ADVERTISEMENT

ಮಾನವೀಯತೆಗೆ ಮಂಪರು? ಶೋಕಿಗಾಗಿ ಈ ‘ದಂಧೆ’ಗೆ ಇಳಿದವರಲ್ಲ...

ಸುಬ್ರಹ್ಮಣ್ಯ ಎಚ್.ಎಂ
Published 11 ಸೆಪ್ಟೆಂಬರ್ 2019, 4:52 IST
Last Updated 11 ಸೆಪ್ಟೆಂಬರ್ 2019, 4:52 IST
   

ಇವರ‍್ಯಾರೂ ಶೋಕಿಗಾಗಿ ಈ ‘ದಂಧೆ’ಗೆ ಇಳಿದವರಲ್ಲ. ಪ್ರೇಮ ವೈಫಲ್ಯ, ಮಾನವ ಕಳ್ಳಸಾಗಣೆ, ಪತಿ, ಮಕ್ಕಳನ್ನು ಕಳೆದುಕೊಂಡು ಅನಿವಾರ್ಯವಾಗಿ ಈ ಜಾಲಕ್ಕೆ ಸಿಲುಕಿದವರು. ಕರುಳು ಹಿಂಡುವ ಕಹಿ ಘಟನೆಗಳು ಇವರ ಬದುಕನ್ನು ಛಿದ್ರ ಮಾಡಿವೆ. ಸಮಸ್ಯೆ ಹಳತಾದರೂ ದೌರ್ಜನ್ಯ ಹೊಸರೂಪ ತಾಳಿದೆ. ಕಾನೂನು, ಮಾನವೀಯತೆ ಕಣ್ಣುಗಳಿಗೆ ಮಂಪರು ಕವಿದಿದೆ ಎನ್ನುವ ಹತಾಶೆ ಇವರದ್ದು.

ನಗರದ ಉಪ್ಪಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈಚೆಗೆ ಲೈಂಗಿಕ ಕಾರ್ಯಕರ್ತೆಯರ ಮೇಲೆ ಪೊಲೀಸ್‌ ದೌರ್ಜನ್ಯ ನಡೆದಿದೆ. ಕಣ್ಣಿಗೆ ಖಾರದ ಪುಡಿ ಎರಚಿ ಮಹಿಳಾ ಪೊಲೀಸರು ವಿಕೃತಿ ಮೆರೆದಿದ್ದಾರೆ. ಕಾಲು, ಕೈ ಮೂಳೆ ಮುರಿಸಿಕೊಂಡು ಸ್ವಾಧೀನ ಕಳೆದುಕೊಂಡ ಇವರ ಒಡಲ ಯಾತನೆ ಕಥೆಗಳಿಗೆ ಲೆಕ್ಕವೇ ಇಲ್ಲ. ಪ್ರತಿ ಘಟನೆಯೂ ಮಹಿಳೆಯರ ಘನತೆಗೆ ಕುಂದು ಉಂಟು ಮಾಡಿರುವ ಆರೋಪ ಕೇಳಿ ಬಂದಿದೆ.

ಗೌರಮ್ಮನ ಕರುಳ ಸಂಕಟ (ಎಲ್ಲರ ಹೆಸರು ಬದಲಾಯಿಸಲಾಗಿದೆ): ‘ಮದುವೆ ಆಗಿ ಒಂದು ವರ್ಷಕ್ಕೆ ಪತಿಯೇ ಈ ‘ದಂಧೆ’ಗೆ ನೂಕಿದ. ಒಂಬತ್ತು ಮಂದಿ ಮಕ್ಕಳನ್ನು ಸಾಕಲು ಇದು ಅನಿವಾರ್ಯವಾಯಿತು. 60 ವರ್ಷದ ಈ ವಯಸ್ಸಿನಲ್ಲಿ ‘ದಂಧೆ’ ನಡೆಸಲು ಆಗೋದಿಲ್ಲ. ಆದರೆ, ಹೊಟ್ಟೆಪಾಡು ಕೇಳಬೇಕಲ್ಲ ? ಒಂದು ವಾರದ ಹಿಂದೆ ಅನುಪಮಾ ಟಾಕೀಸ್‌ ಸಮೀಪ ‘ಓಬವ್ವ ಪಡೆ’ಯ ಮಹಿಳಾ ಪೊಲೀಸರು ಸಾರ್ವಜನಿಕವಾಗಿ ಅಟ್ಟಿಸಿಕೊಂಡು ಬಂದಾಗ ಬಿದ್ದು ಕಾಲು ಮುರಿದುಕೊಂಡೆ. ಈ ಹಿಂದೆ ಪೊಲೀಸರು ಬಂಧಿಸಿದಾಗ ಕಣ್ಣಿಗೆ ಖಾರದ ಪುಡಿ ಹಾಕಿ ದೌರ್ಜನ್ಯ ಎಸಗಿದ್ದರು. ಮರ್ಮಾಂಗಕ್ಕೂ ಖಾರದ ಪುಡಿ ಸುರಿದು ವಿಕೃತಿ ಮೆರೆದಿದ್ದಾರೆ. ಕಾನೂನಿಗೆ ಕಣ್ಣಿಲ್ಲವೇ?’ ಎಂದು ಹನಿಗಣ್ಣಾದರು.

ADVERTISEMENT

ಜವಾಬ್ದಾರಿ ಹೊತ್ತ ಭಾಗ್ಯಲಕ್ಷ್ಮಿ: ಪತಿ ತೀರಿಕೊಂಡ ಮೇಲೆ ಮೂವರು ಹೆಣ್ಣು ಮಕ್ಕಳು, ಅತ್ತೆ–ಮಾವ ನೋಡಿಕೊಳ್ಳುವ ಜವಾಬ್ದಾರಿ ಇವರ ಹೆಗಲೇರಿತು. ‘ಮೊದಲೆಲ್ಲಾ ಪೊಲೀಸರು ಬೈದು, ದಂಡ ಹಾಕಿ ಬಿಡೋರು. ‘ಓಬವ್ವ ‍‍ಪಡೆ’ ಅಸ್ತಿತ್ವಕ್ಕೆ ಬಂದ ಮೇಲೆ ಸಾರ್ವಜನಿಕವಾಗಿ ಹಿಗ್ಗಾಮುಗ್ಗಾ ಹೊಡೆದು ನಿಂದಿಸುತ್ತಾರೆ. ಕಳ್ಳರು, ದರೋಡೆಕೋರರ ರೀತಿ ಠಾಣೆಗೆ ಕರೆದೊಯ್ದು ಬೆರಳು, ಕಾಲುಗಳು ಸ್ವಾಧೀನ ಕಳೆದುಕೊಳ್ಳುವಂತೆ ಹೊಡೆಯುತ್ತಾರೆ. ಎಚ್ಐವಿ ಇಂಜಕ್ಷನ್‌ ಕೊಡುವುದಾಗಿ ಬೆದರಿಕೆ ಹಾಕಿ ಹಣ ಕೀಳುತ್ತಾರೆ. ಪ್ರೀತಿ – ವಿಶ್ವಾಸದಿಂದ ಯಾರಾದರೂ ಕರೆದರೆ ಹೋಗ್ತೀವಿ. ಯಾರನ್ನು ಕೂಡ ಬಲವಂತ ಮಾಡೋದಿಲ್ಲ’ ಎಂದು ಭಾಗ್ಯಲಕ್ಷ್ಮಿ ಬಿಕ್ಕಳಿಸುತ್ತಲೇ ಸೀರೆ ಸೆರಗಿನಲ್ಲಿ ಕಣ್ಣೀರು ಒರೆಸಿಕೊಳ್ಳುತ್ತಾ ಮೌನರಾದರು.

ಕಾನೂನು ಮಾತನಾಡಿದರೆ ಲಾಠಿ ಏಟು: ಸುಲೋಚನಾ ಈ ಹಿಂದೆ ಚೀಟಿ ವ್ಯವಹಾರದಲ್ಲಿ, ವಿವಿಧ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದವರು. ಈ ನಡುವೆ ‍ಗಂಡ ಬಿಟ್ಟು ಹೋದರು. ಬದುಕಿಗೆ ‘ಸಂಗಾತಿ’ಯೊಬ್ಬರು ಜೊತೆಯಾದರು. ಅನಾರೋಗ್ಯದ ಕಾರಣ ಅವರು ಕೂಡ ತೀರಿ ಹೋದರು. ಇದ್ದ ಬಬ್ಬ ಮಗಳನ್ನು ಸಾಕಲು ಈ ‘ದಂಧೆ’ಗೆ ಇಳಿದರು. ‘ಯಾವುದೋ ಹೋಟೆಲ್‌, ಲಾಡ್ಜ್‌ನಲ್ಲಿ ಈ ‘ದಂಧೆ’ ನಡೆಸೋದಿಲ್ಲ. ಬೀದಿಯಲ್ಲಿ ನಿಂತೇ ಇದನ್ನು ಮಾಡಬೇಕು. ದಿನಕ್ಕೆ ಇನ್ನೂರು, ಐದನೂರೋ ಸಿಕ್ಕರೆ ಅದೇ ದೊಡ್ಡ ದುಡಿಮೆ. ಠಾಣೆಗೆ ಕರೆದೊಯ್ದು ಸರ, ಕಿವಿಯೋಲೆ ಬಿಚ್ಚಿಸುತ್ತಾರೆ. ದಂಡ ಕಟ್ಟಿಸಿಕೊಂಡು ರಶೀದಿ ಕೊಡೋದಿಲ್ಲ. ಕಾನೂನು ಮಾತನಾಡಿದರೆ ಬಟ್ಟೆ ಬಿಚ್ಚಿಸಿ ಲಾಠಿಯಿಂದ ಮನಸೋಇಚ್ಛೆ ಹಲ್ಲೆ ನಡೆಸುತ್ತಾರೆ’ ಹೊಟ್ಟೆಪಾಡಿಗೆ ಈ ‘ದಂಧೆ’ ನಡೆಸುವುದು ನಿಜ. ಆದರೆ, ಈ ದೌರ್ಜನ್ಯಕ್ಕೆ ಕೊನೆಯೇ ಇಲ್ಲವೆ ಎಂದು ಪ್ರಶ್ನಿಸುತ್ತಾರೆ ಸುಲೋಚನಾ.

ಸಾಮಾಜಿಕ ಕಾರ್ಯಕರ್ತೆ ಸಂಜನಾ: ಮೆಜೆಸ್ಟಿಕ್ ಸುತ್ತಮುತ್ತ ಪ್ರದೇಶದ ಲೈಂಗಿಕ ಕಾರ್ಯಕರ್ತೆಯರಲ್ಲಿ ಆರೋಗ್ಯ ಅರಿವು ಮೂಡಿಸುವ ಸಂಜನಾ ‘ಸಾಧನಾ’ ಸಂಘದ ಸದಸ್ಯೆ. ‘ಈಚೆಗೆ ಈ ‘ದಂಧೆ’ಯಲ್ಲಿದ್ದ ಆಂಧ್ರಪ್ರದೇಶ ಮೂಲದ ಮಹಿಳೆಯೊಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ತಪಾಸಣೆಗೆಂದು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಓಬವ್ವ ಪಡೆಯ ಸಿಬ್ಬಂದಿ ಬಲವಂತವಾಗಿ ಠಾಣೆಗೆ ಕರೆದೊಯ್ದರು. ಸಂಘದ ಗುರುತಿನ ಚೀಟಿ ತೋರಿಸಿದರೂ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದರು’ ಎಂದು ಮೊಣಕಾಲು ಗಾಯ ತೋರಿಸುತ್ತಾ ಕಣ್ಣೀರಿಟ್ಟರು.

ಅಲ್ಲೇ ಪಕ್ಕದಲ್ಲಿ ಕುಳಿತಿದ್ದ ಮಾಯಾ, ಕಣ್ಣಿನ ಗಾಯ ತೋರಿಸಿ ಮಮ್ಮಲ ಮರುಗಿದರು. ಇದೆಲ್ಲಾ ನಿತ್ಯದ ಗೋಳು ಎಂದು ‘ಸಾಧನಾ’ ಸಂಘದ ಕಾರ್ಯದರ್ಶಿ ಪುಷ್ಪಲತಾ ‍ಪೊಲೀಸ್‌ ದೌರ್ಜನ್ಯ ವಿರುದ್ಧ ಆಕ್ರೋಶದ ನುಡಿಗಳನ್ನಾಡಿದರು.

‘ಪೊಲೀಸ್ ದೌರ್ಜನ್ಯಕ್ಕೆ ಒಳಗಾದ ಎಲ್ಲಾ ಮಹಿಳೆಯರು ಸಾಧನಾ ಸಂಘದ ಸದಸ್ಯರು. ಲೈಂಗಿಕ ವೃತ್ತಿ ನಡೆಸುವ ಮಹಿಳೆಯರಲ್ಲಿ ಆರೋಗ್ಯದ ಅರಿವು ಮೂಡಿಸುವ ಜವಾಬ್ದಾರಿ ಹೊತ್ತವರು. ಕಳೆದ 20 ವರ್ಷದಿಂದ ಪೊಲೀಸ್ ದೌರ್ಜನ್ಯ, ರೌಡಿಗಳ ಅಟ್ಟಹಾಸದ ವಿರುದ್ಧ ‘ಸಾಧನಾ’ ಸಂಘಟನೆಯು ಪರ್ಯಾಯ ಕಾನೂನು ವೇದಿಕೆ, ಪಿಯುಸಿಎಲ್‌, ಜನಸಹಯೋಗ ನೇತೃತ್ವದಲ್ಲಿ ಹೋರಾಟ ನಡೆಸುತ್ತಾ ಬಂದಿದೆ. ಲೈಂಗಿಕ ಕಾರ್ಯಕರ್ತೆಯರ ಮಕ್ಕಳ ಶಿಕ್ಷಣಕ್ಕಾಗಿಯೂ ದುಡಿಯುತ್ತಿದೆ. ಸಂಘದ ನೆರವಿನಿಂದ ಎಷ್ಟೋ ಮಕ್ಕಳು ಓದಿ ಎಂಜಿನಿಯರ್‌, ವಕೀಲರು, ಶಿಕ್ಷಕರಾಗಿದ್ದಾರೆ. ಲೈಂಗಿಕ ಕಾರ್ಯಕರ್ತೆಯರು ಬದಲಾಗಬಾರದಾ? ನಾಯಕತ್ವ ಬೆಳೆಸಿಕೊಳ್ಳಬಾರದಾ? ಸಂಘಟಿತರಾಗುವುದು ತಪ್ಪೇ’ ಎಂದು ಪ್ರಶ್ನಿಸುತ್ತಾರೆ ಸಂಘದ ಅಧ್ಯಕ್ಷೆ ಮೈತ್ರೇಯಿ.

ಇದೊಂದು ಸಾಮಾಜಿಕ ವಿಷಯ

ಸಂಜೆ 7ರ ನಂತರ ಮಹಿಳೆಯರನ್ನು ಠಾಣೆಯಲ್ಲಿ ಇರಿಸಿಕೊಳ್ಳುವಂತಿಲ್ಲ. ಈ ಅಸಹಾಯಕ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ‍ಮೇಲಧಿಕಾರಿಗಳು ಗಮನಿಸಬೇಕು. ಮಹಿಳಾ ಆಯೋಗ, ಮಾನವ ಹಕ್ಕುಗಳ ಆಯೋಗದ ಸದಸ್ಯರು ಠಾಣೆಗಳಿಗೆ ಭೇಟಿ ನೀಡಿ ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಬೇಕು. ಭಯದ ವಾತಾವರಣ ಸೃಷ್ಟಿಸುವುದು ಪೊಲೀಸ್‌ ಕೆಲಸವಲ್ಲ. ಸುಳ್ಳು ಕೇಸು ಹಾಕುವುದು ಅನ್ಯಾಯ, ಅನೀತಿ ಎನ್ನುವುದು ಪ್ರೊ. ವೈ.ಜೆ ರಾಜೇಂದ್ರ ಅವರ ಅಭಿಪ್ರಾಯ.

ವೇಶ್ಯಾವಾಟಿಕೆ ಅಪರಾಧ ಅಲ್ಲ ಎಂದು ಸುಪ್ರೀಂಕೋರ್ಟ್‌ ಕೂಡ ಹೇಳಿದೆ. ಈ ‘ದಂಧೆ’ ನಿಲ್ಲಿಸಲು ಸಾಧ್ಯವಿಲ್ಲ. ಇದೊಂದು ಸಾಮಾಜಿಕ ವಿಷಯ. ಕಾನೂನಾತ್ಮಕವಾಗಿ ನೋಡಬೇಕು. ಸಾರ್ವಜನಿಕವಾಗಿ ಹಲ್ಲೆ, ನಿಂದನೆ ಮತ್ತು ಅವಮಾನ ಮಾಡುವುದು ಸರಿಯಲ್ಲ. ಪೊಲೀಸರಿಗೆ ಲಿಂಗ ತಾರತಮ್ಮದ ಬಗ್ಗೆ ಅರಿವು ಮೂಡಿಸುತ್ತಿದ್ದರೂ ಇಂತಹ ಪ್ರಕರಣ‌ಗಳು ಬೆಳಕಿಗೆ ಬರುತ್ತಲೇ ಇವೆ. ಇದು ಸಂವಿಧಾನ ಉಲ್ಲಂಘನೆ ಎಂದು ಮಾನವ ಹಕ್ಕುಗಳ ಹೋರಾಟಗಾರರಾದ ಮಧು ಭೂಷಣ್‌ ಮತ್ತು ಕಾನೂನು ತಜ್ಞ ಅರವಿಂದ್ ನಾರಾಯಣ್‌ ಅಭಿಪ್ರಾಯಪಡುತ್ತಾರೆ.

***

ಕಾನೂನು ಆಶಯಕ್ಕೆ ತಕ್ಕಂತೆ ಕೆಲಸ

ಲೈಂಗಿಕ ಕಾರ್ಯಕರ್ತೆಯರ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣ ಗಮನಕ್ಕೆ ಬಂದಿಲ್ಲ. ಮಾಹಿತಿ ‍ಪಡೆದು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸಮಾಜದ ಎಲ್ಲ ವರ್ಗದ ಜನರ ಯೋಗಕ್ಷೇಮವೇ ಕಾನೂನಿನ ಆಶಯ. ಈ ನಿಟ್ಟಿನಲ್ಲಿ ಪೊಲೀಸರು ಕರ್ತವ್ಯ ನಿರತರಾಗಿದ್ದಾರೆ.

ಉಮೇಶ್‌ ಕುಮಾರ್, ಬೆಂಗಳೂರು ಹೆಚ್ಚುವರಿಪೊಲೀಸ್‌ ಕಮಿಷನರ್‌

***

ಕಾನೂನಿನಡಿ ಎಲ್ಲರೂ ಸಮಾನರು

ನಗರ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷದಿಂದ ಲೈಂಗಿಕ ‘ದಂಧೆ’ಗೆ ಕಡಿವಾಣ ಹಾಕಲಾಗಿದೆ. ಬೆಳಕಿಗೆ ಬರುವ ಪ್ರಕರಣ‌ಗಳ ವಿರುದ್ಧ ಕಾನೂನಾತ್ಮಕವಾಗಿ ಕ್ರಮ ಜರುಗಿಸಲಾಗುವುದು. ಉ‍ಪ್ಪಾರಪೇಟೆ ಪೊಲೀಸ್ ಠಾಣೆ ವ್ಯಾ‍ಪ್ತಿಯಲ್ಲಿ ಲೈಂಗಿಕ ಕಾರ್ಯಕರ್ತೆಯರ ಮೇಲೆ ಮಾನಸಿಕ ಹಾಗೂ ದೈಹಿಕವಾಗಿ ನಡೆದಿರುವ ಪೊಲೀಸ್‌ ದೌರ್ಜನ್ಯ ವಿರುದ್ಧ ಇದುವರೆಗೂ ದೂರು ದಾಖಲಾಗಿಲ್ಲ. ಈ ಸಂಬಂಧ ಪರಿಶೀಲನೆ ನಡೆಸಿ ಕ್ರಮ ಕ್ರಮಗೊಳ್ಳಲಾಗುವುದು.

‘ಓಬವ್ವಪಡೆ’ ಮಹಿಳೆಯರ ರಕ್ಷಣೆಗೆ ಬದ್ಧವಾಗಿರುವ ತಂಡ. ಮಹಿಳೆಯರಿಗೆ ವಂಚನೆ, ಕಿರುಕುಳದಂತಹ ಪ್ರಕರಣಗಳನ್ನು ಹತ್ತಿಕ್ಕಲು ಈ ತಂಡ ನೆರವಾಗುತ್ತಿದೆ. ಲೈಂಗಿಕ ಕಾರ್ಯಕರ್ತೆಯರ ಮೇಲೆ ಯಾರು ಕೂಡ ದೌರ್ಜನ್ಯ ಎಸಗಿಲ್ಲ. ಅಂತಹ ಪ್ರಕರಣಗಳು ಗಮನಕ್ಕೆ ಬಂದರೆ ಕ್ರಮ ಜರುಗಿಸಲಾಗುವುದು. ಕಾನೂನಿನಡಿ ಎಲ್ಲರೂ ಸಮಾನರೇ.

ಬಿ.ರಮೇಶ್‌ –ಡಿಸಿಪಿ, ‍‍ಬೆಂಗಳೂರು ಪಶ್ಚಿಮ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.