ಹೊತ್ತು ಸರಿಯುವ ಘಳಿಗೆಯಲ್ಲಿ ದೂರದ ಊರನ್ನು ಬಿಟ್ಟು, ರೈಲಿನಲ್ಲಿ ಹೊರಟು ಬೆಳಂ–ಬೆಳಗ್ಗೆ ಕಣ್ಣುಬಿಟ್ಟಾಗ ನಾನು ಇದಿದ್ದು ಮಹಾನಗರಿ ಬೆಂಗಳೂರಿನಲ್ಲಿ. ಹೊಸ ಅನುಭವ, ಹೊಸ ದಿನಗಳಿಗೆ ನಮ್ಮನ್ನು ಸ್ವಾಗತಿಸಿದ್ದು ಬೆಳಗಿನ ಮಂಜಿನ ಹನಿಯೋ ಅಥವಾ ವಾಹನ ದಟ್ಟಣೆಯ ಹೊಗೆಯೋ ಎಂದು ವಿಭಾಗಿಸುವ ಮುಂಚೆಯೇ ಮೊದಲ ಬಾರಿಗೆ ಮೆಟ್ರೋಕ್ಕೆ ಕಾಲನ್ನು ಇರಿಸಿಯಾಗಿತ್ತು. ಬೆಂಗಳೂರಿನ ಟ್ರಾಫಿಕ್‌ಗಿಂತ ಮುಂಚೆಯೆ ನನಗೂ ಮೆಟ್ರೋಗೂ ಗೆಳೆತನ. ಒಂದಷ್ಟು ಗೆಳೆಯರ ಬಳಗದೊಟ್ಟಿಗೆ ಬೆಂಗಳೂರಿಗೆ ಬಂದು ಜೀವನವನ್ನು ಕಟ್ಟಿಕೊಳ್ಳುವ ಹಾದಿಗೆ ಮುನ್ನುಡಿಯನ್ನು ಬರೆದು ಸಾಗಿತ್ತು ಪಯಣ.
ಸಾವಿರ ಸಾವಿರ ಜನರು ಬೆಂಗಳೂರಿನತ್ತ ಜೀವನ ನಡೆಸಲು ಧಾವಿಸುತ್ತಾರೆ. ಬೆಂಗಳೂರಿನ ಟ್ರಾಫಿಕ್, ಗಲ್ಲಿಗಳು, ಮೆಟ್ರೋದ ಬಾಗಿಲು, ಪ್ರತೀ ಏರಿಯಾದ ತಿರುವು ಕೂಡ ಹಲವಾರು ಕಥೆಗಳನ್ನು ತನ್ನೊಡಲಲ್ಲಿ ಬೆಚ್ಚಗೆ ಬಚ್ಚಿಟ್ಟುಕೊಂಡಿದೆ. ಅರಸುತ್ತಾ ಸಾಗಿದರೆ ಬೆಂಗಳೂರಿಗೆ ಬಂದ ಪ್ರತಿಯೊಬ್ಬರಲ್ಲಿಯೂ ಇಂತಹ ಸಾವಿರಾರು ಕಥೆಗಳಿವೆ. ಅದರ ನಡುವೆ ನನ್ನದೂ ನಿನ್ನೆ ಮೊನ್ನೆ ಬಂದಾಗಿನ ಅನುಭವವೇ ನನಗೆ ಬಹಳ ವಿಶೇಷವಾಗಿದೆ.
ಸುಂದರ ಮುಂಜಾವು ಹೊಸ ಕನಸುಗಳಿಗೆ ರೆಕ್ಕೆ ಕಟ್ಟಿ ಬಿಟ್ಟಿದ್ದೇನೆ ಅದು ಹಾರಲು ಹವಣಿಸುವತ್ತಿದೆ. ಆದರೆ ಟ್ರಾಫಿಕ್‌ನ ಸಂಧಿಯಲ್ಲಿ ಕನಸುಗಳು ನಲುಗಿವೆ. ಎಲ್ಲರನ್ನೂ ಒಪ್ಪಿ ಅಪ್ಪಿಕೊಳ್ಳುವ ಬೆಂಗಳೂರು ಮತ್ತೆ ಮತ್ತೆ ನಮ್ಮನ್ನು ಒಂಟಿಯಾಗಿಸಿದೆ.
ಎಲ್ಲವೂ ಇದೆ ಬೆಂಗಳೂರಲ್ಲಿ ಅದರೂ ನಾನು ಒಂಟಿ. ಮಾತನಾಡಲು ಹತ್ತಾರು ವಿಷಯಗಳಿದ್ದರೂ ಮಾತನ್ನು ಕೇಳಿಸಿಕೊಳ್ಳುವ ವ್ಯವಧಾನವಾಗಲಿ, ಸಮಾಧಾನವಾಗಲಿ, ಸಮಯವಾಗಲಿ ಯಾವುದೂ ಇಲ್ಲ. ಪರಿಚಯಸ್ಥರಿಗೆನೂ ಕಡಿಮೆಯಲ್ಲದ ಸ್ಥಳವಿದು. ಎಲ್ಲರೂ ಇದ್ದರೂ ಒಂಟಿ ಭಾವ ಆವರಿಸಿದೆ. ನಾನು ತಂಗಿರುವ ಕೊಠಡಿಯ ನಾಲ್ಕು ಗೋಡೆಗಳು ನನ್ನ ಮಾತನ್ನು ಬೇಸರವಿಲ್ಲದೇ ಕೇಳಿಸಿಕೊಳ್ಳುತ್ತಿದೆ. ಗೋಡೆಗಳಿಗೆ ಕಿವಿಯಿದೆ ನನ್ನೆಲ್ಲಾ ತರಲೆ, ಗಂಭೀರ, ಖುಷಿ, ದುಃಖ ಎಲ್ಲವನ್ನೂ ಕೇಳಲು.
ನಮಗೆ ನಾವು ಊರಿನಲ್ಲಿ ಹಾಕಿಕೊಂಡಿದ್ದ ಪರಿಧಿಯಿಂದ ಒಮ್ಮೆಗೆ ಬೇರೆ ಕಡೆಯ ವಾತಾವರಣಕ್ಕೆ ಹೊಂದಿಕೊಳ್ಳಲು ಸಮಯವು ಹಿಡಿಯುತ್ತದೆ. ತಕ್ಷಣ ಒಂದು ಪರಿಸರದಿಂದ ಬೇರೆಯಾಗಿ ಬೇರೆಯ ಪರಿಸರಕ್ಕೆ ಹೊಂದಿಕೊಳ್ಳಲು ಕೆಲವು ಸಮಯ ಬೇಕಾಗುತ್ತದೆ ಹಾಗೆ ಇಲ್ಲಿನ ವೇಗಕ್ಕೆ ನಮ್ಮ ವೇಗವೂ ಹೊಂದಿಕೆಯಾಗಿ ಮುಂದೆ ಸಾಗಬೇಕಿದೆ. ನಾವಿರುವ ಪರಿಧಿಯೊಳಗೆ ನಮ್ಮದೇ ಪಾತ್ರದ ಪರಿಧಿಯಲ್ಲಿ ಜೀವನ ಸಾಗುವ ಗಳಿಗೆಯಲ್ಲಿ ಸ್ವಚ್ಛಂದ ಭಾವದಿಂದ ಬೇರಾಗಿ ಈಗ ಪ್ರೇಕ್ಷಕನಾಗಿ ನಿಂತು ನೋಡುವ ಹಂತದವರೆಗೂ ಜೀವನ ಭಿನ್ನ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.