ADVERTISEMENT

ಮಾಡಬೇಕಾದ ಕೆಲಸ ಮುಂದಕ್ಕೆ ಹಾಕುವುದೇಕೆ?

​ಪ್ರಜಾವಾಣಿ ವಾರ್ತೆ
Published 11 ಜುಲೈ 2020, 19:30 IST
Last Updated 11 ಜುಲೈ 2020, 19:30 IST
   

ಮನೆಯಲ್ಲಿ ಅಪ್ಪ–ಅಮ್ಮ ಅಥವಾ ಶಾಲೆಯಲ್ಲಿ ಟೀಚರ್‌ ಯಾವುದೋ ಒಂದು ಕೆಲಸ ವಹಿಸಿರುತ್ತಾರೆ. ಆ ಕೆಲಸವನ್ನು ನಿರ್ದಿಷ್ಟ ಸಮಯದಲ್ಲಿ ಮಾಡಿ ಮುಗಿಸಬೇಕು ಎಂದೂ ಹೇಳಿರುತ್ತಾರೆ. ಅದಕ್ಕೆ ಮಕ್ಕಳು ‘ಹ್ಞೂಂ’ ಎಂದು ಹೇಳಿಬಂದಿರುತ್ತಾರೆ. ಆದರೆ ಸಮಯಕ್ಕೆ ಸರಿಯಾಗಿ ಕೆಲಸ ಪೂರ್ಣಗೊಳ್ಳುವುದಿಲ್ಲ. ಕೆಲಸವನ್ನು ‘ಆಮೇಲೆ ಮಾಡಿದರಾಯಿತು’ ಎಂಬ ಭಾವನೆ ಮನಸ್ಸಿಗೆ ಬಂದಿರುತ್ತದೆ. ಇದಕ್ಕೆ ಕಾರಣಗಳು ಏನಿರಬಹುದು?

ಮಾಡಲೇಬೇಕಾದ ಕೆಲಸವನ್ನು ಮುಂದಕ್ಕೆ ಹಾಕುವ ಪ್ರವೃತ್ತಿಗೆ ಹಲವು ನಿರ್ದಿಷ್ಟ ಕಾರಣಗಳು ಇವೆ ಎನ್ನುತ್ತಾರೆ ಮನಃಶಾಸ್ತ್ರಜ್ಞರು. ಅದರಲ್ಲಿ ಒಂದು, ಎಲ್ಲ ಕೆಲಸಗಳೂ ಅತ್ಯಂತ ಪರಿಪೂರ್ಣವಾಗಿ ಆಗಬೇಕು ಎಂಬುದು! ಕೆಲಸಗಳೆಲ್ಲವೂ ಪಕ್ಕಾ ಆಗಿ ನಡೆಯಬೇಕು ಎಂಬ ಬಯಕೆ ಇರುವವರು, ಅತ್ಯಂತ ಪರಿಪೂರ್ಣವಾಗಿ, ಒಂಚೂರೂ ಲೋಪ ಇಲ್ಲದಂತೆ ಕೆಲಸ ಮಾಡಲು ಆಗುತ್ತದೆ ಎಂಬ ವಿಶ್ವಾಸ ಮೂಡದೆ ಇದ್ದರೆ, ಆ ಕೆಲಸವನ್ನು ಮುಂದಕ್ಕೆ ಹಾಕುತ್ತ ಇರುತ್ತಾರಂತೆ. ಒಂದು ಕೆಲಸ ಹೀಗೆ ಆಗಬೇಕು ಎಂಬ ಕಲ್ಪನೆಯನ್ನು ಮನಸ್ಸಿನಲ್ಲಿ ಮೂಡಿಸಿಕೊಂಡು, ವಾಸ್ತವದಲ್ಲಿ ಆ ಕೆಲಸವನ್ನು ಅಷ್ಟೊಂದು ಚೆಂದವಾಗಿ ಮಾಡಲು ಆಗುವುದಿಲ್ಲ ಎಂದು ಅರಿವಾದಾಗ ಮನುಷ್ಯ ಕೆಲಸವನ್ನು ಮುಂದಕ್ಕೆಹಾಕುತ್ತ ಇರುತ್ತಾನೆ ಎನ್ನುತ್ತಾರೆ ಮನೋವಿಜ್ಞಾನಿಗಳು.

ತಾವು ಮಾಡಿದ ಕೆಲಸಕ್ಕೆ ಒಳ್ಳೆಯ ಪ್ರತಿಕ್ರಿಯೆ ಬೇರೆಯವರಿಂದ ಬರದಿರಬಹುದು ಎಂಬ ಭಯವೂ ಕೆಲಸವನ್ನು ಮುಂದಕ್ಕೆ ಹಾಕಲು ಒಂದು ಕಾರಣವಾಗಬಹುದು. ಹಾಗೆಯೇ, ಮಾಡುವ ಕೆಲಸಕ್ಕೆ ಸಿಗಬೇಕಿರುವ ಪ್ರತಿಫಲವು ಕೆಲಸ ಮುಗಿದ ತಕ್ಷಣಕ್ಕೆ ಸಿಗುವುದಿಲ್ಲ; ಅದು ಸಿಗುವುದು ಬಹಳ ಕಾಲದ ನಂತರ ಎಂಬುದು ಕೂಡ ಕೆಲಸ ಮುಂದಕ್ಕೆ ಹಾಕಲು ಒಂದು ಕಾರಣ ಆಗಬಹುದು!

ADVERTISEMENT

ಕೆಲವರು ಕೆಲಸವನ್ನು ಮುಂದಕ್ಕೆ ತಳ್ಳಿಕೊಂಡು ಹೋಗುವುದಕ್ಕೆ ಇನ್ನೊಂದು ಕಾರಣವಿದೆ. ತಮಗೆ ವಹಿಸಿದ ಕೆಲಸವನ್ನು ಮುಂದಕ್ಕೆ ಹಾಕುತ್ತ, ಆ ಕೆಲಸ ವಹಿಸಿದವನಿಗೆ ಒಂದು ಪಾಠ ಕಲಿಸುವ ಬಯಕೆಯನ್ನೂ ಕೆಲವರು ಹೊಂದಿರುತ್ತಾರಂತೆ. ಉದಾಹರಣೆಗೆ, ಕಚೇರಿಯಲ್ಲಿ ಬಾಸ್‌ ತಮಗೆ ಕೆಲಸ ವಹಿಸುವುದನ್ನು ಒಪ್ಪದ ಕೆಲವು ನೌಕರರು ಆ ಕೆಲಸ ಪೂರ್ಣಗೊಳಿಸದೆ ಹಾಗೆಯೇ ಕುಳಿತುಕೊಳ್ಳುವುದು ಇದೆ ಎನ್ನುತ್ತಾರೆ ಮನಃಶಾಸ್ತ್ರಜ್ಞರು.

(ವಿವಿಧ ಮೂಲಗಳಿಂದ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.