ADVERTISEMENT

ಮೊದಲ ಓದು: ಬೇಂದ್ರೆ ಬದುಕು–ಬರಹದ ದರ್ಶನ

​ಪ್ರಜಾವಾಣಿ ವಾರ್ತೆ
Published 25 ಮೇ 2025, 0:09 IST
Last Updated 25 ಮೇ 2025, 0:09 IST
book
book   

ಕನ್ನಡ ಕಾವ್ಯ ರಸಿಕರಿಗೆ ಬೇಂದ್ರೆ ಎಂದರೆ ಅವರೇ ಶಕ್ತಿ, ಸ್ಫೂರ್ತಿ, ಅನುಕರಣೀಯ ಆದರ್ಶ ವ್ಯಕ್ತಿ. ಅವರ ಕಾವ್ಯಧಾರೆ ಸವಿಯುವುದು ಒಂದು ಬೆರಗು, ಕುತೂಹಲ, ಸೋಜಿಗ ಎಲ್ಲವೂ. ಬೇಂದ್ರೆ ಕಾವ್ಯದ ಬಗ್ಗೆ, ಈ ಮಹಾನ್ ಕವಿಯ ವ್ಯಕ್ತಿತ್ವದ ಬಗ್ಗೆ ಎಷ್ಟು ಬರೆದರೂ, ಓದಿದರೂ, ಹಾಡಿದರೂ ಹೊಗಳಿದರೂ ಸಾಲದು. ಏಕೆಂದರೆ ಬೇಂದ್ರೆ ಎಂದರೆ ಅವರೊಬ್ಬ ರಸಬುಗ್ಗೆ!

ಪ್ರಸ್ತುತ ಕೃತಿಯಲ್ಲಿ ಲೇಖಕ, ‘ಬೇಂದ್ರೆಯವರ ಬದಕು–ಬರಹಗಳೆರಡು ಸದಾ ನಮ್ಮನ್ನು ಕಾಡುವಂಥವು’ ಎನ್ನುತ್ತಲೇ ಬೇಂದ್ರೆ ಬದುಕಿನ ಕೆಲ ಪ್ರಸಂಗಗಳನ್ನು ರಸವತ್ತಾಗಿ ಓದುಗರಿಗೆ ಧಾರೆಯೆರೆಯುವ ಪ್ರಯತ್ನ ಮಾಡಿರುವುದು ಶ್ಲಾಘನೀಯ. ಬೇಂದ್ರೆಯವರ ಬಗೆಗಿನ ಪ್ರಚಲಿತ ಕಥೆ, ಸಂಗತಿಗಳನ್ನು ಸಂಗ್ರಹಿಸಿ ಅದನ್ನು ದಾಖಲಿಸಿ ಮುಂದಿನ ಪೀಳಿಗೆಗೆ ದಾಟಿಸುವ ಮಹತ್ತರ ಜವಾಬ್ದಾರಿಯನ್ನು ಅವರು ಇಲ್ಲಿ ಮಾಡಿದ್ದಾರೆ. ಬೇಂದ್ರೆಯವರ ಬಗ್ಗೆ ಲೇಖಕ ಓದಿದ್ದು, ತಿಳಿದಿದ್ದು, ಬೇರೆಯವರಿಂದ ದಕ್ಕಿಸಿಕೊಂಡದ್ದು, ಭಾಷಣ ಮಾಡಿದ್ದು... ಇವನ್ನೆಲ್ಲ ದಾಖಲಿಸುವ, ಮುಂದಿನ ಪೀಳಿಗೆಗೆ ದಾಟಿಸುವ ಕೆಲಸವನ್ನು ಮಾಡಿದ್ದಾರೆ.

ಈ ಪುಸ್ತಕದಲ್ಲಿ ಬರೆದಿರುವ ‘ಒಂಟಿ ಯಾಕ ಆಗತಿ... ಬರಹದಿಂದ ಹಿಡಿದು ಕೊನೆಯತನಕ ಇರುವ ಎಲ್ಲ ಪುಟ್ಟ ಪುಟ್ಟ ರಸ ಪ್ರಸಂಗಗಳು ಸೊಗಸಾಗಿವೆ. ಕೃತಿಯಲ್ಲಿ ಮಧ್ಯೆ ಮಧ್ಯೆ ಬಳಸಿರುವ ಪೂರಕ ರೇಖಾಚಿತ್ರಗಳು ಖುಷಿ ಕೊಡುತ್ತವೆ. ಮಹಾನ್ ವ್ಯಕ್ತಿಯ ಜೀವನವನ್ನು ಕಟ್ಟಿಕೊಟ್ಟ ಪ್ರಸಂಗಗಳು ಕೆಲವೊಮ್ಮೆ ಗಂಭೀರವಾಗಿಯೂ, ಇನ್ನೂ ಕೆಲವು ಕಡೆ ಹಾಸ್ಯ ಪ್ರಸಂಗವಾಗಿಯೂ ಉಲ್ಲೇಖಿಸಿರುವುದು ಲೇಖಕರಿಗೆ ಬೇಂದ್ರೆಯವರ ಮೇಲಿರುವ ಅಭಿಮಾನವನ್ನೇ ಕಟ್ಟಿಕೊಟ್ಟ ಹಾಗೆ ಅನುಭವವಾಗುತ್ತದೆ. ಒಟ್ಟಿನಲ್ಲಿ ಸಂಗ್ರಹಯೋಗ್ಯ ಕೃತಿ ಇದು.

ADVERTISEMENT

ಅಂಬಿಕಾತನಯದತ್ತನ ಹಾಡ; ಬೆಳುದಿಂಗಳ ನೋಡ...

ಲೇ: ಎಚ್‌.ಎಸ್‌. ಸತ್ಯನಾರಾಯಣ

ಪ್ರ: ಅಮೂಲ್ಯ ಪುಸ್ತಕ ಬೆಂಗಳೂರು

ಸಂ: 9448676770

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.