ADVERTISEMENT

Teachers Day: ರೀಲ್ಸ್‌ ಟೀಚರ್‌ ಸಂಧ್ಯಾ ಕಾಮತ್‌

ಅಭಿಲಾಷ್ ಪಿ.ಎಸ್‌.
Published 30 ಆಗಸ್ಟ್ 2025, 23:48 IST
Last Updated 30 ಆಗಸ್ಟ್ 2025, 23:48 IST
ಯಾರಾ ಅಲ್ಲಿ ಮಾತಾಡೋದು..?
ಯಾರಾ ಅಲ್ಲಿ ಮಾತಾಡೋದು..?   

‘ಪೇಪರ್‌ ತಿದ್ದಿ ಆಗಿದೆ ಆಯ್ತಾ...ಎಷ್ಟು ಮಾರ್ಕ್ಸ್‌ ಬಂದಿದೆ ಅಂತ ನಿಮ್ಮ ಬಂಡವಾಳ ಎಲ್ಲಾ ಗೊತ್ತಾಗ್ತದೆ...ನಿಮ್ಮ ಗ್ರಹಚಾರ ಎಲ್ಲಾ ಬಿಡ್ಸಿ ಬಿಡ್ತೇನೆ...ಎಲ್ಲಿ ಆ ಸ್ಕೇಲ್‌...ಗಣೇಶ..ಬಾರಾ ಇಲ್ಲಿ...ಸಾಕಾ 30....ದಡ್ಡಶಿಖಾಮಣಿ ತಂದು...ಸುಧಾಕರ 60...ಬರ್ಬಾರ್ತಾ ರಾಯರ ಕುದುರೆ ಕತ್ತೆ ಆಗ್ತಾ ಉಂಟು...ಸುರೇಶನ ಜೊತೆ ತಿರ್ಗುದು ಸ್ವಲ್ಪ ಕಮ್ಮಿ ಮಾಡು ಆಯ್ತಾ..’ 

80–90ರ ದಶಕಗಳಲ್ಲಿ ಪ್ರಾಥಮಿಕ, ಪ್ರೌಢಶಾಲೆಗೆ ಹೋಗುವ ಸಂದರ್ಭದಲ್ಲಿ ಶಿಕ್ಷಕರಿಂದ ಈ ರೀತಿ ಬೈಗುಳ ತಿನ್ನದೇ ಇರುವವರು ವಿರಳ. ಉತ್ತರ ಪತ್ರಿಕೆ ಕೈಗೆ ಸಿಕ್ಕ ದಿನಗಳನ್ನು ನೆನಪಿಸಿಕೊಂಡರೆ ಈಗಲೂ ಮೈನಡುಗುತ್ತದೆ. ಬೆನ್ನು, ಅಂಗೈಯಲ್ಲೊಮ್ಮೆ ಬಿಸಿಯ ಅನುಭವವಾಗುತ್ತದೆ. ಆ ದಿನಗಳನ್ನು ಮೆಲುಕು ಹಾಕಿದಾಗ ಮುಗುಳ್ನಗೆಯೊಂದು ಅರಿವಿಲ್ಲದೇ ಹೊಮ್ಮಿರುತ್ತದೆ. ‘ನಾವು ಹೇಗಿದ್ವಿ ನೋಡು’ ಎನ್ನುವ ಉದ್ಗಾರ ಬರುತ್ತದೆ. ಇಂತಹ ಶಾಲಾ ದಿನಗಳನ್ನು ರೀಲ್ಸ್‌ ಮೂಲಕ ಮತ್ತೆ ಮತ್ತೆ ನೆನಪಿಸುತ್ತಿರುವವರು ಮುಲ್ಕಿಯ ಸಂಧ್ಯಾ ಕಾಮತ್‌. ಇವರು ಮಣಿಪಾಲದ ಮಾಧವ ಕೃಪ ಶಾಲೆಯಲ್ಲಿ ಕನ್ನಡ ಶಿಕ್ಷಕಿ.

ಇವರು ಕನ್ನಡ, ಸಂಸ್ಕೃತ ಮತ್ತು ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಮಂಗಳೂರಿನ ಕೆನರಾ ಸಿಬಿಎಸ್‌ಇ ಶಾಲೆ, ಡೆಲ್ಲಿ ಪಬ್ಲಿಕ್‌ ಶಾಲೆ, ಕಿನ್ನಿಗೋಳಿ ರೋಟರಿ ಶಾಲೆಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ADVERTISEMENT

‘ನಾನು ರೀಲ್ಸ್‌ ಲೋಕಕ್ಕೆ ಕಾಲಿಟ್ಟಿದ್ದೇ ಶಿಕ್ಷಕರ ದಿನದಂದು. 2023ರಲ್ಲಿ ಶಿಕ್ಷಕರಿಗೆ ಸ್ಪರ್ಧೆ ಆಯೋಜಿಸಲಾಗಿತ್ತು ಸ್ಕಿಟ್‌, ಪದ್ಯ ಅಥವಾ ನೃತ್ಯದ ವಿಡಿಯೊ ಕಳುಹಿಸಬೇಕಿತ್ತು. ನಾನು ಹಾಡು ಹಾಡಿ ಕಳುಹಿಸಿದ್ದೆ. ಹೀಗೆ ಮುಂದುವರಿದು ಮಕ್ಕಳಿಗೆ ಉತ್ತರ ಪತ್ರಿಕೆ ಕೊಡುವ ಶಿಕ್ಷಕಿಯಂತೆ ವಿಡಿಯೊ ಮಾಡಿದೆ. ಶಾಲಾ ದಿನಗಳಲ್ಲಿ ಕೈಯಲ್ಲೊಂದು ಅಡಿಕೋಲೋ, ಬೆತ್ತವೋ ಹಿಡಿದು ಶಿಕ್ಷಕರು ಉತ್ತರ ಪತ್ರಿಕೆಯನ್ನು ನೀಡಿದ ದಿನ ಎಲ್ಲರಿಗೂ ನೆನಪಿರುತ್ತದೆ. ಆ ವಿಡಿಯೊವನ್ನು ಸಾಮಾಜಿಕ ಮಾಧ್ಯಮಕ್ಕೆ ಹಾಕಿದೆ. ಅಂದು ಸಂಜೆ ಮನೆಗೆ ಬಂದ ವೇಳೆಗೆ ಈ ವಿಡಿಯೊ ವೈರಲ್‌ ಆಗಿ, ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ನನಗೇ ಕಳುಹಿಸುತ್ತಿದ್ದರು’ ಎನ್ನುತ್ತಾ ತಮ್ಮ ಮೊದಲ ಹೆಜ್ಜೆಯ ನೆನಪು ಮಾಡಿಕೊಂಡರು ಸಂಧ್ಯಾ. 

‘ಏತಕ್ಕಾಗಿ ಈ ಮಾದರಿಯ ಕಾಂಟೆಂಟ್‌ಗಳನ್ನೇ ಆಯ್ಕೆ ಮಾಡಿಕೊಂಡಿರಿ’ ಎಂದು ಕೇಳಿದರೆ, ‘ದಿನನಿತ್ಯದ ಜೀವನವನ್ನು ವ್ಲಾಗ್‌ ಮಾಡುವವರು ಬಹಳಷ್ಟು ಜನರಿದ್ದಾರೆ. ನಾನು ಮಾಡಿದ ಮೊದಲ ರೀಲ್‌ಗೆ ಸಿಕ್ಕ ಪ್ರತಿಕ್ರಿಯೆ ನೋಡಿ ಈ ಮಾದರಿಯ ರೀಲ್‌ಗಳನ್ನೇ ಮಾಡಲು ನಿರ್ಧರಿಸಿದೆ. ಜನರಿಗೆ ಕಾನ್ಸೆಪ್ಟ್‌ ಬಹಳ ಇಷ್ಟವಾಗಿತ್ತು. ನನ್ನ ಫಾಲೊವರ್ಸ್‌ ಬಹುತೇಕ 40–60 ವರ್ಷ ಪ್ರಾಯದವರು. ಇವರೆಲ್ಲರೂ ಬಹುತೇಕ 70–90ರ ದಶಕದವರು. ಅವರೆಲ್ಲರೂ ಕಾಮೆಂಟ್‌ನಲ್ಲಿ ತಮ್ಮ ಶಿಕ್ಷಕರನ್ನು ನೆನಪಿಸಿಕೊಳ್ಳುವಾಗ ಇದಕ್ಕಿಂತ ಇನ್ನೇನು ಬೇಕು ಎಂದೆನಿಸಿತು. ಪ್ರತಿಯೊಂದು ವಿಷಯವನ್ನೂ ನಾನು ಶಿಕ್ಷಕಿಯಾಗಿ ರೀಲ್‌ನಲ್ಲಿ ಹೇಳಬಹುದು. ಹೀಗಾಗಿ ಇದರಲ್ಲೇ ಮುಂದುವರಿಯೋಣ ಎನಿಸಿತು. ನಾನು ಹೆಚ್ಚಾಗಿ ಹಳೆಯ ದಿನಗಳನ್ನು ಮೆಲುಕು ಹಾಕುವ ವಿಡಿಯೊಗಳನ್ನೇ ಮಾಡುತ್ತೇನೆ. ಆಯಾ ಸಂದರ್ಭದಲ್ಲಿ ಇರುವ ಹಬ್ಬಗಳು, ದಿನಗಳು, ಘಟನೆಗಳನ್ನು ಆಧರಿಸಿಕೊಂಡು ವಿಡಿಯೊ ಮಾಡುತ್ತಾನೆ. ನನ್ನ ಮೊದಲ ರೀಲ್‌ನಲ್ಲಿ ಹೇಳಿದ ಸಂಭಾಷಣೆ ಯೆಲ್ಲವೂ ನನ್ನ ಗುರುಗಳು ನಮಗೆ ತರಗತಿಯಲ್ಲಿ ಹೇಳಿದ ಮಾತುಗಳೇ! ನಾನು ಇದೀಗ ಶಿಕ್ಷಕಿಯಾಗಿ ಅದೇ ಬೈಗುಳವನ್ನೇ ವಿದ್ಯಾರ್ಥಿಗಳಿಗೆ ಹೇಳುತ್ತಿರುತ್ತೇನೆ’ ಎಂದು ನಕ್ಕರು ಸಂಧ್ಯಾ.

ಕಾಲ ಬದಲಾಗಿದೆ. ಮಕ್ಕಳ ಬಾಯಲ್ಲೂ ‘ಬಂದರೋ ಬಂದರೋ ಭಾವ ಬಂದರೋ..’ ಹಾಡು ಬರುತ್ತಿದೆ. ಇದನ್ನೂ ಬಳಸಿಕೊಂಡು ಸಂಧ್ಯಾ ರೀಲ್ಸ್‌ ಮಾಡಿದ್ದು, ‘ಬಂದದ್ದು ಭಾವ ಅಲ್ಲ...ಮಧ್ಯಾವಧಿ ಪರೀಕ್ಷೆ...ಪರೀಕ್ಷೆಯಲ್ಲಿ ಅಂಕ ಕಮ್ಮಿ ಬಂದರೆ ಭಾವ ಅಲ್ಲ, ಅಪ್ಪಸ ಶಾಲೆಗೆ ಬರ್ಬೇಕು’ ಎಂದು ಹೇಳಿ ನಗಿಸುತ್ತಾರೆ.  

‘ನನ್ನ ತಂದೆ ನಿವೃತ್ತ ಮುಖ್ಯೋಪಾಧ್ಯಾಯರು. ಅವರನ್ನೂ ನೋಡಿ ಹಲವು ವಿಷಯಗಳನ್ನು ಕಲಿತಿದ್ದೇನೆ. ಇದನ್ನೂ ರೀಲ್‌ ಮಾಡುವ ಸಂದರ್ಭದಲ್ಲಿ ಬಳಸಿಕೊಂಡಿದ್ದೇನೆ. ಹಲವು ಗುರುಗಳು ನನಗೆ ಪಾಠ ಮಾಡಿದ್ದಾರೆ. ಅದರಲ್ಲಿ ಹೈಸ್ಕೂಲ್‌ನಲ್ಲಿ ನನಗೆ ಕನ್ನಡ ಕಲಿಸಿದ ಕೇಶವ ಮಾಸ್ಟ್ರು ನನ್ನ ನೆಚ್ಚಿನ ಶಿಕ್ಷಕರು. ನಾನು ಈಗ ಕನ್ನಡ ಶಿಕ್ಷಕಿಯಾಗಿದ್ದೇನೆ ಎಂದರೆ ಅವರೇ ಸ್ಫೂರ್ತಿ. ಜೊತೆಗೆ ತಂದೆಯೇ ದೊಡ್ಡ ಗುರು’ ಎನ್ನುತ್ತಾ ತಮ್ಮ ಮುಂದಿನ ಯೋಜನೆಗಳತ್ತ ಮಾತು ಹೊರಳಿಸಿದರು. 

ಮನರಂಜನೆ ಜೊತೆಗೆ ಪಾಠ 

‘ಈಗ ರೀಲ್ಸ್‌ ಮೂಲಕ ಜನರಿಗೆ ಮನರಂಜನೆ ನೀಡಿದ್ದೇನೆ. ಅವರ ಬಾಲ್ಯಕ್ಕೆ ಕರೆದೊಯ್ಯುವ ಪ್ರಯತ್ನ ಮಾಡುತ್ತಿದ್ದೇನೆ. ಇದೀಗ ಬಹುತೇಕ ಮಕ್ಕಳು ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿಯುತ್ತಿದ್ದಾರೆ. ನಮ್ಮ ಕಾಲದಲ್ಲಿ ಕನ್ನಡ ಇಷ್ಟದ ಭಾಷೆಯಾಗಿತ್ತು. ಕನ್ನಡ ಪರೀಕ್ಷೆಗೆ ಹೆಚ್ಚು ಓದುತ್ತಲೂ ಇರಲಿಲ್ಲ. ಈಗಿನ ಮಕ್ಕಳಿಗೆ ಕನ್ನಡ ಎನ್ನುವುದೇ ಕಷ್ಟವಾಗಿದೆ. ಕನ್ನಡ ಎಂದರೆ ಅಳುತ್ತಾರೆ. ಹೀಗಾಗಿ ಅವರಿಗೆ ನನ್ನದೇ ಶೈಲಿಯಲ್ಲಿ ಯುಟ್ಯೂಬ್‌ ಮೂಲಕ ಕನ್ನಡ ವ್ಯಾಕರಣ ಕಲಿಸುವ ಯೋಚನೆ ಇದೆ. ನಗಿಸುತ್ತಲೇ ಅವರಿಗೆ ಪಾಠ ಮಾಡುವ ಪ್ಲ್ಯಾನ್‌ ಮಾಡಿದ್ದೇನೆ. ಇದು ಮಕ್ಕಳಿಗಷ್ಟೇ ಅಲ್ಲ, ಕನ್ನಡ ಕಲಿಯಬೇಕೆಂಬ ಎಲ್ಲರಿಗೂ ಅನುಕೂಲವಾಗಲಿದೆ’ ಎನ್ನುತ್ತಾರೆ ಸಂಧ್ಯಾ. 

ಹೀಗೆ ರೀಲ್ಸ್‌ ಮೂಲಕ ವೀಕ್ಷಕರನ್ನು ತಮ್ಮ ಬಾಲ್ಯಕ್ಕೆ ಕರೆದೊಯ್ಯುವ ಸಾಮರ್ಥ್ಯ ಹೊಂದಿರುವ ಸಂಧ್ಯಾ, ಸಿನಿಮಾದಂತೆ ಭಾಷೆಯ ಗಡಿ ಮೀರಿದ್ದಾರೆ. ಹಲವರು ಇವರ ವಿಡಿಯೊಗಳನ್ನು ನೋಡಿ ನೆನಪಿಗೆ ಬಂದ ತಮ್ಮ ಶಿಕ್ಷಕರ ಹೆಸರುಗಳನ್ನು ಕಾಮೆಂಟ್‌ ಬಾಕ್ಸ್‌ನುದ್ದಕ್ಕೂ ಹಾಕಿರುವುದು ಇದಕ್ಕೆ ಸಾಕ್ಷಿ.

‘ಪ್ರೇಕ್ಷಕರೇ ನನ್ನ ತರಗತಿಯ ಮಕ್ಕಳು’

ಸಂಧ್ಯಾ ಕಾಮತ್‌ 

‘ನನ್ನ ರೀಲ್ಸ್‌ಗೆ ಕಾಮೆಂಟ್‌ಗಳು ಸಕಾರಾತ್ಮಕವಾಗಿಯೇ ಬಂದಿವೆ. ಬಹುತೇಕರು ಮಕ್ಕಳನ್ನು ಏಕೆ ತೋರಿಸುವುದಿಲ್ಲ ಎಂದು ಕೇಳುತ್ತಾರೆ. ನನಗೆ ತರಗತಿಯ ಒಳಗೆ ಈ ರೀತಿ ರೀಲ್ಸ್‌ ಮಾಡಲು ಇಷ್ಟವಿಲ್ಲ. ಮಕ್ಕಳನ್ನು ವಿಡಿಯೊಗೆ ಬಳಸಿಕೊಂಡರೆ ಶಾಲೆ ಒಳಗೆ ಕಲಿಕೆಗೆ ಅಡ್ಡಿಯಾಗುತ್ತದೆ. ನನ್ನ ಮನಸ್ಸೂ ವಿಡಿಯೊಗೇ ಹೋಗುತ್ತದೆ. ಹೀಗಾಗಿ ನನ್ನೆಲ್ಲಾ ವಿಡಿಯೊಗಳಿಗೆ ಮನೆ, ಶಾಲೆಯ ಹೊರಗಿನ ಆವರಣವೇ ವೇದಿಕೆ. ನನಗೆ ಪ್ರೇಕ್ಷಕರೇ ತರಗತಿಯೊಳಗಿನ ಮಕ್ಕಳು. ಅವರೇ ಮಕ್ಕಳಾಗಿ ಕುಳಿತು ಈ ವಿಡಿಯೊ ನೋಡುತ್ತಾ ತಮ್ಮ ಹಳೆಯ ದಿನಗಳಿಗೆ ಹೋಗಿರುತ್ತಾರೆ. ಕಾಮೆಂಟ್‌ನಲ್ಲಿಯೂ ನನ್ನನ್ನು ಟೀಚರ್‌ ಎಂದೇ ಹಲವರು ಕರೆಯುತ್ತಾರೆ. ಅವರು ನನ್ನಲ್ಲಿ ಅವರ ಗುರುಗಳನ್ನು ಕಾಣುತ್ತಿದ್ದಾರೆ. ಅವರು ಹೇಳಿದ ನೆನಪುಗಳನ್ನು ನಾನು ರೀಲ್ಸ್‌ನ ಕಾನ್ಸೆಪ್ಟ್‌ಗಳಾಗಿಯೂ ಬಳಸಿಕೊಂಡಿದ್ದೇನೆ. ಜೊತೆಗೆ ನನ್ನ ಕರಾವಳಿಯ ಕನ್ನಡ ಭಾಷಾ ಶೈಲಿ ಅಡ್ಡಿಯಾಗಲಿಲ್ಲ. ಬೆಂಗಳೂರು, ಉತ್ತರ ಕರ್ನಾಟಕದ ಜನರೂ ನನ್ನ ಕನ್ನಡವನ್ನು ಇಷ್ಟಪಟ್ಟು ಸ್ವೀಕರಿಸಿದ್ದಾರೆ’ ಎನ್ನುತ್ತಾರೆ ಸಂಧ್ಯಾ.

‘ಪ್ರೇಕ್ಷಕರೇ ನನ್ನ ತರಗತಿಯ ಮಕ್ಕಳು’

‘ನನ್ನ ರೀಲ್ಸ್‌ಗೆ ಕಾಮೆಂಟ್‌ಗಳು ಸಕಾರಾತ್ಮಕವಾಗಿಯೇ ಬಂದಿವೆ. ಬಹುತೇಕರು ಮಕ್ಕಳನ್ನು ಏಕೆ ತೋರಿಸುವುದಿಲ್ಲ ಎಂದು ಕೇಳುತ್ತಾರೆ. ನನಗೆ ತರಗತಿಯ ಒಳಗೆ ಈ ರೀತಿ ರೀಲ್ಸ್‌ ಮಾಡಲು ಇಷ್ಟವಿಲ್ಲ. ಮಕ್ಕಳನ್ನು ವಿಡಿಯೊಗೆ ಬಳಸಿಕೊಂಡರೆ ಶಾಲೆ ಒಳಗೆ ಕಲಿಕೆಗೆ ಅಡ್ಡಿಯಾಗುತ್ತದೆ. ನನ್ನ ಮನಸ್ಸೂ ವಿಡಿಯೊಗೇ ಹೋಗುತ್ತದೆ. ಹೀಗಾಗಿ ನನ್ನೆಲ್ಲಾ ವಿಡಿಯೊಗಳಿಗೆ ಮನೆ ಶಾಲೆಯ ಹೊರಗಿನ ಆವರಣವೇ ವೇದಿಕೆ. ನನಗೆ ಪ್ರೇಕ್ಷಕರೇ ತರಗತಿಯೊಳಗಿನ ಮಕ್ಕಳು. ಅವರೇ ಮಕ್ಕಳಾಗಿ ಕುಳಿತು ಈ ವಿಡಿಯೊ ನೋಡುತ್ತಾ ತಮ್ಮ ಹಳೆಯ ದಿನಗಳಿಗೆ ಹೋಗಿರುತ್ತಾರೆ. ಕಾಮೆಂಟ್‌ನಲ್ಲಿಯೂ ನನ್ನನ್ನು ಟೀಚರ್‌ ಎಂದೇ ಹಲವರು ಕರೆಯುತ್ತಾರೆ. ಅವರು ನನ್ನಲ್ಲಿ ಅವರ ಗುರುಗಳನ್ನು ಕಾಣುತ್ತಿದ್ದಾರೆ. ಅವರು ಹೇಳಿದ ನೆನಪುಗಳನ್ನು ನಾನು ರೀಲ್ಸ್‌ನ ಕಾನ್ಸೆಪ್ಟ್‌ಗಳಾಗಿಯೂ ಬಳಸಿಕೊಂಡಿದ್ದೇನೆ. ಜೊತೆಗೆ ನನ್ನ ಕರಾವಳಿಯ ಕನ್ನಡ ಭಾಷಾ ಶೈಲಿ ಅಡ್ಡಿಯಾಗಲಿಲ್ಲ. ಬೆಂಗಳೂರು ಉತ್ತರ ಕರ್ನಾಟಕದ ಜನರೂ ನನ್ನ ಕನ್ನಡವನ್ನು ಇಷ್ಟಪಟ್ಟು ಸ್ವೀಕರಿಸಿದ್ದಾರೆ’ ಎನ್ನುತ್ತಾರೆ ಸಂಧ್ಯಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.