ಆಗಾಗ ಉಕ್ಕೇರುವ ಭಾಷಾ ಸಂಘರ್ಷದ ಜತೆಯಲ್ಲೇ ದ್ರಾವಿಡ ಮತ್ತು ಆರ್ಯ, ಧರ್ಮ, ಜಾತಿ ಹೀಗೆ ಚರ್ಚೆಗಳು ಇಂದಿಗೂ ಮುಖಾಮುಖಿಯಾಗುತ್ತಲೇ ಇರುತ್ತವೆ. ಆದರೆ ಇಂಥ ಶ್ರೇಷ್ಠತೆಯ ಚರ್ಚೆಗಿಂತ ವೈಜ್ಞಾನಿಕ ತಳಹದಿಯಲ್ಲಿ ವಿಶ್ಲೇಷಿಸಿದಲ್ಲಿ ಸಾವಿರಾರು ವರ್ಷಗಳ ಹಿಂದೆ ಆಹಾರ ಅರಸಿ ಮನುಷ್ಯರ ವಿವಿಧ ತಳಿಗಳು ಜಗತ್ತಿನ ಹಲವೆಡೆ ವಲಸೆ ಹೋಗಿ ನೆಲೆಯಾಗಿ ತಮ್ಮದೇ ಸಂಸ್ಕೃತಿ, ಭಾಷೆಯನ್ನು ಅಲ್ಲಿ ಪ್ರತಿಷ್ಠಾಪಿಸಿದ್ದರ ಕುರಿತು ಹಲವು ಲೇಖಕರು ವಿವಿಧ ಭಾಷೆಗಳಲ್ಲಿ ದಾಖಲಿಸುತ್ತಲೇ ಇದ್ದಾರೆ.
ಯುವಾಲ್ ನೊವಾ ಹರಾರಿ ಅವರ ‘ದಿ ಹೋಮೊ ಸೇಫಿಯನ್ಸ್‘ ಎಂಬ ಕೃತಿಯೂ ಓದುಗರ ಮೆಚ್ಚುಗೆ ಪಡೆದ ಅಂಥ ಕೃತಿಗಳಲ್ಲೊಂದು. ಮನುಷ್ಯ ಎಂಬ ಜೀವಿಯ ವಿವಿಧ ತಳಿ ಮತ್ತು ಅವುಗಳ ವಿಕಾಸದ ಕುರಿತ ಚರ್ಚೆ ಒಂದೆಡೆಯಾದರೆ, ಇಡೀ ಜಗತ್ತನ್ನೇ ತನ್ನೊಡಲೊಳಗೆ ಸೇರಿಸಿಕೊಂಡ ಭಾರತವು ಮಿಶ್ರ ಜನಾಂಗದ ದೇಶವಾಗಿದ್ದು, ಇಲ್ಲಿನ ವಿಕಾಸವೇ ಭಿನ್ನ. ಈ ವಿಷಯ ವಸ್ತುವುಳ್ಳ ‘ಬೆಂಕಿ ಮತ್ತು ನೀರು – ಆರ್ಯ ಮತ್ತು ದ್ರಾವಿಡ ಕುರಿತು’ ಎಂಬ ಕೃತಿಯನ್ನು ಲೇಖಕ ಎನ್.ಕೆ. ಮೋಹನ್‌ರಾಂ ರಚಿಸಿದ್ದಾರೆ.
ಭಾರತದಲ್ಲಿ ಮೂಲವಾಗಿ ಇದ್ದವರು ಯಾರು? ವಲಸೆ ಬಂದವರು ಯಾರು? ಇಲ್ಲಿನ ಭಾಷೆ ಯಾವುದು? ಮುಂದೆ ನಾಗರಿಕತೆ ಹೇಗೆ ವಿಕಾಸವಾಗುತ್ತಾ ಸಾಗಿತು ಎಂಬುದರ ಕುರಿತು ಆಳವಾದ ಮಾಹಿತಿ ನೀಡಿದ್ದಾರೆ. ಭೂಮಂಡಳದ ತಾಯಿಬೇರು ಎಂದೆನಿಸಿಕೊಂಡಿರುವ ಹರಪ್ಪನ್ನರು ಇದ್ದ ಪ್ರದೇಶ, ನಂತರ ಭಾರತ ಪ್ರವೇಶಿಸಿದ ಇರಾನಿಯನ್ನರು ಆರ್ಯನ್ನರಾದ ಕಥೆ, ಮುಂದೆ ಇವರಿಬ್ಬರ ಸಂಘರ್ಷದಲ್ಲಿ ಹರಪ್ಪಗಳ ಸ್ಥಳಾಂತರ, ಧರ್ಮಗಳ ಹುಟ್ಟು, ಅವುಗಳ ನಡುವಿನ ಸಂಘರ್ಷದ ನಡುವೆಯ ವೃತ್ತಿ ಮತ್ತು ಶ್ರೇಷ್ಠತೆಯ ಆಧಾರದಲ್ಲಿ ಸಮಾಜ ರಚನೆಯ ಮಾಹಿತಿಯನ್ನು ಮೋಹನ್‌ರಾಂ ಈ ಕೃತಿಯಲ್ಲಿ ದಾಖಲಿಸಿದ್ದಾರೆ.
ಈ ಕೃತಿಯ ರಚನೆಗಾಗಿ ಮೋಹನ್‌ರಾಂ ಅವರು ಸುಮಾರು 15 ಕೃತಿಗಳನ್ನು ಆಕರವಾಗಿ ಬಳಸಿಕೊಂಡಿರುವುದಾಗಿ ದಾಖಲಿಸಿದ್ದಾರೆ. ಆ ಮೂಲಕ ಆರ್ಯರು ಮತ್ತು ದ್ರಾವಿಡರು ಯಾರು ಮತ್ತು ಇವರ ಭಾಷೆ ಮತ್ತು ಸಂಸ್ಕೃತಿ ಏನು ಎಂಬುದನ್ನು ದಾಖಲೆಗಳ ಸಹಿತ ವಿವರಿಸುವ ಪ್ರಯತ್ನವನ್ನು ಮೋಹನ್‌ರಾಂ ಈ ಕೃತಿಯಲ್ಲಿ ಮಾಡಿದ್ದಾರೆ.
ಬೆಂಕಿ ಮತ್ತು ನೀರು– ಆರ್ಯ ಮತ್ತು ದ್ರಾವಿಡರ ಕುರಿತುಲೇ: ಎನ್.ಕೆ. ಮೋಹನ್‌ರಾಂಪ್ರ: ಆಕ್ರಾಂತ ಪ್ರಕಾಶನಸಂ: 96204 02737 ಪು; 168ಬೆ; ₹170
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.