ಧಾರಾವಾಹಿ ರೂಪದಲ್ಲಿ ಪ್ರಕಟಿಸುವ ಆಶಯದಿಂದ ರೂಪಿತವಾದ ಕಾದಂಬರಿ ‘ಮಿನುಗು ತಾರೆ’. ಸಿನಿಮಾ ಚಿತ್ರೀಕರಣದ ಸೆಟ್‌ನಿಂದಲೇ ಕಥೆ ಆರಂಭವಾಗುತ್ತದೆ. ಬೆಳ್ಳಿತೆರೆಯ ರಮ್ಯ ದೃಶ್ಯಕ್ಕೆ ಕ್ಯಾಮರಾ ಹಿಡಿದು ಅದರ ಒಳನೋಟವನ್ನು ಅನಾವರಣ ಮಾಡುತ್ತದೆ. ಜನಪ್ರಿಯ ಮತ್ತು ಪ್ರಭಾವಿ ಮಾಧ್ಯಮವಾದ ಸಿನಿಮಾದ ಶಕ್ತಿ ಮತ್ತು ನ್ಯೂನತೆಗಳನ್ನೂ ಅನಾವರಣ ಮಾಡುತ್ತದೆ.
ಸಾಹಿತ್ಯ ವಿದ್ಯಾರ್ಥಿಗಳಿಬ್ಬರ ಸಿನಿಮಾ ಪ್ರೀತಿ ಮತ್ತು ಆಕರ್ಷಣೆ ಅದೇ ಗೀಳಿನಲ್ಲಿ ಮುಳುಗಿಸುತ್ತದೆ. ಸಿನಿಮಾ ನಿರ್ಮಿಸಬೇಕೆಂಬ ಅಮಿತ್ ಮತ್ತು ಗೋಪಿ ಬಹುತೇಕ ಯುವ ಮನಸ್ಸುಗಳ ತವಕ ತಲ್ಲಣವನ್ನು ಪ್ರತಿನಿಧಿಸುತ್ತಾರೆ. ಮಾತ್ರವಲ್ಲದೆ ಸಿನಿಮಾ ನಿರ್ಮಾಣದ ಭಿನ್ನ ಮಾರ್ಗಗಳಿಗೂ ಅವರು ನಿದರ್ಶನವಾಗುತ್ತಾರೆ. ಗೋಪಿ ಮಾರುಕಟ್ಟೆಗೆ ಏನು ಬೇಕೋ ಅದನ್ನು ಕೊಡುತ್ತಾ ಯಶಸ್ವಿ ನಿರ್ದೇಶಕನಾಗುತ್ತಾನೆ. ಅಮಿತ ಹಾಗಲ್ಲ. ಅವನಿಗೆ ವಾಸ್ತವ ನೆಲೆಯಲ್ಲೇ ಚಿತ್ರಕಥೆಯನ್ನು ಕಟ್ಟಬೇಕು ಎನ್ನುವ ಹಂಬಲ. ಅವನಿಗೆ ಸತ್ಯಜಿತ್ ರೇ, ಮೃಣಾಲ್ ಸೇನ್ ಅವರ ಸಿನಿಮಾಗಳು ಮಾದರಿ ಆಗುತ್ತವೆ. ಆತನಿಗೆ ಯಶಸ್ವಿ ನಾಯಕ ನಟಿಯೊಬ್ಬಳ ಜೀವನವನ್ನೇ ಸಿನಿಮಾ ಮಾಡುವ ಕನಸಿದೆ. ನಟ–ನಟಿಯರು ಎದುರಿಸುವ ಸಮಸ್ಯೆಗಳು, ವಂಚನೆಯ ಜಾಲ ಉತ್ಸಾಹಿಗಳನ್ನು ಹೇಗೆ ದುರುಪಯೋಗ ಮಾಡುತ್ತದೆ ಎನ್ನುವ ಸಂಗತಿಯನ್ನೆಲ್ಲ ದೊಡ್ಡಮನೆ ಆನಂದ್ ಕಾದಂಬರಿಯಲ್ಲಿ ನಿರೂಪಿಸಿದ್ದಾರೆ.
ಚಂದನವನದ ಕಲಾ ಜಗತ್ತನ್ನು ಸ್ವತಃ ಬಲ್ಲ ಲೇಖಕ ಸಿನಿಮಾ ನಿರ್ಮಾಣ ಎಂಬುದು ಎಂತಹ ದುಸ್ಸಾಹಸದ ಕೆಲಸ ಎನ್ನುವುದಕ್ಕೆ ಕನ್ನಡಿ ಹಿಡಿದಿದ್ದಾರೆ. ‘ಎಂಬ್ರೇಸಿಂಗ್ ಶಾಟ್ ಇದೂಂತ ಹೇಳ್ಬಿಟ್ಟು, ಕಿಸ್ಸಿಂಗ್ ಎಲ್ಲಾ ಮಾಡಿಸ್ತಾ ಇದೀರಲ್ಲ, ಇದು ಸರೀನಾ? ಇಟ್ಸ್ ಆಲ್ ಚೀಟಿಂಗ್’ ಎಂದು ಕ್ಯಾಮರಾ ಎದುರಿಗೆ ನಿಂತ ಒಬ್ಬ ನಟಿ ಹೇಳುತ್ತಾಳೆ. ಆರಂಭದಲ್ಲಿಯೇ ಬರುವ ಈ ಸಂಭಾಷಣೆ ಕಾದಂಬರಿಕಾರರ ಸೂಕ್ಷ್ಮತೆಯನ್ನು ಹೇಳುವ ಜತೆಗೆ ಓದುಗನ ಕುತೂಹಲದ ಕೇಂದ್ರವನ್ನೂ ಗರ್ಭೀಕರಿಸುತ್ತದೆ ಎಂದೆನಿಸುತ್ತದೆ.
ಪುಸ್ತಕ: ಮಿನುಗು ತಾರೆ
ಲೇ: ದೊಡ್ಡಮನೆ ಆನಂದ್
ಪ್ರ: ಸಪ್ನ ಬುಕ್ ಹೌಸ್
ಸಂ: 080–40114455
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.