ADVERTISEMENT

ಹೊಸ ಪುಸ್ತಕ: ರೆಕ್ಕೆಯಿಲ್ಲದ ಬೆಳ್ಳಕ್ಕಿಯ ಬ್ಯೂಟಿ

ಲಲಿತಾ ಕೆ.ಹೊಸಪ್ಯಾಟಿ ಅವರ ಪುಸ್ತಕ: ಮಕ್ಕಳ ಕಥೆಗಳು

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2024, 22:14 IST
Last Updated 13 ಏಪ್ರಿಲ್ 2024, 22:14 IST
ಮುಖಪುಟ
ಮುಖಪುಟ   

ಮಕ್ಕಳಿಗೆ ಇಂಗ್ಲಿಷ್‌ನಲ್ಲಿ ನೂರಾರು ಚಿತ್ರಕಥೆ ಪುಸ್ತಕಗಳು ಸಿಗುತ್ತವೆ. ಆದರೆ ಈ ರೀತಿಯ ಕೃತಿಗಳು ಕನ್ನಡದಲ್ಲಿ ಪ್ರಕಟವಾಗುವುದು ಕಡಿಮೆ. ಆ ಕೊರತೆ ನೀಗಿಸುವ ಕೃತಿ ‘ಬ್ಯೂಟಿ ಬೆಳಕ್ಕಿ’. ಲಲಿತಾ ಕೆ.ಹೊಸಪ್ಯಾಟಿ ಬರೆದಿರುವ ಸರಳ ಕಥೆಗಳಿಗೆ ಸಂತೋಷ್‌ ಸಸಿಹಿತ್ಲು ಸೊಗಸಾದ ಚಿತ್ರಗಳನ್ನು ರಚಿಸಿದ್ದಾರೆ. ಪುಸ್ತಕದ ಮುದ್ರಣ ಗುಣಮಟ್ಟವೂ ಸೊಗಸಾಗಿದ್ದು, ಇಲ್ಲಿನ ಪಕ್ಷಿ, ಪ್ರಾಣಿ, ಪರಿಸರದ ಚಿತ್ರಗಳು ಪುಟ್ಟ ಮಕ್ಕಳನ್ನು ಆಕರ್ಷಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. 

50 ಪುಟಗಳ ಪುಟ್ಟ ಪುಸ್ತಕದಲ್ಲಿ ಒಟ್ಟು ಹತ್ತು ಕಥೆಗಳಿವೆ. ಎಲ್ಲವೂ ಪ‍್ರಾಣಿ, ಪಕ್ಷಿ, ಮರಗಿಡಗಳಿಗೆ ಸಂಬಂಧಿಸಿದವು. ಮೊದಲ ಕಥೆ ‘ಮರ ಅಲುಗಾಡಿಸಿದ ಇರುವೆ’ ಶೀರ್ಷಿಕೆಯೇ ಹೇಳುವಂತೆ ಅಹಂಕಾರದಿಂದ ಬೀಗುತ್ತಿದ್ದ ದೈತ್ಯ ಮರದ ಬುಡವನ್ನು ಅಲುಗಾಡಿಸುವ ಪುಟ್ಟ ಇರುವೆಯ ಕಥೆ. ಲೇಖಕಿ ಮಕ್ಕಳಿಗೆ ಅರ್ಥವಾಗುವಷ್ಟು ಸರಳ ಭಾಷೆಯಲ್ಲಿ ಕಥೆಯನ್ನು ನಿರೂಪಿಸಿದ್ದಾರೆ. ಬದುಕಿನಲ್ಲಿ ಯಾರನ್ನೂ ಕಡೆಗಣಿಸಬಾರದೆಂಬ ಈ ಕಥೆಯ ನೀತಿಯೂ ಸೊಗಸಾಗಿದೆ. 

‘ಇಲ್ಲಿನ ಕಥೆಗಳು ಚಿಕ್ಕವು, ಪುಟಾಣಿ ಮಗುವಿನ ಹಾಗಿರುವವು. ತಟಕ್ಕನೆ ಮುಗಿದು ಹೋಗುವಂಥವು. ಅವು ಪುಟ್ಟ ಮುತ್ತುಗಳ ಹಾಗೆ ತಮ್ಮೊಡಲಲ್ಲಿ ಅಪಾರ ಪ್ರೀತಿ, ಕಾಳಜಿಯನ್ನು ಬಚ್ಚಿಟ್ಟುಕೊಂಡಿರುವುವು. ವೃತ್ತಿಯಿಂದ ಶಿಕ್ಷಕಿಯಾಗಿರುವ ಲೇಖಕಿ ಮಕ್ಕಳಿಗೆ ಕಿವಿಮಾತು ಹೇಳಿರುವಂತಿದೆ’ ಎಂದು ಬೆನ್ನುಡಿಯಲ್ಲಿ ಕೃತಿಯ ಕುರಿತು ಬರೆದಿದ್ದಾರೆ.

ADVERTISEMENT

ಪುಸ್ತಕದ ಶೀರ್ಷಿಕೆಯ ಕಥೆ ‘ಬ್ಯೂಟಿ ಬೆಳ್ಳಕ್ಕಿ’ ರೆಕ್ಕೆಯಿಲ್ಲದ ಬೆಳ್ಳಕ್ಕಿಯ ಬದುಕಿನ ಕುರಿತಾದ ಕಥೆ. ಇದಕ್ಕೆ ಸಂತೋಷ್‌ ಸಸಿಹಿತ್ಲು ಬಿಡಿಸಿರುವ ಲಿಪ್‌ಸ್ಟಿಕ್‌ ಹಚ್ಚಿಕೊಂಡ ಗಿಳಿ, ಸೌಂದರ್ಯ ಸ್ಪರ್ಧೆಗೆ ಸಿದ್ಧವಾಗಿ ಬಂದ ಕಾಗೆ, ಮೇಕಪ್‌ನಲ್ಲಿ ಮಿಂಚುತ್ತಿರುವ ನವಿಲು...ಚಿತ್ರಗಳು ಒಂದೇ ನೋಟದಲ್ಲಿ ಮಕ್ಕಳಿಗೆ ಮುದ ನೀಡುವಂತಿವೆ. ಒಂದು ತಾಸಿನಲ್ಲಿ ಓದಿ ಮುಗಿಸಬಹುದಾದಷ್ಟು ಈ ಕೃತಿ ಪುಟ್ಟ ಮಕ್ಕಳಿಗೆ ಮುದ ನೀಡುವುದರೊಂದಿಗೆ ಸರಳ ಕನ್ನಡ ಕಲಿಕೆಯ ಸಾಧನವೂ ಹೌದು.

ಒಳಪುಟದ ಚಿತ್ರ
ಒಳಪುಟದ ಚಿತ್ರ

ಬ್ಯೂಟಿ ಬೆಳ್ಳಕ್ಕಿ ಲೇ: ಲಲಿತಾ ಹೊಸಪ್ಯಾಟಿ ಪ್ರ: ಅವ್ಯಕ್ತ ಪ್ರಕಾಶನ ಸಂ: 8792693438

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.