ADVERTISEMENT

ಹಳತಿನ ಹೊಳಪು ಮತ್ತದರ ಹೊಳಹು

ಪದ್ಮನಾಭ ಭಟ್ಟ‌
Published 24 ಅಕ್ಟೋಬರ್ 2020, 17:29 IST
Last Updated 24 ಅಕ್ಟೋಬರ್ 2020, 17:29 IST
ಕೃತಿಯ ಮುಖಪುಟ
ಕೃತಿಯ ಮುಖಪುಟ   

ಬಾಲಸುಬ್ರಹ್ಮಣ್ಯ ಕಂಜರ್ಪಣೆ ಅವರ ಹೊಸ ಕೃತಿ ‘ಹಳತಿಗೆ ಹೊಳಪು ಮತ್ತು ಇತರ ಸಾಹಿತ್ಯ ಪ್ರಬಂಧಗಳು’. ಶೀರ್ಷಿಕೆಯೇ ಈ ಕೃತಿಯ ಹೂರಣವನ್ನೂ ಸೂಚಿಸುವ ಹಾಗಿದೆ. ಕನ್ನಡ ಸಾಹಿತ್ಯದ ನವೋದಯ ಮತ್ತು ನವ್ಯ ಕಾಲದ ಕೃತಿ, ಸಾಹಿತಿಗಳ ಮರು ಓದಿನ ಹೊಳಹುಗಳು ಈ ಪುಸ್ತಕದಲ್ಲಿ ಹರಳುಗಟ್ಟಿವೆ. ಲೇಖಕರು ಇವುಗಳನ್ನು ವಿಮರ್ಶೆ ಎನ್ನದೆ ಸಾಹಿತ್ಯ ಪ್ರಬಂಧಗಳು ಎಂದು ಕರೆದುಕೊಂಡಿರುವುದು ಈ ಬರಹಗಳ ಗುಣವನ್ನೂ ಸೂಚಿಸುವಂತಿದೆ. ಬೇಂದ್ರೆ, ಕುವೆಂಪು, ವಿ.ಸೀ., ಕೆಎಸ್‌ನ, ನಿರಂಜನ, ಭಾರತೀಸುತ, ಕಣವಿ, ಅಡಿಗ, ತೇಜಸ್ವಿ, ಲಂಕೇಶ್, ಕಾರ್ನಾಡ, ಶ್ರೀನಿವಾಸ ವೈದ್ಯ ಹೀಗೆ ಸಾಗುವ ಪಟ್ಟಿ ಕೇಶವ ಮಳಗಿ ಮತ್ತು ಜಯಂತ ಕಾಯ್ಕಿಣಿ, ಡಿ.ಪಿ. ಪ್ರಹ್ಲಾದ್ ಅವರವರೆಗೆ ಬಂದು ನಿಲ್ಲುತ್ತದೆ.

ಹಾಗಾದರೆ ಹೊಸ ತಲೆಮಾರಿನ ಓದುಗರ ಬಗ್ಗೆ ಲೇಖಕರ ಅಭಿಪ್ರಾಯವೇನು? ಈ ಪ್ರಶ್ನೆಗೆ ಮೊದಲ ಪ್ರಬಂಧವೇ (ಓದು ಮರು – ಓದು) ಉತ್ತರಿಸುತ್ತದೆ. ಅವರ ಪಾಲಿಗೆ ‘ಇತ್ತೀಚೆಗಿನ ಬಹಳಷ್ಟು ಬರಹಗಳು – ಅವು ಗದ್ಯವೇ ಇರಲಿ, ಪದ್ಯವೇ ಇರಲಿ, ಅಥವಾ ವಿಮರ್ಶೆಯಾಗಲಿ ರುಚಿಗೆಟ್ಟ ಅಡುಗೆಯಂತಿವೆ’. ಕನ್ನಡ ಹೊಸತಲೆಮಾರಿನ ಬರಹಗಾರರನ್ನು ಒಂದೆಡೆ ಹೊಗಳಿನ ದರಿಯೂ ಇನ್ನೊಂದೆಡೆ ತೆಗಳಿನ ಪುಲಿಯೂ ಪೀಡಿಸುತ್ತಿರುವ ಈ ಕಾಲದಲ್ಲಿ ವಸ್ತುನಿಷ್ಠವಾಗಿ, ಕಟು ವಿಮರ್ಶಕ ನೋಟದಿಂದ ನೋಡುವ ದೃಷ್ಟಿಕೋನ ಖಂಡಿತ ಅಗತ್ಯವಿದೆ. ಆ ನಿಟ್ಟಿನಲ್ಲಿ ಲೇಖಕರ ಈ ಮಾತು ಆಸಕ್ತಿ ಹುಟ್ಟಿಸುತ್ತದೆ. ಆದರೆ ಈ ಕುತೂಹಲ ಬಹಳ ಹೊತ್ತು ನಿಲ್ಲುವುದಿಲ್ಲ.

ಇಡೀ ಕೃತಿಯಲ್ಲಿ ಹೊಸ ತಲೆಮಾರಿನ ಯಾವುದೇ ಲೇಖಕರ, ಕೃತಿಯ ಕುರಿತು ಲೇಖನಗಳು ಇಲ್ಲ. ‘ಹೊಸ ತಲೆಮಾರಿನಲ್ಲಿ ಓದುವಂಥದ್ದು ಏನೂ ಇಲ್ಲ, ಹಾಗಾಗಿ ಹಳೆ ತಲೆಮಾರಿನ ಮರುಓದಿಗೆ ಹೊರಳುತ್ತಿದ್ದೇನೆ‘ ಎಂಬ ಸ್ಟೇಟ್‌ಮೆಂಟ್‌ನ ಛಾಯೆ ತುಂಬ ದಟ್ಟವಾಗಿಯೇ ಇದೆ. ಅದು ತಪ್ಪಲ್ಲ. ಆದರೆ ಒಬ್ಬ ಹಿರಿಯ ವಿಮರ್ಶಕನಾಗಿ ತಿರಸ್ಕಾರಕ್ಕೆ ಸಕಾರಣಗಳನ್ನು ಕೃತಿಗಳ ಮೂಲಕವೇ ಉಲ್ಲೇಖಿಸಿ ಹೇಳುವ ಜವಾಬ್ದಾರಿಯೂ ಇರುತ್ತದಲ್ಲವೇ? ಆದರೆ ಲೇಖಕರು ಈ ಜವಾಬ್ದಾರಿಯಿಂದ ಪೂರ್ತಿಯಾಗಿ ಜಾರಿಕೊಳ್ಳಲೋಸುಗವೇ ಹೊಸ ತಲೆಮಾರಿನ ಸಾಹಿತ್ಯ ರುಚಿಗೆಟ್ಟ ಅಡುಗೆ, ಅಲ್ಲಿ ಸಾವಯವ ಶಿಲ್ಪದ ಸಮಗ್ರೀಕರಣವಿಲ್ಲ ಎಂಬ ಸ್ಟೇಟ್‌ಮೆಂಟ್ ಕೊಟ್ಟ ಹಾಗಿದೆ. ಬಹುಶಃ ಅವರಿಗೆ ಜಯಂತ ಕಾಯ್ಕಿಣಿ, ಕೇಶವ ಮಳಗಿವರೆಗಿನ ಸಾಹಿತ್ಯದ ಅಡುಗೆಯಲ್ಲಿ ಸ್ವಲ್ಪ ರುಚಿ ಉಳಿದಿರುವಂತಿದೆ. ಜಯಂತರ ‘ಕಿರಣವೊಂದು ಜಾರಿ’ ಎಂಬ ಪದ್ಯದ ಕುರಿತು ಒಂದು ಲೇಖನ ಇಲ್ಲಿದೆ. ಆದರೆ ಆ ಲೇಖನದಲ್ಲಿಯಾದರೂ ಇವರೇ ಬಯಸುವ ಸಾವಯವ ಶಿಲ್ಪದ ಸಮಗ್ರೀಕರಣವನ್ನು ಗುರ್ತಿಸಿ ವಿವರಿಸಿದ್ದಾರೆಯೇ ಎಂದರೆ ಅಲ್ಲಿಯೂ, ‘ಈ ಸಾಲು ಶೋಷಣೆಯ ಬಗ್ಗೆ ಹೇಳುತ್ತದೆ’, ‘ಈ ಸಾಲು ಅಮೃತಬಳ್ಳಿ ಕಷಾಯವನ್ನು ನೆನಪಿಸುತ್ತದೆ’ ಎಂಬಿತ್ಯಾದಿ ಸಾಲುಗಳೇ ಕಾಣಸಿಗುತ್ತವೆ.

ADVERTISEMENT

ಬರೀ ಕಾವ್ಯ, ಗದ್ಯ ಬರವಣಿಗೆಯಷ್ಟೇ ಅಲ್ಲ, ‘ಅಪಾತ್ರ ಕೃತಿಗಳ ಕುರಿತು ಇಂದು ಜಾಹೀರಾತಿನಂತೆ ಬರುವ ’ಜನಪ್ರಿಯತೆ’ ವಿಮರ್ಶೆಗಳ ಕುರಿತೂ ಅವರಿಗಿರುವ ಸಿಟ್ಟು ಹಲವು ಲೇಖನಗಳಲ್ಲಿ ವ್ಯಕ್ತವಾಗಿವೆ.

ಹಳತರ ಪಕ್ಷಪಾತಿ ಕೃತಿಯನ್ನಾಗಿಯೇ ಒಪ್ಪಿಕೊಂಡು ಈ ಪುಸ್ತಕವನ್ನು ಓದಿದರೆ ಖಂಡಿತ ಹಲವು ಹೊಳಹುಗಳು ನಮಗೆ ಸಿಗುತ್ತವೆ. ಹಿರಿಯ ಸಾಹಿತಿಗಳ ಆಪ್ತವ್ಯಕ್ತಿಚಿತ್ರಗಳು ಸಿಗುತ್ತವೆ. ಸುಮತೀಂದ್ರ ನಾಡಿಗರು, ನಿರಂಜನರಂಥವರ ಬಗ್ಗೆ ಬರೆದಿರುವ ಬರಹಗಳು ಆ ಸಾಹಿತಿಗಳ ಬಗೆಗೆ ಗೌರವ ಹೆಚ್ಚಿಸುವುದರ ಜೊತೆಗೆ, ಅವರ ಸಾಹಿತ್ಯದ ಓದಿಗೂ ಪ್ರೇರಣೆ ಒದಗಿಸುವ ಹಾಗಿವೆ. ಹಾಗೆಯೇ ಬೇಂದ್ರೆ ಅವರ ಗದ್ಯದ ಕುರಿತಾದ ಬರಹಗಳು, ಕುವೆಂಪು ಬಗೆಗೆ ಅವರಿಗಿದ್ದ ನೋಟವನ್ನು ವಿವರಿಸುವ ಬರಹಗಳೂ ಸಾಹಿತ್ಯಲೋಕದ ಹಲವು ಮಿಥ್‌ಗಳನ್ನು ಒಡೆದು ಹಾಕುತ್ತವೆ. ಇಂಥ ಹಲವು ಸಾರ್ಥಕ ಬರಹಗಳು ಈ ಕೃತಿಯಲ್ಲಿವೆ. ಹಾಗಾಗಿಯೇಸಾಹಿತ್ಯದ ಓದುಗರಿಗೆ ಈ ಕೃತಿ ಕನ್ನಡ ಸಾಹಿತ್ಯದ ಕಾಡಿನಲ್ಲಿ ಆರಾಮ ವಿಹಾರ ಮಾಡಿದ ಅನುಭವ ನೀಡುತ್ತದೆ. ಹಾಗೆಯೇ ಹೊಸ ತಲೆಮಾರಿನ ಬರಹಗಾರರೂ ಈ ಕೃತಿಯಲ್ಲಿ ತಮ್ಮ ಬಗೆಗೆ ವ್ಯಕ್ತವಾದ ಸಾರಾಸಗಟು ತಿರಸ್ಕಾರವನ್ನು ನಿರ್ಲಕ್ಷಿಸಿ, ಹಳತರ ‘ಫ್ಲ್ಯಾಷ್’ ಆಗಿ ಓದಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.