ಜೀವರತಿ
ಕನ್ನಡದ ಮುಖ್ಯ ಕವಿ, ಅನುವಾದಕಿ ಜ.ನಾ.ತೇಜಶ್ರೀ ತಮ್ಮ ಚೊಚ್ಚಲ ಕಾದಂಬರಿ ‘ಜೀವರತಿ’ ಪ್ರಕಟಿಸಿದ್ದಾರೆ. ಕಾವ್ಯದಂತೆಯೇ ಗದ್ಯವನ್ನೂ ಗಾಢವಾದ ಅಭಿವ್ಯಕ್ತಿಗೆ ದಾರಿಯಾಗಿಸಿರುವರು. ಮೂರು ತಲೆಮಾರಿನ ಕಥಾ ಹಂದರದಲ್ಲಿ ನೂರಾರು ಅನುಭವಗಳ ನೆನಪಿನ ಸರಣಿ. ಟಿಪ್ಪುವಿನ ನೆನಪು, ಸೇನಾಧಿಪತಿ ಹೊಂಬಾಳೆಗೌಡನ ಸಾಹಸ, ಗಾಂಧೀಜಿಯ ಸ್ಮೃತಿಯ ಲೋಕವೂ ಇಲ್ಲಿದೆ. ಈ ನೆನಪುಗಳು ಮನುಷ್ಯರ ದೈನಿಕ ಮತ್ತು ದೈವಿಕ ಜೀವನವನ್ನು ತಳುಕು ಹಾಕಿಕೊಂಡಿವೆ. ಮನುಷ್ಯ ಸಂಬಂಧ, ಪ್ರೇಮ ಕಾಮ, ಹುಟ್ಟು ಸಾವುಗಳ ಆವರ್ತನದಲ್ಲಿ ಪಾತ್ರಗಳು ಹಿಂದೆ ಸರಿದು ಜೀವನದ ವಿಸ್ಮಯತೆ ಮಾತ್ರ ಕಣ್ಣಿಗೆ ಒಡೆದು ಕಾಣುತ್ತದೆ. ದೊಡ್ಡಯ್ಯನ ವಿಚಿತ್ರ ಲೋಕ, ಅವ್ವಕ್ಕನ ಆಂತರ್ಯ, ಕುಟ್ಟಪ್ಪನ ಅಸಹಾಯಕತೆ, ರತಿಯ ಸಾವು ಇನ್ನಿಲ್ಲದಂತೆ ಕಾಡುತ್ತವೆ. ಹಾಗಂತ ಇದು ಜೀವನ ಚರಿತ್ರೆಯ ಕಥನವಲ್ಲ. ಆದರೆ ಖಂಡಿತಾ ಜೀವನ ಚಾರಿತ್ರ್ಯದ ಕಥೆ. ಬದುಕಿನ ನೋವು, ಹತಾಷೆ, ಮತ್ತೆ ಕಟ್ಟಿಕೊಳ್ಳುವ ಆಸೆ, ಪ್ರೇಮಿಸುವ ಹಂಬಲ, ಜೀವನವನ್ನು ಕಂಡುಕೊಳ್ಳುವ ಅಭೀಪ್ಸೆ ಬಾಯ್ದೆರೆದು ನಿಂತಿದೆ. ಇಂಥ ಕನಸುಗಳಿಗೆ ಕೆಲ ಪಾತ್ರಗಳು ಆಸರೆಯಾದರೆ, ಮತ್ತೆ ಕೆಲ ಪಾತ್ರಗಳು ದಾಳಗಳಾಗಿವೆ. ಮನುಷ್ಯರ ನಡುವಿನ ಪ್ರೇಮ ಒಣಗುತ್ತಿರುವುದೆ ಇಲ್ಲಿನ ದುರಂತಗಳಿಗೆ ಕಾರಣ. ನಿಸರ್ಗದೊಂದಿಗೆ ಬೆಸೆದುಕೊಂಡಿರುವ ಇಲ್ಲಿಯ ಬದುಕು ನಿಸರ್ಗದ ಆವರ್ತನಗಳಂತೆಯೇ ಅನಿರೀಕ್ಷಿತ ಹಾಗೂ ನಿಗೂಢ. ಕುವೆಂಪು ಅವರ ‘ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ, ಯಾವುದೂ ಯಕಶ್ಚಿತವಲ್ಲ’ ಎಂಬ ಸೃಜನಶೀಲ ತತ್ವವನ್ನು ಆಳದಲ್ಲಿ ಸ್ವೀಕರಿಸಿದಂತೆ ಕಾದಂಬರಿಯ ರಚನೆಯಿದೆ. ಕನ್ನಡ ಕಾದಂಬರಿಗಳ ಅಭಿಜಾತ ಪರಂಪರೆಯನ್ನು ನೆನಪಿಸುವ ಈ ಕಾದಂಬರಿಯ ಭಾವಕೋಶ ಕನ್ನಡದಲ್ಲಿ ಈಗ ರಚನೆಗೊಳ್ಳುತ್ತಿರುವ ಕಾದಂಬರಿಗಳ ಒಂದು ಮುಖ್ಯ ಯಶಸ್ಸಿನಂತೆ ಕಂಡುಬರುತ್ತಿದೆ.
ಜೀವರತಿ
ಲೇ: ಜ.ನಾ.ತೇಜಶ್ರೀ
ಪ್ರ: ಅಮೂಲ್ಯ ಪುಸ್ತಕ
ಸಂ: 944867677
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.