ADVERTISEMENT

ಮೊದಲ ಓದು: ಪ್ರಶ್ನೆಗಳನ್ನು ಹುಟ್ಟುಹಾಕುವ ಕೃತಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2024, 23:49 IST
Last Updated 23 ಮಾರ್ಚ್ 2024, 23:49 IST
ಹೈವೇ 63
ಹೈವೇ 63   

ಈ ಕಾದಂಬರಿಯಲ್ಲಿ ಕಾಡು ಒಂದು ಪಾತ್ರ. ಕಾಡ್ಗಿಚ್ಚು ಒಂದು ಸನ್ನಿವೇಶ. ಆದರೆ ಆ ಕಾಡ್ಗಿಚ್ಚಿನ ತಾಪ ಪುಸ್ತಕದ ಉದ್ದಕ್ಕೂ ಸೋಕುತ್ತಲೇ ಇರುತ್ತದೆ. ಪ್ರೀತಿ–ಪ್ರತಿಕಾರ, ಪ್ರೇಮ–ಕಾಮ, ಸಾಂಗತ್ಯ–ಒಂಟಿತನ, ನೈತಿಕ ಮತ್ತು ಅನೈತಿಕಗಳ ಕಾವು ಆತ್ಮಕ್ಕೆ ತಾಕುತ್ತಲೇ ಇರುತ್ತದೆ.

ಬೆಟ್ಟ–ಕಾಡುಗಳ ನಡುವಿನ ಹೆಬ್ಬಾವಿನಂತೆ ಬಿದ್ದಿರುವ ಹೆದ್ದಾರಿ ಬದಿಯ ಧಾಬಾ ಕಾದಂಬರಿಯ ಕೇಂದ್ರಬಿಂದು. ಕಾಡನ್ನು ಅವಲಂಬಿಸಿದವರು, ಕಾಡಿನ ರಕ್ಷಣೆಗೆ ಹೋರಾಡುವವರು, ಹೋರಾಡಿದಂತೆ ಮಾಡುವವರು, ಆಶಾ ಕಾರ್ಯಕರ್ತೆ ನಳಿನಿ, ಪ್ರೇಮವನ್ನರಸಿ ಹೋದ ನಂದಿನಿ, ಪೆಟ್ಟಿಗೆ ಅಂಗಡಿಯ ಗಾಂವ್ಕಾರ್‌ ಕುಟುಂಬ. ಹೆಂಡತಿ ಅಗಲಿದಳೆಂದು ಕಣ್ಣೀರಾಗುವ  ಕೇಣಿ ಅವರು, ಮಗ ಮನೆಗೆ ಮರಳಿದನೆಂದು ಸಮಾಧಾನಪಡಬೇಕು, ಮಗಳು ಮನೆ ಬಿಟ್ಟಳೆಂದು ದುಃಖಿಸಬೇಕೋ ಎಂಬ ಗೊಂದಲದಲ್ಲಿರುವಾಗಲೇ, ಬದುಕು ಮತ್ತೆ ಮಗ್ಗುಲು ಬದಲಿಸುತ್ತದೆ. ಮಗ ಮತ್ತೆ ಜೈಲು ಪಾಲಾಗುತ್ತಾನೆ. ಲಾರಿಗಳಿಂದಲೇ ಕಳ್ಳಸಾಗಣೆ ಮಾಡುವ ಮಂಜುನಾಥ, ನಂದಿನಿಯ ಪ್ರಿಯಕರ ವೆಂಕಟ್‌ ಆಚಾರಿ.. ಹೀಗೆ ಕೆಲವೇ ಪಾತ್ರಗಳಾದರೂ ಉತ್ತರ ಕನ್ನಡ ಜಿಲ್ಲೆಯ ತಳಮಳಗಳನ್ನೆಲ್ಲ ಕಾದಂಬರಿ ಒಂದೆಡೆ ಹೆಣೆದಿಡುತ್ತದೆ. ಈ ಯುಗದ ತಲ್ಲಣಗಳು, ಹಿರಿಯ ಜೀವದ ತವಕ, ಯತಾರ್ಥ ಜೀವಗಳು, ಅತ್ಯಾಸೆಯ ಮನುಷ್ಯರು–ಹೀಗೆ ಎಲ್ಲವನ್ನೂ ಒಂದೊಂದೇ ಎಳೆಯಾಗಿ ಬಿಡಿಸುತ್ತಲೇ ನಮ್ಮೊಳಗಿನ ಸಣ್ಣತನವನ್ನೂ, ಇರಬೇಕಾಗಿರುವ ಧಾರಾಳಿತನವನ್ನೂ ಲೇಖಕಿ ಸುನಂದಾ ಕಡಮೆ ಹೇಳುತ್ತ ಹೋಗುತ್ತಾರೆ.

ಪುಸ್ತಕ ಓದಿ ಮುಗಿಸಿದಾಗ ಕಥಾನಾಯಕ ವಿನಾಯಕನಿಗೇನಾಯಿತು? ನಂದಿನಿ ತನ್ನ ಪ್ರೇಮವನ್ನೇ ಸ್ಪಷ್ಟವಾಗಿ ತಿರಸ್ಕರಿಸುತ್ತಾಳೆಯೇ? ನಳಿನಿ ಮತ್ತು ವಿನಾಯಕನ ಪ್ರೇಮಕಥೆ ಏನಾಯಿತು? ಇನ್ನೊಂದು ಭಾಗ ಬರಲಿದೆಯೇ ಎಂಬ ನಿರೀಕ್ಷೆಯೊಡನೆ ಓದನ್ನು ಮುಗಿಸುತ್ತೇವೆ. ಕತೆಯೊಂದು ಓದಿನ ಉದ್ದಕ್ಕೂ ಪ್ರಶ್ನೆಗಳನ್ನು ಹುಟ್ಟಿಸುತ್ತ, ನಮ್ಮೊಳಗೆ ಜಿಜ್ಞಾಸೆಯನ್ನೂ ತಂದಿಡುವ ಕಥನಕಾರ್ಯ ಇಲ್ಲಿ ಕಸೂತಿಯಷ್ಟೇ ನಾಜೂಕಾಗಿದೆ.

ADVERTISEMENT

ಹೈವೇ 63

ಲೇ: ಸುನಂದಾ ಕಡಮೆ

ಪ್ರ: ಆಕೃತಿ ಪುಸ್ತಕ

ಸಂ: 080 23409479

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.