ಬದುಕ ದಿಕ್ಕ ಬದಲಿಸಿದ ಆಸ್ಟಿಯೋ ಸರ್ಕೋಮಾ...
ಲೇ: ಶ್ರುತಿ ಬಿ.ಎಸ್.
ಪು: 120; ಬೆ: ರೂ. 80
ಪ್ರ: ಗೋಮಿನಿ ಪ್ರಕಾಶನ
ಶ್ರೀ ವೀರಭದ್ರಸ್ವಾಮಿ ನಿಲಯ,
1ನೇ ಮುಖ್ಯರಸ್ತೆ,
5ನೇ ಅಡ್ಡ ರಸ್ತೆ, ವಿಶ್ವಣ್ಣ ಲೇಔಟ್, ಶಾಂತಿನಗರ,
ತುಮಕೂರು–572105
ಆಸ್ಟಿಯೋ ಸರ್ಕೋಮಾ ಎಂಬ ಕ್ಯಾನ್ಸರ್ ರೋಗದ ವಿರುದ್ಧ ಹೋರಾಡಿ ಗೆದ್ದು ಬಂದ ಶ್ರುತಿ ಎಂಬ ಹುಡುಗಿಯೊಬ್ಬಳ ಕಥೆ ಇದು. ದೇಹದ ಉದ್ದದ ಮೂಳೆಗಳಲ್ಲಿ ಕಾಣಿಸಿಕೊಳ್ಳುವ ಈ ಕ್ಯಾನ್ಸರ್ ಟ್ಯೂಮರ್ ೧೦–೨೦ ವರ್ಷದ ಒಳಗಿನ ಮಕ್ಕಳಿಗೆ ಬರುವುದು ಹೆಚ್ಚು. ತನ್ನ ಎಳೆಯ ವಯಸ್ಸಿನಲ್ಲೇ ಸಾವಿನ ಭೀಕರ ಕನಸನ್ನು ಅದಕ್ಕೂ ಮುಖ್ಯವಾಗಿ ಅಪಾರ ನೋವನ್ನು ಸಹಿಸಿದ ಈ ಹುಡುಗಿ ಅದರಿಂದ ಪಾರಾಗಿ ಬಂದ ಮೇಲೆ ಆ ದುಃಸ್ವಪ್ನವನ್ನು, ತನ್ನ ಅರಿವಿಗೆ ಬಂದ ಅದರ ಪ್ರತಿ ಕ್ಷಣವನ್ನು ಇದರಲ್ಲಿ ದಾಖಲಿಸಿದ್ದಾಳೆ.
ಸಾವು, ಮುಪ್ಪಿನ ಮುಂದೆ ಮನುಷ್ಯ ಅಸಹಾಯಕನಾಗುತ್ತಾನೆ. ಅವುಗಳ ವಿರುದ್ಧ ಅವನ ಹೋರಾಟ ಎಂದಿಗೂ ವ್ಯರ್ಥ. ಆದರೆ, ತನ್ನ ಗಟ್ಟಿಯಾದ ಮನೋಬಲದಿಂದ, ಸರಿಯಾದ ಚಿಕಿತ್ಸೆಯಿಂದ ಶ್ರುತಿ ಗುಣಮುಖಳಾದಳು. ಅವಳು ಮುಖ್ಯವಾಗಿ ಗುಣ ಹೊಂದಿದ್ದು ತನ್ನ ಆತ್ಮವಿಶ್ವಾಸದಿಂದ ಎಂಬುದನ್ನು ಅವಳ ಈ ಬರವಣಿಗೆ ಹೇಳುತ್ತದೆ. ಅದು ಈ ಪುಸ್ತಕವನ್ನು ಬರೆಯುವಲ್ಲೂ ಅವರ ನೆರವಿಗೆ ಬಂದಿದೆ. ಹಲವು ಮಾನವೀಯ ಹಸ್ತಗಳ ನೆರವಿನಿಂದ ತಾನು ಗುಣಹೊಂದಿದ್ದನ್ನು ವಿವರಿಸುವಲ್ಲಿ ಆಕೆಯ ಸೂಕ್ಷ್ಮಗ್ರಹಿಕೆ, ತಮಾಷೆ, ಬದುಕಿನ ಕುರಿತಾದ ಅಪಾರ ಪ್ರೀತಿ, ಛಲ ಇವೆಲ್ಲ ಕಾಣುತ್ತದೆ. ಈ ಬರಹ ತಲೆಯ ಮೇಲೆ ಆಕಾಶ ಬಿದ್ದಂತೆ ವರ್ತಿಸುವ ಅನೇಕರಿಗೆ ಆತ್ಮವಿಶ್ವಾಸ ತುಂಬಬಲ್ಲದು.
–ಸಂದೀಪ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.