ಭಾಷಾವಿಜ್ಞಾನಿಗಳಾದ ಡಿ.ಎನ್. ಶಂಕರಭಟ್ಟರು ರೂಪಿಸಿದ ಹೊಸ ಬರಹದಲ್ಲಿ ಬರೆಯಲಾದ ಈ ಪುಸ್ತಕ ವಿಶಿಷ್ಟವಾಗಿಯೂ, ಕುತೂಹಲಕಾರಿಯಾಗಿಯೂ ಇದೆ. ಇದು ಮೊದಲಿಗೆ ಕನ್ನಡತನವನ್ನು ಹುಡುಕುವ ಬರಹವಾಗಿದ್ದು, ಸಂಸ್ಕೃತ ಪದಗಳನ್ನು, ಕನ್ನಡದ ಮಹಾಪ್ರಾಣ ಅಕ್ಷರಗಳನ್ನು ತ್ಯಜಿಸಿದ ಹೊಸ ಬರಹದಲ್ಲಿ ರಚಿಸಲಾದ ಬರಹವಾಗಿದೆ.
`ಕನ್ನಡಿಗರು ಯಾರು? ಅವರ ನುಡಿ, ಮತ್ತವರ ಸಂಸ್ಕೃತಿ ಎಂಥದ್ದು' ಎಂಬುದನ್ನು ಲೇಖಕ ಎಚ್.ಎಸ್. ರಾಜ್ ತಮ್ಮ ಈ ಪುಸ್ತಕದಲ್ಲಿ ಶೋಧಿಸುತ್ತಾರೆ.ನಮ್ಮ (ಅಂದರೆ ಕನ್ನಡಿಗರ) ಶಕ್ತಿಯ ಅರಿವು ನಮಗೇ ಇಲ್ಲದೆ ಹೋದರೆ ಹೊರಗಿನ ಶಕ್ತಿಯನ್ನು ಎದುರಿಸಲು ಬೇಕಾದ ನೆಲೆಯನ್ನು ಕಳೆದುಕೊಳ್ಳತ್ತೇವೆ ಎಂಬ ಗ್ರಹಿಕೆ ಇಲ್ಲಿನ ಬರಹದ ಹಿನ್ನೆಲೆಯಲ್ಲಿದೆ.
ಹಾಗಾಗಿ ನಮ್ಮತನವನ್ನು ಸಂಗ್ರಹವಾಗಿ ಒಂದೆಡೆ ಹೇಳುವ ಪ್ರಯತ್ನದ ಫಲವಾಗಿ ಈ ಬರಹ ಮೂಡಿದೆ. ನಮ್ಮತನದ ಅರಿವಿಲ್ಲದೆ ಈವರೆಗೆ ಕನ್ನಡಿಗರಿಗೆ ಆಗಿರುವ ನಷ್ಟವನ್ನು ಮನವರಿಕೆ ಮಾಡಿಕೊಡುವುದೂ ಈ ಬರಹದ ಇನ್ನೊಂದು ಉದ್ದೇಶ. ಕನ್ನಡಿಗರಲ್ಲಿ ಕನ್ನಡತನವನ್ನು ಉದ್ದೀಪಿಸುವುದು ಇದರ ಪ್ರಮುಖ ಕಾಳಜಿಯಾಗಿದೆ ಎನ್ನಬಹುದು.
ಆಧುನಿಕ ಶಿಷ್ಟ ಕನ್ನಡವನ್ನು ಓದಲು ಒಗ್ಗಿದ ಕಣ್ಣುಗಳು ಇಲ್ಲಿನ ಕನ್ನಡಕ್ಕೆ ಹೊಂದಿಕೊಳ್ಳಲು ಕೊಂಚ ಸಮಯಬೇಕಾಗುತ್ತದೆ. `ನಮ್ಮ ದೇಶದ ಬಹುತೇಕ ಇತರೆ ಭಾಷಿಕರಲ್ಲಿ ಇರುವಂತೆ ಕನ್ನಡಿಗರಲ್ಲಿ ಕೂಡ ಮಯ್ಬಣ್ಣದ ವಯ್ವಿದ್ಯತೆ ಬಹಳಶ್ಟು ಇದೆ. ಈ ವಯ್ವಿದ್ಯತೆಯ ಅಸ್ತಿತ್ವ ಎಶ್ಟು ವಿಶಾಲವಾಗಿ ಹರಡಿದೆ ಎಂದರೆ, ಕನ್ನಡಿಗರ ಯಾವುದೇ ಒಂದು ಸಮುದಾಯವಾಗಲೀ ಅತವ ಪ್ರದೇಶವಾಗಲೀ, ಇದರ ವ್ಯಾಪ್ತಿಯಿಂದ ಸಂಪೂರ‌್ಣವಾಗಿ ಹೊರಗುಳಿದಿಲ್ಲ'.
ಪುಸ್ತಕದ ಆರಂಭದಲ್ಲೇ ಇರುವ ಈ ವಾಕ್ಯ ಕೊಂಚ ಅಪರಿಚಿತ ಎನ್ನಿಸಬಹುದು. ಕನ್ನಡತನವನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ಇದೂ ಒಂದು ಹೆಜ್ಜೆಯಾಗಿರುವುದರಿಂದ ಅದಕ್ಕೆ ಹೊಂದಿಕೊಳ್ಳದೆ ಬೇರೆ ದಾರಿಯಿಲ್ಲ. ಬಳಿಕ ಕನ್ನಡತನದ ಹುಡುಕಾಟ ಸಮಸ್ಯೆಯಾಗಲಾರದು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.