ADVERTISEMENT

ಕ್ರಿಕೆಟ್ ಕ್ರೇಜ್: ವಿಶ್ವಕಪ್‌ ಕ್ರಿಕೆಟ್ ‘ಹವಾ’

ಮಹಮ್ಮದ್ ನೂಮಾನ್
Published 11 ಜೂನ್ 2019, 6:23 IST
Last Updated 11 ಜೂನ್ 2019, 6:23 IST
ಕಾಸ್ಮೊಪಾಲಿಟನ್‌ ಕ್ಲಬ್‌ನಲ್ಲಿ ಬೃಹತ್‌ ಸ್ಕ್ರೀನ್‌ನಲ್ಲಿ ವಿಶ್ವಕಪ್‌ ಪಂದ್ಯ ವೀಕ್ಷಿಸುತ್ತಿರುವ ಕ್ರಿಕೆಟ್‌ ಪ್ರೇಮಿಗಳು
ಕಾಸ್ಮೊಪಾಲಿಟನ್‌ ಕ್ಲಬ್‌ನಲ್ಲಿ ಬೃಹತ್‌ ಸ್ಕ್ರೀನ್‌ನಲ್ಲಿ ವಿಶ್ವಕಪ್‌ ಪಂದ್ಯ ವೀಕ್ಷಿಸುತ್ತಿರುವ ಕ್ರಿಕೆಟ್‌ ಪ್ರೇಮಿಗಳು   

ರನ್‌ ಎಷ್ಟಾಯಿತು... ಔಟಾಗಿದ್ದು ಯಾರು... ಗೆಲ್ಲಲು ಇನ್ನೆಷ್ಟು ರನ್‌ ಗಳಿಸಬೇಕು...

ನಾಲ್ಕೈದು ಮಂದಿ ಕ್ರಿಕೆಟ್‌ ಪ್ರೇಮಿಗಳು ಜತೆಯಾದರೆ ಇಂತಹ ಪ್ರಶ್ನೆಗಳು ಮತ್ತು ಅವುಗಳ ಉತ್ತರ ಕೇಳಿಬರುವುದು ಸಹಜ. ಹೋಟೆಲ್‌ ಅಥವಾ ಚಹಾ ಅಂಗಡಿ ಮುಂದೆ ಗೆಳೆಯರು ಜತೆಗೂಡಿದಾಗ, ಆಟೊ ಚಾಲಕರು ಒಂದೆಡೆ ಸೇರಿದಾಗ ನಡೆಯುವ ಚರ್ಚೆಗಳಲ್ಲಿ ಈಗ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿ ಕೂಡ ಸೇರಿದೆ.

ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ಕ್ರಿಕೆಟ್‌ ಟೂರ್ನಿಯ ‘ಹವಾ’ ಸಾಂಸ್ಕೃತಿಕ ನಗರಿಯಲ್ಲೂ ಕಾಣಬಹುದು. ಕ್ರಿಕೆಟ್‌ ಪ್ರೇಮಿಗಳು ಒಟ್ಟಾದಾಗ ಅಲ್ಲಿ ಸೋಲು ಗೆಲುವಿನ ಲೆಕ್ಕಚಾರ, ಆಟದ ಕುರಿತ ಗಂಭೀರ ಚರ್ಚೆ ನಡೆಯುವುದು ಸಾಮಾನ್ಯ.

ADVERTISEMENT

ಮೈಸೂರಿನಲ್ಲಿ ಕ್ರೀಡಾ ಸಂಸ್ಕೃತಿ ಆಳವಾಗಿ ಬೇರೂರಿದೆ. ವಿಶ್ವದ ವಿವಿಧ ಭಾಗಗಳಲ್ಲಿ ಪ್ರಮುಖ ಕ್ರೀಡಾಕೂಟಗಳು ನಡೆಯುವಾಗ ಆ ಸಂಸ್ಕೃತಿ ಹಲವು ರೂಪಗಳಲ್ಲಿ ಅನಾವರಣಗೊಳ್ಳುತ್ತದೆ. ವಿಶ್ವಕಪ್‌ ಟೂರ್ನಿ ಮೈಸೂರಿನಲ್ಲೂ ತನ್ನ ‘ಹವಾ’ ಸೃಷ್ಟಿಸಿದೆ.

ಕೆಲವು ದೊಡ್ಡ ಹೋಟೆಲ್‌ಗಳಲ್ಲಿ ಬೃಹತ್‌ ಸ್ಕ್ರೀನ್‌ ಅಳವಡಿಸಿ ಕ್ರಿಕೆಟ್‌ ಪಂದ್ಯಗಳ ನೇರ ಪ್ರಸಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಾನುವಾರ (ಜೂ.9) ನಡೆದಿದ್ದ ಭಾರತ– ಆಸ್ಟ್ರೇಲಿಯಾ ನಡುವಿನ ಪಂದ್ಯವನ್ನು ನೂರಾರು ಮಂದಿ ಬೃಹತ್‌ ಪರದೆಯಲ್ಲಿ ವೀಕ್ಷಿಸಿದ್ದರು.

ದೊಡ್ಡ ಪರದೆಯಲ್ಲಿ ಪಂದ್ಯ ವೀಕ್ಷಿಸುವಾಗ ವಿಶೇಷ ಅನುಭವ ದೊರೆಯುತ್ತದೆ. ಆದ್ದರಿಂದ ಕೆಲವು ಹೋಟೆಲ್‌ಗಳಲ್ಲಿ ಪಂದ್ಯಗಳ ನೇರ ಪ್ರಸಾರಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಕಾಸ್ಮೊಪಾಲಿಟನ್‌ ಕ್ಲಬ್‌ನಲ್ಲಿ ಮೂರು ಬೃಹತ್‌ ಸ್ಕ್ರೀನ್‌ಗಳನ್ನು ಅಳವಡಿಸಲಾಗಿದೆ ಎಂದು ಮೈಸೂರು ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ತಿಳಿಸಿದರು.

ವಿಶ್ವಕಪ್‌ ಫುಟ್‌ಬಾಲ್‌, ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟ್ವೆಂಟಿ–20 ಟೂರ್ನಿ ಒಳಗೊಂಡಂತೆ ಪ್ರಮುಖ ಕ್ರೀಡಾಕೂಟಗಳ ಸಂದರ್ಭಗಳಲ್ಲಿ ಬೃಹತ್‌ ಪರದೆಗಳಲ್ಲಿ ಪಂದ್ಯಗಳ ನೇರಪ್ರಸಾರಕ್ಕೆ ಅವಕಾಶ ಕಲ್ಪಿಸ ಲಾಗುತ್ತದೆ. ಇದರಿಂದ ಗ್ರಾಹಕರನ್ನು ಸೆಳೆಯಲು ಸಾಧ್ಯವಾ ಗುತ್ತದೆ ಎಂದು ಹೋಟೆಲ್ ಮಾಲೀಕರೊಬ್ಬರು ತಿಳಿಸಿದರು.

ಎಲ್ಲರೂ ಜತೆಯಾಗಿ ಕುಳಿತು ಹರಟೆ ಹೊಡೆಯುತ್ತಾ ಪಂದ್ಯ ವೀಕ್ಷಿಸುವುದು ವಿಶೇಷ ಅನುಭವ ನೀಡುತ್ತದೆ. ಈ ಕಾರಣ ಮನೆಯಲ್ಲಿ ಟಿ.ವಿ ಮುಂದೆ ಕುಳಿತು ಪಂದ್ಯ ನೋಡುವ ಬದಲು ಹೆಚ್ಚಿನವರು ಹೋಟೆಲ್‌, ಕ್ಲಬ್‌ಗಳಲ್ಲಿ ಕುಳಿತು ನೋಡುತ್ತಾರೆ. ಅಲ್ಲಿ ಗೆಳೆಯರ ಜತೆಗೂಡಿ ಆಟದ ಕ್ಷಣಗಳನ್ನು ಸವಿಯುತ್ತಾರೆ.

ಭಾರತದ ಪಂದ್ಯಗಳು ಒಳಗೊಂಡಂತೆ ವಿಶ್ವಕಪ್‌ನ ಬಹುತೇಕ ಪಂದ್ಯಗಳು ಮಧ್ಯಾಹ್ನ 3ಕ್ಕೆ ಆರಂಭವಾಗುತ್ತವೆ. ಪಂದ್ಯ ಮುಗಿಯುವಾಗ ರಾತ್ರಿ ಸುಮಾರು 11 ಗಂಟೆ ಆಗುತ್ತದೆ. ಇದರಿಂದ ಹೋಟೆಲ್‌ಗಳು ಮತ್ತು ಕ್ಲಬ್‌ಗಳು ರಾತ್ರಿ ವೇಳೆ ಹೆಚ್ಚಿನ ಜನರನ್ನು ಸೆಳೆಯುತ್ತವೆ.

ಭಾರತ–ಪಾಕಿಸ್ತಾನ ಕದನ ಕುತೂಹಲ: ಐಸಿಸಿ ವಿಶ್ವಕಪ್‌ನಲ್ಲಿ ಎಲ್ಲರೂ ಕುತೂಹಲದಿಂದ ಕಾಯುತ್ತಿರುವ ಭಾರತ–ಪಾಕಿಸ್ತಾನ ನಡುವಿನ ಹಣಾಹಣಿ ಇದೇ ಭಾನುವಾರ (ಜೂ.16) ನಡೆಯಲಿದೆ. ಈ ಪಂದ್ಯದ ನೇರ ಪ್ರಸಾರಕ್ಕೆ ಬೃಹತ್‌ ಸ್ಕ್ರೀನ್‌ ಅಳವಡಿಸಲು ಹೆಚ್ಚಿನ ಹೋಟೆಲ್‌ಗಳಲ್ಲಿ ಸಿದ್ಧತೆ ನಡೆಸಲಾಗಿದೆ. ಭಾರತ–ಪಾಕ್ ನಡುವಿನ ಪಂದ್ಯವೆಂದರೆ ಅಲ್ಲಿ ರೋಚಕ ಸನ್ನಿವೇಶಗಳು ಇರುತ್ತವೆ. ಪ್ರತಿ ಕ್ರಿಕೆಟ್‌ ಪ್ರೇಮಿಯೂ ಪಂದ್ಯದ ಕ್ಷಣಗಳನ್ನು ಕಣ್ತುಂಬಿ ಕೊಳ್ಳಲು ಬಯಸುತ್ತಾರೆ.

ಈ ನಡುವೆ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಹೆಸರಿನಲ್ಲಿ ವ್ಯಾಪಾರ ಕೂಡಾ ಜೋರಾಗಿ ನಡೆಯುತ್ತದೆ. ಕೆಲವು ಕಂಪನಿಗಳು ಟಿ.ವಿ. ಒಳಗೊಂಡಂತೆ ಎಲೆಕ್ಟ್ರಾನಿಕ್‌ ವಸ್ತುಗಳ ಮೇಲೆ ವಿಶೇಷ ಆಫರ್‌ಗಳನ್ನು ನೀಡುತ್ತಿವೆ. ಭಾರತ ತಂಡದ ಆಟಗಾರರು ಧರಿಸುವ ಪೋಷಾಕುಗಳ ಮಾರಾ ಟದ ಮೂಲಕವೂ ಹಣ ಗಳಿಕೆ ನಡೆಯುತ್ತಿದೆ.

ಯಶಸ್ಸು ಸಾಧಿಸಲು ಪೂಜೆ: ಭಾರತ ತಂಡ ವಿಶ್ವಕಪ್‌ ಗೆದ್ದುಬರಲಿ ಎಂದು ಕೆಲ ದಿನಗಳ ಹಿಂದೆ ನಗರದಲ್ಲಿ ವಿಶೇಷ ಪೂಜೆ ಕೂಡ ಸಲ್ಲಿಸಲಾಗಿತ್ತು. ಜಲಪುರಿ ಪೊಲೀಸ್‌ ಕ್ವಾರ್ಟಸ್‌ ವೃತ್ತದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಕ್ರಿಕೆಟ್‌ ಪ್ರೇಮಿಗಳು ಪೂಜೆಯಲ್ಲಿ ಪಾಲ್ಗೊಂಡಿದ್ದರು.ನಾಯಕ ವಿರಾಟ್‌ ಕೊಹ್ಲಿ ಮತ್ತು ಎಲ್ಲ ಆಟಗಾರರ ಹೆಸರಿನಲ್ಲಿ ಅರ್ಚನೆ ಸಂಕಲ್ಪ ಮತ್ತು ವಿಶೇಷ ಪೂಜೆ ಕೈಗೊಳ್ಳಲಾಗಿತ್ತು.

ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಆಡುತ್ತಿರುವ ಭಾರತ ತಂಡದ ಆಟಗಾರರಿಗೆ ದೈವ ಪ್ರೇರಣೆಯಿರಲಿ ಎಂಬ ಉದ್ದೇಶದಿಂದ ಪೂಜೆ ನಡೆಸಿದ್ದೇವೆ ಎಂಬುದು ಕ್ರಿಕೆಟ್‌ ಅಭಿಮಾನಿ ಲೋಹಿತ್‌ ಅವರಹೇಳಿಕೆ.

ವಿರಾಟ್‌ ಕೊಹ್ಲಿ ಬಳಗವು ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆಯನ್ನು ಈಡೇರಿಸುವುದೇ ಎಂಬುದನ್ನು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.