ADVERTISEMENT

ನಿಮ್ಮ ಒಲುಮೆಗೆ ಯಾವ ಕೊಡುಗೆ?

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2019, 20:00 IST
Last Updated 11 ಫೆಬ್ರುವರಿ 2019, 20:00 IST
ಪ್ರೇಮಿಗಳ ದಿನ
ಪ್ರೇಮಿಗಳ ದಿನ   

ಇನ್ನೆರಡೇ ದಿನ! ನಿಮ್ಮೊಲುಮೆಯ ಪ್ರೇಮಿಯನ್ನು ಕಾಣಬೇಕು. ಆದರೆ ಕ್ಷಣ ಕ್ಷಣವನ್ನೂ ಕಾತರದಿಂದ ಕಳೆಯುವುದು ಎಷ್ಟು ಕಷ್ಟ! ನಿನ್ನೆಯೂ ಭೇಟಿಯಾಗಿದ್ದೀರಿ. ನಾಳೆಯೂ ಸಿಗುತ್ತೀರಿ. ಆದರೂ ಫೆಬ್ರುವರಿ 14ರಂದು ಸಿಗುವುದೆಂದರೆ, ನನಗೆ ನೀನು ನಿನಗೆ ನಾನು ಎಂಬ ಭದ್ರತೆಯ ಭಾವವನ್ನು ವ್ಯಕ್ತಪಡಿಸುವುದು. ನಿಮ್ಮ ಬರುವಿಕೆಗಾಗಿ ಆ ಜೀವವೂ ಅಷ್ಟೇ ಹಪಹಪಿಸುತ್ತಿದೆ ಎಂದು ನೆನಪಿಸಿಕೊಂಡು ಮೈನವಿರೇಳುತ್ತಿದೆಯಾ?

ಅಂದ ಹಾಗೆ, ಪ್ರೇಮೋತ್ಸವದ ದಿನ ಯಾವ ಬಟ್ಟೆ ಹಾಕಿಕೊಳ್ಳಲಿ, ಯಾವ ಬಣ್ಣದ್ದು, ಉಡುಗೆಗೆ ತೊಡುಗೆಗಳು ಹೊಂದುವಂತಿರಬೇಕಲ್ಲ ಎಂಬ ಪ್ರಶ್ನೆ ದೊಡ್ಡ ಗೊಂದಲವನ್ನೇ ಸೃಷ್ಟಿಸಿದೆ ಅನ್ನೋದು ಗೊತ್ತಿರುವ ಸಂಗತಿ. ನಿಮಗೆ ಗೊತ್ತಾ? ಯಾವುದೇ ಅಪರೂಪದ ಮತ್ತು ವಿಶೇಷ ಸಂದರ್ಭದಲ್ಲಿ ನೀವು ನಿಮ್ಮ ಪ್ರೇಮಿಯನ್ನು ಕಾಣಲು ಹೋಗುವಾಗ ನಿಮ್ಮ ಗೆಟಪ್‌ ಹೇಗಿರುತ್ತದೆ ಎಂಬುದು, ಅವರ ಬಗ್ಗೆ ನಿಮಗಿರುವ ಉಮೇದನ್ನೂ ತೋರಿಸುತ್ತದೆ.

ಅವರಿಷ್ಟದ ಬಣ್ಣದ ಚೆಂಗುಲಾಬಿಯೊಂದನ್ನು ಅವರ ಕೈಲಿಟ್ಟರೆ ಚಂದ. ಜೊತೆಗೊಂದು ಉಡುಗೊರೆಯೂ ಇರಲಿ. ನೀವು ಕೊಡುವ ಉಡುಗೊರೆ ನಿಮ್ಮತನದ ಅಭಿವ್ಯಕ್ತಿಯಾಗುತ್ತದೆ ಎಂಬುದನ್ನು ಮರೆಯಬೇಡಿ. ಮಾಡುವ ಮೇಕಪ್‌, ಕೇಶಶೈಲಿ, ಹಚ್ಚುವ ಲಿಪ್‌ಸ್ಟಿಕ್‌, ಧರಿಸುವ ಬಟ್ಟೆಯ ಬಣ್ಣ, ಕೈಚೀಲ ಕೂಡಾ ನಮ್ಮ ಅಭಿರುಚಿಯ ಅಭಿವ್ಯಕ್ತಿಗಳಾಗುತ್ತವೆ ಎಂಬುದು ಹುಡುಗಿಯರಿಗೆ ತಿಳಿದಿರಬೇಕಾದ ಗುಟ್ಟು.

ADVERTISEMENT

ನೀವು ತುಂಬಾ ಮಾಡರ್ನ್‌ ಆಗಿ ಇರುವುದು ನಿಮ್ಮವರಿಗೆ ಇಷ್ಟವೆಂದಾದರೆ ಅವರಿಷ್ಟದ ಬಣ್ಣದಲ್ಲೇ ಮಿಂಚಬಹುದು. ಸೀದಾ ಸಾದಾ ಆಗಿರಲು ಬಯಸುವವರಾದರೆ ವಿವೇಚನೆಯಿಂದ ಉಡುಗೆ ತೊಡುಗೆಗಳನ್ನು ಆರಿಸಿಕೊಳ್ಳಿ.

ಒಂದು ಕಿವಿಮಾತು ಹೇಳಲೇಬೇಕು. ಪ್ರೇಮ ಕುರುಡು ಅಂತಾರೆ. ಪ್ರೇಮಪಾಶದಲ್ಲಿ ಬಂದಿಯಾಗಿರುವ ಪ್ರೇಮಿಗಳೂ ಕುರುಡರಂತಾಗಬಹುದು. ಆದರೆ ಲೋಕ ಕುರುಡಲ್ಲ!

ಪ್ರೇಮದ ಸ್ವಾಸ್ಥ್ಯಕ್ಕೆ ಪಂಚಸೂತ್ರ

* ಅಲ್ಪತೃಪ್ತಿ, ಗೌರವ, ಪರಸ್ಪರ ಹೊಂದಾಣಿಕೆ, ರಾಜಿ, ಒಂದಿಷ್ಟು ತ್ಯಾಗದ ವಿನಿಮಯ ನಡೆಯುತ್ತಿದ್ದರೆ ಆ ಸಂಬಂಧಕ್ಕೆ ದೀರ್ಘಾಯುಸ್ಸು. ‘ಈಗೊ’ ಅಥವಾ ಸ್ವಯಂಪ್ರತಿಷ್ಠೆ ಮಧ್ಯಪ್ರವೇಶ ಮಾಡಿದರೆ ಸಂಬಂಧದ ಸ್ವಾಸ್ಥ್ಯ ಕೆಟ್ಟು ಅಸ್ವಸ್ಥಗೊಳ್ಳುತ್ತದೆ.

* ಈ ಐದು ಗುಣಗಳನ್ನು ಬೆಳೆಸಿಕೊಳ್ಳುತ್ತೀರಿ ಎಂದುಕೊಳ್ಳೋಣ. ಅದಕ್ಕೆ ನೀವು ಮಾಡಬೇಕಾದುದೇನು? ಎಲ್ಲಿ ಅಲ್ಪತೃಪ್ತರಾಗಬೇಕು, ಎಲ್ಲಿ ತ್ಯಾಗ ಮಾಡಬೇಕು ಎಂಬ ವಿವೇಚನೆ ಇದ್ದರೆ ಸಾಕು.

* ನಿಮ್ಮ ಅಭಿರುಚಿ ಮತ್ತು ನಿಮ್ಮತನಕ್ಕೆ ಮಸೂರ ಹಿಡಿಯುವ ಸಂದರ್ಭಗಳಲ್ಲಿ ಈ ಪಂಚಸೂತ್ರಗಳ ಪಾಲನೆಯಾಗಬೇಕು.

* ಉದಾಹರಣೆಗೆ, ನಿಮಗೆ ಕೊಟ್ಟ ಉಡುಗೊರೆ ಅಥವಾ ಊಟೋಪಚಾರಕ್ಕೆಡ ವ್ಯಯಿಸಿದ ಬೆಲೆಗಿಂತ ಅದರ ಹಿಂದಿರುವ ಕಾಳಜಿಯನ್ನು ಗಮನಿಸಿ. ದುಬಾರಿ ಉಡುಗೊರೆಗಳಾಗಲಿ, ವಿಲಾಸಿ ಜೀವನಶೈಲಿಯಾಗಲಿ ಸಂಬಂಧಗಳ ಸ್ವಾಸ್ಥ್ಯವನ್ನು ಉಳಿಸುವುದೂ ಇಲ್ಲ ಬೆಳೆಸುವುದೂ ಇಲ್ಲ ಎಂಬುದು ನೆನಪಿರಬೇಕು. ಇದು, ಇದ್ದುದರಲ್ಲೇ ಸಿಕ್ಕಿದ್ದರಲ್ಲೇ ಸಂತೃಪ್ತಿ ಕಾಣುವ ಅಲ್ಪತೃಪ್ತಿ.

* ಪರಸ್ಪರ ಗೌರವ, ಅಭಿಮಾನ ಇದ್ದರೆ ಬಾಯಿ ತಪ್ಪಿ ಮಾತನಾಡುವ, ನಡೆದುಕೊಳ್ಳುವ ಪ್ರಮೇಯ ಎದುರಾಗುವುದಿಲ್ಲ. ಈ ಭಾವ ಸಂಬಂಧವೆಂಬ ಗುಡಿಗೆ ಅಡಿಪಾಯ. ಹೊಂದಾಣಿಕೆ ಮತ್ತು ರಾಜಿ ಸೂತ್ರಗಳೂ ಈ ಭಾವದ ನೆರಳಂತೆ ಅನುಸರಿಸುತ್ತವೆ.

*ನಿಸ್ವಾರ್ಥತೆಯ ಮತ್ತೊಂದು ರೂಪವೇತ್ಯಾಗ ಮನೋಭಾವ. ನಿಮ್ಮವರಿಗಾಗಿ ನೀವೇನು ಬಿಟ್ಟುಕೊಡುತ್ತೀರಿ, ಅವರೇನು ತ್ಯಾಗ ಮಾಡುತ್ತಾರೆ ಮತ್ತು ಅದಕ್ಕಾಗಿ ಕರುಬದೆ ಇಬ್ಬರೂ ಆಯಾ ಸಂದರ್ಭದಲ್ಲಿ ಎಷ್ಟು ಸಹಜವಾಗಿ ಸ್ವೀಕರಿಸುತ್ತೀರಿ ಎಂಬುದು ಮುಖ್ಯ. ಇದು, ನಿಮ್ಮ ಸಂಬಂಧವನ್ನು ಕಂಫರ್ಟ್‌ ಫೀಲಿಂಗ್‌ನಲ್ಲಿಡಲು ಸಹಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.