ಪ್ರೊ.ಎಂ.ಕೃಷ್ಣೇಗೌಡ, ಅಂಕಿತಾ ಅಮರ್, ಕೆ.ಆರ್. ನಂದಿನಿ
ನಾನು ಯುವರಾಜ ಕಾಲೇಜಿನಲ್ಲಿ ಬಿ.ಎಸ್‌ಸಿ ಓದುತ್ತಿದ್ದಾಗ ಪ್ರೊ.ಸುಜನಾ ನನ್ನ ಗುರುಗಳಾಗಿದ್ದರು. ನಮ್ಮ ಕನ್ನಡದ ಹಾಗೂ ಮೈಸೂರು ವಿಶ್ವವಿದ್ಯಾಲಯದ ಬೆಸ್ಟ್ ಮೈಂಡ್ಸ್‌ಗಳಲ್ಲಿ ಅವರೊಬ್ಬರು. ನಮಗೆ ಕನ್ನಡ ಸಾಹಿತ್ಯದಲ್ಲಿ ಅಗಾಧವಾದ ಅಭಿರುಚಿ, ಪ್ರೀತಿಯನ್ನು ಮೂಡಿಸಿದವರು.
ಸದಾ ಅವರೊಂದು ಮಾತು ಹೇಳುತ್ತಿದ್ದರು– ‘ನೋಡು ಮರಿ, ಬಟ್ಟೆಯನ್ನು ಅಳೆಯುವ ಮೀಟರ್ ಕಡ್ಡಿಯು ಮೊದಲು ನೂರು ಸೆಂಟಿಮೀಟರ್ ಇರಬೇಕಪ್ಪಾ’ ಅಂತ. ಇನ್ನೊಂದನ್ನು ಅಳೆಯುವುದಕ್ಕೆ ಮೊದಲು ತನ್ನನ್ನು ನಾನು ಅಳೆದುಕೊಂಡಿರಬೇಕು. ತಾನು ಕಡಿಮೆಯೋ ಉದ್ದವೋ ಇದ್ದರೆ ಎಲ್ಲವನ್ನೂ ಅದು ತನ್ನಂತೆಯೇ, ಕಡಿಮೆಯಾಗಿ, ಉದ್ದಕ್ಕೇ ಅಳೆಯುತ್ತದೆ. ಆದ್ದರಿಂದ ಬೇರೆಯವರನ್ನು ಅಳೆಯುವಾಗ ನಿಮ್ಮನ್ನು ನೀವು ಮೊದಲು ಅಳತೆ ಮಾಡಿಕೊಂಡಿರುವಿರಾ ಎಂಬುದನ್ನು ನೋಡಿಕೊಳ್ಳಿ.
ಇದು ಬಹಳ ತಾತ್ವಿಕವಾದ ಮತ್ತು ಪರಿಪೂರ್ಣವಾದ ಮಾತು. ಈ ಮಾತು ನನ್ನನ್ನು ಬಹುವಾಗಿ ಪ್ರಭಾವಿಸಿದೆ.
- ಪ್ರೊ.ಎಂ.ಕೃಷ್ಣೇಗೌಡ, ನಗೆಮಾತುಗಾರ
ನನಗೆ ಪ್ರತಿಯೊಬ್ಬರಲ್ಲೂ ಗುರು ಕಾಣಿಸುತ್ತಾರೆ. ಮನೆಯಲ್ಲಿ ತಂದೆ–ತಾಯಿ ಗುರುವಿನ ಸ್ಥಾನದಲ್ಲಿದ್ದಾರೆ. ನನ್ನ ಜೀವನದಲ್ಲಿ ನಾನು ಸರಿ ಮಾರ್ಗದಲ್ಲಿ ಹೆಜ್ಜೆ ಇಡಲು ಪ್ರೇರಣೆ ನೀಡುತ್ತಿರುವವರು ನನ್ನ ಸಂಗೀತದ ಶಿಕ್ಷಕರಾದ ಮೈಸೂರಿನ ರಘುಲೀಲಾ ಸ್ಕೂಲ್ ಆಫ್ ಮ್ಯೂಸಿಕ್‌ನ ಸುನಿತಾ ಚಂದ್ರಕುಮಾರ್. ನಾನು ಇವರನ್ನು ಮೇಷ್ಟ್ರು ಎಂದೇ ಕರೆಯುತ್ತೇನೆ. ಅವರೊಂದಿಗೆ ಎಂಟು ವರ್ಷಗಳ ಒಡನಾಟ ನನಗಿದೆ. ಇವರು ಕೇವಲ ಸಂಗೀತದ ಪಾಠ ಮಾಡುವ ಗುರುಗಳಾಗದೆ ಜೀವನಕ್ಕೆ ಬೇಕಾದ ಅಂಶಗಳನ್ನು ಹೇಳಿಕೊಟ್ಟವರು. ಕೆಲಸ ಎಷ್ಟು ಅಚ್ಚುಕಟ್ಟಾಗಿರಬೇಕು, ಜೀವನದಲ್ಲಿ ಹೇಗೆ ಶಿಸ್ತಿನಿಂದ ಇರಬೇಕು ಮುಂತಾದ ವಿಷಯಗಳನ್ನು ಕಲಿಸಿದವರು. ಇವೆಲ್ಲವೂ ನನ್ನ ಸಿನಿಪಯಣಕ್ಕೂ ಸಹಾಯವಾಗಿದೆ. ಕನ್ನಡವನ್ನು ಪ್ರೀತಿಸಲು, ಕನ್ನಡದ ಅಕ್ಷರಗಳನ್ನು, ಪದಗಳನ್ನು ಮುದ್ದು ಮಾಡಲು ಕಲಿಸಿದವರು ಇವರು. ಸಿನಿಮಾ ಕ್ಷೇತ್ರದಲ್ಲಿ ನನಗೆ ಗುರುಗಳಾದವರು ‘ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾದ ನಿರ್ದೇಶಕ ಚಂದ್ರಜಿತ್ ಬೆಳ್ಳಿಯಪ್ಪ.
- ಅಂಕಿತಾ ಅಮರ್, ನಟಿ
ನನ್ನ ವ್ಯಕ್ತಿತ್ವ ರೂಪಿಸುವಲ್ಲಿ ಮತ್ತು ಐಎಎಸ್ ಅಧಿಕಾರಿಯಾಗಿ ನಾಗರಿಕ ಸೇವೆ ಮಾಡಲು ಅವಕಾಶ ಸಿಕ್ಕಿರುವುದು ಕೂಡ ಸಮಾಜದಿಂದ ಕಲಿತ ಪಾಠಗಳಿಂದಲೇ. ಹೀಗಾಗಿ ನನ್ನ ಪಾಲಿಗೆ ಸಮಾಜವೇ ‘ಬೆಸ್ಟ್ ಟೀಚರ್’.
ಹುಟ್ಟಿನಿಂದ ಸಾಯುವವರೆಗೆ ಬದುಕು ಅನೇಕ ಪಾಠಗಳನ್ನು ಕಲಿಸುತ್ತದೆ. ಕಲಿತದ್ದನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಹಸನಾಗುತ್ತದೆ. ಜತೆಗೆ ಬೇರೆಯವರ ಬದುಕನ್ನೂ ಹಸನುಗೊಳಿಸಲು ಸಾಧ್ಯವಾಗುತ್ತದೆ.
ನಾನು ಶಾಲಾ ದಿನಗಳಲ್ಲಿ ಹುಟ್ಟೂರು ಕೆಂಬೋಡಿಯಿಂದ ಕೋಲಾರಕ್ಕೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಿತ್ಯ ಸಂಚರಿಸುತ್ತಿದ್ದೆ. ಪ್ರಯಾಣದಲ್ಲಿ ವಿವಿಧ ಕ್ಷೇತ್ರಗಳ ಜನರು ಭೇಟಿಯಾಗುತ್ತಿದ್ದರು. ಅವರ ಹಿನ್ನೆಲೆ, ಕತೆ, ಪರಿಶ್ರಮ, ಹೋರಾಟವನ್ನು ಕೇಳಿದಾಗ ನಾವು ಕೂಡ ಏನಾದರೂ ಸಾಧಿಸಬೇಕು, ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕು ಅನಿಸುತ್ತಿತ್ತು. ಕೆಳ ಮಧ್ಯಮ ವರ್ಗದಿಂದ ಬಂದ ನನ್ನಂಥವರಿಗೆ ಜೀವನಸ್ತರವನ್ನು ಉತ್ತಮಗೊಳಿಸಲು ಇದ್ದ ಆಸರೆಯೇ ಶಿಕ್ಷಣ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಬದುಕಿನ ಪಾಠ ಕಲಿಸಿದ ಎಲ್ಲರಿಗೂ ಕೃತಜ್ಞಳಾಗಿದ್ದೇನೆ.
-ಕೆ.ಆರ್. ನಂದಿನಿ, ಐಎಎಸ್, ಸಿಇಒ, ಮಂಡ್ಯ ಜಿಲ್ಲಾ ಪಂಚಾಯಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.