ADVERTISEMENT

ಪ್ರತಿಕ್ರಿಯೆ | ಇಲ್ಲದಿರುವ ವ್ಯಕ್ತಿಯ ನಿಂದನೆ, ಆರೋಪ ಹೇಯ: ಅನುರಾಧ ಅನಂತಮೂರ್ತಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2024, 0:30 IST
Last Updated 1 ಡಿಸೆಂಬರ್ 2024, 0:30 IST
ಯು. ಆರ್‌. ಅನಂತಮೂರ್ತಿ
ಯು. ಆರ್‌. ಅನಂತಮೂರ್ತಿ   

ನ. 24ರ ಭಾನುವಾರದ ಪುರವಣಿಯಲ್ಲಿ ನನ್ನ ತಂದೆ ಯು.ಆರ್. ಅನಂತಮೂರ್ತಿಯವರ ಬಗ್ಗೆ ತಾನು ಆರೋಪಗಳನ್ನು ಮಾಡಿಲ್ಲ ಎನ್ನುತ್ತಲೇ ನಟರಾಜ್‌ ಹುಳಿಯಾರರು ತಮ್ಮ ಮೂಲ ಲೇಖನದಲ್ಲಿಲ್ಲದ ವಿಷಯಗಳನ್ನು ಎತ್ತಿಕೊಂಡು ಮತ್ತಷ್ಟು ಆರೋಪಗಳನ್ನು ಮಾಡಿರುವುದರಿಂದ ಈ ಪ್ರತಿಕ್ರಿಯೆ.

ಸಂಸ್ಕಾರ ಕಾದಂಬರಿಯು 1996 ರ ಮೊದಲೇ ಜಗತ್ತಿನ ಅನೇಕ ಭಾಷೆಗಳಿಗೆ ಅನುವಾದಗೊಂಡು ವಿಶ್ವಮಾನ್ಯ ವಿಮರ್ಶಕ/ಲೇಖಕರಿಂದ ಪ್ರಶಂಸೆಗೆ ಒಳಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಅದು ಸ್ವೀಡಿಶ್ ಭಾಷೆಗೆ ಅನುವಾದಗೊಳ್ಳಬೇಕೆಂಬ ಹಂಬಲ ನನ್ನ ತಂದೆಗೆ ಇತ್ತೆಂದಿರುವುದು ನನಗೆ ಸೋಜಿಗವೆನಿಸುತ್ತದೆ. 2017 ರಲ್ಲಿ ಆಧುನಿಕ ಜಗತ್ತಿನ ಮಾಸ್ಟರ್‌ಪೀಸ್‌ಗಳಲ್ಲಿ (masterpieces of modern world literature) ಒಂದೆಂದು ಪರಿಗಣಿಸಿ ‘ನ್ಯೂಯಾರ್ಕ್ ರಿವ್ಯೂ ಆಫ್ ಬುಕ್ಸ್’ ಸಂಸ್ಕಾರವನ್ನು ಅಚಿಬೆಯವರ ಥಿಂಗ್ಸ್ ಫಾಲ್ ಅಪಾರ್ಟ್ ಜೊತೆ ಸಮೀಕರಿಸಿ ಸಂಸ್ಕಾರದ ವಿಶೇಷ ಆವೃತ್ತಿಯನ್ನು ಪ್ರಕಟಿಸಿದೆ.

ಹುಳಿಯಾರರು ಆ ಕಾಲದಲ್ಲೇ ಅನುವಾದದ ವಿಷಯವನ್ನು ಸಾರ್ವಜನಿಕವಾಗಿ ಎತ್ತಿ ಉತ್ತರಗಳನ್ನು ಪಡೆಯಬಹುದಿತ್ತು. ನನ್ನ ತಂದೆಯವರೆಂದೂ ಸಾರ್ವಜನಿಕ ಚರ್ಚೆಗಾಗಲೀ, ವಾಗ್ವಾದಕ್ಕಾಗಲೀ ಹಿಂಜರಿದವರಲ್ಲ. ಸ್ವೀಡಿಶ್ ಲೇಖಕರ ಗುಣಮಟ್ಟದ ಬಗ್ಗೆ ಅಷ್ಟು ಬೇಸರವಿದ್ದರೆ ಆ ನಿಯೋಗದ ಜೊತೆ ಹುಳಿಯಾರರು ಪ್ರವಾಸ-ಸಂವಾದ ಮಾಡುವ ಬದಲು ಪ್ರತಿಭಟಿಸಬಹುದಿತ್ತು.

ADVERTISEMENT

ಬದುಕಿರುವಾಗ ಒಡನಾಡಿ, ಅವರು ತೀರಿಕೊಂಡ ನಂತರ ಸಮರ್ಥಿಸಿಕೊಳ್ಳಬೇಕಾದ ವ್ಯಕ್ತಿಯೇ ಇಲ್ಲದಿರುವಾಗ ವೈಯಕ್ತಿಕ ನಿಂದನೆ ಮತ್ತು ಆರೋಪ ಮಾಡುವುದು, ಹೇಯ ಮತ್ತು ಅನೈತಿಕವಾದುದು. ಈ ಚರ್ಚೆಯನ್ನು ನಾನು ಇನ್ನು ಮುಂದುವರಿಸುವುದಿಲ್ಲ.

ಪತ್ರದಲ್ಲಿ ತಾವು ವಿಮರ್ಶಕರಲ್ಲ ಎಂದಿರುವ ಹುಳಿಯಾರರು ತಮ್ಮ ವೆಬ್‌ಸೈಟಿನಲ್ಲಿ ತಾವು ವಿಮರ್ಶಕರೆಂದು ಘೋಷಿಸಿಕೊಂಡಿದ್ದಾರೆ. ಇದರಲ್ಲಿ ಯಾವುದು ಮುಖವಾಡವೆಂಬುದು ಗೊತ್ತಾಗುತ್ತಿಲ್ಲ.

-ಅನುರಾಧ ಅನಂತಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.