ಬೇಸಿಗೆಯಲ್ಲಿ ರುಚಿಕರ ಕಾಡು ಹಣ್ಣುಗಳಿಗಾಗಿ ಹುಡುಕಾಟ ನಡೆಸುವುದು ಸಾಮಾನ್ಯ. ಕಾಡುಗಳಲ್ಲಿ ಸಿಗುವ ಹಣ್ಣುಗಳಿಗೆ ಬಲು ಬೇಡಿಕೆಯೂ ಇರುತ್ತದೆ. ಬೆಟ್ಟ, ಗುಡ್ಡ, ನದಿ, ಜಲಪಾತಗಳಿರುವ ಮಲೆನಾಡಿನಂತಹ ಊರುಗಳಿಗೆ ಹೊಂದಿಕೊಂಡಿರುವ ಕಾಡುಗಳಲ್ಲಿ ಬೇಸಿಗೆ ಬಿಸಿ ತಣಿಸಲೆಂಬಂತೆ ಫಲ ಬಿಡುವ ಕಾಡು ಹಣ್ಣುಗಳಿಗೆ ಬರವಿಲ್ಲ.
ಅರಣ್ಯ ಜಿಲ್ಲೆ ಎಂದೇ ಹೆಸರಾಗಿರುವ ಉತ್ತರ ಕನ್ನಡ, ದೇಶದಲ್ಲಿಯೇ ವಿಶಿಷ್ಟವಾದದ್ದು. ಕರಾವಳಿ, ಮಲೆನಾಡು, ಅರೆ ಮಲೆನಾಡು, ಅರೆ ಬಯಲುಸೀಮೆಗಳಿಂದ ಆವೃತವಾದ ಈ ಜಿಲ್ಲೆಯ ಜನರ ಬದುಕು ಕೂಡ ವಿಭಿನ್ನವಾದದ್ದು. ಮಾರ್ಚ್, ಏಪ್ರಿಲ್, ಮೇ ತಿಂಗಳು ಬಂತೆಂದರೆ ಬಾಲಕರಿಂದ, ವೃದ್ಧರ ವರೆಗೂ ಕಾಡುವ ಕಾಡು ಹಣ್ಣುಗಳು ಬಾಯಲ್ಲಿ ನೀರೂರಿಸಿ ಕಾಡು ಮೇಡುಗಳನ್ನು ತಿರುಗಾಡಿಸದೆ ಬಿಡೆವು. ಮುಳ್ಳಣ್ಣು, ಕರಿಮುಳ್ಳಣ್ಣು, ಕಡ್ಲಣ್ಣು, ಕವಳೆಹಣ್ಣು, ಉಲಗೆಹಣ್ಣು, ಗುಡ್ಡೆಗೇರು, ಸಂಪಿಗೆಹಣ್ಣು, ಕಳ್ಳಿಹಣ್ಣು, ಕಾರಿಹಣ್ಣು, ಮುರುಗಲಹಣ್ಣು, ಮುಳ್ಚುಂಜಿಹಣ್ಣು, ನೇರಳೆಹಣ್ಣು, ಚಳ್ಳೆಹಣ್ಣು, ಈಚಲಹಣ್ಣು, ಇಳ್ಳೆಹಣ್ಣು, ನರಕ್ಲಹಣ್ಣು... ಹೀಗೆ. ಇವೆಲ್ಲ ಮನುಷ್ಯರಿಗೆ ಹೇಗೆ ಇಷ್ಟವೊ ಹಾಗೆ ಪಕ್ಷಿ ಪ್ರಾಣಿಗಳಿಗೂ ಕೂಡ.
ಈ ಹಣ್ಣುಗಳನ್ನು ನೇರವಾಗಿ ತಿನ್ನುವುದರ ಜೊತೆಗೆ ಬೇರೆಬೇರೆ ಖಾದ್ಯವನ್ನಾಗಿ ಮಾಡಿ ತಿನ್ನುವುದು ಉಂಟು. ಬಹುತೇಕ ಈ ಎಲ್ಲ ಕಾಡು ಹಣ್ಣುಗಳು ಔಷಧಿಯ ಗುಣ ಹೊಂದಿದ್ದು ಕೆಲವನ್ನು ಜೂಸ್ ಮಾಡಿ ಕುಡಿಯುತ್ತಾರೆ. ಬೇರೆಬೇರೆ ಪದ್ಧತಿಯ ಮೂಲಕ ಹಲವನ್ನು ವರ್ಷಕಾಲದವರೆಗೆ ಇಟ್ಟರೆ, ಇನ್ನು ಕೆಲವು ಅಡುಗೆಯಲ್ಲಿ ಬಳಸಲ್ಪಡುತ್ತವೆ. ಈ ಎಲ್ಲಾ ಕಾಡು ಹಣ್ಣುಗಳು ದೇಹಕ್ಕೆ ತಂಪು, ಆರೋಗ್ಯಕ್ಕೆ ಹಿತ. ಈ ಕಾಡು ಹಣ್ಣುಗಳನ್ನು ಸಂಗ್ರಹಿಸಿ ಬಸ್ ನಿಲ್ದಾಣ, ಪೇಟೆ ಹಾಗೂ ಮನೆ ಮನೆಗೆ ತಿರುಗಿ ಮಾರಾಟ ಮಾಡುವುದನ್ನು ಕಾಣಬಹುದು. ಆದರೆ ಬೆಲೆಯಲ್ಲಿ ಯಾವ ನಿಖರತೆಯೂ ಇಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.