
ಬೆಳಗಿನ ಮೌನ ನಿತ್ಯದ ಧ್ಯಾನ
‘ಬೆಳಗಿನ ಮೌನ ನಿತ್ಯದ ಧ್ಯಾನ’ ಇದು ಪತ್ರಕರ್ತ ಹಾಗೂ ಸಾಹಿತಿ ಕಂ.ಕ.ಮೂರ್ತಿ ಅವರ ಐದನೇ ಪುಸ್ತಕ.
ಈ ಸಂಕಲನದಲ್ಲಿರುವ ಎಲ್ಲ ಲೇಖನಗಳು ವಿಭಿನ್ನ ವಿಷಯಗಳಿಂದ ಕೂಡಿವೆ. ಅನುಭವ, ಕನಸು, ನೆನಪು, ಹಳಹಳಿಕೆ, ಭವಿಷ್ಯ, ವಾಸ್ತವ, ಜೀವನ, ಬದುಕು, ಪುರಾಣ, ಮನುಷ್ಯ, ಜಗತ್ತು, ಪ್ರಕೃತಿ, ಪ್ರೀತಿ... ಲೇಖನಗಳ ವಸ್ತುವಾಗಿವೆ.
ಲೇಖಕರು ಹೇಳಿರುವಂತೆ ಈ ಲೇಖನಗಳು ಅನುಭವ ಕಥನವಲ್ಲ. ಇದು ಮನುಷ್ಯನ ಬದುಕಿನ ಪರಿಧಿಯನ್ನು ಅರಿಯುವ, ಬದುಕಿನ ಅನಂತ ವಿಸ್ತಾರವನ್ನು ತಡವಿ ನೋಡುವ, ಅವರ ದುಃಖ, ದುಮ್ಮಾನಗಳು, ಭಾವನೆಯ ಸುಳಿಗಳಿಗೆ ಒಡಲ ಕಥೆಯ ನೂಲಿನಿಂದ ಸ್ಪರ್ಶ ನೀಡುವ ಪ್ರಯತ್ನ.
ಬೇಲಿ ದಾಟಿದ ಹೂವು, ನಂಬಿಕೆಯ ಎಳೆ ಲೇಖನಗಳು ಕಿರುಕಥೆಗಳ ಮಾದರಿಯಲ್ಲಿದ್ದು, ಅವುಗಳಲ್ಲಿ ಘಟನೆಯೊಂದನ್ನ ಹೇಳಿ ಅದನ್ನು ನಿರ್ಧರಿಸುವ ಹಕ್ಕನ್ನು ಲೇಖಕರು ಓದುಗರಿಗೇ ನೀಡಿದ್ದಾರೆ.
‘ಎರೆಹುಳ ಮಣ್ಣನ್ನು ಹದ ಮಾಡುವ ಹಾಗೆ ಅನುಭವಗಳು ಮನಸ್ಸನ್ನು ಹದ ಮಾಡುತ್ತವೆ..’, ‘ನಾವು ನಿತ್ಯ ಹೊಸ ಹೂವಿನಂತೆ ಅರಳುವುದು ಸಾಧ್ಯವಾದರೆ ಈ ಲೋಕ ನಮಗೆ ನಿತ್ಯವೂ ಬೆರಗು..’ ಇದೇ ರೀತಿಯ ಬೆರಗುಗೊಳಿಸುವ ಸಾಲುಗಳು ಇವರ ಬರಹಗಳಲ್ಲಿವೆ.
ಇಲ್ಲಿನ ಕೆಲವು ಲೇಖನಗಳು ಪ್ರಬಂಧದಂತೆ ಕಂಡರೆ, ಮತ್ತೆ ಕೆಲವು ಕಥೆಗಳಂತೆ ಭಾಸವಾಗುತ್ತವೆ. ಲೇಖಕನೊಳಗಿನ ಪತ್ರಕರ್ತನೂ ಕೆಲವು ಲೇಖನಗಳಲ್ಲಿ ಕಾಣಿಸುತ್ತಾನೆ. ಕೆಲವು ಲೇಖನಗಳು, ಹಿಂದಿನ ಲೇಖನದ ಮುಂದುವರಿದ ಭಾಗವಾದಂತೆ ಅನಿಸುತ್ತದೆ. ಲೇಖನಗಳ ಮಧ್ಯೆ ಮಧ್ಯೆ ತಮ್ಮದೇ ಪದ್ಯಗಳನ್ನು ಬಳಸಿಕೊಂಡು, ಅದನ್ನೇ ನಿರೂಪಣೆ ಮಾಡಿಕೊಂಡು ಹೋಗಿರುವುದು ಗಮನಸೆಳೆಯುತ್ತದೆ.
ಈ ಲೇಖನಗಳು ಮನುಷ್ಯ ಬದುಕಿಗೆ ಪ್ರೇರಣೆ ನೀಡುವುದರ ಜೊತೆಗೆ ಜಗತ್ತಿನ ವಿವಿಧ ಮಜಲುಗಳ ದರ್ಶನವನ್ನು ಮಾಡಿಸುತ್ತದೆ. ಸರಳ ನಿರೂಪಣೆ ಮತ್ತು ಭಾಷಾ ಶೈಲಿಯು ಈ ಲೇಖನಗಳನ್ನು ಓದಿಸಿಕೊಂಡು ಹೋಗುತ್ತದೆ.
ಬೆಳಗಿನ ಮೌನ ನಿತ್ಯದ ಧ್ಯಾನ
ಲೇ: ಕಂ.ಕ. ಮೂರ್ತಿಪ್ರ: ಸಾಹಿತ್ಯಲೋಕ
ಸಂ: 9945939436
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.