ADVERTISEMENT

‘ಹೊಸ ಓದುಗರಿಗೆ ಕುವೆಂಪು‘ ಪುಸ್ತಕ ಪರಿಚಯ: ಕುವೆಂಪುಲೋಕದಲ್ಲಿ ಆಪ್ತ ಪಯಣ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 23:57 IST
Last Updated 22 ನವೆಂಬರ್ 2025, 23:57 IST
ಹೊಸ ಓದುಗರಿಗೆ ಕುವೆಂಪು
ಹೊಸ ಓದುಗರಿಗೆ ಕುವೆಂಪು   

ಮಾತು–ಬರವಣಿಗೆಯ ಮೂಲಕ ಕುವೆಂಪು ಅವರ ಕೃತಿಗಳ ಬಗ್ಗೆ ಕನ್ನಡದ ಓದುಗರನ್ನು ಮತ್ತೆ ಮತ್ತೆ ಸೆಳೆಯುತ್ತಿರುವ ಕೆ.ವಿ. ನಾರಾಯಣ ಅವರ ಹೊಸ ಕೃತಿ ‘ಹೊಸ ಓದುಗರಿಗೆ ಕುವೆಂಪು’. ‘ಕುವೆಂಪು ಬರಹಗಳು ಮತ್ತು ಭಾಷಣಗಳ ಬಗ್ಗೆ’ ಎನ್ನುವ ಅಡಿಟಿಪ್ಪಣಿಯೇ ಇಲ್ಲಿನ ಬರವಣಿಗೆ ಸ್ವರೂಪವನ್ನು ಹೇಳುವಂತಿದೆ.

ಮಹತ್ವದ ಬರಹಗಾರನ ಸಾಹಿತ್ಯ ಪ್ರತಿ ಓದಿನಲ್ಲಿಯೂ ಹೊಸ ಹೊಳಹುಗಳನ್ನು ಬಿಟ್ಟುಕೊಡುತ್ತಿರುತ್ತದೆ. ಹಾಗೆಯೇ, ತನ್ನ ಕಾಲದ ವಿದ್ಯಮಾನಗಳನ್ನು ಅರ್ಥ ಮಾಡಿಕೊಳ್ಳಲಿಕ್ಕೆ ಅಗತ್ಯವಾದ ನೋಟಗಳನ್ನೂ ಕರುಣಿಸುತ್ತಿರುತ್ತದೆ. ಈ ಹಿನ್ನೆಲೆಯಲ್ಲಿ ಕನ್ನಡದ ಎಲ್ಲ ತಲೆಮಾರುಗಳಿಗೆ ಕುವೆಂಪು ಸಾಹಿತ್ಯ ಪ್ರಸ್ತುತವೇ. ಹೊಸ ಓದುಗರನ್ನು ಗಮನದಲ್ಲಿಟ್ಟುಕೊಂಡು ಬರವಣಿಗೆ ರೂಪುಗೊಂಡಿದ್ದರೂ, ಕುವೆಂಪು ಬಗ್ಗೆ ಕುತೂಹಲವುಳ್ಳ ಎಲ್ಲ ಓದುಗರಿಗೂ ಉಪಯುಕ್ತವಾದ ಕೃತಿ ಇದಾಗಿದೆ.

ಈ ಸಂಕಲನದ ಹನ್ನೆರಡು ಬರಹಗಳು ಕುವೆಂಪು ಕೃತಿಗಳು ಹಾಗೂ ವಿಚಾರಗಳನ್ನು ಅರ್ಥ ಮಾಡಿಕೊಳ್ಳುವ ದಾರಿಗಳನ್ನು ನಿಚ್ಚಳಗೊಳಿಸುವ ಪ್ರಯತ್ನಗಳಾಗಿವೆ. ಹೀಗೆ ಕುವೆಂಪು ಮಾರ್ಗದಲ್ಲಿ ಓದುಗರನ್ನು ಕರೆದೊಯ್ಯುವ ಲೇಖಕರು, ತಮ್ಮ ಅಭಿಪ್ರಾಯಗಳನ್ನು ಅಂತಿಮ ಎಂದು ಹೇಳದೆ, ಹಲವು ಸಾಧ್ಯತೆಗಳಿಗೆ ಓದುಗರು ತೆರೆದುಕೊಳ್ಳಲು ಅನುಕೂಲವಾಗುವಂತೆ ಬರವಣಿಗೆ ರೂಪಿಸಿದ್ದಾರೆ. ಈ ಬರವಣಿಗೆ, ಕುವೆಂಪು ಸಾಹಿತ್ಯದ ಅನನ್ಯತೆಯನ್ನು ಹೇಳುವಂತೆಯೇ ಕೆವಿಎನ್‌ ಅವರ ಒಳನೋಟಗಳ ಅಸಲಿಯತ್ತನ್ನೂ ಕಾಣಿಸುತ್ತದೆ.

ADVERTISEMENT

‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು ಕುರಿತಂತೆಯೇ ಮೂರು ಬರಹಗಳು ಇಲ್ಲಿವೆ ಹಾಗೂ ಈ ಬರಹಗಳು ಮದುಮಗಳನ್ನು ಮತ್ತೆ ಮತ್ತೆ ಎದುರುಗೊಳ್ಳಲು ‍ಪ್ರೇರೇಪಿಸುವಂತಿವೆ. ‘ವಿಚಾರಕ್ರಾಂತಿಗೆ ಆಹ್ವಾನ: ಆಗ–ಈಗ’, ‘ಕುವೆಂಪು ಚಿಂತನೆಗಳು: ಅಂದು–ಇಂದು’, ‘ಕುವೆಂಪು ಅವರಲ್ಲಿ ರಾಷ್ಟ್ರೀಯತೆಯ ಪರಿಕಲ್ಪನೆ’, ‘ಕುವೆಂಪು ಕೃತಿಗಳ ವಿಮರ್ಶೆಯ ನೆಲೆಗಳು’, ‘ಕುವೆಂಪು ಅವರ ಭಾಷಾ ಬಳಕೆ: ಸೃಜನಶೀಲ ನೆಲೆಗಳು’ ಮುಂತಾದ ಬರಹಗಳು, ದಾರ್ಶನಿಕ ಬರಹಗಾರನ ಶಕ್ತಿಯ ನೆಲೆಗಳನ್ನು ಅರ್ಥ ಮಾಡಿಕೊಳ್ಳಲು ನೆರವಾಗುವಂತಿವೆ.

ಹೊಸ ಓದುಗರಿಗೆ ಕುವೆಂಪು

ಲೇ: ಕೆ.ವಿ. ನಾರಾಯಣಪ್ರ: ಆಕೃತಿ ಪುಸ್ತಕ ಬೆಂಗಳೂರು.

ಸಂ: 9611541806

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.