ADVERTISEMENT

ಪುಸ್ತಕ ವಿಮರ್ಶೆ: ಶ್ರುತಗಾನದ ನಾದಾಮೃತ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2024, 0:26 IST
Last Updated 18 ಫೆಬ್ರುವರಿ 2024, 0:26 IST
ಮುಖಪುಟ
ಮುಖಪುಟ   

ಸಂಗೀತ, ಸಾಹಿತ್ಯ, ಉಲ್ಲಾಸ ಹದವಾಗಿ ಬೆರೆತು ಮೈದಳೆದ ರಸಪಾಕವೇ ಈ ಹೊತ್ತಗೆ. ಸಂಗೀತಗಾರರ, ಸಂಗೀತಜ್ಞರ ಕುರಿತ ಎಲ್ಲ ಬರಹಗಳು ಸೊಗಸಾಗಿ ಮೂಡಿಬಂದಿವೆ.

ಸಂಗೀತದಲ್ಲಿ, ಕೊಳಲು ವಾದನದಲ್ಲಿ ಟಿ.ಆರ್‌. ಮಹಾಲಿಂಗಂ ಮೇರು ಶಿಖರ. ಲೇಖಕರು ಅವರ ಭೇಟಿಯ ವಿಚಾರವನ್ನು ಮೊದಲ ಭಾಗದಲ್ಲೇ ಆಪ್ತವಾಗಿ ಒಡಮೂಡಿಸಿರುವುದು ಪುಸ್ತಕಕ್ಕೆ ಕಳೆಕಟ್ಟಿದಂತಿದೆ. ಮಹಾಲಿಂಗಂ ಅವರ ನುಡಿಸಾಣಿಕೆ ಶೈಲಿ, ತಂತ್ರಗಾರಿಕೆ‌, ಗಮಕಗಳ ಪ್ರಯೋಗ ಮೊದಲಾದವುಗಳ ಬಗ್ಗೆ ನೀಡಿದ ಮಾಹಿತಿ ಅರ್ಥಪೂರ್ಣ.

ಹದಿಹರೆಯದ ಹುಡುಗ ಆಗಿರುವಾಗಲೇ ಲೇಖಕರು ವಿಜ್ಞಾನಿ ಐನ್‌ಸ್ಟೈನ್‌ರನ್ನು ಸಂಧಿಸಿದ್ದು ಸುಯೋಗವೆಂದೇ ಹೇಳಬೇಕು. ಅವರೊಂದಿಗೆ ನೆನಪುಗಳ ಬುತ್ತಿಯನ್ನು ಮೊಗೆಮೊಗೆದು ನೀಡಿರುವುದು ಶ್ಲಾಘನೀಯ. ಅದೇ ರೀತಿ ಮೃದಂಗ ವಿದ್ವಾಂಸ ಸಿ.ವಿ. ರಾಮನ್‌ ಭೇಟಿ, ಕುರಿಯ ವಿಠಲ ಶಾಸ್ತ್ರಿಗಳ ಕುರಿತ ವಿವರಣೆ, ರುದ್ರಪಟ್ಣ ಸಹೋದರರ ಒಡನಾಟ, ಕರ್ನಾಟಕ ಸಂಗೀತ ಗಾಯಕಿ ನಾಗಮಣಿ ಶ್ರೀನಾಥ್, ಆರ್‌.ಎನ್‌. ಶ್ರೀಲತಾ ಮೊದಲಾದವರ ಜೊತೆಗಿನ ಬಾಂಧವ್ಯದ ವಿವರಣೆ ಈ ಹೊತ್ತಗೆಯನ್ನು ತೂಕಬದ್ಧವಾಗಿಸಿದೆ. ‌ಮೇಲಾಗಿ ಪಿಟೀಲು ರತ್ನಗಳಾದ ಬಿಡಾರಂ ಕೃಷ್ಣಪ್ಪ, ಚೌಡಯ್ಯ ಹಾಗೂ ವಾಗ್ಗೇಯಕಾರ ಮೈಸೂರು ವಾಸುದೇವಾಚಾರ್ಯರ ಬಗೆಗಿನ ಮಹತ್ವದ ವಿಚಾರಗಳು ಈ ಪುಸ್ತಕದಲ್ಲಿದ್ದು, ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.
ಮೃದಂಗ ವಾದಕ ಪಿ.ಜಿ. ಲಕ್ಷ್ಮೀನಾರಾಯಣ ಅವರ ನುಡಿಸಾಣಿಕೆ ಸಾಧನೆಯನ್ನು, ಅವರ ಮನೋಧರ್ಮವನ್ನು ಬರವಣಿಗೆಯ ಮೂಲಕ ಸಾಕಾರಗೊಳಿಸಿದ್ದು ಈ ಹೊತ್ತಗೆಯ ಹೆಚ್ಚುಗಾರಿಕೆ ಎಂದೇ ಹೇಳಬಹುದು. ಕೊನೆಯ ಭಾಗದಲ್ಲಿ ಮೂರು ಸಂದರ್ಶನಾಧಾರಿತ ಆಂಗ್ಲ ಬರಹಗಳು ಲೇಖಕರ ಪರಿಣತಿಯನ್ನು ಎತ್ತಿತೋರಿಸುತ್ತದೆ. ಒಟ್ಟಿನಲ್ಲಿ ಸಂಗ್ರಹಯೋಗ್ಯ ಕೃತಿ ಎಂಬುದನ್ನು ನಿಸ್ಸಂಶಯವಾಗಿ ಹೇಳಬಹುದು. 

ADVERTISEMENT

ಶ್ರುತಗಾನ

ಲೇ: ಜಿ.ಟಿ. ನಾರಾಯಣರಾವ್

ಪ್ರ: ಪ್ರಿಸಂ ಪುಸ್ತಕ ಪ್ರಕಾಶನ

ಸಂ: 08026714108

ಪುಟ: 160

ಬೆಲೆ: 195 ರೂಪಾಯಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.