ಬರಲಿದೆ ನೆಟ್ ಝೀರೊ ಪುಸ್ತಕ
ಫ್ಯಾಷನ್ ಲೋಕವು ಪರಿಸರಕ್ಕೆ ಮಾರಕ ಎಂದರೆ ನಂಬಬಹುದೇ? ಬ್ಯಾಟರಿ ಚಾಲಿತ ವಾಹನಗಳು ಪರಿಸರಕ್ಕೆ ಎಷ್ಟು ಪೂರಕ? ಸರ್ಕಾರ ಶಿಫಾರಸು ಮಾಡುವ ಹಸಿರು ಪಟಾಕಿ ಎಂದರೇನು? ಎಂಬಿತ್ಯಾದಿ ಪ್ರಶ್ನೆಗಳಿಗೆ ವೈಜ್ಞಾನಿಕ ತಳಹದಿಯಲ್ಲಿ ವಿವರಣೆ ಸಹಿತ ಉತ್ತರ ಮತ್ತು ಚರ್ಚೆಗೆ ವೇದಿಕೆಯನ್ನು ಲೇಖಕ ಗುರುರಾಜ್ ಎಸ್. ದಾವಣಗೆರೆ ಅವರು ‘ಬರಲಿದೆ ನೆಟ್ ಝೀರೊ: ಶೂನ್ಯ ಇಂಗಾಲದತ್ತ ನಮ್ಮ ನಡೆ’ ಕೃತಿಯಲ್ಲಿ ನೀಡಿದ್ದಾರೆ.
ವಾತಾವರಣ ಸೇರುತ್ತಿರುವ ಇಂಗಾಲ ಡೈಆಕ್ಸೈಡ್ ಅನ್ನು ಶೂನ್ಯಕ್ಕೆ ಇಳಿಸುತ್ತೇವೆ ಎಂದು ಮುಂದುವರಿದ ರಾಷ್ಟ್ರಗಳು ಈಗಾಗಲೇ ಘೋಷಿಸಿಕೊಂಡಿವೆ. ಭಾರತವು 2070ರ ಹೊತ್ತಿಗೆ ಇಂಗಾಲ ಉತ್ಪಾದನೆಯನ್ನು ಶೂನ್ಯಕ್ಕೆ ಇಳಿಸುವ ಗುರಿ ಹಾಕಿಕೊಂಡಿದೆ. ಹಾಗಿದ್ದರೆ ಇದನ್ನು ಸಾಧಿಸುವ ಬಗೆ ಹೇಗೆ, ಇರುವ ಸವಾಲುಗಳೇನು ಹಾಗೂ ಇಂಧನ ಮೂಲದ ಹೊಸ ಸಾಧ್ಯತೆಗಳೇನು ಎಂಬುದನ್ನು ಲೇಖಕ ಇಲ್ಲಿ ಚರ್ಚಿಸಿದ್ದಾರೆ.
ನವೀಕರಿಸಲಾಗದ ಇಂಧನಗಳು ಖಾಲಿಯಾದರೆ ಮುಂದೇನು ಎಂಬ ಪ್ರಶ್ನೆಯ ಸುತ್ತಲಿನ ಚರ್ಚೆ, ಜಲಜನಕವಾಗಲಿದೆಯೇ ಭೂಮಿಯ ಹೊಸ ಗೆಳೆಯ ಎಂಬ ಸಾಧ್ಯತೆಯ ಒಳನೋಟ, ಸೌರ ಶಕ್ತಿ ನಿಜಕ್ಕೂ ಹಸಿರು ಇಂಧನವೇ ಎಂಬ ಪ್ರಶ್ನೆಗಳಿಗೆ ಉತ್ತರದ ಜತೆಗೆ ಮಾಲಿನ್ಯ ಸೃಷ್ಟಿಸಿರುವ ಕರಾಳ ನೆರಳಿನ ಕಥನಗಳು ಈ ಕೃತಿಯಲ್ಲಿವೆ.
ಕಲ್ಲಿದ್ದಲು ಬಳಸಿ ವಿದ್ಯುತ್ ಉತ್ಪಾದಿಸುವುದು ಅಪಾಯಕಾರಿ ಎಂದಾಗ, ಅಣು ವಿದ್ಯುತ್ ಸ್ಥಾವರಗಳ ಸ್ಥಾಪನೆ ಆರಂಭಗೊಂಡವು. ಇದೀಗ ಜಿಯೊಥರ್ಮಲ್ ವಿದ್ಯುತ್ ಉತ್ಪಾದನೆಯತ್ತ ಅಭಿವೃದ್ಧಿ ರಾಷ್ಟ್ರಗಳ ಚಿತ್ತ ನೆಟ್ಟಿದೆ. ಭೂಮಿ ಆಳದ ಶಾಖವನ್ನೇ ವಿದ್ಯುತ್ ಉತ್ಪಾದನೆಗೆ ಬಳಸುವ ಈ ಯೋಜನೆ ಕೆಲಸ ಮಾಡುವುದು ಹೇಗೆ ಎಂಬ ಕುತೂಹಲಕರ ವಿವರಗಳೂ ಈ ಕೃತಿಯಲ್ಲಿವೆ. ಜತೆಗೆ ಇಂದಿನ ಅಧ್ವಾನ ಹಾಗೂ ಅವಾಂತರಗಳನ್ನೂ ಲೇಖಕ ಬಿಚ್ಚಿಟ್ಟಿದ್ದಾರೆ.
ಬರಲಿದೆ ನೆಟ್ ಝೀರೊ
ಲೇ: ಗುರುರಾಜ್ ಎಸ್. ದಾವಣಗೆರೆ
ಪ್ರ: ವಸಿಷ್ಠ ಬುಕ್ಸ್
ಸಂ: 99010 67738
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.