್ರರಾಗಿದ್ದರು. ಈಗ ನನ್ನ ಈ ವೃತ್ತಿಗೆ ದಶಕವೇ ಕಳೆಯುತ್ತಾ ಬಂದಿದ್ದರೂ ನಾನು ಅದೇ ಭಾವದಲ್ಲೇ ಈಗಿನ ವಿದ್ಯಾರ್ಥಿಗಳೊಂದಿಗೂ ಒಡನಾಡುತ್ತೇನೆ. ಹೀಗಾಗಿ, ಕೆಲವು ವಿದ್ಯಾರ್ಥಿಗಳು ‘ನೀವು ಕನ್ನಡ ಸರ್ ಅಷ್ಟೇ ಅಲ್ಲ ಕನ್ನಡ ಮೆಂಟರ್ ಸಹ’ ಅನ್ನುತ್ತಿರುತ್ತಾರೆ. ನಾನಾಗ ‘ಇದು ಸ್ವಲ್ಪ ಉತ್ಪ್ರೇಕ್ಷೆ ಅಂತ ಅನ್ನಿಸುವುದಿಲ್ಲವೇ?’ ಎನ್ನುವುದೂ ಇದೆ. ಆದರೆ ಕೆಲವೊಮ್ಮೆ ವಿದ್ಯಾರ್ಥಿಗಳಿಗಿಂತ ವಿದ್ಯಾರ್ಥಿನಿಯರು ಈ ರೀತಿ ವಿಶೇಷವಾಗಿ ಪ್ರಶಂಸೆ ಮಾಡಿದಾಗ ‘ಏಕಿರಬಹುದು? ಅವರ ಇಷ್ಟೊಂದು ಪ್ರೀತಿಗೆ ನಾನು ಪಾತ್ರನಾಗಿದ್ದು ಹೇಗೆ’ ಎಂದು ನನ್ನನ್ನು ನಾನು ಕೇಳಿಕೊಳ್ಳುತ್ತೇನೆ. ಅವಳ ಭಾವನೆಗೆ ಪ್ರತಿಸ್ಪಂದಿಸುವ ಗುಣ, ಅಂದರೆ ಹೆಣ್ಣಿನ ಅಂತರಾಳದ ಭಾವನೆಗೆ ಆ ಕ್ಷಣ ತೋರಿದ ಸ್ಪಂದನೆ ಆಗಿದ್ದಿರಬಹುದು ಅನ್ನಿಸುತ್ತದೆ.
ಕೆಲವು ಗಂಡಸರು ಜಗಳಕ್ಕೆ ನಿಂತಾಗ, ‘ನಾನೇನು ಹೆಣ್ ಹೆಂಗ್ಸ್ ಹಂಗೆ ಕೈಗೆ ಬಳೆ ತೊಟ್ಕೊಂಡಿದ್ದೀನಾ’ ಅಂತ ಕೇಳಿದಾಗಲೆಲ್ಲಾ ನನ್ನಂತಹ ಪುರುಷನಿಗೆ ‘ಈ ಗಂಡಿನ ಅಸ್ತಿತ್ವಕ್ಕೆ ಕಾರಣಳಾದವಳೇ ಹೆಣ್ಣು. ಆಕೆ ಹೊತ್ತು, ಹೆತ್ತು, ಉಣಿಸಿ, ಬೆಳೆಸಿದವಳು ಎಂದಮೇಲೆ ‘ನಾನು ಗಂಡ್ಸು’ ಅಂತ ಎದೆ ತಟ್ಟಿ ವಿಶೇಷವಾಗಿ ತನ್ನನ್ನು ಗುರುತಿಸಿಕೊಂಡು ಅನ್ಯರನ್ನು ಗದರುವುದರಲ್ಲಿ ಏನಿದೆ ವಿಶೇಷ’ ಎನಿಸುತ್ತದೆ. ಅಮ್ಮ, ಹೆಂಡತಿ, ಸಹೋದರಿ, ಮಗಳು, ಸೊಸೆ, ಅತ್ತೆ, ಗೆಳತಿ... ಹೀಗೆ ನಾನಾ ಬಗೆಯ ಅಸ್ಮಿತೆಗಳಿರುವ ಜೀವವನ್ನು ಪುರುಷನಾದ ನಾನು ಪ್ರಕೃತಿಯಾಗಿ ನೋಡಿದರೆ, ಅದೊಂದು ಕವಿತ್ವದ ತಾಯಿಭಾವ. ಹೆಣ್ತನ ಅನ್ನುವುದು ಹೆಣ್ಣಿನದು ಮಾತ್ರವಲ್ಲ, ಅದು ಗಂಡಿನೊಳಗಿನ ಭಾವಸ್ಫೂರ್ತಿ, ಮಂದಹಾಸದ ಪ್ರೇಮಮೂರ್ತಿ.
ಅದೇ ಪೌರುಷ ಭಾವದಲ್ಲಿ ಪ್ರದರ್ಶನಾತ್ಮಕವಾಗಿ ‘ನಾನೇ ಗಂಡ್ಸು’, ‘ನಾನು ಗಂಡು’ ಎಂದು ದರ್ಪ ತೋರಿದರೆ ಅದನ್ನು ಅವನ ಮೇಲರಿಮೆ ಎಂದಷ್ಟೇ ಅಂದುಕೊಳ್ಳಲಾಗದು. ಅದು ಕೀಳರಿಮೆಯಿಂದ ಒಡಮೂಡಿದ, ತನ್ನ ಐಡೆಂಟಿಟಿಯನ್ನು ತಾನೇ ಹೇಳಿಕೊಳ್ಳುವ ಹತಾಶೆಯ ಪರಮಾವಧಿ ಎನ್ನಲಡ್ಡಿಯಿಲ್ಲ.
ಅದೇ ರೀತಿ ‘ನಾನು ಹೆಂಗ್ಸು’, ‘ನಾನು ನಾನೇ’ ಎಂದು ಒಬ್ಬ ಸ್ತ್ರೀ ಹೇಳಿಕೊಳ್ಳುವುದು ಸಹ ಸ್ತ್ರೀವಾದ ಅನ್ನಿಸುವುದಿಲ್ಲ. ಬದಲಿಗೆ, ಸ್ವೇಚ್ಛೆ ಆಗುವ ಅಪಾಯ ಅಲ್ಲಿರುತ್ತದೆ. ಹಾಗಂತ ಹೆಂಗಸರು ‘ನಾನು!’ ಅಂತ ಅಷ್ಟೊಂದು ಗರ್ವದಿಂದ ಹೇಳಿಕೊಂಡ ಉದಾಹರಣೆಗಳು ಕಡಿಮೆ. ಬದಲಿಗೆ ‘ನಾನೂ ನಿನ್ನ ಹಾಗೇ ಬದುಕಬಲ್ಲೆ!’ ಎಂದುಕೊಳ್ಳುವ ಆತ್ಮಾಭಿಮಾನವನ್ನು ಗಮನಿಸುತ್ತೇವೆ.
ಅದೇ ಪುರುಷನು ‘ನಾನೂ ನಿನ್ನ ಹಾಗೇ ಮನುಷ್ಯ ಕಣೇ ಮಾನುಷಿ!’ ಎಂದು ಪ್ರೀತಿಯಿಂದ ಕರೆ ಕೊಟ್ಟರೆ ಅದೊಂದು ಆತ್ಮಾನುಸಂಧಾನದ ಮಾತಾಗುತ್ತದೆ, ತುಂಬಾ ಚೆಂದದ ಅಭಿವ್ಯಕ್ತಿಯಾಗುತ್ತದೆ. ಇಲ್ಲಿ ಲಿಂಗ ಅನ್ನುವುದಷ್ಟೇ ಬದಲಾಗಿರುತ್ತದೆ. ಅದು ಹಾಗೇ ಇದ್ದರೆ ಚೆನ್ನ! ಅದು ಪ್ರಕೃತಿಯ ನಿಯಮ ಸಹ. ‘ಮೊಲೆ ಮೂಡಿ ಬಂದಡೆ ಹೆಣ್ಣೆಂಬರು, ಗಡ್ಡ ಮೀಸೆ ಬಂದಡೆ ಗಂಡೆಂಬರು, ನಡುವೆ ಸುಳಿವ ಆತ್ಮನು ಹೆಣ್ಣೂ ಅಲ್ಲ ಗಂಡೂ ಅಲ್ಲ ಕಾಣಾ...’ ಎಂಬುದರಲ್ಲಿ ವಚನಕಾರರ ಮನದಿಂಗಿತವೂ ಅದೇ ಆಗಿತ್ತು ಎಂಬುದನ್ನು ಅರ್ಥೈಸಿಕೊಳ್ಳುವುದು ಸಾಮಾಜಿಕವಾಗಿ ತುಂಬಾ ಆರೋಗ್ಯಕರವಾದ ಭಾವ.
ಅಂದಹಾಗೆ, ಹೆಣ್ಣನ್ನು ಗಂಡು, ಗಂಡನ್ನು ಹೆಣ್ಣು ಪರಸ್ಪರ ಹೇಗೆ ಅರ್ಥಮಾಡಿಕೊಳ್ಳಬೇಕೋ ಹಾಗೇ ಹೆಣ್ಣಿನ ಭಾವನೆಯನ್ನು ಹೆಣ್ಣು, ಗಂಡಿನ ಅಂತಃಕರಣವನ್ನು ಗಂಡು ಕೂಡ ಅಂತರಂಗದಿ ಕಂಡುಕೊಂಡಾಗ ‘ಸಂವೇದನೆ’ ಎಂಬ ಸ್ಪಂದನೆಗೆ ನಿಜವಾದ ಅರ್ಥ ಬರುತ್ತದೆ. ಇಲ್ಲದಿದ್ದರೆ ಎರಡೂ ಕಡೆಗಳಲ್ಲಿ ಬರೀ ‘ವೇದನೆ’ಯೇ ಹೆಚ್ಚಾಗುತ್ತದೆ. ‘ವಿಘಟನೆ’ ಸಂಭವಿಸಿ ಮಾನವೀಯತೆಯ ಅರಿವಿನ ದಾರಿಯೇ ಕೊಚ್ಚಿ ಹೋಗುತ್ತದೆ.
ನಾನು ಹೈಸ್ಕೂಲ್‌ನಲ್ಲಿ ಓದುತ್ತಿದ್ದ ದಿನಗಳಲ್ಲಿ ಒಂದು ಸಲ ಅಮ್ಮ ‘ಲೇಡಿ ಡಾಕ್ಟರ್ ಹತ್ರ ತೋರಿಸಬೇಕು ಕಣೋ. ಯಾಕೋ ಗೊತ್ತಿಲ್ಲ, ಹೊಟ್ಟೆ ನೋಯುತ್ತಿರುತ್ತದೆ. ಇದು ಗ್ಯಾಸ್ಟ್ರಿಕ್ ಸಮಸ್ಯೆಯಂತೂ ಅಲ್ಲ. ಮುಟ್ಟಿನ ಸಮಸ್ಯೆಯೇ ಇರಬೇಕೇನೋ’ ಎಂದಳು. ‘ಮುಟ್ಟು! ಹಾಗೆಂದರೇನು ಅಮ್ಮ?’ ಎಂದು ನಾನಾಗ ಕೇಳಲಿಲ್ಲ. ಏಕೆಂದರೆ, ಅಮ್ಮ ತಿಂಗಳಿಗೊಮ್ಮೆ ಮುಟ್ಟಾದಾಗ ಅಪ್ಪನ ಹಳೆಯ ಲುಂಗಿಯನ್ನು ಚೆನ್ನಾಗಿ ಒಗೆದು, ಸೌದೆ ಕೆಂಡದ ಐರನ್ ಬಾಕ್ಸ್‌ನಲ್ಲಿ ನೀಟಾಗಿ ಇಸ್ತ್ರಿ ಮಾಡಿ, ಒಂದಷ್ಟು ಅಗಲಕ್ಕೆ ಹರಿದು ನಾಲ್ಕೈದು ತುಂಡುಗಳನ್ನಾಗಿಸಿ ಇಟ್ಟುಕೊಳ್ಳುತ್ತಿದ್ದಳು. ಈಗಿನ ಸ್ಯಾನಿಟರಿ ಪ್ಯಾಡ್‍ಗಳಿಗೆ ಪೂರ್ವದಲ್ಲಿ ನನ್ನಮ್ಮನ ವಯೋಮಾನದವರು ಬಳಸುತ್ತಿದ್ದ ವಿಶೇಷ ಸ್ಯಾನಿಟರ್ ಪ್ಯಾಡ್, ಅಲ್ಲಲ್ಲ ಮುಟ್ಟಿನ ಬಟ್ಟೆ ಅದಾಗಿತ್ತು. ಅದನ್ನೇ ಒಂದೆರಡು ಸಲ ತೊಳೆತೊಳೆದು ಬಳಸುತ್ತಿದ್ದ ಅಮ್ಮನ ಮುಟ್ಟಿನ ವಿಷಯದ ಬಗ್ಗೆ ಮಗನಾಗಿ ನನಗೆ ಅರಿವಿತ್ತು.
ಅಂತಹ ಅರಿವೆಯ ತುಂಡುಗಳನ್ನು ಯಾರೂ ಹೊರಗಿನವರು ನೋಡಬಾರದೆಂಬ ಮುಜಗರದಿಂದ ನಮ್ಮನೆ ಹಿಂಬದಿಯ ಸೌದೆ ಕೊಟ್ಟಿಗೆಯ ಮೂಲೆಯಲ್ಲಿ ಹರಡುತ್ತಿದ್ದಳು. ಅಪ್ಪಿತಪ್ಪಿ ನಾವು ಚಿಟ್ಟೆ, ಕೋತರಗಿಣಿ (ಏರೋಪ್ಲೇನ್ ಚಿಟ್ಟೆ) ಹಿಡಿಯಲು ಹೋದಾಗ ಆ ಬಟ್ಟೆ ಪೀಸುಗಳು ನಮ್ಮ ತಲೆಗೆ ತಾಕುತ್ತಿದ್ದವು. ‘ಹಾಗೆಲ್ಲ ತಲೆಗೆ ತಾಕಿಸಿಕೊಳ್ಳ ಬಾರದು. ತೊಂಬಾರ (ಮೈಲಿಗೆ) ಆಗುತ್ತದೆ. ಅದರಿಂದ ಕಣ್ಣು ಕೆಂಪಾಗುತ್ತದೆ. ಜ್ವರ ಬರುತ್ತದೆ ಜ್ವಾಪಾನ. ಇನ್ಮುಂದೆ ಆ ಕಡೆಗೆ ಹೋಗಬೇಡಿ’ ಎಂದು ಎಚ್ಚರಿಸುತ್ತಿದ್ದಳು. ಅಂದರೆ ಅದು, ಇನ್ನೆಂದೂ ಮಕ್ಕಳು ಆ ಕಡೆ ಹೋಗಬಾರದು ಎಂದು ಪರೋಕ್ಷವಾಗಿ ಭಯ ಹುಟ್ಟಿಸುವ ತಂತ್ರಗಾರಿಕೆಯಾಗಿತ್ತೇ ವಿನಾ ಮೌಢ್ಯವಲ್ಲ ಎಂಬುದು ನನಗಾಗಲೇ ವೇದ್ಯವಾಗಿತ್ತು.
ಅಮ್ಮನ ಮಾತಿನಂತೆ ಆಕೆಯ ಜೊತೆ ಆಸ್ಪತ್ರೆಗೆ ಹೊರಟೆ. ಅಮ್ಮ ಎಂದಳು ‘ನೋಡು ಸಂಪು, ಹೆಣ್ಣುಮಕ್ಕಳಿಗೆ ಎಷ್ಟು ಕಷ್ಟ ಇರುತ್ತೆ ಅಂತ. ಮುಟ್ಟಿನ ನೋವು, ಹೆರಿಗೆ ನೋವು ಎರಡೂ ಅಷ್ಟೆ. ಈಗಲಾದರೂ ಪರ್ವಾಗಿಲ್ಲ, ಡಾಕ್ಟರ್ ಇದ್ದಾರೆ. ಹಿಂದೆಲ್ಲಾ ಜೀರಿಗೆ ಕಷಾಯ ಅಂತೆಲ್ಲ ಸ್ವಯಂವೈದ್ಯ ಇರುತ್ತಿತ್ತು. ನಾನು ಹುಡುಗ, ನನಗೇಕೆ ಇದೆಲ್ಲ ಅಂತ ನಿರ್ಲಕ್ಷ್ಯ ಮಾಡುವುದಲ್ಲ. ಎಲ್ಲವನ್ನೂ ತಿಳಿದುಕೊಂಡಿರ್ಬೇಕು’ ಎಂದು ಹೇಳಿಕೊಂಡೇ ಆಸ್ಪತ್ರೆಯ ಮೆಟ್ಟಿಲು ಹತ್ತಿದ್ದಳು.
ಪರೀಕ್ಷಿಸಿದ ಡಾಕ್ಟರ್ ‘ಹೌದಮ್ಮ, ಇದು ಗ್ಯಾಸ್ಟ್ರಿಕ್ ಸಮಸ್ಯೆ ಅಲ್ಲದಿರಬಹುದು ಅಂತ ನೀವು ಊಹೆ ಮಾಡಿದ್ದು ಸರಿಯಾಗಿಯೇ ಇದೆ. ಆಗಾಗ ಹಾರ್ಮೋನ್ ವ್ಯತ್ಯಾಸದಿಂದ ಹೀಗಾಗುತ್ತಿರುತ್ತದೆ. ನೋಡಿ, ಈ ಟಾನಿಕ್ ಬೆಳಿಗ್ಗೆ ಮತ್ತು ರಾತ್ರಿ ಎರಡೆರಡು ಚಮಚ ತಗೊಳ್ಳಿ’ ಎಂದು ಹೇಳುತ್ತಲೇ ‘ನಿನಗೂ ಬೇಕೇನೋ’ ಎಂದು ತಮಾಷೆಯಾಗಿ ನನ್ನ ನೋಡಿ ನಗಾಡಿದ್ದರು. ನಾನಾಗ ಮುಗುಳ್ನಕ್ಕಿದ್ದೆ. ಅವರ ಚೇಂಬರ್‌ನಿಂದ ಹೊರಗೆ ಬರುವಾಗ ಅಮ್ಮನಿಗೆ ‘ಡಾಕ್ಟರ್‍ಗೂ ಈ ಮುಟ್ಟಿನ ಹೊಟ್ಟೆ ನೋವು ಬರುತ್ತಾ ಅಮ್ಮ?’ ಎಂದೆ. ‘ಎಲ್ಲರಿಗೂ ಬರುತ್ತೆ, ಹೆಂಗಸರು ಅಂದಮೇಲೆ. ಸುಮ್ನೆ ನಡಿ, ಅಷ್ಟು ಜೋರಾಗಿ ಮನೆಯಲ್ಲಿ ಮಾತಾಡಿದ ಥರ ಮಾತಾಡ್ತೀಯಲ್ಲ, ಯಾರಾದ್ರೂ ಕೇಳಿಸಿಕೊಂಡರೆ ಏನೆಂದುಕೊಂಡಾರು? ಹೈಸ್ಕೂಲ್ ಹುಡುಗನ ಬಾಯಲ್ಲಿ ಛೀ ಮುಟ್ಟಿನ ಮಾತು ಅಂತ’ ಎಂದು ಗದರಿದ್ದಳು. ಅಲ್ಲೇ ಆವರಣದ ಬೆಂಚಿನ ಮೇಲೆ ಸರದಿಯಲ್ಲಿ ಕಾಯತ್ತಿದ್ದ ನಾಲ್ಕೈದು ಹುಡುಗಿಯರು, ಐದಾರು ಹೆಂಗಸರು ಒಮ್ಮೆಲೇ ನನ್ನೆಡೆಗೆ ಕುತೂಹಲದ ದೃಷ್ಟಿ ನೆಟ್ಟಂತೆ ಅನ್ನಿಸಿತು. ಯಾಕೋ ಗೊತ್ತಿಲ್ಲ, ನನಗೂ ಅಮ್ಮನ ಮುಟ್ಟಿನ ಮುಜುಗರದ ಬಿಸಿ ತಟ್ಟಿತೇ? ಏನೋ ಒಂದು ಬಗೆಯ ಭಯದಿಂದ ಕೈಕಾಲು ನಡುಗಿ, ತಲೆ ಸುತ್ತಿದಂತಾಯಿತು. ‘ಅಮ್ಮ ನೀರು ಕೊಡು, ಗಂಟಲು ಒಣಗಿದೆ’ ಎಂದೆ. ‘ಮಾರ್ಚ್ ತಿಂಗಳ ಬಿಸಿಲು, ಬೇರೇನೂ ಆಗಿರಲ್ಲ, ಕುಡಿ’ ಎಂದು ಬಾಟಲಿಯ ಮುಚ್ಚಳ ತೆರೆದು ಕೈಗಿಟ್ಟಳು.
ಈಗ ಅಮ್ಮನ ಮುಟ್ಟು ನಿಂತಿದೆ. ಅವಳ ಮುಟ್ಟಿನ ಬಟ್ಟೆಗಳೂ ಮಾಯ. ಆದರೆ ಮುಟ್ಟಿನ ಕಾಲದ ಆ ಸಂವೇದನೆಯ ಅನುಭವ ನನಗೆ ಆಗಾಗ ಆಗುತ್ತಲೇ ಇರುತ್ತದೆ. ಯಾವುದೋ ಮೆಡಿಕಲ್ ಶಾಪ್‌ನಲ್ಲಿ ಔಷಧಿ ಕೊಳ್ಳಲು ನಿಂತಿರುವಾಗ ‘... ಅದು ಕೊಡಿ ಸರ್ ಒಂದ್ ಪ್ಯಾಕ್. ಓಹೋ ಇಲ್ವಾ? ಆ ಕಂಪನಿಯದ್ದೇ ಕಂಫರ್ಟ್. ಇದು ಬೇಡ!’ ಎಂದು ತಮಗೆ ಬೇಕಿದ್ದ ಕಂಪನಿಯ ಸ್ಯಾನಿಟರಿ ಪ್ಯಾಡ್‍ನ ಡಿಜಿಟಲ್ ಲೇಬಲ್ ಇದ್ದ ಮೊಬೈಲ್ ಸ್ಕ್ರೀನ್ ತೋರಿಸುವವರು, ಬಳಿಕ ಅದೇ ಧಾವಂತದಲ್ಲಿ ಮತ್ತೊಂದು ಮೆಡಿಕಲ್ ಶಾಪ್‌ನತ್ತ ಸಾಗುವ ಹುಡುಗಿಯರು ಕಾಣಸಿಗುತ್ತಾರೆ. ಇನ್ನು ಕೆಲವರು ಸಿಕ್ಕಿದ್ದನ್ನೇ ‘ಓಕೆ’ ಎನ್ನುತ್ತಾ ಕೊಂಡು, ಪ್ಯಾಕೆಟ್ ತಿರುಗಿಸುತ್ತಾ ಸುತ್ತಮತ್ತಲಿನ ವಿವರಗಳನ್ನು ಓದುತ್ತಲೇ ಕುತೂಹಲದ ಕಣ್ಣುಗಳಲ್ಲಿ ಹೊಳಪು ತುಂಬಿಕೊಂಡು ಹೊರ ನಡೆಯುತ್ತಾರೆ.
ಕೆಲವರು ಬಳಸಿದ ಸ್ಯಾನಿಟರಿ ಪ್ಯಾಡ್‌ಗಳನ್ನು ರಸ್ತೆಬದಿಯ ಲಂಟಾನಕ್ಕೆ ಎಸೆದು ಹೋಗುವುದು, ಬೀದಿ ಕಸ ಗುಡಿಸುವವರು ಸೂಕ್ಷ್ಮ ಮನಸ್ಸಿನವರಾಗಿದ್ದರೆ ಅವುಗಳನ್ನು ಎತ್ತುತ್ತಲೇ ‘ಯಾರೋ ಮಾರಾಯ ಇದು. ಹಿಂದಿನವರು ತಾವು ಬಳಸುತ್ತಿದ್ದ ಬಟ್ಟೆಯನ್ನ ಎಲ್ಲಿ ಹಾಕಬೇಕಿತ್ತೋ ಅಲ್ಲೇ ಎಷ್ಟು ಅಚ್ಚುಕಟ್ಟಾಗಿ ಹಾಕುತ್ತಿದ್ದರು. ಆದರೆ ಈಗಿನವರದು ಇದೇನೋ ಕಥೆ? ಯಾರ್‍ಯಾರದ್ದನ್ನೋ ನಾವು ಎತ್ತಿ ಕ್ಲೀನ್ ಮಾಡಬೇಕಾಗಿದೆ, ನಮ್ಮ ಹಣೆಬರಹ ನೋಡು’ ಎಂದು ಗೊಣಗಾಡುವಾಗ, ಪರೋಕ್ಷವಾಗಿ ಬೈಸಿಕೊಳ್ಳುವ ಆ ಹೆಣ್ಣುಮಕ್ಕಳು ನೆನಪಾಗುತ್ತಾರೆ.
ಅಷ್ಟೇ ಅಲ್ಲ, ‘ನಿನ್ನೆ ಏಕೆ ಕಾಲೇಜಿಗೆ ಬಂದಿರಲಿಲ್ಲ?’ ‘ಹುಷಾರಿರಲಿಲ್ಲ ಸರ್’ ‘ಏನು ಹುಷಾರಿರಲಿಲ್ಲ?’ ‘ಸ್ವಲ್ಪ ಹೊಟ್ಟೆನೋವಿತ್ತು’ ಎನ್ನುವ ಉತ್ತರವೂ ನೆನಪಾಗುತ್ತದೆ. ಆ ಉತ್ತರ ಸುಳ್ಳೋ ನಿಜವೋ ಅನ್ನುವುದು ಬೇರೆ ಮಾತು. ಆದರೆ ಅಂಥ ಮಾತು ಕೇಳಿದಾಗಲೆಲ್ಲ ಅಮ್ಮ, ನಾನು ಮತ್ತು ಆ ಹೆಣ್ಣುಮಕ್ಕಳು ಮತ್ತದೇ ಮುಟ್ಟಿನ ಸಂವೇದನೆಯ ಕಾರಣಕ್ಕೆ ಪರಸ್ಪರ ಒಂದೇ ರೇಖೆಯಲ್ಲಿ ಸ್ಪಂದನೆಗೆ ಒಳಗಾಗುತ್ತಲೇ ಇರುತ್ತೇವೆ. ಬದುಕಿನ ಅಂತಃಕರಣದ ಅನಾವರಣಕ್ಕೆ ಸಾಕ್ಷಿಯಾಗುತ್ತಲೇ ಇರುತ್ತೇವೆ.
ಆ ಹುಡುಗನಿಗೆ ಡೌಟೇಡೌಟು!
ನಾನು ಮೂಡಿಗೆರೆಯ ಡಿಗ್ರಿ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕಾರ್ಯನಿರ್ವಹಿಸುತ್ತಿದ್ದ ಮೊದಲ ವರ್ಷ. ಆಗ ವಿಶ್ವವಿದ್ಯಾಲಯದ ಸೆಮಿಸ್ಟರ್ ಪರೀಕ್ಷೆ ನಡೆಯುತ್ತಿತ್ತು. ಕೊಠಡಿ ಮೇಲ್ವಿಚಾರಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ವಿದ್ಯಾರ್ಥಿನಿಯೊಬ್ಬಳು ‘ಸರ್, ವಾಷ್‍ರೂಮಿಗೆ ಹೋಗಿ ಬರುತ್ತೇನೆ’ ಎಂದಳು. ‘ಇದು ಪರೀಕ್ಷೆ, ಮಧ್ಯದಲ್ಲಿ ಹಾಗೆಲ್ಲ ಕಳಿಸುವ ಹಾಗಿಲ್ಲ’ ಎಂದೆ. ಅದಕ್ಕವಳು ‘ತುಂಬಾ ಹೊಟ್ಟೆನೋವು. ಲೇಡೀಸ್ ಪ್ರಾಬ್ಲಂ ಸರ್’ ಎಂದಳು. ಮುಖದಲ್ಲಿ ಮತ್ತದೇ ಮುಜುಗರದ ಗೆರೆಗಳು. ‘ಓಕೆ, ಬೇಗ ವಾಪಸ್ ಬರಬೇಕು’ ಎಂದೆ. ಯೆಸ್ ಎಂಬಂತೆ ತಲೆಯಾಡಿಸಿದಳು. ಹೊರಹೋಗುತ್ತಲೇ ಪರೀಕ್ಷಾ ಕೊಠಡಿಯ ಪಕ್ಕದ ಕಾರಿಡಾರ್‌ನಲ್ಲಿ ಇದ್ದ ಬ್ಯಾಗಿನಿಂದ ಪ್ಲಾಸ್ಟಿಕ್ ಕವರ್ ತೆಗೆದು ತನ್ನ ದುಪಟ್ಟಾದ ಮರೆಯಲ್ಲಿ ಇಟ್ಟುಕೊಂಡು ವಾಷ್‍ರೂಮಿನತ್ತ ದೌಡಾಯಿಸಿದಳು. ಆದರೆ ಕಿಟಕಿಯ ಪಕ್ಕದಲ್ಲೇ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಯೊಬ್ಬನಿಗೆ ಡೌಟೇಡೌಟು! ‘ಸರ್ ನೋಡಿ, ಅವಳು ಕಾಪಿಚೀಟಿಯನ್ನು ಮುಚ್ಚಿಟ್ಟುಕೊಂಡು ಹೋದಳು. ಬೇಕಾದರೆ ಹೋಗಿ ನೋಡಿ’ ಎಂದು ಪಿಸುನುಡಿದ. ಅಷ್ಟರಲ್ಲೇ ರೌಂಡ್ಸ್ ಸ್ಕ್ವಾಡ್‌ನವರ ಎಂಟ್ರಿ. ಆಗಷ್ಟೇ ಹೊರಹೋಗಿದ್ದ ಇವಳು ಕೂಡ ‘ಮೇ ಐ ಕಮ್ ಇನ್ ಸರ್’ ಎನ್ನುತ್ತಾ ಅದೇ ಸಮಯಕ್ಕೆ ಒಳಬಂದಳು. ‘ಯಾಕ್ರೀ, ಎಲ್ಲಿಗೆ ಕಳುಹಿಸಿದ್ರಿ? ಸ್ವಲ್ಪನೂ ಜವಾಬ್ದಾರಿಯಿಲ್ಲ. ಹುಡುಗಿ ಅಂತ ವಾಷ್‍ರೂಮ್‌ಗೆ ಕಳಿಸಿದ್ರಿ, ಅದೇ ಹುಡುಗನಾಗಿದ್ರೆ?’ ಎಂದೆಲ್ಲಾ ಕೂಗಾಡಿದರು. ಮಂದಹಾಸ ಬೀರಿದ್ದಷ್ಟೇ ಆಗ ನನ್ನ ಪ್ರತಿಕ್ರಿಯೆ. ನಾನೂ ಆಗ ಮೇಲ್ವಿಚಾರಕನ ಕರ್ತವ್ಯಕ್ಕೆ ಹೊಸಬನಾಗಿದ್ದೆನಲ್ಲ? ನನ್ನದೇ ತಪ್ಪಿರಬಹುದು ಎಂದುಕೊಂಡು ಸುಮ್ಮನಾದೆ.
ಅವಳ ಮುಖದಲ್ಲಿ ಏನೋ ದುಗುಡ. ಪರೀಕ್ಷೆ ಮುಗಿದು, ಪ್ರಾಂಶುಪಾಲರ ಕೊಠಡಿಗೆ ತೆರಳಿ ಉತ್ತರ ಪತ್ರಿಕೆ ಸಲ್ಲಿಸಿ ಹೊರ ಬರುತ್ತಲೇ ಅಲ್ಲೇ ನಿಂತಿದ್ದ ಆ ಹುಡುಗಿ ‘ಸರ್, ತುಂಬಾ ಥ್ಯಾಂಕ್ಸ್. ಆದರೆ ನೀವು ನನಗಾಗಿ ಆ ಸ್ಕ್ವಾಡ್‌ನವರ ಹತ್ರ ಬೈಸಿಕೊಳ್ಳುವಂತಾಯ್ತು, ಹಾಗಾಗಬಾರದಿತ್ತು. ನನಗೆ ಮಂತ್ಲಿ ಪೀರಿಯಡ್ಸ್ ಆಗಿತ್ತು. ಹೀಗಾಗಿ, ವಾಷ್‍ರೂಮ್‌ಗೆ ಹೋಗಲೇಬೇಕಿತ್ತು. ಅದಕ್ಕೇ ಕೇಳಿಕೊಂಡು ಹೋದೆ. ಸೋ ಸ್ಸಾರಿ’ ಎಂದಳು ದೈನ್ಯಳಾಗಿ.
ನನಗಾಗ, ಕಿಟಕಿ ಬಳಿಯಿದ್ದ ಹುಡುಗ ಆರೋಪಿಸಿದಂತೆ ಅವಳು ಕೈಗೆತ್ತಿಕೊಂಡು ಹೋಗಿದ್ದು ಕಾಪಿಚೀಟಿಯನ್ನಲ್ಲ, ಸ್ಯಾನಿಟರಿ ಪ್ಯಾಡ್ ಆಗಿರಬಹುದು (ನೆನಪಾಯಿತು ಆಗ ಅಮ್ಮನ ಆ ಮುಟ್ಟಿನ ಬಟ್ಟೆಯೂ!) ಎಂಬ ನನ್ನ ಊಹೆಯನ್ನು ದೃಢಪಡಿಸುವ ಉತ್ತರ ದೊರಕಿತ್ತು. ‘ಹೋಗಲಿ ಬಿಡು, ಇವೆಲ್ಲಾ ಜೀವನದಲ್ಲಿ ಸಹಜ’ ಎಂದೆ. ಅವಳು ಆ ಮಾತನ್ನು ನಾನು ಹೇಳಿದ್ದು ಸ್ಕ್ವಾಡ್‍ನವರ ವರ್ತನೆಗೋ ತನ್ನ ಪ್ರಾರ್ಥನೆಗೋ ಯಾವುದಕ್ಕೆಂದು ಅರ್ಥ ಮಾಡಿಕೊಂಡಳೋ ಗೊತ್ತಿಲ್ಲ. ಹಾಗೇ ನಮಸ್ಕಾರ ಹೇಳಿ ಹೊರಟುಹೋದಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.