ಪೂರ್ವ ಕರಾವಳಿಯಲ್ಲಿ ಪ್ರಭಾವ ಬೀರಿದ್ದ ಸರ್ಫಿಂಗ್ ಕ್ರೀಡೆ ಈಗ ಪಶ್ಚಿಮ ಕರಾವಳಿಯಲ್ಲಿ ಅದರಲ್ಲೂ ವಿಶೇಷವಾಗಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಛಾಪು ಮೂಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಸಮೀಪದ ಸಸಿಹಿತ್ಲು ಕಡಲ ತೀರ ಇತ್ತೀಚಿನ ವರ್ಷಗಳಲ್ಲಿ ಸರ್ಫಿಂಗ್ ಚಟುವಟಿಕೆಯ ಪ್ರಮುಖ ತಾಣವಾಗಿ ರೂಪುಗೊಂಡಿದೆ. ಈ ಪ್ರದೇಶವನ್ನು ಅಭಿವೃದ್ಧಿಪಡಿಸಲು ಪ್ರವಾಸೋದ್ಯಮ ಇಲಾಖೆಯೂ ಮುಂದಾಗಿರುವುದರಿಂದ ಕರ್ನಾಟಕದ ಕರಾವಳಿಯಲ್ಲಿ ಭರವಸೆಯ ಹೊಸ ಅಲೆ ಎದ್ದಿದೆ...
ಬಾಗಲಕೋಟೆ ಜಿಲ್ಲೆಯ ಬಾದಾಮಿಯಿಂದ ದಶಕದ ಹಿಂದೆ ಮಂಗಳೂರಿಗೆ ವಲಸೆ ಬಂದವರು ಪರಶುರಾಮ ಪೂಜಾರ–ಮಹಾದೇವಿ ಮತ್ತು ಸುರೇಶ ಪೂಜಾರ–ಶ್ರೀದೇವಿ ದಂಪತಿ. ಕೂಲಿ ಕೆಲಸ ಹುಡುಕುತ್ತಿದ್ದ ಇವರಿಗೆ ಇಬ್ಬಿಬ್ಬರು ಮಕ್ಕಳೂ ಇದ್ದರು. ಸುರೇಶ್ ಪೂಜಾರ ಮತ್ತು ಅಕ್ಕ–ತಂಗಿಯರಾದ ಮಹಾದೇವಿ–ಶ್ರೀದೇವಿ ಮಂಗಳೂರು ಸಮೀಪದ ಸಸಿಹಿತ್ಲುವಿನಲ್ಲಿ ಜಲಸಾಹಸ ಕ್ರೀಡೆಗಳಲ್ಲಿ ತೊಡಗಿಸಿಕೊಂಡಿದ್ದ ‘ಮಂತ್ರ ಸರ್ಫಿಂಗ್ ಕ್ಲಬ್’ನಲ್ಲಿ ಕೆಲಸಕ್ಕೆ ಸೇರಿಕೊಂಡರು. ರಜಾ ದಿನಗಳಲ್ಲಿ ತಾಯಿ ಮಹಾದೇವಿ ಜೊತೆ ಸರ್ಫಿಂಗ್ ಕ್ಲಬ್‌ಗೆ ಹೋಗುತ್ತಿದ್ದ ಆಕಾಶ್ ಪೂಜಾರ ಕಣ್ಣುಗಳು ಅಲೆಗಳ ಮೇಲೆ ಸಾಹಸ ಮಾಡುವವರನ್ನು ಕಂಡು ಬೆರಗುಗೊಂಡಿದ್ದವು. ಬೆರಗು ಬಯಕೆಯಾಗಿ ಆ ಬಯಕೆ ಅಲ್ಲೇ ಈಡೇರಿತು.
ಆಕಾಶ್ ನಂತರ ಪ್ರವೀಣನೂ ಚಿಕ್ಕಮ್ಮನ ಮಕ್ಕಳಾದ ರಾಜು ಮತ್ತು ಪ್ರದೀಪ ಕಡಲಿಗಿಳಿದರು. ಸಹೋದರ ಸಂಬಂಧಿ ಹನುಮಂತ ಪೂಜಾರ್ ಕೂಡ ಇವರನ್ನು ಸೇರಿಕೊಂಡರು. ಇವರೆಲ್ಲರೂ ಈಗ ದೇಶದ ಪ್ರಮುಖ ಜಲಸಾಹಸಿಗರು. ಆಕಾಶ್ ಈಗಾಗಲೇ ಅಂತರರಾಷ್ಟ್ರೀಯ ಮಟ್ಟದ ಸ್ಟ್ಯಾಂಡ್ ಅಪ್ ಪ್ಯಾಡಲಿಂಗ್ (ಎಸ್‌ಯುಪಿ) ಸ್ಪರ್ಧೆಗಳಲ್ಲಿ ಎರಡು ಪದಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಆರು ಪದಕ ಗೆದ್ದುಕೊಂಡಿದ್ದಾರೆ. ಜೂನಿಯರ್ ವಿಭಾಗದ ಸ್ಪರ್ಧಿಯಾದರೂ ಓಪನ್ ವಿಭಾಗದಲ್ಲಿ ಸೀನಿಯರ್‌ಗಳಿಗೆ ಸವಾಲೊಡ್ಡುವ ಛಲ ಮತ್ತು ಛಾತಿ ಬೆಳೆಸಿಕೊಂಡಿರುವ ಪ್ಯಾಡ್ಲರ್ ಆಕಾಶ್.
ತಮಿಳುನಾಡಿನ ಮಹಾಬಲಿಪುರಂ, ಕೋವಳಂ (ಕವ್‌ಲಾಂಗ್), ಮಣಪಾಡ್, ಪುದುಚೇರಿ, ಕೇರಳದ ವರ್ಕಲ ಹಾಗೂ ಕೋವಳಂ, ಆಂಧ್ರ ಪ್ರದೇಶದ ವಿಶಾಖಪಟ್ಟಣ, ಒಡಿಶಾದ ಪುರಿ, ಲಕ್ಷದ್ವೀಪ, ಅಂಡಮಾನ್ ಮುಂತಾದ ಕಡೆಗಳಲ್ಲೇ ಹೆಚ್ಚು ಅಲೆಯಾಡುತ್ತಿದ್ದ ಜಲಸಾಹಸ ಕ್ರೀಡೆಗಳು ಕರ್ನಾಟಕ ಕರಾವಳಿಯಲ್ಲೂ ಸಂಚಲನ ಮೂಡಿಸಿದ್ದರಿಂದ ಆಕಾಶ್ ಅವರಂಥ ಅನೇಕರ ಪ್ರತಿಭೆ ಹೊರ ಜಗತ್ತು ಕಾಣುವಂತಾಗಿದೆ. ಚಾಂಪಿಯನ್‌ಷಿಪ್‌ಗಳಲ್ಲಿ ಪದಕಗಳನ್ನು ಬಾಚುವ ತಮಿಳುನಾಡಿನ ಅಜೀಶ್ ಅಲಿ, ಕಮಲಿ ಮೂರ್ತಿ, ಸಿವರಾಜ್ ಬಾಬು, ಶೇಖರ್ ಪಚಾಯ್ ಮೊದಲಾದವರು ಕೂಡ ಈಚೆಗೆ ಮಂಗಳೂರಿನಲ್ಲಿ ಸ್ಪರ್ಧಿಸಲು ಆಸಕ್ತಿ ತೋರಿಸುತ್ತಿದ್ದಾರೆ.
ಕರ್ನಾಟಕದಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಜಲಸಾಹಸ ಕ್ರೀಡೆಗಳ ಪ್ರಮುಖ ತಾಣಗಳು. ದಕ್ಷಿಣ ಕನ್ನಡದ ಸಸಿಹಿತ್ಲು, ತಣ್ಣೀರುಬಾವಿ ಮತ್ತು ಪಣಂಬೂರು, ಉಡುಪಿ ಜಿಲ್ಲೆಯ ಮಲ್ಪೆ, ಕಾಪು, ಪಡುಬಿದ್ರಿ, ಉತ್ತರ ಕನ್ನಡದ ಗೋಕರ್ಣದಲ್ಲಿ ಸರ್ಫಿಂಗ್ ಕ್ಲಬ್‌ಗಳು ಮತ್ತು ಸ್ಕೂಲ್‌ಗಳು ಸರ್ಫರ್‌ಗಳನ್ನು ಬೆಳಕಿಗೆ ತರುತ್ತಿವೆ. ಈ ಪೈಕಿ ಸಸಿಹಿತ್ಲು, ಜಾಗತಿಕ ಸರ್ಫಿಂಗ್ ಭೂಪಟದಲ್ಲಿ ಕಾಣಿಸಿಕೊಂಡಿದೆ. ಸುರತ್ಕಲ್ ಸಮೀಪದ ಮುಕ್ಕ ಪಟ್ಟಣದಿಂದ ಒಳರಸ್ತೆಗೆ ಹೊರಳಿ ಕಡಲಕಿನಾರೆಯಲ್ಲಿರುವ ಸಾಲು ಸಾಲು ಐಶಾರಾಮಿ ಮನೆಗಳ ನೋಟ ಸವಿಯುತ್ತ ಸಾಗಿದರೆ ಸಿಗುವ ಸಸಿಹಿತ್ಲು ಸರ್ಫಿಂಗ್ ಚಟುವಟಿಕೆಗೆಂದೇ ಹೇಳಿಮಾಡಿಸಿದಂತಿರುವ ಕಿನಾರೆ. ಗಾಳಿಮರಗಳ ವಿಶಾಲ ಆವರಣ, ಕುರುಚಲು ಗಿಡಗಳ ಹಸಿರು ಹೊದಿಕೆ, ಬೋರ್ಡ್‌ಗಳ ಮೇಲೆ ಕಾಲುಗಳನ್ನು ಬಿಗಿದು ವಾರ್ಮ್ ಅಪ್ ಮಾಡಲು ಅನುಕೂಲಕರವಾದ ಹಿನ್ನೀರು ಮುಂತಾದ ನೈಸರ್ಗಿಕ ‘ಸಂಪನ್ಮೂಲ’ ಇರುವುದು ಇಲ್ಲಿನ ಹೆಗ್ಗಳಿಕೆ. ಹೀಗಾಗಿ ವರ್ಷದ ಆರೇಳು ತಿಂಗಳು ಚಟುವಟಿಕೆಯಿಂದ ಕೂಡಿರುವ ಪ್ರದೇಶ ಇದು. ಭಾರತ ಸರ್ಫಿಂಗ್ ಫೆಡರೇಷನ್ ಪ್ರತಿ ವರ್ಷ ನಡೆಸುವ ಸ್ಟ್ಯಾಂಡ್ ಅಪ್ ಪ್ಯಾಡಲ್ ಫೆಸ್ಟ್ ಮತ್ತು ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಚಾಂಪಿಯನ್‌ಷಿಪ್‌ಗೆ ಇದು ಶಾಶ್ವತ ತಾಣ.
ಏನಿದೆ ಕರ್ನಾಟಕದ ಕರಾವಳಿಯಲ್ಲಿ?
ವರ್ಷದ ಬಹುತೇಕ ತಿಂಗಳಲ್ಲಿ ಬೃಹತ್ ಅಲೆಗಳನ್ನು ಹೊತ್ತುತಂದು ಸರ್ಫರ್‌ಗಳಿಗೆ ಹಿತ ನೀಡುವ ಹಾಗೂ ಆಗಾಗ ಚಂಡಮಾರುತ ಸೃಷ್ಟಿಯಾಗುವ, ನೈಸರ್ಗಿಕವಾಗಿ ‘ಬೇ’ಗಳು ಮತ್ತು ಬ್ರೇಕ್ಸ್ ಇರುವ ಪೂರ್ವ ಕರಾವಳಿ ಸರ್ಫಿಂಗ್ ಚಟುವಟಿಕೆಯ ನೆಚ್ಚಿನ ತಾಣ ಎಂಬ ಪಟ್ಟವನ್ನು ತನ್ನದಾಗಿಸಿಕೊಂಡಿತ್ತು. ಪಶ್ಚಿಮ ಕರಾವಳಿಯ ಕೇರಳದಲ್ಲೂ ಸ್ಪರ್ಧಾತ್ಮಕ ಸರ್ಫಿಂಗ್‌ಗೆ ಅನುಕೂಲಕರ ವಾತಾವರಣ ಇದೆ. ಆದರೂ ಕರ್ನಾಟಕ ಕರಾವಳಿಯಲ್ಲಿ ಈಚೆಗೆ ಸರ್ಫಿಂಗ್ ಚಟುವಟಿಕೆ ಗರಿಗೆದರಿದೆ. ಇಲ್ಲಿನ ‘ಸೌಮ್ಯ’ ಅಲೆಗಳು ಮತ್ತು ಸೌಲಭ್ಯಗಳೇ ಇದಕ್ಕೆ ಕಾರಣ ಎನ್ನುತ್ತಾರೆ ಸರ್ಫರ್‌ಗಳು ಮತ್ತು ಸಂಘಟಕರು.
ಪ್ರವಾಸೋದ್ಯಮ ಬೆಳವಣಿಗೆಗೆ ಸರ್ಫಿಂಗ್ ದಿಡ್ಡಿಬಾಗಿಲು. ಆದ್ದರಿಂದ ಸರ್ಕಾರದ ಕಟಾಕ್ಷವೂ ಈ ಕ್ರೀಡೆಯತ್ತ ಹರಿದಿದೆ. ಸಸಿಹಿತ್ಲು ಕಡಲ ಕಿನಾರೆಯ ಅಭಿವೃದ್ದಿಗಾಗಿ ಎರಡು ಪ್ರತ್ಯೇಕ ಯೋಜನೆಗಳಿಗೆ ಟೆಂಡರ್ ಆಗಿದೆ. ಅದರಲ್ಲಿ ಒಂದು ಯೋಜನೆ ಸರ್ಫಿಂಗ್‌ಗೇ ಮೀಸಲು.
‘ಜಲಸಾಹಸ ಕ್ರೀಡೆಗಳ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಯ ಆಶಯ ಪರಿಣಾಮಕಾರಿ ಪರಿಕಲ್ಪನೆ. ಪ್ಯಾಡಲ್ ಫೆಸ್ಟ್ ಮತ್ತು ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಚಾಂಪಿಯನ್‌ಷಿಪ್‌ಗೆ ಎರಡು ವರ್ಷಗಳಿಂದ ತಲಾ ₹ 10 ಲಕ್ಷ ನೀಡಲಾಗಿದೆ. ಸಸಿಹಿತ್ಲುವಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ₹ 6 ಕೋಟಿ ವೆಚ್ಚದ ಯೋಜನೆ ಹಾಕಿಕೊಳ್ಳಲಾಗಿದೆ. ಜೊತೆಯಲ್ಲಿ ₹ 1.5 ಕೋಟಿ ವೆಚ್ಚದಲ್ಲಿ ಸರ್ಫಿಂಗ್‌ಗೆ ಪೂರಕ ಅಭಿವೃದ್ಧಿ ಕೆಲಸಗಳು ನಡೆಯಲಿವೆ.ಈ ಭಾಗದಲ್ಲಿ ಸರ್ಫಿಂಗ್ ಸ್ಕೂಲ್ ಅಥವಾ ಅಕಾಡೆಮಿ ಸ್ಥಾಪನೆಯಾಗುವ ಸಾಧ್ಯತೆಯೂ ಇದೆ’ ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಉಪನಿರ್ದೇಶಕ ದಿಲೀಪ್.
ಕ್ರೀಡಾ ಇಲಾಖೆ ವ್ಯಾಪ್ತಿಗೆ?
ಕರ್ನಾಟಕ ಸರ್ಫಿಂಗ್ ಸಂಸ್ಥೆಯನ್ನು ಈಚೆಗೆ ಸ್ಥಾಪಿಸಲಾಗಿದೆ. ಹೀಗಾಗಿ ಈಗ ಸರ್ಫಿಂಗ್‌ಗೆ ಸಾಂಸ್ಥಿಕ ರೂಪ ಸಿಕ್ಕಿದೆ. ಸಂಸ್ಥೆಗೆ ಕ್ರೀಡಾ ಇಲಾಖೆಯಿಂದ ಮಾನ್ಯತೆ ಪಡೆಯುವ ಪ್ರಯತ್ನ ನಡೆಯುತ್ತಿದ್ದು ಅದು ಸಾಧ್ಯವಾದರೆ ಅನುದಾನ, ಶಿಕ್ಷಣ ಮತ್ತು ಉದ್ಯಮದಲ್ಲಿ ಮೀಸಲಾತಿ ಮುಂತಾದ ಸೌಲಭ್ಯಗಳ ಭರವಸೆಯೂ ಚಿಗುರಲಿದೆ. ಅದು ಹೊಸ ತಲೆಮಾರನ್ನು ಈ ಕ್ರೀಡೆಯತ್ತ ಸೆಳೆಯಲಿದೆ.
‘ಕರ್ನಾಟಕದಲ್ಲಿ ಹತ್ತಕ್ಕೂ ಹೆಚ್ಚು ಸರ್ಫಿಂಗ್ ಸ್ಕೂಲ್‌ಗಳಿವೆ. ಪ್ರವಾಸೋದ್ಯಮದ ಆಯಾಮವೂ ಇರುವುದರಿಂದ ಈ ಕ್ರೀಡೆಯ ಸಾಧ್ಯತೆಗಳು ಅಪಾರ. ಸರ್ಫಿಂಗ್‌ನಲ್ಲಿ ಸಾಧನೆ ಮಾಡಿದವರಿಗೆ ತರಬೇತಿ ಶಾಲೆಗಳನ್ನು ತೆರೆಯಲು ಮತ್ತು ಜೀವರಕ್ಷ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಲು ವಿಪುಲ ಅವಕಾಶಗಳು ಇವೆ. ದೇಶದಲ್ಲಿ ಈಗ ಪ್ರಮಾಣೀಕೃತ ಜೀವರಕ್ಷಕ ಸಿಬ್ಬಂದಿ ಇರುವುದು ಎಂಬತ್ತು ಮಂದಿ ಮಾತ್ರ. ಸಾಹಸ ಕ್ರೀಡೆಗಳಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಜೀವರಕ್ಷಕ ಸಿಬ್ಬಂದಿಯ ಅಗತ್ಯವೂ ಹೆಚ್ಚಾಗಲಿದೆ. ಆರಂಭಿಕ ಕಲಿಕೆಗೆ ಹೆಚ್ಚು ಅನುಕೂಲಕರವಾಗಿರುವ ಸಸಿಹಿತ್ಲುವಿನಂಥ ಪ್ರದೇಶಗಳು ಇರುವುದರಿಂದ ಕರ್ನಾಟಕದ ಸರ್ಫರ್‌ಗಳಿಗೆ ಅವಕಾಶಗಳ ಹೆಬ್ಬಾಗಿಲೇ ತೆರೆದಿದೆ’ ಎಂಬುದು ಭಾರತದಲ್ಲಿ ತರಬೇತುದಾರರಿಗೆ ಪ್ರಮಾಣಪತ್ರ ನೀಡಲು ಅಂತರರಾಷ್ಟ್ರೀಯ ಸರ್ಫಿಂಗ್ ಫೆಡರೇಷನ್‌ನಿಂದ ನೇಮಕವಾಗಿರುವ ಶಮಂತ್ ಅನಿಸಿಕೆ.
‘ಛಲದಿಂದ ನೀರಿಗಿಳಿಯುವ ಉತ್ತರ ಕರ್ನಾಟಕ ಭಾಗದ ಕ್ರೀಡಾಪಟುಗಳು ಮತ್ತು ಸಹಜವಾಗಿ ಸಮುದ್ರದಲ್ಲಿ ಈಸಿ ಜೈಸಬಲ್ಲ ಕರಾವಳಿಯ ಕ್ರೀಡಾಪಟುಗಳಿಗೆ ಸಸಿಹಿತ್ಲುವಿನಂಥ ಪ್ರದೇಶಗಳು ವರದಾನವಾಗಿವೆ’ ಎಂದು ಭಾರತ ಸರ್ಫಿಂಗ್ ಫೆಡರೇಷನ್‌ನ ಜಂಟಿ ಕಾರ್ಯದರ್ಶಿ ಮತ್ತು ಮಂಗಳೂರಿನ ಸರ್ಫಿಂಗ್ ಸ್ವಾಮಿ ಫೌಂಡೇಷನ್ ನಿರ್ದಶಕರೂ ಆಗಿರುವ ಶಮಂತ್ ಹೇಳುತ್ತಾರೆ.
ಕಾರ್ಪೊರೇಟ್ ನೆರವು ಬೇಕು
ಕರ್ನಾಟಕದಲ್ಲಿ ಪ್ರವಾಸೋದ್ಯಮ ಇಲಾಖೆ, ಸರ್ಫಿಂಗ್ ಸ್ವಾಮಿ ಫೌಂಡೇಷನ್ ಮತ್ತು ಮಂತ್ರ ಸರ್ಫ್ ಕ್ಲಬ್‌ಗಳು ಸಸಿಹಿತ್ಲುವಿನಲ್ಲಿ ಸರ್ಫಿಂಗ್ ಬೆಳೆಸಲು ಪ್ರತ್ನಿಸುತ್ತಿವೆ. ಚಾಂಪಿಯನ್‌ಷಿಪ್‌ಗಳನ್ನು ಆಯೋಜಿಸಲು ಕಾರ್ಪೊರೇಟ್ ನೆರವು ಕೂಡ ಲಭಿಸಿದರೆ ಕರಾವಳಿಯಲ್ಲಿ ಈ ಕ್ರೀಡೆ ಇನ್ನಷ್ಟು ಸದ್ದು ಮಾಡಬಲ್ಲದು ಎಂದು ಜಲಕ್ರೀಡೆಗಳ ಚಟುವಟಿಕೆಯಲ್ಲಿ ತೊಡಗಿಸಿಕೊಡಿರುವ ಗೌರವ್ ಹೆಗ್ಡೆ ಅಭಿಪ್ರಾಯ.
‘ಪ್ರವಾಸಿಗರಿಗಾಗಿ ಎರಡು–ಮೂರು ದಿನಗಳ ಅಲ್ಪಕಾಲದ ತರಬೇತಿ ಮತ್ತು ಕ್ರೀಡಾಪಟುಗಳನ್ನು ತಯಾರಿ ಮಾಡಲು ದೀರ್ಘಕಾಲದ ತರಬೇತಿ ನೀಡಲಾಗುತ್ತಿದೆ. ಸಸಿಹಿತ್ಲುವಿನಲ್ಲಿ ಸುಮಾರು ಹತ್ತು ಕ್ರೀಡಾಪಟುಗಳು ಈಗಾಗಲೇ ಸಿದ್ಧರಾಗಿದ್ದು ಪಣಂಬೂರಿನಲ್ಲಿ ಎರಡು ವರ್ಷಗಳಲ್ಲಿ ಮೂವತ್ತು ಮಂದಿ ತರಬೇತಿ ಪಡೆದುಕೊಂಡಿದ್ದಾರೆ. ಸಾಧಕರನ್ನು ವಿದೇಶದಲ್ಲಿ ನಡೆಯುವ ಚಾಂಪಿಯನ್‌ಷಿಪ್‌ಗಳಿಗೂ ಕಳುಹಿಸಲಾಗುತ್ತಿದೆ’ ಎಂದರು ಅವರು.
15 ವರ್ಷಗಳಿಂದ ಕರ್ನಾಟಕದ ಕರಾವಳಿಯಲ್ಲಿ ಸರ್ಫಿಂಗ್ ಉತ್ತಮ ಬೆಳವಣಿಗೆ ಕಂಡಿದೆ. ಕ್ಲಬ್‌ಗಳ ಸಂಖ್ಯೆ ಹೆಚ್ಚಾಗಿದೆ. ಸರ್ಫಿಂಗ್ ಆಸಕ್ತರ ಸಂಖ್ಯೆ ಸುಮಾರು 40 ಸಾವಿರದ ಆಸುಪಾಸು ಇದೆ. ಇಲ್ಲಿ ಸಾಕಷ್ಟು ಅವಕಾಶಗಳು ಇವೆ. ಇದನ್ನು ಮನಗಂಡು ಸರ್ಕಾರವೂ ಪ್ರೋತ್ಸಾಹಕ್ಕೆ ಮುಂದೆ ಬರಬೇಕು.ರಾಮಮೋಹನ್ ಪರಾಂಜಪೆ, ಕರ್ನಾಟಕ ರಾಜ್ಯ ಸರ್ಫಿಂಗ್ ಸಂಸ್ಥೆಯ ಅಧ್ಯಕ್ಷ
ಕರ್ನಾಟಕದ ಕರಾವಳಿಯಲ್ಲಿ ಅಲೆಗಳ ಅಬ್ಬರ ಕಡಿಮೆ ಇರುವುದು ನಿಜ. ಆದರೆ ರಾಷ್ಟ್ರೀಯ ಅಂತರರಾಷ್ಟ್ರೀಯ ಸ್ಪರ್ಧೆಗಳಿಗೆ ಆಯ್ಕೆ ಮಾಡಿಕೊಳ್ಳುವ ಸಂದರ್ಭಗಳಲ್ಲಿ ಭರ್ಜರಿ ಅಲೆಗಳು ಇರುತ್ತವೆ. ಆದ್ದರಿಂದ ಕಲಿಯುವವರಿಗೆ ಮಾತ್ರವಲ್ಲದೆ ಸ್ಪರ್ಧಾತ್ಮಕ ಸರ್ಫಿಂಗ್‌ನಲ್ಲಿ ಭಾಗಿಯಾಗುವವರಿಗೂ ಕರ್ನಾಟಕದಲ್ಲಿ ಉತ್ತಮ ಅವಕಾಶಗಳು ಇವೆ.ಶೇಖರ್ ಪಚಾಯ್ ಸರ್ಫರ್ ಮತ್ತು ಸ್ಟ್ಯಾಂಡ್ ಅಪ್ ಪ್ಯಾಡಲ್ ಬೋರ್ಡರ್ ಚೆನ್ನೈ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.