
ಭೌತಿಕವಾದವನ್ನು ಪ್ರತಿಪಾದಿಸುವ ಭಾರತೀಯ ಪ್ರಾಚೀನ ತತ್ವಜ್ಞಾನಿ ಚಾರ್ವಾಕ ಅವರ ತಾರ್ಕಿಕ ವಿಚಾರವನ್ನು ಆಧರಿಸಿ ಮರಾಠಿ ಲೇಖಕ ಸುರೇಶ ದ್ವಾದಶೀವಾರ ‘ಚಾರ್ವಾಕ’ ಕೃತಿಯನ್ನು ರಚಿಸಿದ್ದಾರೆ. ಅದನ್ನು ಚಂದ್ರಕಾಂತ ಪೋಕಳೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
‘ಪರಂಪರೆ ಮತ್ತು ಶ್ರದ್ಧೆಯು ಸ್ಥಿತಿವಾದಿಯಾಗಿದ್ದರೆ, ವಿಚಾರ ಮತ್ತು ತರ್ಕವು ಗತಿವಾದಿಯಾಗಿರುತ್ತದೆ’ ಎನ್ನುವುದು ಚಾರ್ವಾಕ ಚಿಂತನೆ. ಅಂದರೆ ಸ್ಥಿತಿ ಸ್ಥಿರತೆಯನ್ನು ಬಯಸಿದರೆ, ಗತಿ ಚಲನೆಯನ್ನು ಬಯಸುತ್ತದೆ ಎನ್ನುವುದೇ ಅವರ ಪ್ರತಿಪಾದನೆಯಾಗಿತ್ತು. ಅನುಭವಕ್ಕೆ ದಕ್ಕುವ ಜಗತ್ತೇ ವಾಸ್ತವ ಸತ್ಯ, ದೇವರು ಧರ್ಮ ಮಿಥ್ಯ. ಮುಂದೆ ಮಿಥ್ಯಗಳು ಇಲ್ಲವಾಗುತ್ತವೆ ಎನ್ನುವ ಅಂಶವನ್ನು ‘ಆದ್ಯ ಧರ್ಮ ಮತ್ತು ಧಾರ್ಮಿಕ ವ್ಯವಸ್ಥೆ’ ಎಂಬ ಲೇಖನದಲ್ಲಿ ದಾಖಲಿಸುತ್ತಾರೆ.
‘ಚಾರ್ವಾಕರ ವಿಚಾರಧಾರೆ’ ಲೇಖನದಲ್ಲಿ ಪ್ಲೇಟೊ, ಹಾಬ್ಸ್ ಸೇರಿದಂತೆ ಬೇರೆ ಬೇರೆ ಚಿಂತಕರ ವಿಚಾರವನ್ನು ಚರ್ಚೆಗೆ ಒಡ್ಡುತ್ತಾರೆ. ಆ ಮೂಲಕ ಚಾರ್ವಾಕ ವಿಚಾರ ಹೇಗೆ ಭಿನ್ನ ಮತ್ತು ಏಕೆ ಅಗತ್ಯ ಅನ್ನುವುದನ್ನು ಗುರುತಿಸುವ ಮೂಲಕ ಲೇಖಕರು, ಚಾರ್ವಾಕನ ‘ಲೋಕಾಯತ ದರ್ಶನ’ವನ್ನು ವಿವರಿಸುತ್ತಾರೆ. ಲೋಕ ಎಂಬ ಪದಕ್ಕೆ ಜಗತ್ತು ಎಂಬ ಅರ್ಥವೂ ಇದೆ. ಅಂದರೆ ಲೋಕಾಯತವು ಜಗತ್ತಿನ ಅಧ್ಯಯನವಾಗಿದೆ ಎನ್ನುವುದು ಚಾರ್ವಾಕ ನಿಲುವು. ‘ಲೋಕಾಯತವೆಂದರೆ ಜನರ ತತ್ವಜ್ಞಾನ ಇಲ್ಲವೇ ತಮ್ಮ ಅನುಭವದಿಂದ ನೀಡಿದ ಅವರ ಜ್ಞಾನ’ ಎನ್ನವ ಅಂಶವನ್ನು ಇಲ್ಲಿ ನಿರೂಪಿಸಿದ್ದಾರೆ.
ಭೌತವಾದಿ ಚಾರ್ವಾಕ ಸಂಸ್ಕೃತದಲ್ಲಿ ಕಾವ್ಯ ರಚಿಸಿದ್ದಾನೆ ಎನ್ನಲಾಗಿದೆ. ಅವು ಉಪಲಬ್ಧವಾಗಿಲ್ಲ. ಇಂತಹ ಸಂದರ್ಭದಲ್ಲಿ ಅವರ ವಿಚಾರವನ್ನು ಇಟ್ಟುಕೊಂಡು ಬೇರೆ ಬೇರೆ ಲೋಕ ಜ್ಞಾನದ ಜೊತೆ ಲೇಖಕರು ಇಲ್ಲಿ ಮುಖಾಮುಖಿ ಮಾಡಿದ್ದಾರೆ. ಈ ಕೃತಿ ‘ನಾವು ಜಗತ್ತು ಮತ್ತು ಚಾರ್ವಾಕ’, ‘ಧರ್ಮಗಳ ಜನ್ಮಕಥೆ ಮತ್ತು ಚಾರ್ವಾಕ’, ‘ಸುಖಪ್ರಾಪ್ತಿಯ ವಿಚಾರ ಹಾಗೂ ಚಾರ್ವಾಕ’, ‘ಕಾಲಕ್ಕೆ ತಕ್ಕಂತೆ ದೇವರಲ್ಲಾದ ಬದಲಾವಣೆ’, ‘ಬುದ್ಧ ಮತ್ತು ಚಾರ್ವಾಕ’, ಮಹಿಳೆಯರ ವರ್ಗ ಮತ್ತು ಚಾರ್ವಾಕ’ ಹೀಗೆ 15 ಭಿನ್ನ ಆಯಾಮದ ಲೇಖನಗಳನ್ನು ಒಳಗೊಂಡಿದೆ.
**
ಚಾರ್ವಾಕ
ಮೂಲ: ಸುರೇಶ ದ್ವಾದಶೀವಾರ
ಕನ್ನಡಕ್ಕೆ: ಚಂದ್ರಕಾಂತ ಪೋಕಳೆ
ಪ್ರ: ನವಕರ್ನಾಟಕ ಪ್ರಕಾಶನ
ಫೋ: 080–22161900
ಪು: 144
₹: 190
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.