ADVERTISEMENT

ಪುಸ್ತಕ ವಿಮರ್ಶೆ: ಹೊಸ ಚಿಂತನೆಗೆ ಹಚ್ಚುವ ಬರಹಗಳು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2023, 19:30 IST
Last Updated 1 ಏಪ್ರಿಲ್ 2023, 19:30 IST
ನಮ್ಮ ಭಾರತ–ಮುಖಪುಟ
ನಮ್ಮ ಭಾರತ–ಮುಖಪುಟ   

ಕ್ಯಾಪ್ಟನ್‌ ಗೋಪಿನಾಥ್‌ ಅವರು ನಾಡು ಕಂಡ ಅಪರೂಪದ ಉದ್ಯಮಿ. ವಿಸ್ತಾರವಾದ ಓದು ಮತ್ತು ವ್ಯಾಪಕ ಜೀವನಾನುಭವದಿಂದ ಪಕ್ವಗೊಂಡಿರುವ ಅವರ ಬರಹಗಳ ಗುಚ್ಛ ‘ನಮ್ಮ ಭಾರತ’. ಅವರ ಚಿಂತನೆಯ ಸ್ವರೂಪವೇ ವಿಶಿಷ್ಟವಾಗಿದೆ. ಅದಕ್ಕೆ ಕೃತಿಯ ಮೊದಲ ಬರಹವೇ ಸಾಕ್ಷ್ಯ ನುಡಿಯುತ್ತದೆ. ಉಳ್ಳವರು ಮತ್ತು ಇಲ್ಲದವರ ನಡುವಿನ ಅಂತರವನ್ನು ತೊಲಗಿಸಲು ಉದ್ಯಮಿಯಾದವನು ಏನು ಮಾಡಬಹುದು ಎಂಬ ಪ್ರಶ್ನೆಯನ್ನು ಇಲ್ಲಿ ನಿಕಷಕ್ಕೆ ಒಳಪಡಿಸಲಾಗಿದೆ. ‘ಉದ್ಯಮಿಗಳು ದೇಶದ ಹೊಸ ಸ್ವಾತಂತ್ರ್ಯದ ಹೋರಾಟಗಾರರು’ ಎಂದು ಅವರೂ ಕರೆಯುತ್ತಾರೆ.

ಉದ್ಯಮಿಯ ಚಿಕಿತ್ಸಕ ಕಣ್ಣುಗಳೇ ಇಲ್ಲಿನ ಲೇಖನಗಳ ಜೀವಾಳವಾಗಿದ್ದರೂ ಒಬ್ಬ ಸಾಮಾಜಿಕ ಚಿಂತಕನೂ ಈ ಲೇಖಕನೊಳಗಿದ್ದಾನೆ ಎನ್ನುವುದು ಬರಹಗಳ ವಿಸ್ತಾರವನ್ನು ನೋಡಿದಾಗ ಎದ್ದು ಕಾಣುತ್ತದೆ. ಗೋಪಿನಾಥ್‌ ಅವರ ರಾಜಕೀಯ ಪ್ರಜ್ಞೆಯೂ ಬೆರಗು ಮೂಡಿಸುತ್ತದೆ. ವರ್ತಮಾನವನ್ನು ಕಾಡಿದ ಸಂಗತಿಗಳ ಕುರಿತು ಅವರು ನಿರ್ಭಿಡೆಯಿಂದ ವಸ್ತುನಿಷ್ಠವಾಗಿ ಸ್ಪಂದಿಸಿರುವುದು ಓದುಗರ ಮೆಚ್ಚುಗೆಗೆ ಪಾತ್ರವಾಗುವುದಲ್ಲದೆ, ಅವರನ್ನು ಹೊಸ ಚಿಂತನೆಗೂ ಹಚ್ಚುತ್ತದೆ. ಹಿಜಾಬ್‌ ವಿವಾದ ಇರಬಹುದು, ಕೃಷಿ ಕಾನೂನುಗಳು ಇರಬಹುದು, ಯುದ್ಧದ ಸನ್ನಿವೇಶ ಇರಬಹುದು, ಕೋವಿಡ್‌ ಸಾಂಕ್ರಾಮಿಕ ಇರಬಹುದು, ಎನ್‌ಕೌಂಟರ್‌ ಹತ್ಯೆಗಳಿರಬಹುದು –ಈ ಪ್ರಸಂಗಗಳನ್ನು ಲೇಖಕರು ವಿಶ್ಲೇಷಿಸಿದ ರೀತಿ ಹೊಸ ಹೊಳಹುಗಳನ್ನು ನೀಡಬಲ್ಲುದು. ಕೋವಿಡ್‌ನಂತಹ ಸಂಕಷ್ಟದ ಕಾಲದಲ್ಲಿ ಭಾರತದ ಸಣ್ಣ ಉದ್ಯಮಗಳು ನಲುಗಿದ ಕಥೆಯನ್ನೂ ಅವರು ಹೇಳಿದ್ದಾರೆ.

ರಾಜಕೀಯ ನಿಲುವು, ಸಿದ್ಧಾಂತಗಳು ಉದ್ಯಮ ಜಗತ್ತನ್ನು ಹೇಗೆ ಬೆಳಗಬಲ್ಲವು ಮತ್ತು ನಲುಗಿಸಿ ಹೊಸಕಬಲ್ಲವು ಎಂಬ ಬಗೆಗೂ ಮಾರ್ಮಿಕವಾಗಿ ಮಾತನಾಡಿದ್ದಾರೆ. ಧರ್ಮರಾಯನ ತಪ್ಪನ್ನು ಇಟ್ಟುಕೊಂಡು ಸಾಮಾನ್ಯರು ಎಡವಿ, ಏಳುವ ಅಧ್ಯಾಯ ಸ್ಫೂರ್ತಿದಾಯಕ. ಪ್ರಸ್ತುತ ಭಾರತದ ಇಣುಕುನೋಟವೊಂದು ಇಲ್ಲಿ ಸಾಧ್ಯವಾಗಿದೆ. ಪತ್ರಕರ್ತ ವಿಜಯ್‌ ಜೋಷಿ ಅವರ ಅನುವಾದ ಅಷ್ಟೇ ಸರಳವಾಗಿದೆ.

ADVERTISEMENT

ನಮ್ಮ ಭಾರತ
ಲೇ: ಕ್ಯಾಪ್ಟನ್‌ ಜಿ.ಆರ್‌.ಗೋಪಿನಾಥ್‌
ಕನ್ನಡಕ್ಕೆ: ವಿಜಯ್‌ ಜೋಷಿ
ಪ್ರ: ಹರಿವು ಬುಕ್ಸ್‌
ದೂ: 8088822171

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.