ADVERTISEMENT

ಹೀಬ್ರು ಬೈಬಲ್‌ನ ಇಂಗ್ಲಿಷ್‌ ಅನುವಾದ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2019, 12:23 IST
Last Updated 18 ಫೆಬ್ರುವರಿ 2019, 12:23 IST
ಬೈಬಲ್‌
ಬೈಬಲ್‌   

ಜಗತ್ತಿನಲ್ಲಿ ತುಂಬ ಪ್ರಭಾವ ಬೀರಿರುವ ಗ್ರಂಥಗಳಲ್ಲಿ ಒಂದು ಬೈಬಲ್‌. ಇದು ಕ್ರೈಸ್ತರ ಪವಿತ್ರಗ್ರಂಥ. ಇದರಲ್ಲಿ ಎರಡು ಭಾಗಗಳಿವೆ: ಓಲ್ಡ್‌ ಟೆಸ್ಟಮೆಂಟ್‌ (ಹಳೆಯ ಒಡಂಬಡಿಕೆ) ಮತ್ತು ನ್ಯೂ ಟೆಸ್ಟಮೆಂಟ್‌ (ಹೊಸ ಒಡಂಬಡಿಕೆ). ಹಳೆಯ ಒಡಂಬಡಿಕೆಯ ಬಹುಭಾಗ ಇರುವುದು ಹೀಬ್ರುಭಾಷೆಯಲ್ಲಿ.

ಬೈಬಲ್‌ ಮೊದಲು ಗ್ರೀಕ್‌ಗೂ ಅನಂತರ ಲ್ಯಾಟೀನ್‌ಭಾಷೆಗೂ ಅನುವಾದಗೊಂಡಿತು. ಇದು ಜಗತ್ತಿನ ನೂರಾರು ಭಾಷೆಗಳಿಗೆ ಅನಂತರದ ವರ್ಷಗಳಲ್ಲಿ ಅನುವಾದವಾಗುತ್ತಲೇ ಬಂದಿದೆ. ಇಂಗ್ಲಿಷ್‌ಭಾಷೆಯೊಂದರಲ್ಲಿಯೇ ಬೈಬಲ್‌ನ 450ಕ್ಕೂ ಹೆಚ್ಚು ಅನುವಾದಗಳು ದೊರೆಯುತ್ತವೆ. ಇವುಗಳಲ್ಲಿ ಅತ್ಯಂತ ಪ್ರಸಿದ್ಧವಾಗಿರುವುದು ‘ಕಿಂಗ್‌ ಜೇಮ್ಸ್‌ ಬೈಬಲ್‌.’

ಇತ್ತೀಚೆಗೆ ಹೀಬ್ರು ಬೈಬಲ್‌ ಸುದ್ದಿಗೆ ಕಾರಣವಾಗಿದೆ. ಇದುವರೆಗೂ ಈ ಭಾಷೆಯ ಗ್ರಂಥ ಇಂಗ್ಲಿಷಿಗೆ ಅನುವಾದವಾಗಿರುವುದೆಲ್ಲ ಹಲವರು ವಿದ್ವಾಂಸರ ಮೂಲಕ; ಎಂದರೆ ವಿದ್ವಾಂಸರ ತಂಡ ಸಾಮೂಹಿಕವಾಗಿ ಅನುವಾದದ ಕಾರ್ಯವನ್ನು ಮಾಡಿತ್ತು. ಆದರೆ ಇದೇ ಮೊದಲ ಬಾರಿಗೆ ಒಬ್ಬರೇ ವ್ಯಕ್ತಿ ಸ್ವತಂತ್ರವಾಗಿ ಹೀಬ್ರು ಬೈಬಲನ್ನು ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಈ ಸಾಧನೆಯನ್ನು ಮಾಡಿದವರೇ ರಾಬರ್ಟ್‌ ಆಲ್ಟರ್‌; ಬರ್ಕ್‌ಲೀಯ ‘ಯೂನಿವರ್ಸಿಟಿ ಆಫ್‌ ಕ್ಯಾಲಿಫೋರ್ನಿಯಾ’ದ ಈ ಬೈಬಲ್‌ ವಿದ್ವಾಂಸ, ಇಪ್ಪತ್ತೊಂದು ವರ್ಷಗಳ ಸತತ ಪರಿಶ್ರಮದ ಮೂಲಕ ಅನುವಾದವನ್ನು ಪೂರ್ಣಗೊಳಿಸಿದ್ದಾರೆ. 1997ರಲ್ಲಿ ಆರಂಭವಾದ ಅನುವಾದ ಮುಕ್ತಾಯವಾದದ್ದು 2018ರಲ್ಲಿ. ಆಲ್ಟರ್‌ ಅವರಿಗೆ ಈಗ 85 ವರ್ಷಗಳು. ಜಗತ್ತಿನ ವಿದ್ವತ್‌ವಲಯ ಅವರ ಈ ಅಪೂರ್ವಕಾರ್ಯವನ್ನು ಕೊಂಡಾಡುತ್ತಿದೆ. ಈಗ ಜನಪ್ರಿಯವಾಗಿರುವ ಬೈಬಲ್‌ ಅನುವಾದಗಳಲ್ಲಿರುವ ಹಲವು ದೋಷಗಳನ್ನು ಆಲ್ಟರ್‌ ಅವರ ಅನುವಾದ ಗುರುತಿಸಿದೆ. ಕೆಲವರು ಅವರ ಅನುವಾದವನ್ನೂ ಪ್ರಶ್ನಿಸುತ್ತಿದ್ದಾರೆನ್ನಿ!

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.