ADVERTISEMENT

ಮೊದಲ ಓದು: ನೆಲಮೂಲ ಅರಿಯುವ ಒಳಗಣ್ಣಿನ ಶೋಧ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2024, 23:31 IST
Last Updated 27 ಏಪ್ರಿಲ್ 2024, 23:31 IST
ಪರಿಮಳದ ಹಾದಿಯ ಪಯಣಿಗರು
ಪರಿಮಳದ ಹಾದಿಯ ಪಯಣಿಗರು   

ಸಮಾಜಮುಖಿಯಾಗಿ, ಜೀವಕಾರುಣ್ಯದಿಂದ ಬಾಳಿದ ಮತ್ತು ಬಾಳುತ್ತಿರುವವರ ಕುರಿತಾಗಿ ‘ಕಾಲಕ್ಕೆ ಕನ್ನಡಿ ಹಿಡಿಯುವಂತೆ’ ಲೇಖಕ ಮಲ್ಲಿಕಾರ್ಜುನ ಕಡಕೋಳ ಅವರು ಬರೆದ ಲೇಖನಗಳ ಗುಚ್ಛವೇ ‘ಪರಿಮಳದ ಹಾದಿಯ ಪಯಣಿಗರು’ ಕೃತಿಯಾಗಿ ಹೊರಬಂದಿದೆ. ಲೇಖಕ ವಿವಿಧ ಸಂದರ್ಭಗಳಲ್ಲಿ, ವಿವಿಧ ಪತ್ರಿಕೆಗಳಿಗೆ ಬರೆದ 50 ಬಿಡಿ ಲೇಖನಗಳ ಸಂಗ್ರಹವಿದು. 

ತತ್ವಪದಕಾರರ ಪರಂಪರೆಯವರು, ವೃತ್ತಿರಂಗಭೂಮಿಯ ಮೇರು ಚೇತನಗಳು, ಎಡಚಿಂತನೆಯ ಹೋರಾಟಗಾರರು, ಸಮಾಜಮುಖಿ ಚಿಂತಕರ ವ್ಯಕ್ತಿತ್ವವನ್ನು ಇಲ್ಲಿ ಲೇಖಕರು ಸ್ಥೂಲವಾಗಿ ಕಟ್ಟಿಕೊಟ್ಟಿದ್ದಾರೆ. ಸಾಹಿತಿ ಲಕ್ಷ್ಮಿಪತಿ ಕೋಲಾರ ಅವರು ಮುನ್ನುಡಿಯಲ್ಲಿ ‘ಈ ಕೃತಿಗೆ ಜೀವಮೌಲ್ಯವೊಂದು ಪ್ರಾಪ್ತಿಯಾಗಿಬಿಟ್ಟಿದೆ’ ಎಂದು ಹೇಳಿರುವುದೂ ಅತಿಶಯವೆನಿಸುವುದಿಲ್ಲ.  

ಇವು ಬಿಡಿ ಬಿಡಿಯಾದ ಲೇಖನಗಳಾದರೂ ತತ್ವಪದಕಾರ ಮಡಿವಾಳಪ್ಪನ ಕುರಿತಾದ ಮೊದಲ ಲೇಖನ ಇಲ್ಲಿರುವ ಬಹಳಷ್ಟು ಲೇಖ‌ನಗಳಿಗೆ ಒಂದು ಬಂಧಬೆಸುಗೆಯನ್ನು ಬೆಸೆದಿದ್ದು, ‌ಲೇಖಕರು ಇಲ್ಲಿ ಪರಿಚಯಿಸಿರುವ ಬಹಳಷ್ಟು ವ್ಯಕ್ತಿಗಳು, ವಿಚಾರಗಳು ತತ್ವಪದಕಾರ ‘ಕಡಕೋಳ ಮಡಿವಾಳಪ್ಪ’ನ ಪರಂಪರೆಯ ಪರೀದಿಯಲ್ಲಿ ಪರಿಭ್ರಮಿಸುವಂತೆ ಚಿತ್ರಿತವಾಗಿರುವುದು ಒಂಚೂರು ಕ್ಲೀಷೆಯಾಗಿ ಕಾಣಿಸುತ್ತದಷ್ಟೇ. 

ADVERTISEMENT

ಆದರೆ, ಇಲ್ಲಿರುವ ಬಹುತೇಕ ಲೇಖನಗಳು ಅವರಿವರಿಂದ ಕೇಳಿ ತಿಳಿದಿದ್ದನ್ನು, ಎಲ್ಲಿಯೋ ಓದಿದ್ದನ್ನು ಗ್ರಹಿಸಿ ಬರೆದ ಪದಪುಂಜಗಳಾಗಿಲ್ಲ. ಪ್ರತಿ ಲೇಖನ ಸಿದ್ಧಪಡಿಸಲು ಲೇಖಕರು, ಪರಿಮಳ ಸೂಸುವ ದುಂಡುಮಲ್ಲಿಗೆ ದಂಡೆಯನ್ನು ಕಟ್ಟುವವರು ಹಾಕುವಷ್ಟೇ ಪರಿಶ್ರಮ, ಶ್ರದ್ಧೆಯನ್ನು ಹಾಕಿರುವುದು ಓದುಗರ ಅನುಭವಕ್ಕೆ ದಕ್ಕುತ್ತದೆ. ಅಧ್ಯಯನದ ಜತೆಗೆ, ಊರೂರು ಸುತ್ತಾಟ, ಅನುಭಾವಿಗಳ ಸಂಗಡ ಲೇಖಕ ಒಡನಾಡಿರುವುದೂ ನೆಲಮೂಲ ಅರಿಯುವ ತುಮುಲದಿಂದ ಒಳಗಣ್ಣಿನ ಶೋಧ ನಡೆಸಿರುವುದು ಲೇಖನಗಳಿಗೆ ಪೂರ್ಣತೆ ತಂದುಕೊಟ್ಟಿವೆ. 

ನಮ್ಮ ಸಮಕಾಲದಲ್ಲೇ ಆಗಿಹೋದ ಚೇತನಗಳನ್ನು, ಕಣ್ಣೆದುರಿಗೆ ಇರುವ ಸಾಧಕರನ್ನು ಅವರು ಬಾಳಿ ಬದುಕಿದಂತೆಯೇ ಅರ್ಥಾತ್‌ ಅವರು ಇದ್ದಂಗೆಯೇ ಚಿತ್ರಿಸಿರುವುದರಿಂದ ಓದಿನ ಆಪ್ತತೆಯನ್ನು ಈ ಕೃತಿ ನೀಡುತ್ತದೆ. ಅಲ್ಲಲ್ಲಿ ಉಳಿದಿರುವ ಕಾಗುಣಿತ ದೋಷಗಳು ಓದಿನ ಸುಖಕ್ಕೆ ಅಷ್ಟೇನು ತೊಡಕಾಗುವುದಿಲ್ಲ. ತತ್ವಪದಕಾರ ಕಡಕೋಳ ಮಡಿವಾಳಪ್ಪನಾದಿಯಾಗಿ... ಪವಾಡದ ರೀತಿ ಅಸಾಮಾನ್ಯ ಕೆಲಸ ಮಾಡಿದ ಸಾಮಾನ್ಯ ವನಪಾಲಕ ನಾಗಪ್ಪ ಜುಮ್ಮಣ್ಣ ಮೇಟಿಯವರೆಗೂ ಹಲವು ಜೀವಪರ ವ್ಯಕ್ತಿಗಳ ದರ್ಶನವನ್ನು ಲೇಖಕ ಈ ಕೃತಿಯಲ್ಲಿ ಮಾಡಿಸಿದ್ದಾರೆ.

ಲೇ: ಮಲ್ಲಿಕಾರ್ಜುನ ಕಡಕೋಳ

ಪ್ರ: ಅಭಿವ್ಯಕ್ತಿ ವಿಜಯನಗರ

ಸಂ: 9341010712

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.