
ಬೆಳಗಾವಿ ಹೊರವಲಯದ ಬಾಮನವಾಡಿಯ ಶಾಂತಾಯಿ ವೃದ್ಧಾಶ್ರಮದಲ್ಲಿ ಹಿರಿಯ ಜೀವಗಳ ಖುಷಿಯ ಕ್ಷಣ ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ವೃದ್ಧಾಶ್ರಮಗಳು ಅಂದರೆ ಬರೀ ಯಾತನೆ, ಕಣ್ಣೀರು, ಖಿನ್ನತೆಯ ತಾಣಗಳು ಎನ್ನುವುದು ಸಾಮಾನ್ಯ ಮಾತು. ಜೀವನದಲ್ಲಿ ದಿಕ್ಕೇ ಕಾಣದ ಹಿರಿಯ ಜೀವಗಳ ಬಳಿ ಕೊನೆಗೆ ಉಳಿಯುವುದು ಇಷ್ಟೆ. ಆದರೆ, ಬೆಳಗಾವಿಯ ಶಾಂತಾಯಿ ವೃದ್ಧಾಶ್ರಮ ಮಾತ್ರ ಇದಕ್ಕೆ ಭಿನ್ನವಾಗಿದೆ. ಇಲ್ಲಿ ನೋವು ಮರೆಯಾಗುತ್ತದೆ, ನಲಿವು ನಲಿದಾಡುತ್ತದೆ. ಜೀವನೋತ್ಸಾಹ ಪುಟಿಯುತ್ತದೆ...
****
ಅದು ಮುಂಬೈನ ವರ್ಣರಂಜಿತ ಸ್ಟುಡಿಯೊ. ಹಳದಿ–ಕೆಂಪು ಬಣ್ಣದ ಸೀರೆಯುಟ್ಟ ಆರು ಸ್ಪರ್ಧಿಗಳು ನಗುಮೊಗದಿಂದಲೇ ಅಲ್ಲಿಗೆ ಎಂಟ್ರಿ ಕೊಟ್ಟರು. ಸ್ಟೈಲಿಷ್ ಕನ್ನಡಕ ಧರಿಸಿ, ‘ಪ್ಯಾರ್ ಕಿಯಾ ಥೋ ಢರ್‌ನಾ ಕ್ಯಾ...’, ‘ಕಾಲಾ..ಕಾಲಾ ಚಷ್ಮಾ...’, ‘ತೌಬಾ... ತೌಬಾ...’ ಎಂಬ ಗೀತೆಗಳಿಗೆ ಉತ್ಸಾಹದಿಂದ ಹೆಜ್ಜೆ ಹಾಕಿದರು. ಇಷ್ಟೇ ಅಲ್ಲದೇ, ತಾವು ತಂದಿದ್ದ ಸೀರೆಯನ್ನು ಬಾಲಿವುಡ್ ನಟಿ ಮಲೈಕಾ ಅರೋರಾ ಅವರಿಗೆ ಉಡುಗೊರೆಯಾಗಿ ಕೊಟ್ಟು ಸಂಭ್ರಮಿಸಿದರು. ಅವರ ಪ್ರದರ್ಶನಕ್ಕೆ ಮನಸೋತ ತೀರ್ಪುಗಾರರು, ಈ ತಂಡಕ್ಕೆ ‘ಬೆಳಗಾವಿ ಬ್ಯೂಟೀಸ್’ ಎಂದು ಬಿರುದು ಕೊಟ್ಟರು.
ಅಷ್ಟಕ್ಕೂ ಇಂಥದ್ದೊಂದು ಪ್ರದರ್ಶನ ನೀಡಿದ್ದು ನುರಿತ ಕಲಾವಿದರ ತಂಡವೋ, ವಿದ್ಯಾರ್ಥಿಗಳೋ ಅಲ್ಲ. ತಮ್ಮ ಜೀವನದ ಇಳಿಸಂಜೆಯ ದಿನಗಳನ್ನು ಸಂತಸದಿಂದ ಕಳೆಯುತ್ತಿರುವ ಬೆಳಗಾವಿಯ ‘ಶಾಂತಾಯಿ ವೃದ್ಧಾಶ್ರಮ’ದ ಮಾಗಿದ ಜೀವಗಳು!
ಹಿಂದಿ ವಾಹಿನಿಯಲ್ಲಿ ಪ್ರಸಾರವಾಗುವ ‘ಇಂಡಿಯಾಸ್ ಗಾಟ್ ಟ್ಯಾಲೆಂಟ್’ ರಿಯಾಲಿಟಿ ಷೋಗಾಗಿ ಆನ್‌ಲೈನ್‌ನಲ್ಲಿ ನಡೆದ ಮೂರು ಆಡಿಷನ್‌ನಲ್ಲಿ ಆಯೋಜಕರ ಮನಗೆದ್ದ ಇವರು, 2025ರ ನವೆಂಬರ್‌ನಲ್ಲಿ ನಡೆದ ಷೋನ ಮೊದಲ ಸುತ್ತಿನಲ್ಲಿ ಭಾಗವಹಿಸಲು ಅರ್ಹತೆ ಪಡೆದರು.
‘ಈಗ ನಿಮ್ಮ ವಯಸ್ಸು ಎಷ್ಟು’ ಎಂದು ತೀರ್ಪುಗಾರರೊಬ್ಬರ ಪ್ರಶ್ನೆಗೆ, ‘ಇಲ್ಲಿ ನಿಂತಿರುವ ನಮಗೀಗ 69 ರಿಂದ 79 ವರ್ಷ ವಯಸ್ಸು. ಆದರೆ, ಹದಿನೆಂಟರ ಮನಸ್ಸು’ ಎಂದಾಗ ಚಪ್ಪಾಳೆಗಳು ಭೋರ್ಗರೆದವು. ಇಳಿವಯಸ್ಸಿನ ಮಹಿಳೆಯರು ಮೂರು ಗೀತೆಗಳಿಗೆ ಖುಷಿಯಿಂದ ಕುಣಿದರು. ಅನುಕಂಪವಲ್ಲ, ತಮ್ಮ ಪ್ರತಿಭೆಯಿಂದಲೇ ತೀರ್ಪುಗಾರರು ಮತ್ತು ವೀಕ್ಷಕರನ್ನು ಸೆಳೆದು, ಮುಂದಿನ ಸುತ್ತಿಗೆ ಅರ್ಹತೆ ಪಡೆದರು.
ಅರೇ ಇದೇನಿದು, ‘ಇಳಿ ವಯಸ್ಸಿನವರು’ ನೃತ್ಯ ಮಾಡುತ್ತಾರಾ ಎಂದು ನೀವು ಹುಬ್ಬೇರಿಸಬಹುದು. ಆದರೆ, ಇದು ನಿಜ. ವೃದ್ಧಾಶ್ರಮದಲ್ಲಿ ಇರುವ ನಲವತ್ತು ಮಂದಿಗೆ ಆಶ್ರಯವನ್ನಷ್ಟೇ ಕಲ್ಪಿಸಿಲ್ಲ. ಬದಲಿಗೆ ವಿವಿಧ ಚಟುವಟಿಕೆಗಳ ಮೂಲಕ ಅವರಲ್ಲಿ ಜೀವನೋತ್ಸಾಹ ತುಂಬಲಾಗುತ್ತಿದೆ. ಇನ್ನೇನು ತಮ್ಮ ಬದುಕೇ ಮುಗಿಯಿತು ಎಂದು ಇಲ್ಲಿಗೆ ಬಂದವರು, ‘ಇನ್ನಷ್ಟು ದಿನ ಖುಷಿಯಿಂದ ಬಾಳಬೇಕು’ ಎನ್ನುತ್ತಿದ್ದಾರೆ.
ಇದೇ ಆಶ್ರಮದ ಏಳು ಮಂದಿ ವೃದ್ಧೆಯರು 2024ರ ಡಿಸೆಂಬರ್‌ನಲ್ಲಿ ನಡೆದ ಹಿಂದಿಯ ‘ಸರೆಗಮಪ’ ರಿಯಾಲಿಟಿ ಷೋನಲ್ಲೂ ಅತಿಥಿಗಳಾಗಿ ಪಾಲ್ಗೊಂಡು, ‘ಟಿಪ್ ಟಿಪ್ ಬರಸಾ ಪಾನಿ...’ ಹಾಡಿಗೆ ಕುಣಿದು ಸಂಭ್ರಮಿಸಿದರು.
ಎಂಬಿಎ ಓದಿರುವ, ಆಶ್ರಮದ ಕಾರ್ಯಾಧ್ಯಕ್ಷ ವಿಜಯ ಮೋರೆ ಅವರ ಪುತ್ರಿ ಶೆರಿಲ್ ಮೋರೆ, ನಿತ್ಯ ಬಿಡುವಿನ ಸಮಯದಲ್ಲೆಲ್ಲ ಆಶ್ರಮದಲ್ಲಿರುವ ಹಿರಿಯರಿಗೆ ಹಾಡು, ನೃತ್ಯ ಕಲಿಸುತ್ತಿದ್ದಾರೆ.
‘ರಿಯಾಲಿಟಿ ಷೋಗಾಗಿ ಒಂದು ವಾರ ಮುಂಬೈನಲ್ಲೇ ಇದ್ದು, ಹಿರಿಯರು ಪ್ರದರ್ಶನ ನೀಡಿದರು. ಇದಕ್ಕಾಗಿ ಒಂದು ತಿಂಗಳು ತಯಾರಿ ನಡೆಸಿದ್ದೆವು. ಕೆಲವು ಅಜ್ಜಿಯರು ತಯಾರಿಗೆ ಬೇಗ ಸ್ಪಂದಿಸುತ್ತಾರೆ. ಇನ್ನೂ ಕೆಲವರು ಬೇರೆ ಸ್ಟೆಪ್ಸ್ ಬೇಕು ಎನ್ನುತ್ತಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಖುಷಿಯಿಂದಲೇ ನೃತ್ಯ, ಗಾಯನ ಮತ್ತು ಅಭಿನಯ ಕಲಿಸುತ್ತೇನೆ’ ಎನ್ನುತ್ತಾರೆ ಶೆರಿಲ್.
‘ನಾನು ಅವಿವಾಹಿತೆ. ಬದುಕಿನಲ್ಲಿ ಎದುರಾದ ಹಲವು ಕಷ್ಟಗಳಿಗೆ ಸೋತು, ನಾಲ್ಕು ವರ್ಷಗಳ ಹಿಂದೆ ಆಶ್ರಮ ಸೇರಿದೆ. ಇಲ್ಲಿ ಸಂತಸದತ್ತ ಬದುಕು ವಾಲಿತು. ಮೊದಲು ಚಿಕ್ಕ ಕುಟುಂಬದಲ್ಲಿದ್ದೆ. ಈಗ ದೊಡ್ಡ ಕುಟುಂಬದಲ್ಲಿ
ದ್ದೇನೆ. ಗಾಯನ, ನೃತ್ಯ ಕಲಿತಿದ್ದೇನೆ. ರಿಯಾಲಿಟಿ ಷೋನಲ್ಲೂ ನೃತ್ಯ ಮಾಡಿದ್ದೇನೆ. ಇದಕ್ಕಿಂತ ಖುಷಿ ಇನ್ನೇನಿದೆ’ ಎಂದು ಶಕುಂತಲಾ ಶಿಂಧೆ ಹೇಳುತ್ತಲೇ ಭಾವುಕರಾದರು.
‘ಇಂಡಿಯಾಸ್ ಗಾಟ್ ಟ್ಯಾಲೆಂಟ್ ರಿಯಾಲಿಟಿ ಷೋನಲ್ಲಿ ದೇಶದ ವಿವಿಧ ಕಡೆಗಳ ಸ್ಪರ್ಧಿಗಳು ಭಾಗವಹಿಸಿದ್ದರು. ಅದರಲ್ಲಿ ಭಾಗವಹಿಸುವ ಅವಕಾಶ ನಮಗೆ ದಕ್ಕಿತು. ಒಂದು ವಾರ ಮುಂಬೈನಲ್ಲೇ ಉಳಿದುಕೊಂಡು, ಕಾರ್ಯಕ್ರಮ ಕೊಟ್ಟೆವು. ಈಗಲೂ ಸುಮ್ಮನೇನೂ ಕುಳಿತಿಲ್ಲ. ಆಗಾಗ ನೃತ್ಯ ಮಾಡುತ್ತೇವೆ. ಹಾಡು ಹಾಡುತ್ತೇವೆ. ರೀಲ್‌ಗಳಲ್ಲಿ ಮಿಂಚುತ್ತೇವೆ’ ಎನ್ನುತ್ತ ಪುಷ್ಪಾ ಮಿರಜಕರ ನಕ್ಕರು.
ಸಾಮಾನ್ಯವಾಗಿ ಯಾವುದೇ ವೃದ್ಧಾಶ್ರಮಕ್ಕೆ ಕಾಲಿಟ್ಟಾಗ ನೋವಿನ ಕಥೆಗಳೇ ಕಿವಿಗೆ ಬೀಳುತ್ತವೆ, ತೆರೆದುಕೊಳ್ಳುತ್ತವೆ. ಆದರೆ, ಇಲ್ಲಿ ನಲಿವಿನ ಕಥೆಗಳು ಅನಾವರಣಗೊಳ್ಳುತ್ತವೆ.
ಹಿರಿಯರು ತಮ್ಮ ಕುಟುಂಬದವರಿಂದ ದೂರವಾಗಿದ್ದರೂ, ಅವರೆಲ್ಲ ಚೈತನ್ಯದ ಚಿಲುಮೆಯಂತಿದ್ದಾರೆ. ಎಂಥವರನ್ನೂ ಕ್ಷಣಮಾತ್ರದಲ್ಲೇ ಸೆಳೆಯಬಲ್ಲ ಜೀವನೋತ್ಸಾಹ ಅವರದ್ದು.
ಇಡೀ ದಿನ ಚಟುವಟಿಕೆಯಿಂದ ಇರುವುದರ ಜೊತೆಗೆ, ದೇಶದ ಪ್ರಮುಖ ಪ್ರವಾಸಿತಾಣಗಳಿಗೆ ಭೇಟಿ ನೀಡಿ ಅವುಗಳನ್ನು ಕಣ್ತುಂಬಿಕೊಳ್ಳುತ್ತಾರೆ. ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸುತ್ತಾರೆ. ಸರ್ಕಸ್ ಕೂಡ ನೋಡುತ್ತಾರೆ. ಮನರಂಜನಾ ಕಾರ್ಯಕ್ರಮಗಳನ್ನೆಲ್ಲ ಅನುಭವಿಸುತ್ತಾ ಖುಷಿಪಡುತ್ತಾರೆ.
ಎಲ್ಲ ಧರ್ಮದವರೂ...
‘ಅದು 1998ನೇ ಇಸ್ವಿ. ಬೆಳಗಾವಿಯಲ್ಲಿ ಒಂದೇ ವೃದ್ಧಾಶ್ರಮವಿತ್ತು. ಅಲ್ಲಿ ಒಂದೇ ಸಮುದಾಯದವರಿಗೆ ಮಾತ್ರ ಪ್ರವೇಶವಿತ್ತು. ಅದನ್ನು ನೋಡಿದಾಗ, ಕಷ್ಟದಲ್ಲಿರುವ ಬೇರೆ ಸಮುದಾಯದ ವೃದ್ಧರ ಗತಿ ಏನು? ಅಂಥವರೆಲ್ಲಿ ಆಶ್ರಯ ಪಡೆಯುತ್ತಾರೆ ಎಂಬೆಲ್ಲ ಪ್ರಶ್ನೆಗಳು ಸುಳಿದಾಡಿದವು. ತಡ ಮಾಡದೆ ಸ್ನೇಹಿತರಾದ ವಿಜಯ ಪಾಟೀಲ ಅವರ ಜಾಗದಲ್ಲೇ ವೃದ್ಧಾಶ್ರಮ ತೆರೆದೆವು. ವಿಜಯ ಅವರ ತಾಯಿ ಶಾಂತಾಯಿ ಹೆಸರನ್ನೇ ಇದಕ್ಕೆ ಇರಿಸಿದೆವು. ಈಗ ಬೇರೆ ಬೇರೆ ಸಮುದಾಯಗಳ ನಲವತ್ತು ಮಂದಿ ವೃದ್ಧರಿಗೆ ಇಲ್ಲಿ ಆಶ್ರಯ ಕಲ್ಪಿಸಿದ್ದೇವೆ’ ಎಂದು ವೃದ್ಧಾಶ್ರಮದ ಹುಟ್ಟಿನ ಬಗ್ಗೆ ಕಾರ್ಯಾಧ್ಯಕ್ಷ ವಿಜಯ ಮೋರೆ ಹೇಳಿದರು.
‘ಗಂಡು ಮಕ್ಕಳನ್ನು ಹೊಂದಿದ್ದು, ಸರ್ಕಾರಿ ನೌಕರಿಯಿಂದ ನಿವೃತ್ತಿ ಹೊಂದಿದ ಮತ್ತು ಆಸ್ತಿ–ಪಾಸ್ತಿ ಹೊಂದಿದ ಹಿರಿಯ ನಾಗರಿಕರಿಗೆ ನಮ್ಮಲ್ಲಿ ಪ್ರವೇಶವಿಲ್ಲ. ಬದುಕಿನಲ್ಲಿ ಆಸರೆಯೇ ಇಲ್ಲದವರಿಗಷ್ಟೇ ನೆರವಾಗಬೇಕು ಎಂಬುದು ನಮ್ಮ ಉದ್ದೇಶ’ ಎನ್ನುತ್ತಾರೆ ಅವರು.
ವರ್ಷಕ್ಕೆ ಎರಡು ಪ್ರವಾಸ
ದಾನಿಗಳ ನೆರವಿನಿಂದ ವರ್ಷಕ್ಕೆ ಎರಡು ಪ್ರವಾಸವನ್ನು ಆಯೋಜಿಸುತ್ತಾರೆ. ದೂರದ ಊರುಗಳಿಗೆ ಹೋಗಲು ದೈಹಿಕವಾಗಿ ಸದೃಢವಿರುವವರಿಗೆ ಮಹಾರಾಷ್ಟ್ರದ ಪಂಢರಪುರ, ಕೊಲ್ಹಾಪುರ, ಗೋವಾ, ಮತ್ತಿತರ ಕಡೆ ಕರೆದೊಯ್ಯುತ್ತಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸಮೀಪದಲ್ಲೇ ಇರುವ ತಾಣಗಳಿಗೆ ಒಂದು ದಿನದಲ್ಲಿ ಕರೆದುಕೊಂಡು ಹೋಗಿಬರುತ್ತಾರೆ.
‘ಸಂಜಯ ಗೋಡಾವತ್ ಗ್ರೂಪ್‌ನವರ ಪ್ರಾಯೋಜಕತ್ವದಲ್ಲಿ ಬೆಳಗಾವಿಯಿಂದ ಮುಂಬೈಗೆ ವಿಮಾನದಲ್ಲಿ ಮೂವತ್ತೆರಡು ಹಿರಿಯರು, ಸಿಬ್ಬಂದಿ ಸೇರಿ ನಲವತ್ತೈದು ಜನರು ಪ್ರವಾಸಕ್ಕೆ ಹೋಗಿದ್ದೆವು. ಮುಂಬೈನ ಉದ್ಯಮಿ ಅನಿಲ ಜೈನ್ ಅವರು, ಮುಂಬೈನಲ್ಲಿ ಆತಿಥ್ಯ ನೋಡಿಕೊಂಡರು. ತಾಜ್ ಹೋಟೆಲ್‌ಗೆ ಕರೆದೊಯ್ದು, ವಿವಿಐಪಿ ಆತಿಥ್ಯ ಕೊಟ್ಟರು. ಈ ವರ್ಷ ದಾನಿಗಳ ನೆರವಿನಿಂದಲೇ ವಿಮಾನದಲ್ಲಿ ಬೆಂಗಳೂರು ಪ್ರವಾಸಕ್ಕೆ ಕರೆದೊಯ್ಯಲು ಯೋಜಿಸಿದ್ದೇವೆ’ ಎನ್ನುತ್ತಾರೆ ವಿಜಯ ಮೋರೆ.
‘ನಾನು ಮೊದಲ ಬಾರಿ ವಿಮಾನವೇರಿ ಬೆಳಗಾವಿಯಿಂದ ಮುಂಬೈಗೆ ಹೋದೆ. ಅರಮನೆಯಂತಿದ್ದ ತಾಜ್ ಹೋಟೆಲ್‌ನಲ್ಲಿ ಉಪಾಹಾರ, ಊಟ ಮಾಡಿ ಬೀಗಿದೆ. ಗೇಟ್‌ವೇ ಆಫ್ ಇಂಡಿಯಾ, ಸಿದ್ಧಿವಿನಾಯಕ ಮಂದಿರ ಹೀಗೆ... ಒಂದಿಡೀ ವಾರ ಮುಂಬೈ ಸುತ್ತಾಡಿದೆ. ಅದೊಂಥರ ಖುಷಿಕೊಟ್ಟ ಗಳಿಗೆ’ ಎನ್ನುವಾಗ ಸುಧಾ ಕಾರೇಕರ ಸಂಭ್ರಮಕ್ಕೆ ಪಾರವೇ ಇರಲಿಲ್ಲ.
ಎರಡೂವರೆ ದಶಕದ ಹಿಂದೆ ಇಬ್ಬರೇ ಹಿರಿಯ ನಾಗರಿಕರಿಂದ ವೃದ್ಧಾಶ್ರಮ ಆರಂಭವಾಗಿತ್ತು. ಈಗ ಅಲ್ಲಿಗೆ ಬಂದು ಸೇರುವವರ ಸಂಖ್ಯೆ ಹೆಚ್ಚುತ್ತಿದೆ. ಸರ್ಕಾರದ ನೆರವಿಗೆ ಎಂದೂ ಕೈಚಾಚದ ಆಶ್ರಮ, ದಾನಿಗಳ ನೆರವಿನಿಂದಲೇ ಮುನ್ನಡೆಯುತ್ತಿದೆ. ಭಾರತ ಮಾತ್ರವಲ್ಲದೆ; ವಿದೇಶದಲ್ಲಿರುವ ದಾನಿಗಳೂ ಆರ್ಥಿಕ ನೆರವು ಒದಗಿಸುತ್ತಿದ್ದಾರೆ.
ನಿತ್ಯ ನೂರಾರು ಜನ ಭೇಟಿ ನೀಡುತ್ತಾರೆ. ತಮ್ಮ ಜನ್ಮದಿನ, ವಿವಾಹ ವಾರ್ಷಿಕೋತ್ಸವ ಮತ್ತು ಸಂಭ್ರಮದ ಕ್ಷಣಗಳನ್ನು ಹಿರಿಯರ ಮಧ್ಯೆಯೇ ಆಚರಿಸಿಕೊಂಡು, ಒಟ್ಟಾಗಿ ಭೋಜನ ಸವಿದು ಖುಷಿಪಡುತ್ತಾರೆ.
ಮೂರೇ ತಿಂಗಳಲ್ಲಿ ಆನಂದವಾಯ್ತು
‘ನನಗೆ ವಿವಾಹಿತ ಪುತ್ರಿ ಇದ್ದಾಳೆ. ಪತಿ ಕಾಣೆಯಾದ ಕಾರಣ ದಿಕ್ಕೇ ತೋಚದಂತಾಯಿತು. ಐದೂವರೆ ವರ್ಷದ ಹಿಂದೆ ಆಶ್ರಮಕ್ಕೆ ಬಂದು ಸೇರಿದೆ. ಆರಂಭದಲ್ಲೇ ಮನದಲ್ಲಿ ಸಾಕಷ್ಟು ದುಗುಡ ಇತ್ತು. ಬದುಕೇ ಮುಗಿಯಿತು ಅಂತನಿಸಿದ್ದು ಸುಳ್ಳಲ್ಲ. ಆದರೆ, ಇಲ್ಲಿಗೆ ಬಂದು ಸೇರಿದ ಮೂರೇ ತಿಂಗಳಲ್ಲಿ ಆನಂದವಾಯಿತು. ಈಗ ಮನೆ ನೆನಪಿಗೇ ಬರುತ್ತಿಲ್ಲ’ ಎಂದು ಲಕ್ಷ್ಮಿ ದೇಸಾಯಿ ಹೇಳುತ್ತ ಸಂತಸಪಟ್ಟರು.
‘ನಾನು ದಂತ ವೈದ್ಯರೊಬ್ಬರ ಬಳಿ ಕೆಲಸ ಮಾಡುತ್ತಿದ್ದೆ. ಗಂಡ ನನ್ನನ್ನು ತೊರೆದು, ಎರಡನೇ ಮದುವೆ ಮಾಡಿಕೊಂಡ. ಆಗ ಬದುಕೇ ನೆಲಕಚ್ಚಿದಂತಾಗಿತ್ತು. ಹದಿನೈದು ವರ್ಷಗಳ ಹಿಂದೆ ಆಶ್ರಮ ಸೇರಿದೆ. ಇಲ್ಲಿ ವಿಜಯ, ಅವರ ಪತ್ನಿ ಮರಿಯಾ ಹಾಗೂ ಇಬ್ಬರೂ ಮಕ್ಕಳು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಗಂಡನ ಜೊತೆಯಲ್ಲಿ ಇದ್ದದಕ್ಕಿಂತ ಹೆಚ್ಚು ಖುಷಿಯಿಂದ ಇದ್ದೇನೆ. ಮನೆಯಲ್ಲಿ ಇಷ್ಟೊಂದು ಪ್ರೀತಿ ಸಿಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ’ ಎಂದು ಭಾವುಕರಾದರು ವಿದ್ಯಾ ದಿವಾನ್.
ಪುಣೆ ಮಾದರಿಯಲ್ಲಿ ಆಶ್ರಮ
‘ಬದುಕಿನಲ್ಲಿ ದಿಕ್ಕಿಲ್ಲದವರಿಗೆ ನೆರವಾಗಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಬಾಮನವಾಡಿಯಲ್ಲಿ ಐದಾರು ಎಕರೆ ಜಾಗವೂ ಇತ್ತು. ಹಾಗಾಗಿ ಆಶ್ರಮ ತೆರೆದವು. ಅದಕ್ಕೂ ಮುನ್ನ, ಪುಣೆಯಲ್ಲಿರುವ ‘ನಿವಾರಾ’ ಆಶ್ರಮಕ್ಕೆ ಭೇಟಿ ನೀಡಿದ್ದೆವು. ಅದೇ ಮಾದರಿಯನ್ನು ಇಲ್ಲಿ ಅಳವಡಿಸಿದ್ದೇವೆ. ನಮ್ಮಲ್ಲಿ ಪ್ರವೇಶ ನೀಡುವ ಹಿರಿಯ ನಾಗರಿಕರಿಂದ ಬಿಡಿಗಾಸು ಪಡೆಯುವುದಿಲ್ಲ. ಉದ್ಯಮ ಕ್ಷೇತ್ರದಲ್ಲಿ ನನಗೆ ಸಾಕಷ್ಟು ಆದಾಯ ಬರುತ್ತಿರಬಹುದು. ಆದರೆ, ನಿಜವಾದ ನೆಮ್ಮದಿ ಸಿಕ್ಕಿದ್ದು ಆಶ್ರಮ ಸ್ಥಾಪಿಸಿದ ಕಾಯಕದಲ್ಲೇ’ ಎಂದು ಆಶ್ರಮದ ಸಂಸ್ಥಾಪಕ ಅಧ್ಯಕ್ಷ ವಿಜಯ ಪಾಟೀಲ ಹೇಳುತ್ತಾರೆ.
ಹಚ್ಚ ಹಸಿರಿನಿಂದ ನಳನಳಿಸುತ್ತಿರುವ, ಥೇಟ್ ರೆಸಾರ್ಟ್‌ನಂತಿರುವ ಈ ಆಶ್ರಮದ ಒಳಹೊಕ್ಕರೆ ಸಾಕು; ನಗುಮೊಗದಿಂದ ಆಶ್ರಮವಾಸಿಗಳು ಸ್ವಾಗತಿಸುತ್ತಾರೆ. ಆಶ್ರಮ ಸೇರುವ ಮುನ್ನ ಬದುಕಿನಲ್ಲಿ ನೂರೆಂಟು ಕಷ್ಟ ಉಂಡವರು, ಇಲ್ಲಿ ಖುಷಿ ಖುಷಿಯಿಂದಲೇ ದಿನ ಕಳೆಯುತ್ತಿದ್ದಾರೆ.
ಬೇರೆ ಆಶ್ರಮಗಳಂತೆ ಇಲ್ಲಿ ಹಿರಿಯರು ಸುಮ್ಮನೆ ಕೂರುವುದಿಲ್ಲ. ಅಡುಗೆಗೆ ಬೇಕಾಗುವ ಆಹಾರ ಧಾನ್ಯ ಸ್ವಚ್ಛಗೊಳಿಸುತ್ತಾರೆ. ತರಕಾರಿ ಕತ್ತರಿಸುತ್ತಾರೆ. ರೊಟ್ಟಿ, ಚಪಾತಿ ತಯಾರಿಸುವ ಸಿಬ್ಬಂದಿಗೆ ನೆರವಾಗುತ್ತಾರೆ. ಪಾತ್ರೆ ತೊಳೆಯಲು ಕೈಜೋಡಿಸುತ್ತಾರೆ. ಇವೆಲ್ಲ ಕೆಲಸ ಮಾಡಲು ಆಶ್ರಮದಲ್ಲಿ ಸಿಬ್ಬಂದಿಯೂ ಇದ್ದಾರೆ. ಆದರೂ, ಸ್ವಯಂ ಪ್ರೇರಣೆಯಿಂದಲೇ ಹಿರಿಯರು ಕೆಲಸ ಮಾಡುತ್ತ ಲವಲವಿಕೆಯಿಂದ ಇರುತ್ತಾರೆ.
ಬದುಕಿನ ಮುಸ್ಸಂಜೆಯಲ್ಲಿ ಹಣ್ಣು ಹಣ್ಣಾದ ಜೀವಗಳು ನರಳುವುದು, ನೊಂದುಕೊಳ್ಳುವುದು, ಖಿನ್ನತೆಗೆ ಒಳಗಾಗುವುದು ಸಹಜ ಎನ್ನುವಂತಾಗಿದೆ. ಆದರೆ, ಈ ಆಶ್ರಮದ ಜೀವಗಳು ಚೈತನ್ಯದ ಚಿಲುವೆಯಂತೆ, ಜೀವನ್ಮುಖಿಯಾಗಿವೆ. ಇವರು ಮೀಟುವ ವೀಣೆಯಲ್ಲಿ ನೋವಿನ ಬದಲು ನಲಿವಿನ ಹಾಡುಗಳೇ ರಿಂಗಣಿಸುತ್ತವೆ.
ಕೋಟ್ಯಂತರ ವೀವ್ಸ್
ಶಾಂತಾಯಿ ವೃದ್ಧಾಶ್ರಮ (ಓಲ್ಡ್ ಏಜ್ ಹೋಮ್) ಹೆಸರಿನಲ್ಲಿ ಇನ್‌ಸ್ಟಾಗ್ರಾಂ ಪುಟ ತೆರೆಯಲಾಗಿದ್ದು, 92,400 ಫಾಲೋವರ್ ಇದ್ದಾರೆ. ವಿವಿಧ ಗೀತೆಗಳಿಗೆ ವೃದ್ಧೆಯರು ಹೆಜ್ಜೆಹಾಕುವ ಮತ್ತು ಹಾಡುವ ರೀಲ್‌ಗಳನ್ನು ಪೋಸ್ಟ್ ಮಾಡಲಾಗುತ್ತಿದೆ.
‘ಸೋ ಬ್ಯೂಟಿಫುಲ್’ ಗೀತೆಯ ನೃತ್ಯ ಸುಮಾರು 21 ಕೋಟಿ ವೀಕ್ಷಣೆ ಕಂಡಿದೆ. 12 ಲಕ್ಷ ಜನ ಇದನ್ನು ಲೈಕ್ ಮಾಡಿದ್ದಾರೆ. ‘ಪುಷ್ಪಾ–2’ ಸಿನಿಮಾದ ನೃತ್ಯ 1.68 ಕೋಟಿ ವೀಕ್ಷಣೆ ಕಂಡಿದೆ.
‘ತೌಬಾ... ತೌಬಾ...’ ಗೀತೆಯ ನೃತ್ಯ 1 ಕೋಟಿ ವೀಕ್ಷಣೆ ಕಂಡಿದ್ದು, 5.84 ಲಕ್ಷ ಲೈಕ್ಸ್ ಗಿಟ್ಟಿಸಿದೆ. shantai_second_childhood ಪುಟಕ್ಕೆ ಭೇಟಿ ಕೊಟ್ಟರೆ, ಕೋಟ್ಯಂತರ ವೀವ್ಸ್ ಪಡೆದ ಹಲವು ರೀಲ್‌ಗಳನ್ನು ನೋಡಬಹುದು.
ಹೇಗಿದೆ ದಿನಚರಿ..
ಬೆಳಿಗ್ಗೆ 6ಕ್ಕೆ ಎದ್ದೇಳುವ ಹಿರಿಯ ನಾಗರಿಕರು ವಾಕಿಂಗ್, ಧ್ಯಾನ ಮಾಡುತ್ತಾರೆ. 7ಕ್ಕೆ ಚಹಾ ಸೇವಿಸಿದ ನಂತರ ಪ್ರಾರ್ಥನೆ ನಡೆಯುತ್ತದೆ. 8.30ಕ್ಕೆ ದಿನಕ್ಕೊಂದು ಬಗೆಯ ಉಪಾಹಾರ ನೀಡಲಾಗುತ್ತದೆ. 11ಕ್ಕೆ ಫಿಜಿಯೊಥೆರಪಿ ಶಿಬಿರ, 12.30ಕ್ಕೆ ಮಧ್ಯಾಹ್ನದ ಊಟ. 2ರಿಂದ 4ರವರೆಗೆ ವಿಶ್ರಾಂತಿ. ಸಂಜೆ 4.30ಕ್ಕೆ ಚಹಾದೊಂದಿಗೆ ಸ್ನ್ಯಾಕ್ಸ್ ಸೇವಿಸಿದ ನಂತರ ಮತ್ತೆ ಪ್ರಾರ್ಥನೆ. ರಾತ್ರಿ 8ಕ್ಕೆ ಊಟ ಮಾಡಿದ ನಂತರ, ಕೆಲಹೊತ್ತು ಟಿ.ವಿ ನೋಡಿ ಮಲಗುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.