ADVERTISEMENT

ಅವಲೋಕನ: ಗಾಢ–ಚುಟುಕು ಕಥೆಗಳ ಮಾಯಾ ಮಾಲೆ

​ಪ್ರಜಾವಾಣಿ ವಾರ್ತೆ
Published 14 ಮೇ 2022, 19:30 IST
Last Updated 14 ಮೇ 2022, 19:30 IST
ದೇವರೆಂಬ ಮಾಯೆ
ದೇವರೆಂಬ ಮಾಯೆ   

ಮೃತ್ಯುಂಜಯ ಹೊಸಮನೆ ಅವರ ಚೊಚ್ಚಲ ಕಥಾಸಂಕಲನ ‘ದೇವರೆಂಬ ಮಾಯೆ’.ಈ ಚಿಕ್ಕ ಚೊಕ್ಕ ಸಂಕಲನದಲ್ಲಿ ಏಳು ಕಥೆಗಳ ಗುಚ್ಛ ಅರಳಿದೆ. ಕೃತಿಯ ಕೊನೆಯಲ್ಲಿನ ಮೂರು ಕಥೆಗಳು ಓದಿನ ವೇಗಕ್ಕೆ ಕಣ್ಮಿಟುಕಿಸುವಷ್ಟರಲ್ಲೇ ಮುಗಿಯುತ್ತವೆ. ಆದರೆ ಅವುಗಳೊಳಗಿನ ಅರ್ಥ, ತಿಳಿವಳಿಕೆ ಗಾಢವಾಗಿವೆ.

ಕೃತಿಯ ಶೀರ್ಷಿಕೆಯಾಗಿರುವ ಕಥೆ ‘ದೇವರೆಂಬ ಮಾಯೆ’ ಈಗಿನ ವಾಸ್ತವ. ಯಾವುದೋ ಮೂಲೆಯಲ್ಲಿರುವ ಹಳ್ಳಿಯ ದೇವಾಲಯವೊಂದು ಮಾಧ್ಯಮದ ಕಾರಣ ರಾತ್ರೋರಾತ್ರಿ ವಿಶ್ವಪ್ರಸಿದ್ಧಿಯಾದಂತೆ, ಹನೂರು ಎಂಬ ಊರು ಅಲ್ಲಿರುವ ಹನುಮನಿಗಿಂತಲೂ ಮೀರಿ ಬೆಳೆಯುತ್ತದೆ. ಹರಿಯುವ ಕಿರುಬೆರಳ ಗಾತ್ರದ ನೀರು ಏಕಾಏಕಿ ತೀರ್ಥವಾಗಿ, ದೇವಾಲಯ ಬಿಜಿನೆಸ್‌ ಸೆಂಟರ್‌ ಆಗುವ ಕಥೆ ನಯವಾಗಿ ಹೆಣೆಯಲ್ಪಟ್ಟಿದೆ.

‘ಸಾವಿನೊಂದಿಷ್ಟು ನೆರಳು’ ಕಥೆ ಒಂದು ಹೆಣದ ಸುತ್ತ ಸಾವಿರಾರು ಪ್ರತಿಕ್ರಿಯೆಗಳ ತೋರಣ ಕಟ್ಟಿದೆ. ಕಥಾಗುಚ್ಛದಲ್ಲಿರುವ ಉಳಿದ ಕಥೆಗಳಿಗಿಂತ ಇದರ ನಿರೂಪಣೆ ಕೊಂಚ ಭಿನ್ನ. ‘ಬಚ್ಚ’ ಹೆಣವಾದಾಗ ಸರಣಿಯಲ್ಲಿ ಬರುವ ಪಾತ್ರಗಳು ಅವುಗಳ ಯೋಚನೆ, ಪ್ರತಿಕ್ರಿಯೆ, ಭಾವನೆಯನ್ನು ಕಥೆಗಾರ ಇಲ್ಲಿ ಕಟ್ಟಿದ್ದಾರೆ. ಒಂದು ರೀತಿಯಲ್ಲಿ ಹೆಣದಂತೆಯೇ ಇಲ್ಲಿನ ಕೆಲ ಪಾತ್ರಗಳು ಭಾವನೆಯಲ್ಲಿ ತಣ್ಣಗೆ ಹೆಪ್ಪುಗಟ್ಟಿವೆ. ಗುಚ್ಛದಲ್ಲಿ ‘ಸಂಚಾರಿ’ ಕೊಂಚ ದೀರ್ಘವಾದ ಕಥೆ.

ADVERTISEMENT

ಆಶೆ ಬಲೆಯನು ಬೀಸಿ, ನಿನ್ನ ತನ್ನೆಡೆಗೆಳೆದು‌| ಘಾಸಿ ನೀಂ ಬಡುತ ಬಾಯ್ಬಿಡಲೋರೆ ನೋಡಿ| ಮೈಸವರಿ ಕಾಲನೆಡವಿಸಿ, ಗುಟ್ಟಿನಲಿ ನಗುವ| ಮೊಸದಾಟವೋ ದೈವ–ಮಂಕುತಿಮ್ಮ. ಈ ಕಗ್ಗ ‘ಸ್ವರ್ಗ–ನರಕ’ವೆಂಬ ಕಥೆಯ ಜೀವಾಳ ಎನ್ನಬಹುದು. ಈ ಕಥೆ ನಾಯಿಮರಿಗಳೆರಡರ ನಡುವಿನ ಕೆಲ ವಾಕ್ಯಗಳ ಮನಸ್ಸಿನೊಳಗಿನ ಸಂಭಾಷಣೆ. ಎರಡು ಪುಟದಲ್ಲೇ ಕಥೆಗೆ ಪೂರ್ಣವಿರಾಮ. ಮನೆಯಿದ್ದರೆ ಅರಮನೆ ಬೇಕೆನ್ನುವಂಥ ಆಸೆಯ ಕಥೆ ಹೊತ್ತ ಈ ಕಥೆಯಲ್ಲಿ ನಾಯಿಮರಿಗಳೆರಡು ಪಾತ್ರವಾಗಿದ್ದರೂ ಹೇಳಿರುವುದು ಮನುಷ್ಯರಿಗೇ. ‘ನಾಯಿ ಮತ್ತು ನರ’ ಕಥೆಯಲ್ಲೂ ನಾಯಿಮರಿಯೇ ಅರಿವು ನೀಡುವ ಪಾತ್ರ. ‘ಕೊತ್ತಂಬರಿಕಟ್ಟು ಮತ್ತು ಮಸಾಲೆದೋಸೆ’ ಕಥೆಯಲ್ಲಿ ನಿರೂಪಕನೇ ಪ್ರಧಾನ ಪಾತ್ರಧಾರಿ. ಐಷಾರಾಮಿ ಹೋಟೆಲ್‌ನಲ್ಲಿ ವೇಟರ್‌ಗೆ ₹20–50 ಟಿಪ್ಸ್‌ ನೀಡಿ, ಬೀದಿಬದಿ ತರಕಾರಿ ಅಂಗಡಿಗಳಲ್ಲಿ ಒಂದೆರಡು ರೂಪಾಯಿಗೆ ಚೌಕಾಸಿ ಮಾಡುವ ನಮ್ಮ ಗುಣವನ್ನು ಎತ್ತಿ ತೋರಿರುವುದು ಸೊಗಸಾಗಿ ಬಿಂಬಿತವಾಗಿದೆ.

ಕೃತಿ: ದೇವರೆಂಬ ಮಾಯೆ

ಲೇ: ಮೃತ್ಯುಂಜಯ ಹೊಸಮನೆ

ಪ್ರ: ಚಾರುಮತಿ ಪ್ರಕಾಶನ

ಸಂ: 9448235553

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.