ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಬೇರೆ ಬೇರೆ ಸಂದರ್ಭಗಳಲ್ಲಿ ಮಾಡಿದ ಭಾಷಣ ಮತ್ತು ಲೇಖನಗಳ ಸಂಗ್ರಹವಿದು. ಈ ಲೇಖನಗಳ ಮಾಲಿಕೆಯ ‘ಊರ ಮಧ್ಯದ ಕಣ್ಣ ಕಾಡಿನೊಳಗೆ’ ಎಂಬ ಹೆಸರಿನ ರೂಪಕ ಲೇಖಕರ ಕಾವ್ಯ ಗುಣವನ್ನು ಸೂಚಿಸುವಂತಿದೆ. ಇಲ್ಲಿ ಅವರು ವರ್ತಮಾನದ ಘಟನೆಗಳನ್ನು ವೈಚಾರಿಕ ಚಿಂತನೆಯಲ್ಲಿ ವಿಶ್ಲೇಷಿಸಿದ್ದಾರೆ. ಹಾವೇರಿಯಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಲೇಖಕರನ್ನು ಕಡೆಗಾಣಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಕನ್ನಡ ಸಾಹಿತ್ಯ ಪರಿಷತ್ತಿನ ಈ ನಡೆಯನ್ನು ವಿರೋಧಿಸಿ ‘ಜನಸಾಹಿತ್ಯ ಸಮ್ಮೇಳನ’ವನ್ನು ಪ್ರಗತಿಪರ ಲೇಖಕರು ಮತ್ತು ಸಂಘಟನೆಗಳ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಮಾಡಲಾಗಿತ್ತು. ಆ ಸಮ್ಮೇಳನದ ಉದ್ಘಾಟನಾ ಭಾಷಣವನ್ನು ಲೇಖಕ ಮಾಡಿದ್ದರು. ಅದು ಈ ಸಂಕಲನದ ‘ಬಲ–ಪ್ರಭುತ್ವ ಮತ್ತು ಸಾಂಸ್ಕೃತಿಕ ಹಿಂಚಲನೆ’ ಎಂಬ ಮೊದಲ ಲೇಖನ.
ಇದರಲ್ಲಿ ಲೇಖಕ, ಧಾರ್ಮಿಕ ಮತ್ತು ಜಾತಿ ಕಾರಣಕ್ಕಾಗಿ ನಡೆಯುವ ಭೇದಭಾವವನ್ನು ವಿಮರ್ಶಾತ್ಮಕ ದೃಷ್ಟಿಯಿಂದ ನೋಡಿದ್ದಾರೆ. ಇವತ್ತು ಬಳಕೆಯಲ್ಲಿರುವ ‘ಹಿಂದೂ’ ಎನ್ನುವ ಪದ ಸ್ವಾಮಿ ವಿವೇಕಾನಂದ ಮತ್ತು ಗಾಂಧಿ ಗ್ರಹಿಸಿದ ಪದವಲ್ಲ, ಅದನ್ನು ನಾವು ಸೂಕ್ಷ್ಮವಾಗಿ ನೋಡಬೇಕು ಎಂದು ಪ್ರತಿಪಾದಿಸುತ್ತಾರೆ. ಪರ್ಷಿಯನ್ ಮೂಲದ ಹಿಂದಿ, ಹಿಂದೂ, ಹಿಂದೂಸ್ಥಾನ್ ಎಂಬ ಪದಗಳನ್ನು ಒಂದು ರಾಷ್ಟ್ರ ಎನ್ನುವ ಕಲ್ಪನೆಯಲ್ಲಿ ಒಂದು ಭಾಷೆ–ಒಂದು ಧರ್ಮ ಎಂದು ತೇಲಿ ಬಿಡಲಾಗುತ್ತಿದೆ. ಇದು ಭಾರತದ ವೈವಿಧ್ಯಕ್ಕೆ ಮಾರಕ ಎನ್ನುತ್ತಾರೆ. ಶಾಲಾ ಪಠ್ಯದಲ್ಲಿಯೂ ಇತಿಹಾಸವನ್ನು ತಿರುಚಲಾಗಿದೆ. ಬೌದ್ಧ, ಜೈನ ಧರ್ಮಗಳ ಉಗಮ ವಿಕಾಸವನ್ನು ಮಕ್ಕಳಿಗೆ ಹೇಳಬೇಕು ಅಲ್ಲವೇ ಎಂದು ಪ್ರಶ್ನಿಸುವ ಅವರು, ಬಸವಣ್ಣನವರ ವೈದಿಕ ಮೂಲದ ಮೌಢ್ಯ ಮತ್ತು ಜಾತಿ ಪದ್ಧತಿಯ ವಿರೋಧವನ್ನೂ ಪ್ರಸ್ತಾಪಿಸುತ್ತಾರೆ.
ನಟ ಚೇತನ ಅಹಿಂಸಾ ಅವರ ‘ಬ್ರಾಹ್ಮಣ್ಯ’ ಹೇಳಿಕೆ ಹುಟ್ಟುಹಾಕಿದ ವಿವಾದಕ್ಕೆ ಸಂಬಂಧಿಸಿದಂತೆ ‘ಬ್ರಾಹ್ಮಣ ಮತ್ತು ಬ್ರಾಹ್ಮಣ್ಯ’ ಲೇಖನ ಪ್ರತಿಕ್ರಿಯಿಸುತ್ತದೆ. ಜಾತಿ ಆಧಾರಿತ ತಾರತಮ್ಯವನ್ನು ಉಳಿಸಿಕೊಳ್ಳಲು ಬ್ರಾಹ್ಮಣ್ಯ ಯತ್ನಿಸುತ್ತದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ದಂಪತಿಯನ್ನು ಪುರಿಯ ಜಗನ್ನಾಥ ದೇವಸ್ಥಾನದ ಒಳಗೆ ಬಿಟ್ಟುಕೊಳ್ಳಲಿಲ್ಲ. ಈ ಲೋಪವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿತ್ತು ಎಂಬ ಆಶಯವನ್ನು ಚಿನ್ನಸ್ವಾಮಿ ಈ ಲೇಖನದಲ್ಲಿ ವ್ಯಕ್ತಪಡಿಸುತ್ತಾರೆ.
‘ಬಣ ಮತ್ತು ಪಂಗಡಗಳಾಚೆ ದಲಿತ ಜಾತಿಗಳ ಐಕ್ಯತೆ ಸಾಧ್ಯವೆ?’, ‘ಧರ್ಮಾಂತರ ಅನಿವಾರ್ಯ ಏಕೆ’, ‘ಶಾಲೆಯಲ್ಲಿ ಅಸ್ಪೃಶ್ಯತೆ–ಏಟಿಗೆ ಎದುರೇಟು’, ‘ಬೌದ್ಧಧರ್ಮ ಮಾನವೋಪಕಾರಿ’ ಲೇಖನಗಳು ಸೇರಿದಂತೆ 18 ಲೇಖನಗಳನ್ನು ಈ ಕೃತಿ ಒಳಗೊಂಡಿದೆ.
ಊರ ಮಧ್ಯದ ಕಣ್ಣ ಕಾಡಿನೊಳಗೆ
ಲೇ: ಮೂಡ್ನಾಕೂಡು ಚಿನ್ನಸ್ವಾಮಿ
ಪ್ರ: ನವಕರ್ನಾಟಕ ಪ್ರಕಾಶನ
ಸಂ: 080–22161900
ಪುಟ: 104
ಬೆಲೆ: ₹ 130
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.