ADVERTISEMENT

Teachers Day: ಗುರುವಿನ ಮಾರ್ಗದಲ್ಲಿ...

ಸಂತೋಷ ಈ.ಚಿನಗುಡಿ
Published 30 ಆಗಸ್ಟ್ 2025, 23:45 IST
Last Updated 30 ಆಗಸ್ಟ್ 2025, 23:45 IST
<div class="paragraphs"><p>ಹಂದಿಗುಂದದ ಬಸವನಗರದಲ್ಲಿ ಶ್ರೀ ವಿ.ಪಿ. ಮಠ ಮಾರ್ಗದ ಉದ್ಘಾಟನೆ</p></div>

ಹಂದಿಗುಂದದ ಬಸವನಗರದಲ್ಲಿ ಶ್ರೀ ವಿ.ಪಿ. ಮಠ ಮಾರ್ಗದ ಉದ್ಘಾಟನೆ

   

 ಚಿತ್ರಗಳು: ಸಿ.ಎಸ್.ಹಿರೇಮಠ

ಪುಷ್ಪಾಲಂಕೃತ ಸಾರೋಟು, ಅದರ ಮುಂದೆ ವಾದ್ಯಮೇಳಗಳ ನಿನಾದ, ಹಾಡು–ಕುಣಿತ, ಇಡೀ ಊರಿನ ಜನ ಒಂದೇ ಕಡೆ ಸೇರಿ ನೂರ್ಮಡಿಸಿದ ಸಂಭ್ರಮ...

ADVERTISEMENT

ಇದು ಯಾವುದೋ ಜಾತ್ರೆ, ಉತ್ಸವ ಅಥವಾ ಸಾಹಿತ್ಯ ಸಮ್ಮೇಳನದ ಮೆರವಣಿಗೆಯಲ್ಲ. ಪಾಠ ಕಲಿಸಿ ಬದುಕಿಗೆ ದಾರಿ ತೋರಿಸಿದ ನೆಚ್ಚಿನ ಗುರುವಿಗೆ ವಿದ್ಯಾರ್ಥಿಗಳು, ಊರ ಜನರು ನಿವೃತ್ತಿ ಸಂದರ್ಭದಲ್ಲಿ ಬೀಳ್ಕೊಟ್ಟ ಪರಿ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಹಂದಿಗುಂದ ಶ್ರೀ ಸಿದ್ಧೇಶ್ವರ ಕನ್ನಡ ಪ್ರೌಢಶಾಲೆಯ‌ಲ್ಲಿ (ಎಸ್‌ವಿಎಸ್‌) ಮೂವತ್ಮೂರು ವರ್ಷ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ವಿಜಯಕುಮಾರ ಪಂಚಾಕ್ಷರಿ ಮಠ (ವಿ.ಪಿ.ಮಠ) ಅವರ ಹೆಸರು ಸುತ್ತಲಿನ ಹತ್ತೂರುಗಳಲ್ಲಿ ಮನೆಮಾತು.

ಇದಷ್ಟೇ ವಿಷಯ ಅಲ್ಲ; ಈ ಗ್ರಾಮದ ಮುಖ್ಯರಸ್ತೆಗೆ ‘ಶ್ರೀ ವಿ.ಪಿ.ಮಠ ಮಾರ್ಗ’ ಎಂದು ನಾಮಕರಣ ಮಾಡಿದ್ದಾರೆ. ಊರಿನ ಜನರ ಸಮ್ಮುಖದಲ್ಲಿ ಗ್ರಾಮ ಪಂಚಾಯಿತಿಯಲ್ಲಿ ವಿಶೇಷ ಸಾಮಾನ್ಯ ಸಭೆ ಕರೆದು ಸರ್ವಾನುಮತದಿಂದ ನಿರ್ಣಯಿಸಲಾಗಿದೆ. ಮುಂದೆ ಯಾವುದೇ ಪರಿಸ್ಥಿತಿಯಲ್ಲೂ ಈ ಹೆಸರು ಬದಲಾವಣೆ ಮಾಡಬಾರದು ಎಂಬ ನಿರ್ಧಾರಕ್ಕೂ ಬಂದಿದ್ದಾರೆ. ಅಷ್ಟರಮಟ್ಟಿಗೆ ಸಾಮಾನ್ಯ ಶಿಕ್ಷಕರೊಬ್ಬರ ಪ್ರಭಾವಳಿ ಊರನ್ನು ಆವರಿಸಿಕೊಂಡಿದೆ.

ಯಾವ ಸಂಸ್ಥೆಗೆ ಸಹ ಶಿಕ್ಷಕರಾಗಿ ಬಂದಿದ್ದರೋ ಅದೇ ಸಂಸ್ಥೆಯ ಆಡಳಿತಾಧಿಕಾರಿಯಾಗಿ ಅವರನ್ನು ನಿವೃತ್ತಿ ದಿನವೇ ನೇಮಕ ಮಾಡಲಾಗಿದೆ.

ವಿ.‍‍ಪಿ.ಮಠ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಮಹಾಲಿಂಗಪುರದವರು. ಜಮಖಂಡಿ ತಾಲ್ಲೂಕಿನ ಮಳಲಿಯಲ್ಲಿ ಜೀವನ ಕಟ್ಟಿಕೊಂಡವರು. ಬಿಎಸ್‌ಸಿ, ಬಿ.ಇಡಿ ಮುಗಿಸಿದ ಬಳಿಕ 1992ರಲ್ಲಿ ಅವರು ಹಂದಿಗುಂದ ಶಾಲೆಯಲ್ಲಿ ಸಹ ಶಿಕ್ಷಕರಾದರು. ಅವರ ಕಾರ್ಯವೈಖರಿಗೆ ಆಡಳಿತ ಮಂಡಳಿ ಅಧ್ಯಕ್ಷರೂ ಆದ ಸಿದ್ಧೇಶ್ವರ ಮಠದ ಶಿವಾನಂದ ಸ್ವಾಮೀಜಿ ಮುಖ್ಯಶಿಕ್ಷಕ ಜವಾಬ್ದಾರಿ ವಹಿಸಿದರು. ಬಳಿಕದ ಮಕ್ಕಳ ಸಂಖ್ಯೆ ದುಪ್ಪಟ್ಟಾಯಿತು.

ಅನುಕಂಪ ನೌಕರಿ ಒಲ್ಲೆ ಎಂದರು!

ವಿಜಯಕುಮಾರ ತಂದೆ ಪಂಚಾಕ್ಷರಿ ಅವರೂ ಪ್ರೌಢಶಾಲೆ ಶಿಕ್ಷಕರಾಗಿದ್ದರು. ಸೇವಾವಧಿಯಲ್ಲೇ ಅವರು ನಿಧನರಾದರು. ಅನುಕಂಪ ಆಧರಿತ ಶಿಕ್ಷಕ ನೌಕರಿ ಸಿಕ್ಕರೂ ವಿಜಯಕುಮಾರ ಹೋಗಲಿಲ್ಲ. ಮರಾಠಿ ಹಾವಳಿ ಇರುವ ಗಡಿ ಗ್ರಾಮೀಣ ಭಾಗದ ಶಾಲೆಗಾಗಿ ಗಟ್ಟಿಯಾಗಿ ನಿಂತರು. ವೃತ್ತಿ ಬದುಕಿನ ಅರ್ಧದಷ್ಟು ಅವಧಿಯನ್ನು ಅನುದಾನವಿಲ್ಲದ ಶಾಲೆಯಲ್ಲೇ ಕಳೆದರು.

ಕೆಇಬಿಯಲ್ಲಿ ನೌಕರಿ, ಸಕ್ಕರೆ ಕಾರ್ಖಾನೆಯೊಂದರಲ್ಲಿ ಅಭಿವೃದ್ಧಿ ಅಧಿಕಾರಿ ಆಗುವ ಅವಕಾಶ ಹುಡುಕಿಕೊಂಡು ಬಂದರೂ ಇವರು ಈ ಊರನ್ನು, ಶಾಲೆಯನ್ನು ಬಿಟ್ಟುಹೋಗಲಿಲ್ಲ. ‘ಶಿಕ್ಷಕರ ವೃತ್ತಿ ಸಂಬಳಕ್ಕಾಗಿ ಮಾಡುವಂಥದ್ದಲ್ಲ. ಅದನ್ನೂ ಮೀರಿದ್ದು’ ಎನ್ನುವುದು ಅವರ ಮಾತು.

‘ಮಕ್ಕಳಲ್ಲಿ ಶಿಸ್ತು ಮತ್ತು ಪ್ರಾಮಾಣಿಕತೆ ಬೆಳೆದರೆ ದೇಶ ಉದ್ಧಾರವಾಗುತ್ತದೆ ಎಂಬುದು ನನ್ನ ನಂಬಿಕೆ. ವೃತ್ತಿಯುದ್ದಕ್ಕೂ ಈ ಎರಡನ್ನು ಮಕ್ಕಳಲ್ಲಿ ತುಂಬಲು ಯತ್ನಿಸಿದೆ. ನನ್ನ ಶಿಷ್ಯರು ಈಗ ನ್ಯಾಯಾಧೀಶ, ಡಿಐಜಿ, ಸೇನಾಧಿಕಾರಿ, ಶಿಕ್ಷಣಾಧಿಕಾರಿ, ಕೃಷಿಕ, ಕಾರ್ಮಿಕ... ಹೀಗೆ ಎಲ್ಲ ವೃತ್ತಿಗಳಲ್ಲೂ ಬೆಳೆದಿದ್ದಾರೆ. ನ್ಯಾಯಾಧೀಶರಾದ ಶಿಷ್ಯನನ್ನು ಎಷ್ಟು ಪ್ರೀತಿಯಿಂದ ಮಾತನಾಡಿಸುತ್ತೇನೋ, ಕೃಷಿಕನಾದ ಶಿಷ್ಯನನ್ನೂ ಅಷ್ಟೇ ಆಪ್ತತೆಯಿಂದ ಕಾಣುತ್ತೇನೆ. ಗುರು ಎಲ್ಲರನ್ನು ಸಮಾನವಾಗಿ ಕಂಡರೆ ಶಿಷ್ಯರೂ ಅದನ್ನೇ ಕಲಿಯುತ್ತಾರೆ’ ಎಂಬುದು ವಿ.‍‍ಪಿ.ಮಠ ಅವರ ಜೀವನಾನುಭವ ಮಾತು.

‘ಊರಿನ ರಸ್ತೆಗೆ ನನ್ನ ಹೆಸರು ಇಡುವ ವಿಚಾರವನ್ನು ಗುಟ್ಟಾಗಿರಿಸಲಾಗಿತ್ತು. ಏಕೆಂದರೆ, ನಾನು ನಿರಾಕರಿಸುತ್ತೇನೆ ಎನ್ನುವುದು ಅವರಿಗೆ ಗೊತ್ತಿತ್ತು. ಆದ್ದರಿಂದ ಕೊಂಚವೂ ಸುಳಿವು ನೀಡದೇ ಏಕಾಏಕಿ ಫಲಕ ಉದ್ಘಾಟನೆ ಮಾಡಿಸಿದರು. ಫಲಕ ತೆರೆದಾಗ ಕಣ್ಣುಗಳು ಮಂಜಾದವು. ಎಲ್ಲಾ ಬ್ಯಾಚಿನ ವಿದ್ಯಾರ್ಥಿಗಳು ಸೇರಿದ್ದರು. ದೇಶ–ವಿದೇಶಗಳಲ್ಲಿ ಇದ್ದವರೂ ಬಂದಿದ್ದರು. ಪುಷ್ಪವೃಷ್ಟಿ ಮಾಡಿದರು. ಚಿನ್ನಾಭರಣಗಳನ್ನು ಉಡುಗೊರೆಯಾಗಿ ನೀಡಿದರು. ನಾನು ಎಂದೂ ಏನೂ ನಿರೀಕ್ಷೆ ಮಾಡಿದೇ ಕಲಿಸಿದೆ. ಎಲ್ಲವು ಅನಿರೀಕ್ಷಿತವಾಗಿ ಬಂದೇಬಿಟ್ಟವು’ ಎಂದು ಧನ್ಯತಾ ಭಾವವನ್ನು ವ್ಯಕ್ತಪಡಿಸಿದರು.

ಗುರುತ್ವವೇ ಹೀಗೆ.

ಮುಖ್ಯಶಿಕ್ಷಕನೇ ಗಂಟೆ ಬಾರಿಸುವವ...

‘ಕೆಲ ವರ್ಷಗಳ ಹಿಂದೆ ಶಾಲೆಯ ಡಿ ದರ್ಜೆ ನೌಕರ ನಿವೃತ್ತರಾದರು. ಶಾಲೆ ಗಂಟೆ ಬಾರಿಸಲು ಯಾರೂ ಇಲ್ಲವಾದರು. ನಾನೇ ಗಂಟೆ ಬಾರಿಸಲು ಶುರು ಮಾಡಿದೆ. ಅದನ್ನು ಕಂಡು ಉಳಿದ ಶಿಕ್ಷಕರು ಪಾಳಿ ಪ್ರಕಾರ ಗಂಟೆ ಬಾರಿಸಲು ಶುರು ಮಾಡಿದರು. ಸಮಸ್ಯೆಗಳನ್ನು ಹೀಗೂ ಪರಿಹರಿಸಬಹುದು’ ಎಂದು ವಿ.ಪಿ.ಮಠ ನಕ್ಕರು.

‘ಒಂದು ದಿನವೂ ಶಾಲೆ ಅವಧಿಯಲ್ಲಿ ಕಾಂಪೌಂಡ್‌ ದಾಟಿ ಹೋಗಿಲ್ಲ. ಚಹಾದ ಅಂಗಡಿಗಳಲ್ಲಿ ಹರಟೆ ಹೊಡೆದಿಲ್ಲ. ಮೀಸಲಿದ್ದ ರಜೆ ಪಡೆದಿಲ್ಲ. ಒಂದು ದಿನವೂ ಪ್ರಾರ್ಥನೆಗೆ ತಡವಾಗಿ ಬಂದಿಲ್ಲ. ಹೀಗಾಗಿ, ಮಕ್ಕಳು– ಶಿಕ್ಷಕರೂ ಈ ಶಿಸ್ತು ಪಾಲಿಸಿದರು’ ಎನ್ನುತ್ತಾರೆ.

‘ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪಾಲಕರ ಸಭೆಯನ್ನು ಪ್ರತಿ ತಿಂಗಳು ನಡೆಸುತ್ತ ಬಂದೆ. ಈಗ ಅದನ್ನೇ ಸರ್ಕಾರ ಕಡ್ಡಾಯ ಮಾಡಿದೆ. ನಾನು ಈ ಸಭೆಯನ್ನು ಎರಡು ದಶಕ ನಿರಂತರ ನಡೆಸಿಕೊಂಡು ಬಂದೆ’ ಎಂದು ಅವರು ಹೇಳುತ್ತಾರೆ.

ಸಾರೋಟಿನಲ್ಲಿ ಮೆರವಣಿಗೆ 
ವಿ.ಪಿ. ಮಠ

Cut-off box - ಮುಖ್ಯಶಿಕ್ಷಕನೇ ಗಂಟೆ ಬಾರಿಸುವವ... ‘ಕೆಲ ವರ್ಷಗಳ ಹಿಂದೆ ಶಾಲೆಯ ಡಿ ದರ್ಜೆ ನೌಕರ ನಿವೃತ್ತರಾದರು. ಶಾಲೆ ಗಂಟೆ ಬಾರಿಸಲು ಯಾರೂ ಇಲ್ಲವಾದರು. ನಾನೇ ಗಂಟೆ ಬಾರಿಸಲು ಶುರು ಮಾಡಿದೆ. ಅದನ್ನು ಕಂಡು ಉಳಿದ ಶಿಕ್ಷಕರು ಪಾಳಿ ಪ್ರಕಾರ ಗಂಟೆ ಬಾರಿಸಲು ಶುರು ಮಾಡಿದರು. ಸಮಸ್ಯೆಗಳನ್ನು ಹೀಗೂ ಪರಿಹರಿಸಬಹುದು’ ಎಂದು ವಿ.ಪಿ.ಮಠ ನಕ್ಕರು. ‘ಒಂದು ದಿನವೂ ಶಾಲೆ ಅವಧಿಯಲ್ಲಿ ಕಾಂಪೌಂಡ್‌ ದಾಟಿ ಹೋಗಿಲ್ಲ. ಚಹಾದ ಅಂಗಡಿಗಳಲ್ಲಿ ಹರಟೆ ಹೊಡೆದಿಲ್ಲ. ಮೀಸಲಿದ್ದ ರಜೆ ಪಡೆದಿಲ್ಲ. ಒಂದು ದಿನವೂ ಪ್ರಾರ್ಥನೆಗೆ ತಡವಾಗಿ ಬಂದಿಲ್ಲ. ಹೀಗಾಗಿ ಮಕ್ಕಳು– ಶಿಕ್ಷಕರೂ ಈ ಶಿಸ್ತು ಪಾಲಿಸಿದರು’ ಎನ್ನುತ್ತಾರೆ. ‘ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪಾಲಕರ ಸಭೆಯನ್ನು ಪ್ರತಿ ತಿಂಗಳು ನಡೆಸುತ್ತ ಬಂದೆ. ಈಗ ಅದನ್ನೇ ಸರ್ಕಾರ ಕಡ್ಡಾಯ ಮಾಡಿದೆ. ನಾನು ಈ ಸಭೆಯನ್ನು ಎರಡು ದಶಕ ನಿರಂತರ ನಡೆಸಿಕೊಂಡು ಬಂದೆ’ ಎಂದು ಅವರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.