ಗಿಲ್ಗಮೆಶ್ ಮಹಾಗಾಥೆ ಲೇ: ಡಾ. ಜೆ.ಬಾಲಕೃಷ್ಣ ಪ್ರ: ನವಕರ್ನಾಟಕ ಪ್ರಕಾಶನ ಸಂ: 080–2216 1900
ಈಗಿನ ಇರಾಕ್ ಪ್ರದೇಶದಲ್ಲಿ ಕ್ರಿ.ಪೂ. 2850ರಿಂದ 2700ರವರೆಗಿದ್ದ ಉರುಕ್ ಸಾಮ್ರಾಜ್ಯದ ಐದನೇ ದೊರೆಯಾಗಿ ಸುಮಾರು 126 ವರ್ಷಗಳ ಕಾಲ ರಾಜ್ಯಭಾರ ಮಾಡಿದ್ದ ಎನ್ನಲಾದ ಗಿಲ್ಗಮೆಶ್ ಕುರಿತು ಹಲವು ಕೃತಿಗಳು ಈಗಾಗಲೇ ಬಂದಿವೆ. ಮೆಸೊಪೊಟೇಮಿಯಾದ ಈ ಕಥೆ ಹಲವು ದೇಶ, ಭಾಷೆ ಮತ್ತು ವಿವಿಧ ಸಾಹಿತ್ಯ ಪ್ರಕಾರಗಳಲ್ಲೂ ಪ್ರಕಟಗೊಂಡಿವೆ. ಇದಕ್ಕೊಂದು ಹೊಸ ಸೇರ್ಪಡೆ ಜೆ. ಬಾಲಕೃಷ್ಣ ಅವರ ಅನುವಾದಿತ ಕೃತಿ ‘ಗಿಲ್ಗಮೆಶ್ ಮಹಾಗಾಥೆ’.
ಸಾವಿನ ಹೆದರಿಕೆಯಲ್ಲಿದ್ದ ದೊರೆ, ಅದನ್ನು ಹೇಗಾದರೂ ಮಾಡಿ ಗೆಲ್ಲಬೇಕು, ಅಮರತ್ವ ಸಾಧಿಸಬೇಕು ಎಂಬ ಚಡಪಡಿಸುವುದೇ ಈ ಮಹಾಗಾಥೆಯ ವಸ್ತು. ಹಿಂದೆ ಮೌಖಿಕ ರೂಪದಲ್ಲಿದ್ದ ಈ ಜನಪದ ಕಥೆ, 2700 ವರ್ಷಗಳ ಹಿಂದೆ ಲಿಖಿತ ರೂಪದಲ್ಲಿ ದಾಖಲಾಯಿತು ಎಂದೆನ್ನಲಾಗಿದೆ.
ಮದುವೆಯಾಗುವ ಹೆಣ್ಣುಗಳು ಮೊದಲ ರಾತ್ರಿಯನ್ನು ತನ್ನೊಂದಿಗೆ ಕಳೆಯಬೇಕು ಎಂಬ ಕಟ್ಟಪ್ಪಣೆಯ ಜತೆಗೆ ಈತನ ಕ್ರೌರ್ಯ ಹಾಗೂ ದಬ್ಬಾಳಿಕೆಗೆ ಅವನ ರಾಜ್ಯದ ಜನರು ರೋಸಿಹೋಗಿದ್ದರು. ದೇವತೆಗಳಿಗೂ ಇವನನ್ನು ನಿಯಂತ್ರಿಸುವುದು ಕಷ್ಟವಾಗಿತ್ತು. ಹೀಗಾಗಿ ಇವನ ಸಂಹಾರಕ್ಕೆ ‘ಕಾಡು ಮನುಷ್ಯ’ನನ್ನು ಸೃಷ್ಟಿಸಿದರು. ಗಿಲ್ಗಮೆಶ್‌ನೊಂದಿಗೆ ಸಮಬಲದ ಕಾದಾಟದ ನಂತರ ಈ ಕಾಡು ಮನುಷ್ಯ ಆತನ ಸ್ನೇಹಿತನಾಗುತ್ತಾನೆ. ದೇವತೆಗಳ ಕೋಪಕ್ಕೆ ಗುರಿಯಾಗಿ ಸಾಯುತ್ತಾನೆ. ಆದರೆ ಗೆಳೆಯನ ಅಗಲಿಕೆಯ ಜತೆಗೆ, ‘ಸಾವು’ ಎಂಬುದು ಗಿಲ್ಗಮೆಶ್‌ನನ್ನು ಬಹುವಾಗಿ ಕಾಡುತ್ತದೆ. ಎಲ್ಲವನ್ನೂ ಗೆದ್ದ ಈ ದೊರೆ ಸಾವನ್ನೂ ಗೆಲ್ಲಲು ಹೊರಡುವುದು ಮತ್ತು ಅಂತಿಮವಾಗಿ ಸತ್ಯದ ಅರಿವು ಈ ಕೃತಿಯಲ್ಲಿದೆ.
ಗಿಲ್ಗಮೆಶ್ ಮಹಾಗಾಥೆಯ ಜತೆಗೆ, ಈತನ ಕುರಿತು ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಲಭ್ಯವಿರುವ ದಾಖಲೆಗಳ ಸಂಕ್ಷಿಪ್ತ ಮಾಹಿತಿಯನ್ನು ಚಿತ್ರ ಸಹಿತ ನೀಡುವ ಪ್ರಯತ್ನವನ್ನು ಲೇಖಕ ಇಲ್ಲಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.