ADVERTISEMENT

Book Review| ವೈದ್ಯರೊಬ್ಬರ ಅನುಭವಗಳ ಗುಚ್ಛ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2022, 19:30 IST
Last Updated 10 ಡಿಸೆಂಬರ್ 2022, 19:30 IST
ಶಹರು ಮತ್ತು ಶ್ವೇತಾದ್ರಿ
ಶಹರು ಮತ್ತು ಶ್ವೇತಾದ್ರಿ   

ವೈದ್ಯಕೀಯ ಪದವಿ ಪಡೆದವರಲ್ಲಿ ಬಹುತೇಕರು ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಲು ಹಿಂಜರಿಯುತ್ತಿರುವ ಕಾಲಘಟ್ಟದಲ್ಲಿ ಬೆಂಗಳೂರಿನಲ್ಲೇ ಹುಟ್ಟಿ ಬೆಳೆದು, ಹೋಮಿಯೋಪಥಿ ಪದ್ಧತಿಯಲ್ಲಿ ಪದವಿ ಪಡೆದು ಗ್ರಾಮೀಣ ಭಾಗದಲ್ಲೇ (ಚಾಮರಾಜನಗರ) ಆರೋಗ್ಯ ಸೇವೆ ಒದಗಿಸುತ್ತಿರುವ ವೈದ್ಯರೊಬ್ಬರ ವೃತ್ತಿ ಆರಂಭದ ಅನುಭವ ಕಥನವೇ ‘ಶಹರು ಮತ್ತು ಶ್ವೇತಾದ್ರಿ’. ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಬೆಟ್ಟಕ್ಕೆ ಶ್ವೇತಾದ್ರಿ ಎಂಬ ಹೆಸರೂ ಉಂಟು. ಕೃತಿಯ ಹೆಸರೇ ಹೇಳುವಂತೆ ಇದು ನಗರ ಮತ್ತು ಕಾಡಿನಲ್ಲಿ ಪಡೆದ ಅನುಭವಗಳ ಗುಚ್ಛ.

ಡಾ.ಗುರುಕಿರಣ್‌ ಅವರು ವೈದ್ಯಕೀಯ ಕೋರ್ಸ್‌ ಮುಗಿದ ತಕ್ಷಣ ಬೆಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಆಲೋಪಥಿ ಪದ್ಧತಿಯಲ್ಲಿ ತರಬೇತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಪಡೆದ ಅನುಭವಗಳನ್ನು ಈ ಪುಟ್ಟ ಕೃತಿಯಲ್ಲಿ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಎದುರಾದ ಹಾಸ್ಯ ಸನ್ನಿವೇಶ, ರೋಗಿಗಳ ಮಾನಸಿಕ ತುಮುಲ, ಕುಟುಂಬದವರ ಸಂಕಷ್ಟ, ಮಾನವನ ಕ್ರೌರ್ಯ, ಹಿಂಸೆ, ಅಸಹಾಯಕತೆ... ಹೀಗೆ ಅನುಭವ ವೈವಿಧ್ಯವೇ ಇಲ್ಲಿ ಮೈದಳೆದಿದೆ.

ಕೃತಿ ಹೆಚ್ಚು ಆಪ್ತ ಎನಿಸುವುದು ಬಿಳಿಗಿರಿರಂಗನಬೆಟ್ಟ, ಕಾಡು, ಪ್ರಾಣಿ, ಪಕ್ಷಿ, ಸೋಲಿಗರು ಅವರ ಆಚಾರ ವಿಚಾರ ಕುರಿತ ಬರಹಗಳಿಂದ. ಬಿಳಿಗಿರಿರಂಗನಬೆಟ್ಟದ ವಿಜಿಕೆಕೆಯಲ್ಲಿ ಕಾರ್ಯನಿರ್ವಹಿಸಿದ ಸಂದರ್ಭದ ಅನುಭವಗಳನ್ನು ಗುರುಕಿರಣ್‌ ಅವರು ಪುಸ್ತಕದಲ್ಲಿ ರಸವತ್ತಾಗಿ ಕಟ್ಟಿಕೊಟ್ಟಿದ್ದಾರೆ. ಹೋಮಿಯೋಪಥಿ ವೈದ್ಯರಾಗಿದ್ದರೂ ಗಿಡಮೂಲಿಕೆಗಳು, ಆಯುರ್ವೇದ ಚಿಕಿತ್ಸೆಯಲ್ಲಿ ಅವುಗಳ ಬಳಕೆ, ಸೋಲಿಗರ ನಾಟಿ ಚಿಕಿತ್ಸೆಯ ಜ್ಞಾನದ ಕುರಿತು ಪ್ರಸ್ತಾಪಿಸಿದ್ದಾರೆ. ಗಿರಿಜನರ ಜೀವನ, ಸಂಸ್ಕೃತಿ, ಅವರು ಆಚರಿಸುವ ಹಬ್ಬಗಳು, ಬಿಳಿಗಿರಿರಂಗನಬೆಟ್ಟದ ಸೌಂದರ್ಯ, ದೊಡ್ಡ ಸಂಪಿಗೆ ಸೇರಿದಂತೆ ಬಿಳಿಗಿರಿ ಕಾನನದಲ್ಲಿರುವ ಪ್ರಮುಖ ಸ್ಥಳಗಳು, ಪ್ರಾಣಿಗಳು, ಅವುಗಳಿಂದ ಎದುರಾದ ಅಪಾಯದ ಸನ್ನಿವೇಶಗಳು, ಕಂಡ ಪಕ್ಷಿಗಳ ವಿವರಗಳನ್ನೂ ಪುಸ್ತಕದಲ್ಲಿ ದಾಖಲಿಸುವ ಪ್ರಯತ್ನ ಮಾಡಿದ್ದಾರೆ.

ADVERTISEMENT

ಶಹರು ಮತ್ತು ಶ್ವೇತಾದ್ರಿ

ಲೇ:ಡಾ.ಗುರುಕಿರಣ್‌ ಎನ್‌.

ಪ್ರ:ಪೃಥ್ವಿ ಪ್ರಕಾಶನ, ಮೈಸೂರು

ಸಂ:9870414165

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.