ADVERTISEMENT

ನಾಟಕ ವಿಮರ್ಶೆ: ಅಸಮಾನತೆಯನ್ನು ವಿಡಂಬಿಸುವ ವರ್ಣಪಲ್ಲಟ

ಡಾ.ರುದ್ರೇಶ್ ಅದರಂಗಿ
Published 6 ಡಿಸೆಂಬರ್ 2025, 23:41 IST
Last Updated 6 ಡಿಸೆಂಬರ್ 2025, 23:41 IST
ನಾಟಕದ ದೃಶ್ಯ
ನಾಟಕದ ದೃಶ್ಯ   

ಸಿಡ್ಲುಪಟ್ಟಣದ ಕೆಳಗಿನ ಕೇರಿಯ ಮಾಧ, ಮೇಷ್ಟ್ರು ಕಾರಣದಿಂದಾಗಿ ಮಾಧವನಾಗಿ ಪಲ್ಲಟಗೊಂಡವನು. ಬಡತನವೇ ಹಾಸುಹೊದ್ದವನು. ಶಾಲೆಯನ್ನು ಬಿಡಬೇಕಾದವನಿಗೆ ಕೈಹಿಡಿದದ್ದು ಸಂವಿಧಾನ. ದಕ್ಕಿದ ಅವಕಾಶವನ್ನು ಬಳಸಿಕೊಂಡು ಕಾಲೇಜಿನ ಮೆಟ್ಟಿಲನ್ನು ಹತ್ತಿದವನು. ಕೀಳರಿಮೆಯಿಂದ ಹೊರಬಂದು ಕವಿತೆ ಬರೆಯುವ ಪ್ರತಿಭಾವಂತ. ಮಾಧ ಮಾಧವನಾಗಿ, ಅಸಮಾನತೆಯಿಂದ ಸಮಾನತೆಯ ಕಡೆಗಿನ ಮೇಲ್ಮುಖ ಚಲನೆಯ ಕಥಾಹಂದರವನ್ನೊಳಗೊಂಡಿದ್ದು ಕೆ.ವೈ.ನಾರಾಯಣಸ್ವಾಮಿಯವರ ನಾಟಕ ‘ವರ್ಣಪಲ್ಲಟ’. ಇತ್ತೀಚೆಗೆ ಬೆಂಗಳೂರಿನ ಕಲಾಗ್ರಾಮದಲ್ಲಿ ‘ಅನಾವರಣ’ ತಂಡದ ಕಲಾವಿದರು ಶಶಿಧರ ಭಾರಿಘಾಟ್ ನಿರ್ದೇಶನದಲ್ಲಿ ಈ ನಾಟಕವನ್ನು ಪ್ರದರ್ಶಿಸಿದರು.

ತರಗತಿ ಕೂಡ ಸಾಮಾಜಿಕ ಸಂರಚನೆ ತರವೇ ಇನ್ನೂ ಪಲ್ಲಟಗೊಂಡಿಲ್ಲವೆಂಬುದಕ್ಕೆ ಪ್ರತಿಭಾವಂತನಾದ ಮಾಧ ಕೊನೆಬೆಂಚಿನವನಾದರೆ, ಅಗ್ರಹಾರದ ರಾಧ ಮೊದಲಬೆಂಚಿನ ಸಹಪಾಠಿ. ಮಾಧವನಲ್ಲೊಬ್ಬ ಅಸಾಧಾರಣ ಕವಿಯಿದ್ದಾನೆ ಎನ್ನುವುದನ್ನು ರಾಧ ಬಲ್ಲವಳು. ಮಾಧವನ ‘ನಾನು ಕುಡಿವ ನೀರು ರಕ್ತವೆಂದರಿವಾಯ್ತು’ ಕವಿತೆಯ ತೀಕ್ಷ್ಣತೆಯನ್ನು ಗ್ರಹಿಸಿದ ಮೇಷ್ಟ್ರು ಮಾಧನಿಗೆ ಗೊತ್ತಿಲ್ಲದಂತೆ ‘ಪ್ರಜಾವಾಣಿ ಕವನ ಸ್ಪರ್ಧೆ’ಗೆ ಕಳುಹಿಸುತ್ತಾರೆ. ಅಲ್ಲಿ ಮೊದಲ ಬಹುಮಾನ ಬಂದಾಗ ಕಾಲೇಜಿನ ನೋಟಿಸ್ ಬೋರ್ಡಿನ ಮೇಲೆ ರಾರಾಜಿಸುತ್ತದೆ. ರಾಧಳಿಂದ ಮಾಧವನಿಗೆ ಮೆಚ್ಚುಗೆಯ ನಲ್ನುಡಿ. ಮಾಧವನು ಬರೆದುಕೊಟ್ಟ ಕವನ ‘ಮಹಾಪ್ರಾಣಪ್ರಿಯೆ ರಾಧ’ ಮನೆಯಲ್ಲಿ ರಾದ್ಧಾಂತವನ್ನುಂಟುಮಾಡುತ್ತದೆ. ಅರ್ಥವು ಅಪಾರ್ಥಗೊಂಡು ರಾಧಳ ತಂದೆ ಪಾಪುವನ್ನು ಪತ್ತೇದಾರಿಗೆ ಕಳುಹಿಸುತ್ತಾನೆ. ಪಾಪು ಮಾಧವನ ಜಾತಿಯನ್ನು ಪತ್ತೆ ಹಚ್ಚುವುದು ಕಾಲ ಎಷ್ಟೇ ಬದಲಾದರೂ ಜಾತಿ ಬದಲಾಗುವುದಿಲ್ಲವೆಂಬುದನ್ನು ನಾಟಕ ವಿಡಂಬಿಸುತ್ತದೆ.

ರಾಧ-ಮಾಧವರ ಸ್ನೇಹ ಪ್ರೇಮವಾಗಿ ಪಲ್ಲಟಗೊಂಡಾಗ ರಾಜಕಾರಣಿ ಮತ್ತು ಪೊಲೀಸರ ಆಗಮನವಾಗುತ್ತದೆ. ಸಹಜವಾದ ಪ್ರೇಮ ಜಾತಿ ಬಣ್ಣ ಪಡೆದುಕೊಳ್ಳುತ್ತದೆ. ರಾಜಕಾರಣ ತನ್ನ ಅಧಿಕಾರದ ಬಲದಿಂದ ನಿಯಂತ್ರಿಸುವ ಹಾಗೂ ಮತೀಯಗೊಳಿಸುವ ಹುನ್ನಾರವನ್ನು ನಾಟಕ ಅನಾವರಣ ಮಾಡುತ್ತದೆ. ವ್ಯವಸ್ಥೆಯು ಯಾವಾಗಲೂ ಯಥಾಸ್ಥಿತಿ ಪರವಾಗಿದ್ದು, ಬದಲಾವಣೆಯನ್ನು ಬಯಸದ ಅಧಿಕಾರ ಮತ್ತು ಶ್ರೇಣೀಕೃತ ಸಮಾಜವು ರಾಧ–ಮಾಧವರ ಪ್ರೇಮವನ್ನು ಹತ್ತಿಕ್ಕುವ ಹುನ್ನಾರವನ್ನು ಮಾಡುತ್ತದೆ. ರಾಧ–ಮಾಧವರು ಕಾಣೆಯಾಗಲು ಮೇಷ್ಟ್ರು ಕಾರಣವೆಂದು ಶಿಕ್ಷೆಗೆ ಗುರಿಪಡಿಸಿ ಸೆರೆಮನೆಗೆ ತಳ್ಳಲಾಗುತ್ತದೆ. ಪ್ರಗತಿಪರ ವಿಚಾರವಾದಿಗಳಿಗೆ ನಗರ ನಕ್ಸಲರೆಂಬ ಹಣೆಪಟ್ಟಿಯನ್ನು ಹಚ್ಚಿ ಸೆರೆಮನೆಗೆ ತಳ್ಳಲಾಗುತ್ತಿದೆಯೆಂಬುದನ್ನು ಕೂಡ ನಾಟಕವು ಧ್ವನಿಸುತ್ತದೆ. ಹತ್ತು ವರ್ಷಗಳು ಕಳೆದರೂ ಮೇಷ್ಟ್ರು ಬಿಡುಗಡೆಯಿಲ್ಲವೆಂಬ ವಿಷಾದದೊಂದಿಗೆ ನಾಟಕ ಮುಕ್ತಾಯವಾಗುತ್ತದೆ.

ADVERTISEMENT

ನಾಟಕದಲ್ಲಿ ಚುರುಕಾದ ಸಂಭಾಷಣೆಯಿದೆ. ಪಾಪು ಮಾಧವನ ಜಾತಿಯನ್ನು ಪತ್ತೆಹಚ್ಚುವ ಸಂದರ್ಭದಲ್ಲಿನ ‘ಹಲಗೆಯ ನಾದದ ಮೂಲಕ ಶತಮಾನಗಳ ಕೋಪ ತಾಪಗಳು ಉನ್ಮಾದಗಳಾಗಿ ಹೊರಹೊಮ್ಮುವಾಗ ಕೇಳಬೇಕು’ ಎನ್ನುವುದು ಕೇವಲ ಮಾತಾಗದೆ ಸಶಕ್ತ ಧ್ವನಿಯಾಗಿದೆ. ಮಾಧ ಪಾತ್ರವು ದೇವನೂರ ಮಹಾದೇವರ ಕುಸುಮಬಾಲೆಯೊಂದಿಗೆ ಸಂವಹನಿಸುವುದು ಕೇವಲ ತಂತ್ರವಾಗಿರದೆ ನಾಟಕೀಯ ಧ್ವನಿಯಾಗಿ ಪ್ರತಿಫಲಿತಗೊಂಡಿದೆ. ಮೇಷ್ಟ್ರು ತರಗತಿಯಲ್ಲಿ ಓದಿಸುವ ಲಂಕೇಶರ ‘ಸಂಕ್ರಾಂತಿ’ ನಾಟಕದ ರುದ್ರ ಮತ್ತು ಉಷಾ, ಮಾಧವ ಮತ್ತು ರಾಧಳ ಮೂಲಕ ಕಲ್ಯಾಣದ ಕ್ರಾಂತಿಯು ಧ್ವನಿತಗೊಂಡು ಬಸವಣ್ಣನ ಆಗಮನವನ್ನು ನಿರೀಕ್ಷಿಸುತ್ತದೆ. ನಾಟಕದಲ್ಲಿ ಮತ್ತೆ ಮತ್ತೆ ಅಂಬೇಡ್ಕರ್‌ ವಿಚಾರಗಳು ಪ್ರಸ್ತಾಪಗೊಂಡು ಸಂವಿಧಾನವೇ ಎಲ್ಲಕ್ಕೂ ಪರಿಹಾರವೆಂಬುದು ಸೂಚಿಸುತ್ತದೆ.

ನಾಟಕಕಾರ ಕೆ.ವೈ. ನಾರಾಯಣಸ್ವಾಮಿ ಸಮಕಾಲೀನ ಸಂಗತಿಗಳೊಂದಿಗೆ ಸಂವಿಧಾನವನ್ನು ಬೆಸೆದಿರುವ ಕುಸುರಿ ಕೆಲಸ ಕಲಾತ್ಮಕಗೊಂಡಿದೆ. ಇದುವರೆಗಿನ ಅವರ ನಾಟಕಗಳಲ್ಲಿನ ವಸ್ತು ಪುರಾಣ ಮತ್ತು ಚರಿತ್ರೆಯಿಂದ ಹೆಣ್ಣು ಮತ್ತು ಸಮಾಜದ ಕಡೆಗೆ ಹೊರಳಿದ್ದು, ಅಂಬೇಡ್ಕರ್ ಹಾಗೂ ಸಂವಿಧಾನವನ್ನು ನಾಟಕದಲ್ಲಿ ಒಳಗೊಂಡಿರುವುದು ಒಳ್ಳೆಯ ಬೆಳವಣಿಗೆ.

ನಿರ್ದೇಶಕ ಶಶಿಧರ ಭಾರಿಘಾಟ್ ಮೇಳದ ಮೂಲಕ ನಾಟಕವನ್ನು ವಿನ್ಯಾಸಿಸಿದ್ದಾರೆ. ಮೇಳವೇ ಪಾತ್ರಗಳಾಗಿ, ದೃಶ್ಯಗಳಾಗಿ ಸಾಗುವ ವಿನ್ಯಾಸವು ಚಲನಶೀಲತೆಯನ್ನು ಪಡೆದುಕೊಂಡಿದೆ. ಒಂಬತ್ತು ಸ್ಟೂಲುಗಳನ್ನೇ ರಂಗ ಪರಿಕರಗಳಾಗಿ ಮರ, ಶ್ರೇಣೀಕರಣ, ತರಗತಿ, ಮನೆ, ಪೊಲೀಸ್ ಸ್ಟೇಷನ್, ಬೀದಿ, ಸಭೆಯನ್ನಾಗಿ ಬಳಸಿಕೊಳ್ಳುವಲ್ಲಿನ ತಂತ್ರವು ಚೆನ್ನಾಗಿದೆ. ನಾಟಕದ ಒಳಗಿರುವ ಅಂಬೇಡ್ಕರರ ಸಮಾನತೆ, ಶಿಕ್ಷಣ, ಸಂಘಟನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ವಿಸ್ತರಿಸುವ ಅವಕಾಶವೂ ಇದೆ. ಮೇಷ್ಟ್ರಾಗಿ ರಾಹುಲ್ ಅಭಿನಯ ಪರಿಣಾಮಕಾರಿಯಾಗಿದೆ. ಮಾಧವನಾಗಿ ಮನೋಜ್ ಮುಗ್ಧವಾಗಿ ಅಭಿನಯಿಸಿದ್ದಾರೆ. ಪಾಪುವಿನ ವಿಚಾರಣೆಯ ಸಂದರ್ಭದಲ್ಲಿನ ಅವರ ಮಾತುಗಳು ಆತ್ಮವಿಶ್ವಾಸದಿಂದ ಕೂಡಿದ್ದು ನಾಟಕದೊಳಗಿನ ವಿಚಾರಕ್ಕೆ ಧ್ವನಿಯಾಗಿದ್ದಾರೆ. ಅವರ ಮುಗ್ಧವಾದ ನಟನೆ ಪಾತ್ರಕ್ಕೆ ಪೂರಕವಾಗಿದೆ. ರಾಧಳಾಗಿ ಸಿಂಚನ ಲವಲವಿಕೆಯಿಂದ ಗಮನ ಸೆಳೆಯುತ್ತಾರೆ. ಪಾಪುವಾಗಿ ಮಹಾಂತೇಶ್ ಹಾಗೂ ಗುಂಪು ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಸಂಗೀತ ಸಾಂಗತ್ಯದಲ್ಲಿ ಹವೀಶ್ ಶ್ರೀನಾಥ್ ನಾಟಕದ ವಸ್ತುವನ್ನು ಸಂವಹನ ಮಾಡುವಲ್ಲಿ ಇನ್ನಷ್ಟು ನಾದದ ಕಡೆಗೆ ಗಮನಹರಿಸಬೇಕು. ಮಾಧವ ಚರ್ಮದ ಹಲಗೆ ಇಷ್ಟವೆಂದಾಗ ಹಲಗೆಯ ಸದ್ದೇ ಇಲ್ಲದಿರುವುದು ಕೊರತೆಯೆನ್ನಿಸುತ್ತದೆ. ರಂಗ ಸಜ್ಜಿಕೆಯಲ್ಲಿ ವಿಠ್ಠಲ್ ಅಪ್ಪಯ್ಯ, ವರದರಾಜ, ಬೆಳಕಿನಲ್ಲಿ ರವಿ ಎಂ. ನಾಟಕವನ್ನು ಚಂದವಾಗಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.