ADVERTISEMENT

ಬಯಲ ಬೆರಗು ಪುಸ್ತಕ ವಿಮರ್ಶೆ | ಅಲ್ಲಮನ ವಿಸ್ತಾರ ನೋಟದ ಕಥನ ರೂಪ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 21:45 IST
Last Updated 3 ಡಿಸೆಂಬರ್ 2022, 21:45 IST
‘ಬಯಲ ಬೆರಗು’ ಮುಖಪುಟ
‘ಬಯಲ ಬೆರಗು’ ಮುಖಪುಟ   

ಬಯಲು ಎಂದರೆ ಎಲ್ಲವೂ ಇರುವುದು ಹಾಗೂ ಏನೂ ಇಲ್ಲದ್ದು. ಅಲ್ಲಮ ಪ್ರಭುವಿನ ವ್ಯಾಖ್ಯಾನವೂ ಇದೇ ಆಗಿತ್ತು. ಅಲ್ಲಮನ ವಚನಗಳಲ್ಲಿ ಬಯಲು ಎಂಬ ಶಬ್ದ ನೂರಾರು ಬಾರಿ ಪುನರಾವರ್ತನೆಯಾಗಿದೆ. ಬಯಲಿನ ನಿರಾಕಾರ, ಅಗೋಚರದ ಬೆರಗನ್ನು ಕಂಡವನು ಅಲ್ಲಮ. ಆ ಎಲ್ಲ ದರ್ಶನಗಳಿಗೊಂದು ಕಥನ, ನಿರೂಪಣೆಯ ಚೌಕಟ್ಟು ಕಟ್ಟಿಕೊಟ್ಟಿದ್ದಾರೆ ಲೇಖಕಿ ಸುಮಂಗಲಾ ಎಸ್‌. ಮುಮ್ಮಿಗಟ್ಟಿ.

ಶೀರ್ಷಿಕೆ ಮತ್ತು ಆಶಯವೇ ಹೇಳುವಂತೆ ಈ ಕಾದಂಬರಿಯಲ್ಲಿ ಕಥಾನಾಯಕ ಅಲ್ಲಮಪ್ರಭುವಿನ ಬದುಕನ್ನು ಅಧ್ಯಾತ್ಮ ಮತ್ತು ಅನುಭಾವದ ಆಯಾಮದಲ್ಲಿ ಕಟ್ಟಿಕೊಟ್ಟಿಕೊಡಲಾಗಿದೆ. ಶರಣರ ವಚನಗಳು ಆಯಾ ಸನ್ನಿವೇಶಕ್ಕೆ ತಕ್ಕಂತೆ ಉಲ್ಲೇಖಗೊಂಡಿವೆ. ಕೃತಿಯ ಹಿಂದೆ ಹಲವು ಗ್ರಂಥ–ಸಾಹಿತ್ಯಗಳ ಅಧ್ಯಯನವಿದೆ. ವೈಚಾರಿಕ ಸಂವಾದಗಳು ಅಲ್ಲಲ್ಲಿ ಇವೆ. ಅಲ್ಲಮನ ಪಯಣದ ಹೆಜ್ಜೆಯ ಜಾಡನ್ನೂ ಜಾಲಾಡಲಾಗಿದೆ. ಶರಣ ಗೊಗ್ಗಯ್ಯನ ಕೃಷಿ ಭೂಮಿಯಲ್ಲೇ ನಡೆದ ಸಂವಾದ, ಗವಿಯೊಳಗೆ ಕುಳಿತು ಧ್ಯಾನಸ್ಥರಾಗಿ ಗುಹೇಶ್ವರನೊಂದಿಗೆ ನಡೆಸಿದ ಅನುಸಂಧಾನ, ಆ ಹೊತ್ತಿನಲ್ಲಿ ಮರಿಗಳೊಂದಿಗೆ ಬಂದ ಕರಡಿಯು ನೋಡಿ ಹಾಗೇ ಸುಮ್ಮನೆ ಹೋದ ಘಟನೆ ಕುರಿತಾದ ಕಥೆ, ಜನರ ಡಾಂಭಿಕ ಆಚರಣೆಗಳಿಗೆ ಮರುಕ, ವಚನಗಳಲ್ಲಿನ ದರ್ಶನದ ಸೊಬಗನ್ನು ಕಾದಂಬರಿ ಕಟ್ಟಿಕೊಟ್ಟಿದೆ. ದೇಹದೊಳಗೆ ದೇವಾಲಯವಿದ್ದು/ ಮತ್ತೆ ಬೇರೆ ದೇವಾಲಯವೇಕೆ?/ ಎರಡಕ್ಕೆ ಹೇಳಲಿಲ್ಲಯ್ಯಾ/ ಗುಹೇಶ್ವರಾ ನೀನು ಕಲ್ಲಾದಡೆ ನಾನೇನಪ್ಪೆನು?... ಇಂಥ ಅನೇಕ ವಚನಗಳನ್ನೂ, ಅವುಗಳ ಅಂತರಾರ್ಥವನ್ನೂ ಜನಸಾಮಾನ್ಯರಿಗೆ ಅರ್ಥ ಮಾಡಿಸುತ್ತಾ ಸಾಗುತ್ತಾರೆ ಲೇಖಕಿ. ಅದಕ್ಕೆ ಪೂರಕವಾಗಿ ಬಸವಣ್ಣನವರ ವಚನಗಳೂ ಅಲ್ಲಲ್ಲಿ ಕಾಣಿಸುತ್ತವೆ. ಊರ ಮುಂದಿನ ಅರಳಿಕಟ್ಟೆ, ಮನೆಗಳ ಜಗುಲಿ, ಹೊಲ, ತೋಟ, ಗುಡ್ಡದ ಪ್ರಶಾಂತ ಪ್ರದೇಶ ಇವು ಅಲ್ಲಮರ ಸಂದೇಶಗಳು ಪಸರಿಸಿದ, ಬಾಯಿಯಿಂದ ಬಾಯಿಗೆ, ಕಿವಿಯಿಂದ ಕಿವಿಗೆ ಸಾಗಿದ ಜಾಗಗಳು. ಅಲ್ಲಮನ ಅರಿವು ಮೂಡಿಸಿಕೊಳ್ಳಲು ಆಸಕ್ತರಿಗೆ ರುಚಿಸಬಲ್ಲ ಕೃತಿ.

ಕೃತಿ: ಬಯಲ ಬೆರಗು

ADVERTISEMENT

ಲೇ: ಸುಮಂಗಲಾ ಎಸ್‌. ಮುಮ್ಮಿಗಟ್ಟಿ
ಪ್ರ: ಮ.ನಿ.ಪ್ರ.ಚೆನ್ನವೀರ ಮಹಾಸ್ವಾಮಿಗಳ ಗ್ರಂಥ ಪ್ರಕಟಣಾ ಸೇವಾ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.