ADVERTISEMENT

ಪ್ಲಾಸ್ಟಿಕ್‌ ರೋಗಕ್ಕೆ ಕಟ್ಲೆರಿ ಬ್ಯಾಂಕ್‌ ಮದ್ದು!

ಮೂಡುಬಿದಿರೆ ಪಟ್ಟಣದಲ್ಲಿ ಉಪನ್ಯಾಸಕಿಯಾಗಿರುವ ಸಂಧ್ಯಾ ಎ ಅವರು ಪುಟ್ಟದಾದ ‘ಕಲ್ಪವೃಕ್ಷ’ ಕಟ್ಲೆರಿ ಬ್ಯಾಂಕ್‌ (ಸ್ಟೀಲ್ ಪಾತ್ರೆಗಳ ಭಂಡಾರ) ಮುನ್ನಡೆಸುತ್ತಿದ್ದಾರೆ.

ಸಂಧ್ಯಾ ಹೆಗಡೆ
Published 4 ಜನವರಿ 2025, 23:57 IST
Last Updated 4 ಜನವರಿ 2025, 23:57 IST
ಕಟ್ಲೆರಿ ಬ್ಯಾಂಕ್‌ನಲ್ಲಿ ಸಂಧ್ಯಾ
ಕಟ್ಲೆರಿ ಬ್ಯಾಂಕ್‌ನಲ್ಲಿ ಸಂಧ್ಯಾ   

ಆರೆಂಟು ಸಾವಿರ ಜನರು ಸೇರುವ ಮೆರವಣಿಗೆಯೆಂದರೆ ಎಂಟು ಸಾವಿರ ಪ್ಲಾಸ್ಟಿಕ್ ಲೋಟಗಳಿದ್ದರೂ ಕಡಿಮೆಯೇ. ಮಜ್ಜಿಗೆ ಕುಡಿದು ಬಿಸಾಡುವ ಲೋಟಗಳನ್ನು ಸ್ವಯಂ ಸೇವಕರು ಹೆಕ್ಕಿ ತಂದು ಚೀಲಕ್ಕೆ ತುಂಬಿಸಿಟ್ಟರೆ, ಪೌರ ಕಾರ್ಮಿಕರು ಮರುದಿನ ಗಾಡಿಯಲ್ಲಿ ತುಂಬಿಸಿಕೊಂಡು ಹೋಗುತ್ತಿದ್ದರು. ಇದೇ ಕ್ರಮದಲ್ಲಿ ನಡೆದುಕೊಂಡು ಹೋಗುತ್ತಿದ್ದ ಮೂಡುಬಿದಿರೆ ಸಾರ್ವಜನಿಕ ಗಣೇಶೋತ್ಸವದ ಶೋಭಾಯಾತ್ರೆ ಕಳೆದ ವರ್ಷ ಬದಲಾವಣೆಯ ಪರ್ವಕ್ಕೆ ನಾಂದಿ ಹಾಡಿತು. ಕೇವಲ 350 ಸ್ಟೀಲ್‌ ಲೋಟಗಳನ್ನು ಬಳಸಿ ಇಡೀ ಜನಸ್ತೋಮದ ಬಾಯಾರಿಕೆ ನೀಗಿಸಿದ್ದೇ ಒಂದು ಸೋಜಿಗ ಎಂದು ನೇತಾಜಿ ಬ್ರಿಗೇಡ್ ಸ್ಥಾಪಕ ರಾಹುಲ್ ಕುಲಾಲ್ ಹೇಳುವಾಗ ಅವರ ಕಂಗಳಲ್ಲಿ ಮಾಲಿನ್ಯ ಮುಕ್ತ ಮೆರವಣಿಗೆ ನಡೆಸಿದ ಸಂತೃಪ್ತ ಭಾವವಿತ್ತು.

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಪಟ್ಟಣದಲ್ಲಿ ಉಪನ್ಯಾಸಕಿಯಾಗಿರುವ ಸಂಧ್ಯಾ ಎ ಅವರು ಪುಟ್ಟದಾದ ‘ಕಲ್ಪವೃಕ್ಷ’ ಕಟ್ಲೆರಿ ಬ್ಯಾಂಕ್‌ (ಸ್ಟೀಲ್ ಪಾತ್ರೆಗಳ ಭಂಡಾರ) ಮುನ್ನಡೆಸುತ್ತಿದ್ದಾರೆ. ಈ ಕಟ್ಲೆರಿ ಬ್ಯಾಂಕ್‌ನಲ್ಲಿರುವ ಸ್ಟೀಲ್ ಪಾತ್ರೆಗಳನ್ನು ಉಚಿತವಾಗಿ ಬಳಕೆಗೆ ಕೊಡುತ್ತಾರೆ. ಇದರಿಂದ ಪ್ರೇರಿತರಾಗಿ ನೇತಾಜಿ ಬ್ರಿಗೇಡ್‌ನಂತೆ, ಹಲವಾರು ಸಂಘ-ಸಂಸ್ಥೆಗಳು, ಶಾಲೆ- ಕಾಲೇಜುಗಳು, ಪರಿಸರ ಕಳಕಳಿ ಹೊಂದಿದವರು ವಿಶೇಷ ಕಾರ್ಯಕ್ರಮಗಳಿರುವಾಗೆಲ್ಲ ಕಟ್ಲೆರಿ ಬ್ಯಾಂಕ್ ಪಾತ್ರೆಗಳನ್ನೇ ಕೊಂಡೊಯ್ದು ಏಕಬಳಕೆಯ ಪ್ಲಾಸ್ಟಿಕ್ ರಹಿತ ಕಾರ್ಯಕ್ರಮ ನಡೆಸಿ ಬೀಗುತ್ತಾರೆ.!

ಗಣೇಶೋತ್ಸವದ ಶೋಭಾಯಾತ್ರೆಯು ನೇತಾಜಿ ಬ್ರಿಗೇಡ್ ತಂಡದಲ್ಲಿ ಪರಿವರ್ತನೆಯ ಮಿಂಚು ಮೂಡಿಸಿದೆ. ತಂಡದ ಸದಸ್ಯರ ಕೌಟುಂಬಿಕ ಸಂಭ್ರಮದಲ್ಲೂ ಏಕಬಳಕೆಯ ಪ್ಲಾಸ್ಟಿಕ್ ಇಣುಕುತ್ತಿಲ್ಲ. ಅತಿಥಿಗಳಿಗೆ ಪ್ಲಾಸ್ಟಿಕ್ ಕಪ್, ಪ್ಲೇಟ್‌ಗಳಲ್ಲಿ ಜ್ಯೂಸ್, ತಿನಿಸುಗಳನ್ನು ನೀಡುತ್ತಿದ್ದವರು ಈಗ, ಕಟ್ಲೆರಿ ಬ್ಯಾಂಕ್‌ನಲ್ಲಿ ಉಚಿತವಾಗಿ, ಶುಚಿಯಾಗಿ ಸಿಗುವ ಸ್ಟೀಲ್‌ ಲೋಟ, ತಟ್ಟೆಗಳನ್ನು ನೆಚ್ಚಿಕೊಂಡಿದ್ದಾರೆ. ಸ್ಟೀಲ್‌ ಲೋಟಗಳು, ಪ್ಲೇಟ್‌ಗಳು, ಚಮಚಗಳು ಊಟದ ಟೇಬಲ್‌ಗಳಲ್ಲಿ ಮಿನುಗುತ್ತಿವೆ. ಬಳಸಿ ಬಿಸಾಡುವ ಪ್ಲಾಸ್ಟಿಕ್ ಸಾಮಗ್ರಿ ಖರೀದಿಸುವ ಹಣ ಉಳಿತಾಯ, ಪ್ಲಾಸ್ಟಿಕ್ ಗುಡ್ಡ ಕರಗಿಸುವ ತಾಪತ್ರಯವೂ ಇಲ್ಲ ಎಂದು ರಾಹುಲ್ ಕುಲಾಲ್‌ ಮಾತು ಮುಂದುವರಿಸಿದರು.!

ADVERTISEMENT

ದಂತವೈದ್ಯೆ ಅಕ್ಷತಾ ಅವರು ಕೂಡ, ಆಸ್ಪತ್ರೆಯಲ್ಲಿ ನಡೆಯುವ ಸಭೆ, ಆರೋಗ್ಯ ಶಿಬಿರಗಳಿಗೆ ಕಟ್ಲೆರಿ ಬ್ಯಾಂಕ್‌ನ ಊಟದ ತಟ್ಟೆ, ಲೋಟಗಳನ್ನು ತಪ್ಪದೇ ಕೊಂಡೊಯ್ಯುತ್ತಾರೆ.

‘ಕೇಟರಿಂಗ್‌ನವರಿಗೆ ಊಟ ಹೇಳಿದರೆ, ಅವರು ಮಜ್ಜಿಗೆ ಕುಡಿಯಲು ತರುವುದು ಪ್ಲಾಸ್ಟಿಕ್ ಲೋಟಗಳನ್ನೇ. ಭೂತಾಯಿ ಒಡಲಿಗೆ ಭಾರವಾಗುವ ಪ್ಲಾಸ್ಟಿಕ್ ಕಂಡರೆ ಯಾವತ್ತಿಗೂ ಆಗಿಬರುವುದಿಲ್ಲ. ಏನು ಮಾಡಬಹುದೆಂಬ ಯೋಚನೆಯಲ್ಲಿದ್ದಾಗ ಸ್ಟೀಲ್ ಪಾತ್ರೆಗಳ ಭಂಡಾರ ಸಿಕ್ಕಿದ್ದು ಅದೃಷ್ಟ’ ಎಂದು ಅಕ್ಷತಾ ನೆನಪಿಸಿಕೊಳ್ಳುತ್ತಾರೆ.!

ಸಂಧ್ಯಾ ಕನಸಿನ ಉಚಿತ ಸೇವೆ..?

ಕಂಪ್ಯೂಟರ್ ಸೈನ್ಸ್ ಉಪನ್ಯಾಸಕಿ ಸಂಧ್ಯಾ ಎ ಅವರು ಊರವರು, ದಾನಿಗಳ ಸಹಕಾರದಲ್ಲಿ ಈ
‘ಕಟ್ಲೆರಿ ಬ್ಯಾಂಕ್’ ಮುನ್ನಡೆಸುತ್ತಿದ್ದಾರೆ. ‘ಸಮಾಜಮುಖಿಯಾಗಿದ್ದ ಅಪ್ಪ ತೀರಿಕೊಂಡಾಗ ಅವರ ನೆನಪಿನಲ್ಲಿ ಸಾರ್ಥಕ ಕೆಲಸ ಮಾಡುವ ಯೋಚನೆಯೇ 2022ರಲ್ಲಿ ‘ಕಟ್ಲೆರಿ ಬ್ಯಾಂಕ್’ ಸ್ಥಾಪನೆಗೆ ಕಾರಣವಾಯಿತು. ಆರಂಭದಲ್ಲಿ ಒಂದಿಷ್ಟು ಸ್ಟೀಲ್ ಲೋಟಗಳನ್ನು ಖರೀದಿಸಿ, ಊರಿನ ಶಾಲೆ, ಕಾಲೇಜು, ಆಚೀಚೆ ಮನೆಗಳಲ್ಲಿ ಕಾರ್ಯಕ್ರಮಗಳು ನಡೆದಾಗ ಇದನ್ನೇ ಬಳಸುವಂತೆ ವಿನಂತಿಸಿದೆ. ಸಹೃದಯರು ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೇ, ಭಂಡಾರಕ್ಕೆ ಇನ್ನಷ್ಟು ಪಾತ್ರೆಗಳ ಹೊಳಪು ತುಂಬಿದರು. ಸಂಗ್ರಹಿಸಿಡಲು ಜಾಗದ ತಲೆಬಿಸಿಯಾದಾಗ, ಪಕ್ಕದ ಕಲ್ಲುರ್ಟಿ ಕಾಳಮ್ಮ ದೈವಸ್ಥಾನದವರು ತಮ್ಮ ಗೋದಾಮನ್ನು ಉಚಿತವಾಗಿ ನೀಡಿದರು’ ಎನ್ನುತ್ತಾರೆ ಸಂಧ್ಯಾ. 

ಈಗ ‘ಕಲ್ಪವೃಕ್ಷ’ ನೆರಳಿನಲ್ಲಿ 600 ಊಟದ ತಟ್ಟೆಗಳು, 500 ತಿಂಡಿ ಪ್ಲೇಟ್‌ಗಳು, 400 ದೊಡ್ಡ ಲೋಟಗಳು, 250 ಸಣ್ಣ ಲೋಟಗಳು, 500 ಚಮಚಗಳು, ಐಸ್‌ಕ್ರೀಮ್, ಜಾನೂನು ಹಾಕಿ ತಿನ್ನಬಹುದಾದ 150ಕ್ಕೂ ಹೆಚ್ಚು ಸ್ಟೀಲ್ ಬೌಲ್‌ಗಳು ಇವೆ. ‌ಬಿಡುವಾದಾಗ ಶಾಲೆ, ಕಾಲೇಜುಗಳಿಗೆ ಹೋಗಿ, ಏಕಬಳಕೆ ಪ್ಲಾಸ್ಟಿಕ್ ತ್ಯಜಿಸುವಂತೆ, ಉಚಿತವಾಗಿ ಸಿಗುವ ಮರುಬಳಕೆಯ ಸ್ಟೀಲ್ ಸಾಮಗ್ರಿ ಬಳಸುವಂತೆ ತಿಳಿ ಹೇಳಿದ್ದಕ್ಕೆ ಹಲವರು ಸ್ಪಂದಿಸಿದ್ದಾರೆ. ‘ಝೀರೊ ವೇಸ್ಟ್ ಲೈಫ್‌ಸ್ಟೈಲ್’ ವಾಟ್ಸ್‌ಆ್ಯಪ್ ಗ್ರೂಪ್‌ನ ಸದಸ್ಯರು, ಅನೇಕ ಪರಿಸರ ಕಾಳಜಿಯ ಒಡನಾಡಿಗಳು ಹೀಗೆ ಹಲವಾರು ಕೈಗಳು ಕಟ್ಲೆರಿ ಬ್ಯಾಂಕ್ ಅನ್ನು ಮುನ್ನಡೆಸುತ್ತಿವೆ ಎನ್ನುವಾಗ ಹಲವರ ಹೆಸರು ಅವರ ಮಾತಿನಲ್ಲಿ ಹಾದು ಹೋಯಿತು.

ಶೂನ್ಯ ತ್ಯಾಜ್ಯ ಮಾದರಿ ಕಾರ್ಯಕ್ರಮ ನಡೆಸುವ ಕನಸಿನಿಂದ ಇತ್ತೀಚೆಗೆ ಪಾಣಿಯೂರಿನವರೊಬ್ಬರು ಕಟ್ಲೆರಿ ಬ್ಯಾಂಕ್‌ನ 400 ಸ್ಟೀಲ್ ಲೋಟಗಳು ಕೊಂಡೊಯ್ಯಲು 40 ಕಿಲೊಮೀಟರ್ ಪ್ರಯಾಣಿಸಿದರು!

ಮೂಡುಬಿದಿರೆ ಪುರಸಭೆಯವರು ಕಟ್ಲೆರಿ ಬ್ಯಾಂಕ್‌ಗೆ ಬೆನ್ನೆಲುಬಾಗಿ ನಿಂತಿರುವುದು ವಿಶೇಷ. ಪುರಸಭೆ ಕಚೇರಿ ಎದುರಿನಲ್ಲೇ ಕಟ್ಲೆರಿ ಬ್ಯಾಂಕ್ ಪ್ರಚುರಗೊಳಿಸುವ ಬ್ಯಾನರ್ ನಿತ್ಯ ಭೇಟಿ ನೀಡುವವರ ಕಣ್ಸೆಳೆಯುತ್ತದೆ.

ಊರವರು, ಪುರಸಭೆಯವರು, ಪೌರ ಕಾರ್ಮಿಕರ ಸಹಕಾರವನ್ನು ಸ್ಮರಿಸಿಕೊಳ್ಳುವ ಸಂಧ್ಯಾ, ಒಂದು ಲೆಕ್ಕಾಚಾರದ ಪ್ರಕಾರ ಎರಡು ವರ್ಷಗಳಲ್ಲಿ ಸುಮಾರು 30 ಸಾವಿರ ಏಕಬಳಕೆಯ ಪ್ಲಾಸ್ಟಿಕ್ ಲೋಟ, ತಟ್ಟೆ ಭೂಮಿಯ ಒಡಲು ಮಲಿನಗೊಳಿಸುವುದನ್ನು ತಡೆದ ಸಾರ್ಥಕ ಭಾವವಿದೆ ಎನ್ನುತ್ತಾರೆ.

ಪಾತ್ರೆಗಳನ್ನು ಒಯ್ದವರು ಅದನ್ನು ತೊಳೆದು, ಒಣಗಿಸಿ ತಂದು ಕೊಡಬೇಕೆಂಬುದು ‘ಕಲ್ಪವೃಕ್ಷ’ ಕಟ್ಲೆರಿ ಬ್ಯಾಂಕ್‌ನ ನಿಯಮ. ಬಳಕೆದಾರರು ಇದನ್ನು ಖುಷಿಯಿಂದ ಸ್ವೀಕರಿಸಿದ್ದಾರೆ. ‘ಕಲ್ಪವೃಕ್ಷ’ದಿಂದ ಪ್ರೇರಿತರಾದವರು ತಾವೂ ಕಟ್ಲೆರಿ ಬ್ಯಾಂಕ್ ಪ್ರಾರಂಭಿಸುವ ಹುಮ್ಮಸ್ಸಿನಲ್ಲಿದ್ದಾರೆ.

ಭೂಮಿಯನ್ನು ಇಂಚಿಂಚಾಗಿ ನುಂಗುವ ಏಕಬಳಕೆಯ ಪ್ಲಾಸ್ಟಿಕ್ ತಿರಸ್ಕರಿಸುವ ಕಿಚ್ಚು ಹೊತ್ತಿದೆ.‌ ಅಲ್ಲಲ್ಲಿ ಪರಿವರ್ತನೆಯ ಗಾಳಿ ಹರಡಿದೆ. ಮೂಡುಬಿದಿರೆಯ ಗೋಪಾಲಕೃಷ್ಣ ದೇವಾಲಯದಲ್ಲಿ ಪ್ಲಾಸ್ಟಿಕ್ ಚೀಲಗಳಿಗೆ ಬದಲಾಗಿ ರವಿಕೆ‌ ಕಣದ ಚೀಲ ತಯಾರಿಸಿ ಅದರಲ್ಲಿ ಪ್ರಸಾದ ಹಾಕಿ ಕೊಡುವ ಕ್ರಮ ಜಾರಿಗೆ ಬಂದಿದೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳಲ್ಲಿ ಈ ವರ್ಷದ ತಿರುಗಾಟದಲ್ಲಿ ಕಲಾವಿದರು ಪ್ಲಾಸ್ಟಿಕ್ ನೀರಿನ ಬಾಟಲಿ ಬಳಸುವುದನ್ನು ನಿಯಂತ್ರಿಸಲು ನಿರ್ಧಾರವಾಗಿದೆ. ಇದಕ್ಕೆ ಪೂರಕವಾಗಿ ದಾನಿಯೊಬ್ಬರು ಕಲಾವಿದರಿಗೆ ಸ್ಟೀಲ್ ಫ್ಲಾಸ್ಕ್‌ಗಳನ್ನು ಒದಗಿಸಿದ್ದಾರೆ. ಇಂತಹ ಬೆಳವಣಿಗೆಗಳು ಆಶಾಭಾವ ಮೂಡಿಸಿವೆ.

‘ನಾವು ಪರಿಸರಕ್ಕೆ ಪೂರಕವಾದ ಏನಾದರೂ ರಚನಾತ್ಮಕ ಕೆಲಸ ಮಾಡಬೇಕು ಎನ್ನುವ ಹಂಬಲವಿದೆ. ಆದರೆ ಏಕಾಂಗಿ ಏನು ಮಾಡಲು ಸಾಧ್ಯ’ ಎಂದು ಕೇಳುವವರಿಗೆ ಸಂಧ್ಯಾ ಮಾದರಿಯಾಗಿದ್ದಾರೆ.

ಉಪನ್ಯಾಸವೇ ಪ್ರೇರಣೆ

ಜೈನ್ ಪಿಯು ಕಾಲೇಜಿನಲ್ಲಿ ಇಕೊ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್ ಮುಕ್ತ ಕ್ಯಾಂಪಸ್ ಉಪನ್ಯಾಸ ಕಾರ್ಯಕ್ರಮವು ಈ ‘ಕಟ್ಲೆರಿ ಬ್ಯಾಂಕ್’ ಸ್ಥಾಪನೆಗೆ ಮೂಲ ಪ್ರೇರಣೆ. ಬೆಂಗಳೂರಿನ ವೇದನ್ ಟ್ರಸ್ಟ್‌ನ ಸುಹಾಸಿನಿ ಅವರ ಮನತಟ್ಟಿದ ಮಾತುಗಳಿಂದ ಇವೆಲ್ಲ ಸಾಧ್ಯವಾಯಿತು ಎಂದು ಇದೇ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಧ್ಯಾ ಸ್ಮರಿಸಿಕೊಳ್ಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.