ADVERTISEMENT

ಮೊದಲ ಓದು: ದೀಪಾ ಫಡ್ಕೆ ಅವರ ಹೆಣ್ಣಿನ ಒಳಮನಸ್ಸಿಗೆ ಕನ್ನಡಿ–ಕಥೆಗಳು

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2022, 19:30 IST
Last Updated 19 ಮಾರ್ಚ್ 2022, 19:30 IST
   

ಸಂಸ್ಕೃತಿ ಕುರಿತ ಬರಹಗಳ ಗುಚ್ಛ ‘ಋತ’ವಲ್ಲದೆ ‘ಹರಪನಹಳ್ಳಿ ಭೀಮವ್ವ’, ‘ಮುಕ್ತಛಂದದ ಕವಿ’, ‘ಲೋಕಸಂವಾದಿ’ ಮುಂತಾದ ವ್ಯಕ್ತಿಚಿತ್ರಣಗಳನ್ನು ಕಟ್ಟಿಕೊಟ್ಟ ಲೇಖಕಿ ದೀಪಾ ಫಡ್ಕೆಯವರು ಈಗ ‘ಮುಂದಣ ಹೆಜ್ಜೆ’ ಕಥಾ ಸಂಕಲನದ ಮೂಲಕ ಓದುಗರ ಮುಂದೆ ಬಂದಿದ್ದಾರೆ. ಈ ಸಂಕಲನದಲ್ಲಿ ಒಟ್ಟು 11 ಕಥೆಗಳಿವೆ.

‘ಮುಕ್ತಿಯೆನ್ನ ಮನೆಗೆ ನಡೆದು ಬಂದಿತ್ತು’ ಕಥೆಯಲ್ಲಿ, ತನ್ನ ಮಗಳ ಮಡಿಲಿಗೆ ಮಗುವನ್ನು ಇಟ್ಟು ‘ಪಾರೋತಿ’ ಹೇಳುವ ಮಾತು, ಆಕೆ ಅನ್ನ ತಿಂದ ಮನೆಯ ಋಣ ತೀರಿಸಿದ ನಡೆ, ಶೀರ್ಷಿಕೆಗೆ ತಕ್ಕಂತೆ ‘ಗಂಧವಿಲ್ಲದ ಹೂವು’ ಕಥೆಯಲ್ಲಿನ ‘ಚಂದ್ರಭಾಗ’ಳ ಬದುಕು, ಆಕೆ ಎದುರಿಸಿದ ತಿರಸ್ಕಾರ ಹೀಗೆ ಈ ಸಂಕಲನದಲ್ಲಿನ ಬಹುತೇಕ ಕಥೆಗಳು ಹೆಚ್ಚಾಗಿ ಹೆಣ್ಣಿನ ಆಸೆ ಆಕಾಂಕ್ಷೆಗಳು, ನೋವು–ನಲಿವು, ತಲ್ಲಣಗಳನ್ನು ಅಕ್ಷರ ರೂಪದಲ್ಲಿ ಕಟ್ಟಿಕೊಟ್ಟಿವೆ. ಜೊತೆಗೆ ನೂರೊಂದು ಬದುಕಿನ ಕಥೆಗಳನ್ನೂ ಇವು ಹೇಳಿವೆ. ‘ಚಂದು ಎಂಬ ಗಾಂಧಿ’ಯಲ್ಲೂ ‘ಸಹನಾ’ಳ ಮೌನದ ಜೊತೆಗೆ ಮನುಷ್ಯ ಹಾಗೂ ಪ್ರಾಣಿಗಳ ಸಂಘರ್ಷವೂ ಕಥೆಯ ಎಳೆಯಾಗಿದೆ. ‘ಮುಕ್ತಿಯೆನ್ನ ಮನೆಗೆ..’, ‘ಚಂದು ಎಂಬ ಗಾಂಧಿ’, ‘ಗಂಧವಿಲ್ಲದ ಹೂವು’ ಬಿಟ್ಟರೆ ಉಳಿದೆಲ್ಲ ಕಥೆಗಳು ನಗರ ಪರಿಸರದ ಹಿನ್ನೆಲೆಯಲ್ಲಿವೆ. ಇವುಗಳಲ್ಲಿ ಹೆಚ್ಚಿನ ಕಥೆಗಳಿಗೆ ಮದುವೆ, ಕೂಡುಕುಟುಂಬ ಅದರ ಸುತ್ತಲಿನ ಸಮಸ್ಯೆಗಳನ್ನು ಶೋಧಿಸುವ ಉಮೇದು ಇದೆ.

ಕಥೆಯ ವೇದಿಕೆ ಓದಿಗೆ ಉತ್ಸಾಹ ತರುತ್ತದೆ. ‘ಮುಕ್ತಿಯೆನ್ನ ಮನೆಗೆ...’ ಕಥೆಯಲ್ಲಿ ‘ಮಂಜಾಡಿ’ ಎನ್ನುವ ಊರಿನ ವಿವರಣೆ ಇದಕ್ಕೆ ಸಾಕ್ಷ್ಯ. ‘ಮಂಜಾಡಿ’ ಇಲ್ಲಿ ಹಲವು ಕಥೆಗಳಿಗೆ ವೇದಿಕೆಯಾಗಿದೆ. ದಕ್ಷಿಣ ಕನ್ನಡದ ಭಾಷೆಯಲ್ಲಿ ಕಥೆ ಹೇಳುವ ಪರಿ ಆಕರ್ಷಕವಾಗಿದ್ದು, ಪ್ರಭಾವವನ್ನೂ ಬೀರುತ್ತದೆ. ಪದ ಬಳಕೆಯೂ ಲೇಖಕಿಯ ಮನಸ್ಸಿಗೆ ಹತ್ತಿರವಾಗಿದೆ. ‘ಕೆಲಸದ ಪೊಣ್ಣು’, ‘ಮೋಕೆ’, ‘ಸಂಕ’, ‘ತೋಡು’ ಹೀಗೆ ಕಥೆಗಳುದ್ದಕ್ಕೂ ಸ್ಥಳೀಯ ಭಾಷೆ ಕನ್ನಡಕ್ಕೆ ಪೂರಕವಾಗಿ ಹೆಜ್ಜೆ ಇಡುತ್ತವೆ. ‘ಮುಂದಣ ಹೆಜ್ಜೆ’ ಎಂಬ ಶೀರ್ಷಿಕೆಯ ಕಥೆ ಇಲ್ಲಿಲ್ಲ. ಕಥೆಗಳ ಅಂತ್ಯವೇ ಈ ಕೃತಿಯ ಶೀರ್ಷಿಕೆಗೆ ಪೂರಕವಾಗಿರುವಂತೆ ತೋಚುತ್ತದೆ.

ADVERTISEMENT

ಕೃತಿ: ಮುಂದಣ ಹೆಜ್ಜೆ

ಲೇ: ದೀಪಾ ಫಡ್ಕೆ

ಪ್ರ: ಸಾಹಿತ್ಯ ಸಾಧನ

ಸಂ: 81234 96789

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.